ತಾಪ್ಸಿಯನ್ನು 'ಬಿ ಗ್ರೇಡ್' ನಟಿ ಎಂದು ಕರೆದಿದ್ದೇಕೆ?: ಕಂಗನಾ ರಣಾವತ್ ನೀಡಿದ ವಿವರಣೆ
ಬಾಲಿವುಡ್‌ನ ಖ್ಯಾತನಾಮರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನಟಿ ಕಂಗನಾ ರಣಾವತ್, ಇತ್ತೀಚೆಗೆ ತಮ್ಮ ಏಕಾಂಗಿ ಹೋರಾಟದ ಚರ್ಚೆಯಲ್ಲಿ ನಟಿಯರಾದ ತಾಪ್ಸಿ ಪನ್ನು ಮತ್ತು ಸ್ವರ ಭಾಸ್ಕರ್ ಅವರನ್ನೂ ಎಳೆದು ತಂದಿದ್ದರು.
Recommended Video
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಗ್ಗೆ ಮಾತನಾಡಿದ್ದ ಅವರು, ಅವರಿಗೆ ನ್ಯಾಯ ಒದಗಿಸುವ ಸಂಬಂಧ ತಾಪ್ಸಿ ಮತ್ತು ಸ್ವರ ಧ್ವನಿ ಎತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಈ ವೇಳೆ ಅವರನ್ನು ಬಿ ಗ್ರೇಡ್ ನಟಿಯರು ಮತ್ತು ಅವಕಾಶಕ್ಕಾಗಿ ಕಾದಿರುವ ಹೊರಗಿನವರು ಎಂದು ಟೀಕಿಸಿದ್ದರು. ಇದಕ್ಕೆ ತಾಪ್ಸಿ ಮತ್ತು ಸ್ವರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿಯೂ ತಾಪ್ಸಿ ಮತ್ತು ಕಂಗನಾ ವಾದ-ವಿವಾದ ಭುಗಿಲೆದ್ದಿತ್ತು. ಈಗ ಕಂಗನಾ, ಆ ಇಬ್ಬರು ನಟಿಯರನ್ನು 'ಬಿ ಗ್ರೇಡ್' ನಟಿಯರು ಎನ್ನಲು ಕಾರಣ ಏನು ಎಂಬುದಕ್ಕೆ ವಿವರಣೆ ನೀಡಿದ್ದಾರೆ. ಮುಂದೆ ಓದಿ.

ಆಲಿಯಾ, ಅನನ್ಯಾಗೆ ಸಮ ಎನ್ನುವುದಿಲ್ಲ
'ನಾನು ಸೋನಮ್ ಕಪೂರ್‌ಳ ಬೆಸ್ಟ್ ಫ್ರೆಂಡ್ ಎಂದು ಸ್ವರ ಭಾಸ್ಕರ್ ಹೇಳಿದಾಗ ಆಕೆಯನ್ನು ಜಗತ್ತು ಹಾಗೆಯೇ ಸ್ವೀಕರಿಸುತ್ತದೆ ಎಂದಲ್ಲ. ಎಲ್ಲರೂ ತನ್ನನ್ನು ಪ್ರೀತಿಸುತ್ತಾರೆ ಎಂದು ತಾಪ್ಸಿ ಪನ್ನು ಹೇಳಿದಾಗ, ಆಕೆ ಸಮಾನ ಅವಕಾಶಗಳು ಸಿಗುತ್ತದೆಯೇ, ಇಲ್ಲ. ಆಲಿಯಾ ಭಟ್ ಅಥವಾ ಅನನ್ಯಾ ಪಾಂಡೆಗೆ ಸಮನಾಗಿ ಆಕೆಯನ್ನು ಜನರು ಪರಿಗಣಿಸುವುದಿಲ್ಲ. ನಾನು ಇದನ್ನೇ ಅರ್ಥ ಮಾಡಿಸಲು ಪ್ರಯತ್ನಿಸಿರುವುದು ಎಂದು ಕಂಗನಾ ಹೇಳಿದ್ದಾರೆ.

ನೀವು ಒಳಗಿನವರಾಗಿಲ್ಲ
ನೀವು ಎಷ್ಟೇ ಪ್ರಯತ್ನ ಮಾಡಿ ಅದರೊಳಗೆ ಹೊಂದಿಕೊಳ್ಳಲು ಪ್ರಯತ್ನಿಸಿದರೂ ನೀವು ಸರಿಹೊಂದುವುದಿಲ್ಲ. ನಿಮಗೆ ಅದು ಕಾಣದೆ ಹೋದರೂ, ಅವರ ಜಗತ್ತಿನಲ್ಲಿ ನೀವು ಈಗಲೂ ಬಿ-ಗ್ರೇಡ್ ಆಗಿದ್ದೀರಿ. ನಾನೂ ಈ ಸ್ಥಿತಿಯನ್ನು ದಾಟಿ ಬಂದಿದ್ದೇನೆ. ಅದು ಎಲ್ಲಿಗೆ ಹೋಗುತ್ತದೆ ಎನ್ನುವುದು ನನಗೆ ತಿಳಿದಿದೆ. ನಾನು ಅವರಿಗೆ ಅದನ್ನೇ ಮನದಟ್ಟು ಮಾಡಲು ಬಯಸಿದ್ದು. ನೀವು ಅದರೊಳಗೆ ಫಿಟ್ ಆಗುತ್ತಿದ್ದೀರಿ ಎಂದುಕೊಂಡರೆ, ಉದ್ಯಮಕ್ಕೆ ಒಳಗಿನವರಾಗಿಬಿಟ್ಟಿದ್ದೀರಿ ಎಂದುಕೊಂಡಿದ್ದರೆ, ಇಲ್ಲ. ಅದು ಆಗಿಲ್ಲ ಎಂದು ಹೇಳಿದ್ದಾರೆ.

ಬಿ ಗ್ರೇಟ್ ಟ್ಯಾಗ್ ಅಂಟಿಸಿದ್ದರು
ತಮ್ಮ ವೃತ್ತಿ ಬದುಕಿನಲ್ಲಿಯೂ ಬಿ-ಗ್ರೇಡ್ ಟ್ಯಾಗ್ ವಿರುದ್ಧ ಹೋರಾಡಿದ್ದಾಗಿ ಕಂಗನಾ ಹೇಳಿಕೊಂಡಿದ್ದಾರೆ. ತಲೆಗೂದಲನ್ನು ನೇರಗೊಳಿಸಿಕೊಂಡೆ, ತುಟಿಗಳನ್ನು ಸರಿಪಡಿಸಿಕೊಂಡೆ, ರಾಸ್ಕಲ್‌ನಂತಹ ಸಿನಿಮಾ ಮಾಡಿ ಅದರಲ್ಲಿ ಬಿಕಿನಿ ಕೂಡ ತೊಟ್ಟಿದ್ದೆ ಎಂದು ಕೆಟ್ಟ ಪಾತ್ರಗಳನ್ನೇ ನೀಡುವ ಮೂಲಕ ತಮ್ಮನ್ನು ಬಿ ಗ್ರೇಡ್ ನಟಿಯಂತೆಯೇ ತೋರಿಸಲಾಗುತ್ತಿತ್ತು ಎಂದಿದ್ದಾರೆ.

ಆಗಲೂ ಉದ್ಯಮ ಒಪ್ಪಿಕೊಳ್ಳಲಿಲ್ಲ
ಇಂತಹ ಪಾತ್ರ ಮತ್ತು ಸನ್ನಿವೇಶಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಲಾಗಿತ್ತು. ಮ್ಯಾಗಜಿನ್ ಕವರ್ ಫೋಟೊಗಳಲ್ಲಿ ಬರಲು, ಪ್ರಶಸ್ತಿಗಳನ್ನು ಗೆಲ್ಲಲು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆಗಲೂ ಬಿ-ಗ್ರೇಡ್ ಎಂದೇ ಆಗಿದ್ದೆ. ಉದ್ಯಮ ನನ್ನನ್ನು ನಟಿಯೆಂದು ಒಪ್ಪಿಕೊಂಡಿರಲಿಲ್ಲ ಎಂದಿದ್ದಾರೆ.


Click it and Unblock the Notifications











