835 ಕೋಟಿ ಬಜೆಟ್, 12 ಗ್ರ್ಯಾಂಡ್ ಸೆಟ್, 600 ದಿನ ಶೂಟಿಂಗ್; 'ರಾಮಾಯಣ' ಬಗ್ಗೆ ಏನಿದು ಅಪ್‌ಡೇಟ್?
ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ' ಅದ್ಧೂರಿಯಾಗಿ ಸೆಟ್ಟೇರಿದ್ದಷ್ಟೇ ಗೊತ್ತು. ರಣ್‌ಬೀರ್ ಕಪೂರ್ ಶ್ರೀರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತಾಮಾತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ದಂಗಲ್' ಅಂತಹ ರೆಕಾರ್ಡ್ ಬ್ರೇಕ್ ಸಿನಿಮಾವನ್ನು ನಿರ್ದೇಶಿಸಿರುವ ನಿತೇಶ್ ತಿವಾರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಲ್ಲಿವರೆಗೂ ಇದೆಷ್ಟೇ ಮಾಹಿತಿ ಹರಿದಾಡಿದ್ದು ಬಿಟ್ಟರೆ, ಹೆಚ್ಚೇನು ವಿಷಯ ಗೊತ್ತಿರಲಿಲ್ಲ.
ಈಗ 'ರಾಮಾಯಣ' ಸಿನಿಮಾದ ಬಗ್ಗೆ ಮತ್ತೊಂದು ಅಪ್‌ಡೇಟ್ ಕೇಳಿ ಬರುತ್ತಿದೆ. ಈ ಮೆಗಾ ಬಜೆಟ್ ಸಿನಿಮಾದ ಶೂಟಿಂಗ್‌ಗಾಗಿ ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಅದ್ಧೂರಿಯಾಗಿ ಸೆಟ್ ಹಾಕುತ್ತಿದ್ದಾರೆ ಎನ್ನಲಾಗಿದೆ. ವಿಶೇಷ ಅಂದರೆ, ಈ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಹಣ ಹೂಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದಾರೆ.

ಈ ಪ್ಯಾನ್ ಇಂಡಿಯಾ ಸಿನಿಮಾ 'ರಾಮಾಯಣ' ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾದ ಪ್ರತಿಯೊಂದು ದೃಶ್ಯ ಕೂಡ ಪರ್ಫೆಕ್ಟ್ ಆಗಿರಬೇಕು ಅಂತ ನಿರ್ದೇಶಕ ನಿತೇಶ್ ತಿವಾರಿ ಗಮನ ಹರಿಸಿದ್ದಾರಂತೆ. ಪೌರಾಣಿಕ ಕಥೆಯಾಗಿರುವುದರಿಂದ ಜಾಗರೂಕತೆಯಿಂದ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. 'ಅದಿಪುರುಷ್' ಸಿನಿಮಾದಂತೆ ಲೋಪ ಆಗದಂತೆ ಎಚ್ಚರಿಕೆ ವಹಿಸಿದ್ದು, ಅದಕ್ಕಾಗಿ ಇಡೀ ಸಿನಿಮಾವನ್ನು ಬಹುತೇಕ ಸೆಟ್ಟಿನಲ್ಲಿಯೇ ನಿರ್ಮಾಣ ಮಾಡುವುದಕ್ಕೆ ಹೊರಟಿದ್ದಾರೆ.
ಈ ಸಂಬಂಧ 'ರಾಮಾಯಣ' ಮೆಗಾ ಸಿನಿಮಾವನ್ನು ತೆಗೆಯಲು ನಿರ್ದೇಶಕ ನಿತೇಶ್ ತಿವಾರಿ 12 ಅದ್ಧೂರಿ ಸೆಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಅಯೋಧ್ಯೆ ಹಾಗೂ ಮಿಥಿಲಾವನ್ನು ಸೆಟ್ಟುಗಳ ಮೂಲಕ ಮತ್ತೆ ಮರುಸೃಷ್ಟಿ ಮಾಡುತ್ತಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರಿಗೆ ಅನುಕೂಲವಾಗುವಂತೆ ಮುಂಬೈನ ಫಿಲ್ಮ್ ಸಿಟಿಯಲ್ಲಿಯೇ ಈ 12 ಸೆಟ್‌ಗಳನ್ನೂ ನಿರ್ಮಿಸಲಾಗುತ್ತಿದೆ.

ಆಗಸ್ಟ್ ತಿಂಗಳ ಕೊನೆಯಿಂದ 'ರಾಮಾಯಣ' ಸಿನಿಮಾವನ್ನು ಇದೇ ಸೆಟ್ಟುಗಳಲ್ಲಿ ಚಿತ್ರೀಕರಿಸಲಾಗುತ್ತೆ ಎನ್ನಲಾಗಿದೆ. 'ರಾಮಾಯಣ' ಸಿನಿಮಾವನ್ನು ಒಟ್ಟು 835 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಈಗಾಗಲೇ ಹಲವೆಡೆ ವರದಿಯಾಗಿವೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಪೌರಾಣಿಕಾ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ಗೆ ನೂರಾರು ದಿನಗಳು ಬೇಕು ಎನ್ನಲಾಗಿದೆ.
'ರಾಮಾಯಣ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಸುಮಾರು 600 ದಿನಗಳು ಬೇಕಿದೆ. ಹೀಗಾಗಿ ಕಮ್ಮಿ ಅಂದರೂ ಈ ಸಿನಿಮಾ ರಿಲೀಸ್‌ಗೆ ಇನ್ನೂ ಎರಡು ವರ್ಷಗಳು ಬೇಕಾಗುತ್ತವೆ. ಸದ್ಯ ಸಿನಿಮಾದ ರಿಲೀಸ್ ಬಗ್ಗೆ ಇನ್ನೂ ಗೊಂದಲವಿದೆ. ಆದರೆ, 2027ರ ಹೊತ್ತಿಗೆ 'ರಾಮಾಯಣ' ಸಿನಿಮಾ ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.
ಯಶ್ ಹಣ ಹೂಡಿರುವ 'ರಾಮಾಯಣ' ಸಿನಿಮಾ ಒಟ್ಟು ಮೂರು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ಶ್ರೀರಾಮ ಹಾಗೂ ಸೀತೆಯ ಕುಟುಂಬ ಪರಿಚಯ ಹಾಗೂ ಆಡಳಿತದ ಬಗ್ಗೆ ತೋರಿಸಲಾಗುತ್ತೆ ಎಂದು ಹೇಳಲಾಗಿದೆ. ಹೀಗಾಗಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಸಿನಿಮಾದ ಕೊನೆಯ ಭಾಗದಲ್ಲಿ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ.


Click it and Unblock the Notifications










