4 ವರ್ಷದ ಹಿಂದೆ ಉರ್ಮಿಳಾ ಟೀಕಿಸಿದ್ದ ಕಂಗನಾ: ವಿವಾದ ಬೆನ್ನಲ್ಲೇ ಹಳೆ ವಿಡಿಯೋ ವೈರಲ್.. ಅದರಲ್ಲೇನಿದೆ?
ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷ ಬಾಲಿವುಡ್ ನಟಿ ಕಂಗನಾಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಿರೀಕ್ಷೆಯಂತೆ ಕಂಗನಾ ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ವೇದಿಕೆಯ ಅಧ್ಯಕ್ಷೆ ಸುಪ್ರಿಯಾ ಶ್ರೀನೆಟ್ ವಿವಾದಾತ್ಮಕ ಪೋಸ್ಟ್ ಮಾಡಿದ್ದರು. ಕಂಗನಾ ನಟಿಸಿದ ರಜ್ಜೋ ಸಿನಿಮಾದ ವೇಶ್ಯೆಯ ಪಾತ್ರದ ಫೋಟೊವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, "ಮಂಡಿ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ?" ಎಂದು ಬರೆದುಕೊಂಡಿದ್ದರು. ಇದು ಪೋಸ್ಟ್ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಸಾಕಷ್ಟು ಮಂದಿಗೆ ಈ ಪೋಸ್ಟ್ ಅನ್ನು ವಿರೋಧಿಸುತ್ತಿದ್ದು ಕಂಗನಾ ಪರವಾಗಿ ನಿಂತಿದ್ದಾರೆ. ಮಹಿಳಾ ಆಯೋಗ ಕೂಡ ಕಾಂಗ್ರೆಸ್ ಪಕ್ಷದ ಹಿರಿಯರಿಗೆ ಸೂಚನೆ ನೀಡಿದೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ರನೌತ್ ಮತ್ತೊಬ್ಬ ಬಾಲಿವುಡ್ ನಟಿ ಹಾಗೂ ಶಿವಸೇನಾ ಪಕ್ಷದ ನಾಯಕಿ ಊರ್ಮಿಳಾ ಮತೋಂಡ್ಕರ್ ಅನ್ನು ಟೀಕಿಸಿದ ವಿಡಿಯೋ ಹರಿದಾಡುತ್ತಿದೆ. ಅಷ್ಟಕ್ಕೂ ನಾಲ್ಕು ವರ್ಷದ ಹಿಂದೆ ಕಂಗನಾ ಏನು ಹೇಳಿದ್ದರು? ತಿಳಿಯಲು ಮುಂದೆ ಓದಿ.
ಸುಪ್ರಿಯಾ ಶ್ರೀನೆಟ್ ವಿವಾದಾತ್ಮಕ ಪೋಸ್ಟ್ ಬೆನ್ನಲ್ಲೇ ಕಂಗನಾ ತಿರುಗೇಟು ನೀಡಿದ್ದರು. " ಪ್ರೀತಿಯ ಸುಪ್ರಿಯಾಜಿ, ಕಳೆದ 20 ವರ್ಷಗಳ ನನ್ನ ವೃತ್ತಿ ಬದುಕಿನಲ್ಲಿ ಕಲಾವಿದೆಯಾಗಿ ಎಲ್ಲಾ ತರಹದ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಮುಗ್ಧ ಹುಡುಗಿಯಿಂದ ಕ್ವೀನ್ ವರೆಗೆ, ಧಾಕಡ್‌ನಲ್ಲಿ ಮೋಹಿಸುವ ಗೂಢಾಚಾರಿಯಾಗಿದ್ದೇನೆ. ಮಣಿಕರ್ಣಿಕಾದಲ್ಲಿ ದೇವತೆಯಾಗಿದ್ದೇನೆ. ಚಂದ್ರಮುಖಿಯಲ್ಲಿ ರಾಕ್ಷಸಿಯಾಗಿದ್ದೇನೆ. ರಜ್ಜೋದಲ್ಲಿ ವೇಶ್ಯೆಯಾಗಿದ್ದೇನೆ. ತಲೈವಿಯಲ್ಲಿ ಕ್ರಾಂತಿಕಾರಿ ಲೀಡರ್ ಆಗಿದ್ದೇನೆ" ಎಂದಿದ್ದರು ಕಂಗನಾ.

ಈ ಬೆನ್ನಲ್ಲೇ ಸುಪ್ರಿಯಾ ಶ್ರೀನೆಟ್ ತನ್ನ ಅಕೌಂಟ್ ಅನ್ನು ಬಳಸಿ ಪೋಸ್ಟ್ ಮಾಡಿದ್ದಾರೆಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಇಷೆಲ್ಲ ಆದ ಬೆನ್ನಲ್ಲೇ ಕಂಗನಾ ರನೌತ್ ಹಳೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ. 2020ರಲ್ಲಿ ಕಂಗನಾ ರನೌತ್ ಮತ್ತೊಬ್ಬ ಬಾಲಿವುಡ್ ನಟಿ ಊರ್ಮಿಳಾ ಮತೋಂಡ್ಕರ್ ಬಗ್ಗೆ ಆಕ್ಷೇಪಾರ್ಹ ಪದವನ್ನು ಬಳಸಿ ಟೀಕಿಸಿದ್ದರು. ಅದೇ ವಿಡಿಯೋ ಈಗ ವೈರಲ್ ಮಾಡಲಾಗುತ್ತಿದೆ.
2020 ಸೆಪ್ಟೆಂಬರ್‌ನಲ್ಲಿ ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಉರ್ಮಿಳಾ ಟೀಕೆಗಳಿಗೆ ಕಂಗನಾ ತಿರುಗೇಟು ಕೊಡುವಾಗ ಆಕ್ಷೇಪಾರ್ಹ ಪದವನ್ನು ಬಳಸಿದ್ದರು. " ಉರ್ಮಿಲಾ ಮತೋಂಡ್ಕರ್ ಸಂದರ್ಶವನ್ನು ನೋಡಿದೆ. ಅದರಲ್ಲಿ ನನ್ನ ಕಷ್ಟಗಳನ್ನು ಅಣಕಿಸಲಾಗಿದೆ. ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದೇನೆಂದು ಹೀಯಾಳಿಸಿದ್ದಾರೆ. ನನಗೆ ಟಿಕೆಟ್ ಸಿಗುವುದು ಕಷ್ಟವೇನಲ್ಲ ಎಂದು ಲೆಕ್ಕಾಚಾರ ಹಾಕಲು ಒಬ್ಬ ಮೇಧಾವಿಯಾಗಬೇಕಾಗಿಲ್ಲ. ಉರ್ಮಿಳಾ ಒಬ್ಬ ಸಾಫ್ಟ್ ಪೋ* ಸ್ಟಾರ್. ಅವರ ನಟಯಿಂದ ಅಂತೂ ಆಕೆಯನ್ನು ಗುರುತಿಸಿಲ್ಲ. ಸಾಫ್ಟ್ ಪೋ* ಪಾತ್ರಗಳಿಂದ ತಾನೇ ಗುರುತಿಸಿದ್ದಾರೆ? ಅವರಿಗೆ ಟಿಕೆಟ್ ಸಿಗಬೇಕಾದರೆ, ನನಗೆ ಯಾಕೆ ಟಿಕೆಟ್ ಸಿಗುವುದಿಲ್ಲ?" ಎಂದು ಅಂದು ಕಂಗನಾ ರನೌತ್ ಹೇಳಿಕೆ ಕೊಟ್ಟಿದ್ದರು.
ಇದೇ ವಿಡಿಯೋವನ್ನು ಇಟ್ಕೊಂಡು ಈಗ ಕಂಗನಾ ರನೌತ್ ಅನ್ನು ಟೀಕಿಸಲಾಗುತ್ತಿದೆ. ಕಂಗನಾ ಈ ಹಿಂದೆ ಕೊಟ್ಟ ಹೇಳಿಗಳು, ವಿವಾದಾತ್ಮಕ ಟ್ವೀಟ್‌ಗಳು ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನಕ್ಕೆ ಮುಳುವಾಗಬಹುದು. ಸದ್ಯ ಕಂಗನಾ ಪರ ಹಾಗೂ ವಿರೋಧ ಟೀಕೆಗಳನ್ನು ಮಾಡಲಾಗುತ್ತಿದೆ.


Click it and Unblock the Notifications











