'ದಿ ಕೇರಳ ಸ್ಟೋರಿ' ಬಳಿಕ ನಕ್ಸಲ್ ಸ್ಟೋರಿ ಹೇಳಲು ಬಂದ ಅದಾ ಶರ್ಮಾ; ಬ್ಯಾನ್ 'ಬಸ್ತಾರ್' ಎಂದ ನೆಟ್ಟಿಗರು
'ದಿ ಕೇರಳ ಸ್ಟೋರಿ' ವಿವಾದ ಸೃಷ್ಟಿಸಿದ್ದರೂ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಈ ಸಿನಿಮಾಗೆ ಸಿಕ್ಕ ಯಶಸ್ಸು ಮತ್ತೊಂದು ಸಿನಿಮಾ ಮಾಡುವುದಕ್ಕೆ ಪ್ರೇರಣೆಯಾಗಿತ್ತು. ಈ ಕಾರಣಕ್ಕೆ ಕೇರಳ ಸ್ಟೋರಿ ಸಿನಿಮಾ ಮಾಡಿದ್ದ ಮೇಕರ್ಸ್ ಮತ್ತೆ ನಟಿ ಅದಾ ಶರ್ಮಾ ಜೊತೆ ಕೈ ಜೋಡಿಸಿದ್ದರು. ಆ ಸಿನಿಮಾವೇ 'ಬಸ್ತಾರ್: ದಿ ನಕ್ಸಲ್ ಸ್ಟೋರಿ'.
'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಇದೊಂದು ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ. 'ದಿ ಕೇರಳ ಸ್ಟೋರಿ'ಗೆ ಆಕ್ಷನ್ ಕಟ್ ಹೇಳಿದ್ದ ಸುದೀಪ್ತೋ ಸೇನ್ ಈ ಸಿನಿಮಾದ ನಿರ್ದೇಶಕ. ನಿರ್ಮಾಪಕ ವಿಪುಲ್ ಶಾ ಅವರೇ 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ. 'ದಿ ಕೇರಳ ಸ್ಟೋರಿ' ವಿವಾದ ಸೃಷ್ಟಿಸಿದ ಹಾಗೇ ಈ ಸಿನಿಮಾ ಬಿಡುಗಡೆಗೂ ಮುನ್ನ ಕಾಂಟ್ರವರ್ಸಿ ಸೃಷ್ಟಿಸಿಲ್ಲ. ಆದರೆ, ರಿಲೀಸ್ ಆದ್ಮೇಲೆ ವಿವಾದಕ್ಕೆ ಸಿಕ್ಕಿಕೊಂಡಂತೆ ಕಾಣುತ್ತಿದೆ.

'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಇಂದು (ಮಾರ್ಚ್ 15) ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾಗೆ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಇಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಸಿನಿಮಾವನ್ನು ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಅಷ್ಟಕ್ಕೂ 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಬ್ಯಾನ್ ಮಾಡಿ ಅಂತ ನೆಟ್ಟಿಗರು ಹೇಳುತ್ತಿರುವುದು ಯಾಕೆ? ತಿಳಿಯಲು ಮುಂದೆ ಓದಿ..
'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಕಥೆಯೇನು?
'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಚಿತ್ರತಂಡವೇ ಹೇಳಿಕೊಂಡಂತೆ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಛತ್ತೀಸ್‌ಗಡದ ನೆಕ್ಸಲ್‌ರ ಘಟನೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. 1910ರಲ್ಲಿ ಇಂದಿನ ಛತ್ತೀಸ್‌ಗಡದಲ್ಲಿ ಎದ್ದಿದ್ದ ಬಸ್ತಾರ್ ದಂಗೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದಿತ್ತು. ಆದರೆ, ಸಿನಿಮಾಗೆ ಪ್ರೇಕ್ಷಕರಿಂದ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿದೆ. 'ದಿ ಕೇರಳ ಸ್ಟೋರಿ' ಗೆಲ್ಲಿಸಿದಂತೆ 'ಬಸ್ತಾರ್: ದಿ ನಕ್ಸಲ್ ಸ್ಟೋರಿ'ಯನ್ನು ಗೆಲ್ಲಿಸಲು ಮೇಕರ್ಸ್ ಸೋತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಅಂದರೆ, ಬ್ಯಾನ್ ಬಸ್ತಾರ್ ಸಿನಿಮಾ ಟ್ರೆಂಡ್.
ಬ್ಯಾನ್ ಬಸ್ತಾರ್ ಟ್ರೆಂಡಿಂಗ್
'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಸಿನಿಮಾ ರಿಲೀಸ್ ಆಗಿ ಇನ್ನೂ ಒಂದು ದಿನವೂ ಆಗಿಲ್ಲ. ಆಗಲೇ 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಸಿನಿಮಾವನ್ನು ಬ್ಯಾನ್ ಮಾಡುವಂತೆ ಕೆಲವರು ಆಗ್ರಹಿಸುತ್ತಿದ್ದಾರೆ. ಸಿನಿಮಾ ವಿರುದ್ಧ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಸಿನಿಮಾವನ್ನೇ ವಿರೋಧಿಸುವಂತಹದ್ದು ಏನಿದೆ? ಅಷ್ಟಕ್ಕೂ ಬಸ್ತಾರ್ ಸಿನಿಮಾ ಯಾಕೆ ಬ್ಯಾಕ್ ಆಗ್ಬೇಕು ಅಂತ ನೆಟ್ಟಿಗರು ಹೇಳುತ್ತಿದ್ದಾರೆ? ಈ ಇಂಟ್ರೆಸ್ಟಿಂಗ್ ಟ್ವೀಟ್‌ಗಳು (ಎಕ್ಸ್) ಅದಕ್ಕೆ ಕಾರಣವೇನು? ಅನ್ನೋದನ್ನು ಹೇಳುತ್ತವೆ.

'ಬಸ್ತಾರ್' ಸಿನಿಮಾ ಬ್ಯಾನ್ ಮಾಡಿ
ಕೆಲವು ನೆಟ್ಟಿಗರಿಗೆ 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಇಷ್ಟ ಆಗಿಲ್ಲ. ಸಿನಿಮಾದಲ್ಲಿ ಮಾಹಿತಿಯನ್ನು ತಿರುಚಲಾಗಿದೆ. ಬಸ್ತಾರ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಅಂತೆಲ್ಲ ಆರೋಪ ಮಾಡುತ್ತಿದ್ದಾರೆ. " ಬಸ್ತಾರ್: ದಿ ನಕ್ಸಲ್ ಸ್ಟೋರಿ ಸಿನಿಮಾ ಬೋರಿಂಗ್ ಮತ್ತು ಕೆಟ್ಟದಾಗಿದೆ. ಸಿನಿಮಾದಲ್ಲಿ ಸ್ಟೋರಿನೇ ಇಲ್ಲ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ಬಸ್ತಾರ್ ಸಿನಿಮಾದ ಕಥೆ ಸೂಕ್ಷ್ಮತೆಯಿಂದ ಕೂಡಿಲ್ಲ. ಬಸ್ತಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಬಸ್ತಾರ್ ಸಿನಿಮಾ ಬ್ಯಾನ್ ಮಾಡಿ" ಎಂದಿದ್ದಾರೆ. ಬಸ್ತಾರ್ ಬ್ಯಾನ್ ಮಾಡಿ ಎನ್ನುತ್ತಿದ್ದಂತೆ ಮತ್ತೆ ಕೆಲವರು ಬೆಂಬಲಕ್ಕೂ ನಿಂತಿದ್ದಾರೆ.
ಮೆಚ್ಚುಗೆ ಸೂಚಿಸಿದವರಿಗೇನು ಕಮ್ಮಿಯಿಲ್ಲ
'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಸಿನಿಮಾ ಬ್ಯಾನ್ ಮಾಡಿ ಅಂತ ಹೇಳುತ್ತಿದ್ದರೆ, ಮತ್ತೆ ಕೆಲವರು ಧೈರ್ಯದಿಂದ ಮಾಡಿದ ಸಿನಿಮಾ ಎಂದಿದ್ದಾರೆ. " ಇದೊಂದು ದಯೆ ತೋರದ ಆಕ್ಷನ್ ಸೀಕ್ವೆನ್ಸ್ ಇರುವ ಸಿನಿಮಾ. ಅದಾ ಶರ್ಮಾ ಹಾಗೂ ಅವರ ಬೆಂಬಲಕ್ಕೆ ನಿಂತ ಪಾತ್ರಗಳು ಸಿನಿಮಾದ ತೀವ್ರತೆಯನ್ನು ಹೆಚ್ಚಿಸಿವೆ" ಎಂದಿದ್ದಾರೆ. ಇನ್ನೊಬ್ಬರು " ಇದನ್ನು ಭಯವಿಲ್ಲದ ಸಿನಿಮಾ ಎಂದು ಹೇಳುತ್ತಾರೆ. ಹೀಗಾಗಿ ಬ್ಯಾನ್ ಜೊತೆಗೆ 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಸಿನಿಮಾಗೂ ಬೆಂಬಲ ಸಿಗುತ್ತಿದೆ.


Click it and Unblock the Notifications











