'ದಿ ಕೇರಳ ಸ್ಟೋರಿ' ಟ್ಯಾಕ್ಸ್ ಫ್ರೀ ಎಂದ ಯೋಗಿ ಆದಿತ್ಯನಾಥ್: 'ಬ್ಯಾನ್' ಎಂದ ಮಮತಾ ಬ್ಯಾನರ್ಜಿ!
'ದಿ ಕೇರಳ ಸ್ಟೋರಿ' ವಿವಾದಾತ್ಮ ಸಿನಿಮಾ ಮೇ 5 ರಂದು ದೇಶಾದ್ಯಂತ ರಿಲೀಸ್ ಆಗಿದೆ. ಬಾಕ್ಸಾಫೀಸ್‌ನಲ್ಲೂ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಕೇರಳದ ಕೆಲವು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.
ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' ಬಗ್ಗೆ ಒಂದೊಂದು ರಾಜ್ಯ ಒಂದೊಂದು ರೀತಿ ಪ್ರತಿಕ್ರಿಯೆ ನೀಡಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದ್ದರೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.

ಈ ಸಿನಿಮಾಗೆ ಉತ್ತರ ಪ್ರದೇಶ ಸರ್ಕಾರ ತನ್ನ ರಾಜ್ಯದಲ್ಲಿ ಟ್ಯಾಕ್ಸ್ ಫ್ರಿ ಎಂದು ಘೋಷಿಸಿದೆ. ಅದೇ ಇನ್ನೊಂದು ಕಡೆ ಪಶ್ಚಿಮ ಬಂಗಾಳ ಸರ್ಕಾರ ಈ ಸಿನಿಮಾವನ್ನು ಬ್ಯಾನ್ ಮಾಡಿದೆ. ಹೀಗೆ ಬೇರೆ ರಾಜ್ಯಗಳಲ್ಲಿ ಬೇರೆ ರೀತಿ ಪ್ರತಿಕ್ರಿಯೆ ಸಿಗುತ್ತಿದೆ. ಸದ್ಯ ಉತ್ತರ ಪ್ರದೇಶ ತೆರಿಗೆ ವಿನಾಯಿತಿ ಘೋಷಿಸಿದ್ದು ಚರ್ಚೆ ಎಡೆ ಮಾಡಿಕೊಟ್ಟಿದೆ.
'ಟ್ಯಾಕ್ಸ್ ಫ್ರೀ' ಎಂದ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಮೇ 9) ಟ್ವೀಟ್ ಮಾಡಿ, ಉತ್ತರ ಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ಟ್ಯಾಕ್ಸ್ ಫ್ರಿ ಎಂದು ಘೋಷಿಸಿದ್ದಾರೆ. ಅಲ್ಲದೆ ಅತೀ ಶೀಘ್ರದಲ್ಲಿಯೇ ಯೋಗಿ ಆದಿತ್ಯನಾಥ್ ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ಸಿನಿಮಾ ನೋಡಲಿದ್ದಾರೆ. ಹೀಗಾಗಿ ಲೋಕ್ ಭವನ್‌ನಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡುವುದಕ್ಕೆ ನಿರ್ಧರಿಸಿದ್ದಾಗಿ ಸಿ ಎಂ ಕಾರ್ಯದರ್ಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನೊಂದು ಕಡೆ ಬಿಜೆಪಿ ಕಾರ್ಯದರ್ಶಿ ರಾಘವೇಂದ್ರ ಮಿಶ್ರ ಇತ್ತೀಚೆಗೆ ಉತ್ತರ ಪ್ರದೇಶದ ಸುಮಾರು 100 ಮಂದಿ ವಿಧ್ಯಾರ್ಥಿನಿಯರಿಗೆ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ತೋರಿಸಿದ್ದಾರೆ.
ಟ್ಯಾಕ್ಸ್ ಫ್ರೀ ಮಾಡಿದ ಮೊದಲ ರಾಜ್ಯ ಮಧ್ಯಪ್ರದೇಶ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗೂ ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ 'ಟ್ಯಾಕ್ಸ್ ಫ್ರೀ' ಮಾಡಲಾಗಿತ್ತು. ಅದನ್ನೇ ಕೆಲವು ರಾಜ್ಯಗಳು 'ದಿ ಕೇರಳ ಸ್ಟೋರಿ'ಗೂ ನೀಡಿವೆ. ಮಧ್ಯಪ್ರದೇಶ ಕಳೆದ ಒಂದು ವಾರದ ಹಿಂದೆನೇ ತೆರಿಗೆ ಫ್ರೀ ಎಂದು ಘೋಷಿಸಿದೆ.
"ಮತಾಂತರದ ಬಗ್ಗೆ ನಾವು ಈಗಾಗಲೇ ಕಾನೂನು ತಂದಿದ್ದೇವೆ. ಈ ಸಿನಿಮಾ ಪ್ರಸಕ್ತ ವಿಷಯದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ. ಈ ಸಿನಿಮಾವನ್ನು ಎಲ್ಲರೂ ನೋಡಬೇಕು. ಈ ಕಾರಣಕ್ಕೆ 'ದಿ ಕೇರಳ ಸ್ಟೋರಿ' ಸಿನಿಮಾವನ್ನು 'ಟ್ಯಾಕ್ಸ್ ಫ್ರೀ' ಮಾಡಿದ್ದೇವೆ ಎಂದು ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಬಂಗಾಳದಲ್ಲಿ 'ದಿ ಕೇರಳ ಸ್ಟೋರಿ' ಬ್ಯಾನ್
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ'ಯನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ದ್ವೇಷ ಹಾಗೂ ಹಿಂಸೆಯನ್ನು ಹರಡಿಸುತ್ತೆ ಎನ್ನುವ ಕಾರಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ.
'ದಿ ಕೇರಳ ಸ್ಟೋರಿ' ಸಿನಿಮಾದ ನಿರ್ಮಾಪಕ ವಿಫುಲ್ ಶಾ ಟಿಎಂಸಿ ಸರ್ಕಾರದ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಹೇಳಿಕೆ ನೀಡಿದ್ದಾರೆ. ಒಟ್ನಲ್ಲಿ ಒಂದ್ಕಡೆ ಬ್ಯಾನ್ ಆದರೆ, ಇನ್ನೊಂದು ಕಡೆ ಟ್ಯಾಕ್ಸ್ ಫ್ರೀ ಮಾಡಲಾಗಿದೆ.


Click it and Unblock the Notifications










