ಉಪ್ಪಿ ಸಿನಿಮಾದಲ್ಲೂ ಸದ್ದು ಮಾಡಿದ್ದ MTV ಚಾನೆಲ್ ಪ್ರಸಾರ ಸ್ಥಗಿತ; ಅಸಲಿ ಕಾರಣವೇನು?
80 ಹಾಗೂ 90ರ ದಶಕಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಮ್ಯೂಸಿಕ್ ಎಂಟಿವಿ. ಅಂದಿನ ಯುವಕರ ಫೇವರಿಟ್ ಮ್ಯೂಸಿಕ್ ಚಾನೆಲ್ ಆಗಿತ್ತು. ಇತ್ತೀಚೆಗೆಗಿನ ದಿನಗಳಲ್ಲಿ ಈ ಚಾನೆಲ್ ತೀವ್ರ ಪೈಪೋಟಿಯನ್ನು ಎದುರಿಸುತ್ತಿತ್ತು. ಆದರೆ, ಒಂದು ಕಾಲದಲ್ಲಿ 'ಎಂಟಿವಿ' ಯುವ ಸಮುದಾಯದ ಅಚ್ಚು ಮೆಚ್ಚಿನ ಚಾನೆಲ್ ಆಗಿತ್ತು. ವಿದೇಶಿ ಗಾಯಕರ ಹಾಡುಗಳನ್ನು ಕೇಳುವ ಅಭ್ಯಾಸವಿಟ್ಟುಕೊಂಡಿದ್ದವರಿಗೆ 'ಎಂಟಿವಿ' ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡಿದೆ.
ಹೊಸ ವರ್ಷ ಆರಂಭಕ್ಕೂ ಮುನ್ನ ಎಂಟಿವಿ ಸಮೂಹದ ಕೆಲವು ಚಾನೆಲ್‌ಗಳನ್ನು ಕೆಲವು ದೇಶಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಉದ್ಯಮಿ ಆನಂದ್ ಮಹೀಂದ್ರ ಸೇರಿದಂತೆ ಕೆಲ ನೆಟ್ಟಿಗರು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

'ಎಂಟಿವಿ' ವಿದೇಶದಲ್ಲಿ ಅಷ್ಟೇ ಅಲ್ಲದೆ ಭಾರತದಲ್ಲಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಹೊಸ ಹೊಸ ಹಾಡುಗಳು, ಗ್ಲಾಮರ್ ಶೋಗಳನ್ನು ಪ್ರಸಾರ ಮಾಡುತ್ತಿತ್ತು. ಅಲ್ಲದೇ 24 ಗಂಟೆಗಳ ಮ್ಯೂಸಿಕ್ ಚಾನೆಲ್ ಮಾಡಬಹುದೆಂದು ತೋರಿಸಿಕೊಟ್ಟಿದ್ದೇ ಎಂಟಿವಿ. ಹೀಗಿರುವ ಭಾರತದ ಹಲವು ಮ್ಯೂಸಿಕ್ ಚಾನೆಲ್‌ಗಳಿಗೆ ಎಂಟಿವಿ ಸ್ಪೂರ್ತಿಯಾಗಿದ್ದು ಅಷ್ಟೇ ನಿಜ. ಇಂತಹ ಐಕಾನಿಕ್ ಚಾನೆಲ್ ಪ್ರಸಾರವನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಷಯ ತಿಳಿಯುತ್ತಿದ್ದಂತೆ ಕೆಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಎಂಟಿವಿ 80 ಹಾಗೂ 90ರ ದಶಕದಲ್ಲಿ ಜನಿಸಿದವರ ಅಚ್ಚು ಮೆಚ್ಚಿನ ಚಾನೆಲ್. ಈ ಚಾನೆಲ್ ಜೊತೆ ಸಾಕಷ್ಟು ನೆನಪುಗಳು ಇವೆ. ಎಂಟಿವಿ ಪ್ರಸಾರ ಸ್ಥಗಿತಗೊಳಿಸಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ. ಭಾರತದ ಜನಪ್ರಿಯ ಉದ್ಯಮಿ, ಮಹೀಂದ್ರ ಗ್ರೂಪ್‌ನ ಚೇರ್‌ಮ್ಯಾನ್ ಆನಂದ್ ಮಹೀಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದು, ಟ್ರೆಂಡಿಂಗ್‌ನಲ್ಲಿದೆ.
"ನನ್ನಂತಹ ಬೇಬಿ ಬೂಮರ್‌ಗಳಿಗೆ MTV ಸ್ಥಗಿತಗೊಂಡಿರುವುದು ವಿಭಿನ್ನವಾಗಿ ಹೊಡೆತ ಕೊಟ್ಟಿದೆ. 1981 ರಲ್ಲಿ ಅದು ಶುರುವಾಗಿದ್ದಾಗ, ನಾವು ಸಂಗೀತವನ್ನು ಕೇಳುವ ಹಾಗೂ ನೋಡುವ ವಿಧಾನವನ್ನೇ ಅದು ಬದಲಾಯಿಸಿತ್ತು. ಅದು ನಮ್ಮ ಅಭಿರುಚಿಗಳನ್ನು, ಐಕಾನ್‌ಗಳನ್ನು ಹೊಸದಾಗಿ ರೂಪಿಸಿತ್ತು. ಎಂಟಿವಿ ನನಗೆ ಬೇಕು ಎನ್ನುವ ಕೊನೆಯ ಕೋರಸ್‌ಗೆ ಇದು ಅರ್ಹವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.
ಅಂದ್ಹಾಗೆ, ಎಂಟಿವಿ 1981ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಂಚ್ ಆಗಿತ್ತು. ಅಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾದ ಬಳಿಕ 1996ರಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಬಹುಬೇಗನೆ ಎಂಟಿವಿ ಯುವ ಸಮುದಾಯವನ್ನು ಸೆಳೆದಿತ್ತು. ಅಂತರಾಷ್ಟ್ರೀಯ ಗಾಯಕರ ಹಾಡುಗಳು ಹಾಗೂ ಭಾರತದ ಮ್ಯೂಸಿಕ್ ವಿಡಿಯೋಗನ್ನು ಪ್ರಸಾರ ಮಾಡಿತ್ತು. ಬಳಿಕ ಮ್ಯೂಸಿಕ್‌ಗೆ ಅಷ್ಟೇ ಅಂಟಿಕೊಳ್ಳದೆ, ರೋಡೀಸ್, ಸ್ಪ್ಲಿಟ್‌ವಿಲ್ಲಾ, ಕೈ ಸಿ ಯೇ ಯಾರಿಯಾನ್, ಫನ್ಹಾ ಹಾಗೂ ಎಂಟಿವಿ ಲವ್ ಸ್ಕೂಲ್ ಅಂತಹ ಒರಿಜಿನ್ ಶೋಗಳ ಮೂಲಕ ಜನಪ್ರಿಯತೆ ಕಂಡಿತ್ತು.
ನಿಜವಾಗಿಯೂ ಎಂಟಿವಿ ಪ್ರಸಾರ ಸ್ಥಗಿತಗೊಂಡಿದೆಯೇ? ಯಾವ್ಯಾವ ದೇಶದಲ್ಲಿ ಸ್ಥಗಿತಗೊಂಡಿದೆ? ಈ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ. ಬಿಬಿಸಿ ವರದಿ ಮಾಡಿರುವ ಪ್ರಕಾರ, ಎಂಟಿವಿ ಕೆಲವು ದೇಶಗಳಲ್ಲಿ ಪ್ರಸಾರವನ್ನು ಸ್ಥಗಿತಗೊಳಿಸಿದೆ. ಯುಕೆ, ಐರ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಆಸ್ಟ್ರಿಯಾ, ಪೊಲ್ಯಾಂಡ್, ಹಂಗೇರಿ, ಆಸ್ಟ್ರೇಲಿಯಾ ಹಾಗೂ ಬ್ರೆಜಿಲ್ ದೇಶಗಳಲ್ಲಿ ಸ್ಥಗಿತಗೊಂಡಿದೆ. ಎಂಟಿವಿ ಮ್ಯೂಸಿಕ್, ಎಂಟಿವಿ 80s, ಎಂಟಿವಿ 90s, ಕ್ಲಬ್ ಎಂಟಿವಿ ಹಾಗೂ ಎಂಟಿವಿ ಲೈವ್ ಸ್ಥಗಿತಗೊಂಡಿದೆ.


Click it and Unblock the Notifications











