ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ: ICUನಲ್ಲಿ ಚಿಕಿತ್ಸೆ
ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ಶ್ರೇಯಸ್ ತಲ್ಪಾಡೆ ಹೃದಯಾಘಾತ ಸಂಭವಿಸಿದೆ. 47 ವರ್ಷದ ನಟ ಬಾಲಿವುಡ್ ಬಹುತಾರಾಗಣದ ಸಿನಿಮಾದಲ್ಲಿ ನಟಿಸುತ್ತಿದ್ದರು. ಸದ್ಯ ಮುಂಬೈನ ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ ನಡೆದಿದೆ ಎಂದು ವರದಿಯಾಗಿದೆ.
ನಟ ಶ್ರೇಯಸ್ ತಲ್ಪಾಡೆ ಬಾಲಿವುಡ್‌ನ ಬಹುತಾರಾಗಣದ ಸಿನಿಮಾ 'ವೆಲ್‌ಕಮ್ ಟು ದಿ ಜಂಗಲ್' ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಸಿನಿಮಾದ ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಂತೆ ಆಯಾಸ ಕಾಣಿಸಿಕೊಂಡಿತ್ತು. ತಕ್ಷಣವೇ ಪತ್ನಿ ಬಳಿಕ ಶ್ರೇಯಸ್ ತಲ್ಪಾಡೆ ಆಯಾಸ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಕುಸಿದು ಬಿದ್ದಿದ್ದರು ಎಂದು ಹೇಳಲಾಗಿದೆ.

"ವೆಲ್‌ಕಮ್ ಟು ದಿ ಜಂಗಲ್ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿತ್ತು. ಇಡೀ ದಿನ ಸಿನಿಮಾದ ಶೂಟಿಂಗ್‌ನಲ್ಲಿ ಆರಾಮಾಗಿಯೇ ಭಾಗಿಯಾಗಿದ್ದರು. ಕೆಲವು ಆಕ್ಷನ್ ಸೀನ್‌ಗಳಲ್ಲಿಯೂ ಭಾಗಿಯಾಗಿದ್ದರು. ಶೂಟಿಂಗ್ ಮುಗಿಸಿದ ಬಳಿಕ ಮನೆಗೆ ಹೋಗಿದ್ದರು. ತಕ್ಷಣವೇ ಅವರಿಗೆ ಆಯಾಸ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಕುಸಿದು ಬಿದ್ದಿದ್ದಾರೆ." ಎಂದು ಶ್ರೇಯಸ್ ಆಪ್ತಮೂಲಗಳು ಮಾಧ್ಯಮಗಳಿಗೆ ಹೇಳಿವೆ.
ಮುಂಬೈನ ಅಂಧೇರಿಯಲ್ಲಿರುವ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಶ್ರೇಯಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಿವುಡ್ ನಟ ದಾಖಲಾಗಿರುವ ಬಗ್ಗೆ ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಅವರ ಆರೋಗ್ಯದ ಬಗ್ಗೆ ಇನ್ನಷ್ಟೇ ಮಾಹಿತಿಯನ್ನು ನೀಡಬೇಕಿದೆ.
ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಕಮರ್ಷಿಯಲ್ ಹಾಗೂ ಸದಭಿರುಚಿಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಶ್ರೇಯಸ್ ತಲ್ಪಾಡೆ ನಟಿಸುತ್ತಿದ್ದಾರೆ. ಇದೂವರೆಗೂ ಶ್ರೇಯಸ್ ಸುಮಾರು 45 ಸಿನಿಮಾಗಳಲ್ಲಿ ನಟಿಸಿದ್ದಾರೆ.
'ವೆಲ್‌ಕಮ್ ಟು ಜಂಗಲ್' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ರವೀನಾ ಟಂಡನ್, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ಲಾರಾ ದತ್ತ, ಸುನೀಲ್ ಶೆಟ್ಟಿ, ಸಂಜಯ್ ದತ್, ಪರೇಶ್ ರಾವಲ್, ಅರ್ಷದ್ ವರ್ಸಿ, ತುಷಾರ್ ಕಪೂರ್, ರಾಜ್‌ಪಾಲ್ ಯಾದವ್, ಜಾನಿ ಲಿವರ್, ಕೃಷ್ಣ ಅಭಿಷೇಕ್, ರಾಹುಲ್ ದೇವ್ ಹಾಗೇ ದಲರ್ ಮೆಹೆಂದಿ ಹಾಗೂ ಮಿಕಾ ಸಿಂಗ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಆಸ್ಪತ್ರೆ ಮೂಲಗಳ ಪ್ರಕಾರ, ಆಂಜಿಯೋಪ್ಲಾಸ್ಟಿ ಮಾಡಿದ ಬಳಿಕ ಶ್ರೇಯಸ್ ತಲ್ಪಾಡೆ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸದ್ಯ ಶ್ರೇಯಸ್ ಐಸಿಯುನಲ್ಲಿ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನೊಂದು ಕಡೆ ಅಭಿಮಾನಿಗಳು ಶ್ರೇಯಸ್ ಬೇಗನೇ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.


Click it and Unblock the Notifications











