'ವೀರ್ ಝಾರಾ' ಸಿನಿಮಾದ ಹಾಡಿನ ಸಾಲೊಂದರಲ್ಲಿ ಪಾಕಿಸ್ತಾನದ ವರ್ಣನೆ ಯಾಕೆ? ಯಶ್ ಚೋಪ್ರಾ ತಲೆಯಲ್ಲೇನಿತ್ತು?
ದೇಶಭಕ್ತಿಯನ್ನು ಸಾರುವ ಸಿನಿಮಾಗಳು ಬಾಲಿವುಡ್‌ನಲ್ಲಿಯೇ ಹೆಚ್ಚು ನಿರ್ಮಾಣ ಆಗಿವೆ. 1950 ರಿಂದ ಇಲ್ಲಿವರೆಗೂ ದೇಶಭಕ್ತಿಯ ಸಿನಿಮಾಗಳ ಲೆಕ್ಕ ಹಾಕುತ್ತಾ ಹೋದರೆ ಹಿಂದಿ ಸಿನಿಮಾವೇ ಮೊದಲ ಸಾಲಿನಲ್ಲಿ ಇರುತ್ತೆ. ಅಷ್ಟೇ ಅಲ್ಲದೇ ಸುಮಾರು ಶೇ.65 ರಿಂದ 70ರಷ್ಟು ಭಾಗ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕೂಡ ಸಿಕ್ಕಿದೆ.
ದೇಶ ಪ್ರೇಮವನ್ನು ಸಾರುವ ಕೆಲವು ಸಿನಿಮಾಗಳು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಇನ್ನು ಸಿನಿಮಾದಲ್ಲಿ ಬರುವ ಕಥೆಯಷ್ಟೇ ಪವರ್‌ಫುಲ್ ಹಾಡುಗಳು. ಜನರಲ್ಲಿ ದೇಶಭಕ್ತಿಯನ್ನು ಕೆರಳಿಸುವಲ್ಲಿ ಹಾಡುಗಳು ಕೂಡ ಅಷ್ಟೇ ಮಹತ್ವದ ಪಾತ್ರವಹಿಸಿವೆ. ಇಂತಹದ್ದೇ ಒಂದು ಹಾಡಿನ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯೊಂದು ಇದೆ. ಅದುವೇ ಯಶ್ ಚೋಪ್ರಾ ನಿರ್ದೇಶಿಸಿದ್ದ 'ವೀರ್ ಝಾರಾ'.

ಈ ಸಿನಿಮಾದಲ್ಲಿ ವಾಯುಸೇನೆಯ ಅಧಿಕಾರಿಯಾಗಿ ಶಾರುಖ್ ಖಾನ್ ನಟಿಸಿದ್ದರು. ಪಾಕಿಸ್ತಾನದ ಪ್ರಭಾವಿ ಪೊಲಿಟಿಷಿಯನ್ ಮಗಳಾಗಿ ಪ್ರೀತಿ ಝಿಂಟಾ ಕಾಣಿಸಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ವೀರ್ ಝಾರಾ' ಸಿನಿಮಾವನ್ನು ತೆಗೆದಿದ್ದರು. ಈ ಸಿನಿಮಾದ ಹಾಡುಗಳೆಲ್ಲವೂ ಸಂಗೀತ ಪ್ರಿಯರಿಗೆ ಇಷ್ಟ ಆಗಿದ್ದವು. ಅದರಲ್ಲೊಂದು ಸಿನಿಮಾದ ನಾಯಕ ಶಾರುಖ್ ಖಾನ್ ಭಾರತದ ಪಂಜಾಬ್ ಪ್ರಾಂತ್ಯವನ್ನು ವರ್ಣಿಸುವ "ಐಸಾ ದೇಸ್ ಹೇ ಮೇರಾ" ಅನ್ನೋ ಹಾಡಿದೆ. ಅದಕ್ಕೆ ಪಾಕಿಸ್ತಾನವನ್ನು ಹೊಗಳುವ ಸಾಲನ್ನು ಕೊನೆಯಲ್ಲಿ ಉದ್ದೇಶ ಪೂರ್ವಕವಾಗಿ ಸೇರಿದ್ದರು. ವಿವಾದ ಆಗಬಹುದು ಅನ್ನೋ ಆತಂಕವಿದ್ದರೂ ಯಶ್ ಚೋಪ್ರಾ ಆ ಸಾಲನ್ನು ಸೇರಿದ್ದೇಕೆ ಒಂದು ಕಾರಣವಿದೆ.
ಭಾರತದಲ್ಲಿ ದೇಶಭಕ್ತಿಯ ಹೊಸ ಸಿನಿಮಾಗಳು ನಿರ್ಮಾಣ ಆದರೆ, ಅಲ್ಲಿ ಪಾಕಿಸ್ತಾನವೇ ವಿಲನ್. ಇದೂವರೆಗೂ ಬಂದಿರುವ ಬಹುತೇಕ ಸಿನಿಮಾಗಳಲ್ಲಿ ಪಾಕಿಸ್ತಾನ ಸರ್ಕಾರ, ಇಲ್ಲವೇ ಮಿಲಿಟಿರಿಯನ್ನು ತನ್ನ ಎದುರಾಳಿಯೆಂದು ಪರಿಗಣಿಸಿ ಕಥೆಯನ್ನು ಹೆಣೆಯುತ್ತಾರೆ. ಇದಕ್ಕೆ ಕೆಲವೊಮ್ಮೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದ್ದೂ ಇದೆ. ಒಮ್ಮೆ ಇದೇ ವಿಷಯವನ್ನು ಪಾಕಿಸ್ತಾನದ ಕೆಲವು ಉನ್ನತ ರಾಜಕೀಯ ಮುಖಂಡರು ಯಶ್ ಚೋಪ್ರಾ ಬಳಿ ಪ್ರಸ್ತಾಪ ಮಾಡಿದ್ದರಂತೆ. ಪಾಕಿಸ್ತಾನವನ್ನು ನೆಗೆಟಿವ್ ಆಗಿ ತೋರಿಸಬೇಡಿ. ನಿಮ್ಮ ದೇಶ ಹೇಗಿದೆಯೋ ಹಾಗೆ ನಮ್ಮ ದೇಶ ಕೂಡ ಇದೆ ಎಂದಿದ್ದರು. ಅದನ್ನೇ ಮುಂದೆ ಹಾಡಿನಲ್ಲಿ ಬಳಕೆ ಮಾಡಿದ್ದರು.

1932, ಸೆಪ್ಟೆಂಬರ್ 27ರಂದು ಇಂದಿನ ಪಾಕಿಸ್ತಾನದಲ್ಲಿರುವ ಲಾಹೋರ್‌ನಲ್ಲಿ ಯಶ್ ಚೋಪ್ರಾ ಜನಿಸಿದ್ದರು. ಆಗಿನ್ನೂ ದೇಶ ವಿಭಜನೆಯಾಗಿರಲಿಲ್ಲ. ಲಾಹೋರ್ ಭಾರತದಲ್ಲಿಯೇ ಇತ್ತು. ಹೀಗಾಗಿ ಯಶ್ ಚೋಪ್ರಾಗೆ ತನ್ನ ಹುಟ್ಟೂರಿನ ಮೇಲೆ ಸಾಫ್ಟ್ ಕಾರ್ನರ್ ಇಟ್ಟುಕೊಂಡಿದ್ದರು. ಇದೇ ಸಂದರ್ಭದಲ್ಲಿ ಲಾಹೋರ್‌ನಲ್ಲಿ ಇಂದಿಗೂ ಪಾಳು ಬಿದ್ದಿರುವ ಯಶ್ ಚೋಪ್ರಾ ಮನೆಯನ್ನು ಹೇರಿಟೇಜ್ ಪ್ರಾಪರ್ಟಿ ಎಂದು ಘೋಷಣೆ ಮಾಡಿತ್ತು. ಹೀಗಾಗಿ ಆ ಹುಟ್ಟೂರಿನ ಬಗ್ಗೆ ಅವರಿಗೆ ವಿಶೇಷವಾದ ಕಾಳಜಿ ಇತ್ತು.
'ವೀರ್ ಝಾರಾ'ದ "ಐಸಾ ದೇಸ್ ಹೇ ಮೇರಾ" ಹಾಡಿನಲ್ಲಿ ಶಾರುಖ್ ಖಾನ್ ಭಾರತ ದೇಶದ ವರ್ಣನೆ ಮಾಡುವಂತೆ ಅತ್ತ ಪಾಕಿಸ್ತಾನ ಮಹಿಳೆ ಪಾತ್ರದಲ್ಲಿ ನಟಿಸಿರುವ ಪ್ರೀತಿ ಝಿಂಟಾ ಕೊನೆಯಲ್ಲಿ ನಿಮ್ಮ ದೇಶ ಹೇಗಿದೆಯೋ ಹಾಗೂ ನಮ್ಮ ದೇಶನೂ ಇದೆ. ಇಲ್ಲಿ ಸೂರ್ಯ ಹೇಗೆ ಹುಟ್ಟಿ ಮುಳುಗುತ್ತಾನೋ, ಅದೇ ನಮ್ಮ ದೇಶದಲ್ಲೂ ಹುಟ್ಟುತ್ತಾನೆ, ಮುಳುಗುತ್ತಾನೆ ಎಂದು ಹಾಡುವ ಸಾಲುಗಳಿವೆ. ಈ ಸಾಲು ಯಶ್ ಚೋಪ್ರಾ ಸೇರಿದ್ದರ ಹಿನ್ನೆಲೆ ಹೀಗಿದೆ. "ಐಸಾ ದೇಸ್ ಹೇ ಮೇರಾ" ಸಾಂಗ್ ದೇಶವನ್ನು ವರ್ಣಿಸುವ ಅದ್ಬುತ ಹಾಡುಗಳಲ್ಲಿ ಒಂದು.


Click it and Unblock the Notifications











