ನಿಕ್ ಜೋನಾಸ್ ಚಡ್ಡಿ ಹಾಕೋ ವಯಸ್ಸಲ್ಲೇ ವಿಶ್ವ ಸುಂದರಿಯಾಗಿದ್ದ ಪ್ರಿಯಾಂಕಾ ಚೋಪ್ರಾ
ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಈಗ ಕೇವಲ ಬಾಲಿವುಡ್ ನಟಿಯಷ್ಟೇ ಅಲ್ಲ. ಹಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ. ಬಾಲಿವುಡ್‌ನಲ್ಲಿ ಗುರುತಿಸಿಕೊಂಡ ಬಳಿಕ ಪ್ರಿಯಾಂಕಾ ಚೋಪ್ರಾ ನಿಧಾನವಾಗಿ ಹಾಲಿವುಡ್‌ಗೆ ಹಾರಿದ್ದರು. ಅಲ್ಲಿ ಈಗ ಸಾಲು ಸಾಲು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಟಿಸಿರೋ ಹೊಸ ವೆಬ್ ಸೀರಿಸ್ 'ಸಿಟಾಡೆಲ್' ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರತಿ ಶುಕ್ರವಾರ ಹೊಸ ಎಪಿಸೋಡ್‌ಗಳು ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆಗಿರೋ ಮೂರು ಸಂಚಿಕೆಗಳೂ ವಿಶ್ವದಾದ್ಯಂತ ಓಟಿಟಿ ಪ್ರಿಯರನ್ನು ರಂಜಿಸುತ್ತಿದೆ.

ಪ್ರಿಯಾಂಕಾ ಚೋಪ್ರಾ ಈಗ 'ಲವ್ ಅಗೈನ್' ಅನ್ನೋ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೇ ವೇಳೆ ಪ್ರಿಯಾಂಕಾ ಚೋಪ್ರಾ ನೀಡಿದ ಸಂದರ್ಶನದಲ್ಲಿ ಪತಿ ನಿಕ್ ಜೋನಾಸ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ನೀಡಿದ್ದಾರೆ. ಪಿಗ್ಗಿ ವಿಶ್ವ ಸುಂದರಿ ಪ್ರಶಸ್ತಿ ಗೆದ್ದಾಗ ಪತಿ ನಿಕ್ ಜೋನಾಸ್ ಮಾಡುತ್ತಿದ್ದರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಪ್ರಿಯಾಂಕಾ ವಿಶ್ವಸುಂದರಿಯಾದಾಗ ನಿಕ್‌ಗೆ ಎಷ್ಟು ವರ್ಷ?
ಪ್ರಿಯಾಂಕಾ ಚೋಪ್ರಾ ನಟಿಸಿದ 'ಸಿಟಾಡೆಲ್' ವೆಬ್ ಸೀರಿಸ್ ರಿಲೀಸ್ ಆಗಿದೆ. ಇದೇ ವೇಳೆ ಪ್ರಿಯಾಂಕಾ, ನಟಿ ಹಾಗೂ ಗಾಯಕಿ ಜೆನ್ನಿಫರ್ ಹಡ್ಸನ್ ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಶ್ವಸುಂದರಿ ಗೆದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪತಿ ನಿಕ್ ಜೋನಸ್ ವಯಸ್ಸು ಎಷ್ಟಾಗಿತ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಾಗ ಅವರ ವಯಸ್ಸು ಬರೀ 17 ವರ್ಷ. ಚಿಕ್ಕ ವಯಸ್ಸಿನಲ್ಲೇ ವಿಶ್ವದ ಗಮನ ಸೆಳೆದಿದ್ದರು. ಇವರ ವಯಸ್ಸೇ 17 ಇರಬೇಕಾದರೆ, ಇನ್ನು ಪತಿ ನಿಕ್ ಜೋನಾಸ್ ವಯಸ್ಸು ಎಷ್ಟು ಊಹಿಸಿಕೊಳ್ಳಿ. ಆಗ ನಿಕ್ ಜೋನಾಸ್ ವಯಸ್ಸು ಕೇವಲ 7 ವರ್ಷ. ಈ ಮಾತನ್ನು ಸ್ವತ: ಪ್ರಿಯಾಂಕಾ ಅವರೇ ರಿವೀಲ್ ಮಾಡಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆ ವೀಕ್ಷಿಸಿದ್ಧ ನಿಕ್
ಪ್ರಿಯಾಂಕಾ ಚೋಪ್ರಾ ವಿಶ್ವಸುಂದರಿ ಸ್ಪರ್ಧೆಯನ್ನು ನೆನಪಿಸಿಕೊಂಡಿದ್ದಷ್ಟೇ ಅಲ್ಲ. ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ವಿಶ್ವ ಸುಂದರಿ ಸ್ಪರ್ಧೆ ಗೆದ್ದಿದ್ದನ್ನು ಪತಿ ನಿಕ್ ಜೋನಾಸ್ ತನ್ನ ಏಳನೇ ವಯಸ್ಸಿನಲ್ಲೇ ತಂದೆಯೊಂದಿಗೆ ಕೂತು ವೀಕ್ಷಿಸಿದ್ದರಂತೆ. ಈ ವಿಷಯವನ್ನು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
"ಈ ವಿಷಯವನ್ನು ನನ್ನ ಅತ್ತೆ ನನಗೆ ಹೇಳಿದ್ದಾರೆ. ನಾನು 17 ವರ್ಷದಲ್ಲಿ ವಿಶ್ವ ಸುಂದರಿ ಕಿರೀಟ ಗೆದ್ದಿದ್ದೆ. ಆ ಸ್ಪರ್ಧೆ ಲಂಡನ್‌ನಲ್ಲಿ ನಡೆದಿತ್ತು. ಆಗ ನಿಕ್ ತನ್ನ ತಂದೆಯೊಂದಿಗೆ ಈ ಸಮಾರಂಭವನ್ನು ವೀಕ್ಷಿಸಿದ್ದರೆಂದು ನಮ್ಮ ಅತ್ತೆ ನನಗೆ ಹೇಳಿದ್ದರು" ಎಂದು ಪ್ರಿಯಾಂಕಾ ವಿವರಿಸಿದ್ದಾರೆ. ಪ್ರಿಯಾಂಕಾ ಮಾವ ಕೆವಿನ್ ಸೀನಿಯರ್ ಮಿಸ್ ವರ್ಲ್ಡ್ ಸ್ಪರ್ಧೆಗಳನ್ನು ನೋಡಲು ಇಷ್ಟ ಪಡುತ್ತಾರಂತೆ.
ಪ್ರಿಯಾಂಕಾ ಸಿನಿಮಾದಲ್ಲಿ ನಿಕ್
ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಆಕ್ಷನ್-ಥ್ರಿಲ್ಲರ್ ವೆಬ್ ಸರಣಿ 'ಸಿಟಾಡೆಲ್'ನಲ್ಲಿ ನಟಿಸಿದ್ದಾರೆ. ಅಮೆಜಾನ್ ಪ್ರೈಮ್ ವೆಬ್ ಸೀರಿಸ್ ಆಗಿದ್ದು, ಆಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ.
ಮತ್ತೊಂದು ಹಾಲಿವುಡ್ ಸಿನಿಮಾ 'ಲವ್ ಅಗೇನ್' ಸಿನಿಮಾದಲ್ಲೂ ಪ್ರಿಯಾಂಕಾ ನಟಿಸಿದ್ದಾರೆ. ಈ ಸಿನಿಮಾ ಇಂದು (ಮೇ 12) ವಿಶ್ವದಾದ್ಯಂತ ರಿಲೀಸ್ ಆಗಿದೆ. ಇದೇ ಸಿನಿಮಾದಲ್ಲಿ ಪತಿ ನಿಕ್ ಜೋನಾಸ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











