Good Bad Ugly Box Office;ನೆಗೆಟಿವ್ ರಿವ್ಯೂ ಬಂದ್ರೆ ಏನಂತೆ? ಅಜಿತ್ ಸಿನಿಮಾ ಕಲೆಕ್ಷನ್ ಭರ್ಜರಿ
ತಮಿಳಿನ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ' ನಿನ್ನೆ (ಏಪ್ರಿಲ್ 11) ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ಮಿಶ್ರ ಪ್ರತಿಕ್ರಿಯೆಗಳು ಬರುವುದಕ್ಕೆ ಆರಂಭಿಸಿತ್ತು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಮಕಾಡೆ ಮಲಗೋದು ಗ್ಯಾರಂಟಿ ಅಂತ ಸಿನಿಮಾ ಮಂದಿ ಆತಂಕ ವ್ಯಕ್ತಪಡಿಸಿದ್ದರು.
ಅಜಿತ್ ಈ ಹಿಂದೆ ನಟಿಸಿದ 'ವಿಡಾಮುಯಾರ್ಚಿ' ಬಾಕ್ಸಾಫೀಸ್‌ನಲ್ಲಿ ತೋಪೆದ್ದಿತ್ತು. ಹೀಗಾಗಿ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾವನ್ನು ಅವರ ಫ್ಯಾನ್ಸ್ ಎದುರು ನೋಡುತ್ತಿದ್ದರು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲ ಬಾಕ್ಸಾಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಆಗಿದೆ ಎಂದು ವರದಿಯಾಗಿವೆ. ಅಡ್ವಾನ್ಸ್ ಬುಕಿಂಗ್ ಹಾಗೂ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ.

'ಗುಡ್ ಬ್ಯಾಡ್ ಅಗ್ಲಿ'ಯಲ್ಲಿ ಅಜಿತ್ ಕುಮಾರ್‌ಗೆ ನಾಯಕಿಯಾಗಿ ತ್ರಿಶಾ ಕೃಷ್ಣನ್ ನಟಿಸಿದ್ದಾರೆ. ಇವರ ಜೊತೆ ದೊಡ್ಡ ಸ್ಟಾರ್‌ಕಾಸ್ಟ್ ಇದೆ. ಬಾಲಿವುಡ್ ನಟ ಜಾಕಿಶ್ರಾಫ್, ಟಿನು ಆನಂದ್ ಜೊತೆ ಸುನಿಲ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇಲ್ಲಿದೆ. ಅಜಿತ್ ಎದುರು ಅರ್ಜುನ್ ದಾಸ್ ಖಳನಾಯಕನಾಗಿ ನಟಿಸಿದ್ದಾರೆ. ಹಾಗಿದ್ದರೆ, 'ಗುಡ್ ಬ್ಯಾಡ್ ಅಗ್ಲಿ' ಮೊದಲ ದಿನದ ಕಲೆಕ್ಷನ್ ಎಷ್ಟು? ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮೊದಲ ದಿನದ ಕಲೆಕ್ಷನ್ ಎಷ್ಟು?
'ವಿಡಾಮುಯಾರ್ಜಿ' ಹೀನಾಯ ಸೋಲಿನ ಬಳಿಕ 'ಗುಡ್ ಬ್ಯಾಡ್ ಅಗ್ಲಿ' ಅಜಿತ್ ಫ್ಯಾನ್ಸ್‌ಗೆ ಪ್ರತಿಷ್ಟಿಯ ಪ್ರಶ್ನೆಯಾಗಿತ್ತು. ಈ ಸಿನಿಮಾದ ಪ್ರಚಾರದಲ್ಲಿ ಅಜಿತ್ ಭಾಗಿಯಾಗದೇ ಇದ್ದರೂ, ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಅಜಿತ್ ಗ್ಯಾಂಗ್‌ಸ್ಟರ್ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿರುವುದು ಗೊತ್ತಾಗುತ್ತಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ಅಜಿತ್ ಸಿನಿಮ ಮೊದಲ ದಿನ ಭಾರತದ ಬಾಕ್ಸಾಫೀಸ್‌ನಲ್ಲಿ 28.50 ಕೋಟಿ ರೂಪಾಯಿ (Net)ಕಲೆಕ್ಷನ್ ಮಾಡಿದೆ. ರಜೆ ಇದ್ದಿದ್ದರಿಂದ ಶೇ.76ರಷ್ಟು ಥಿಯೇಟರ್‌ಗಳು ತುಂಬಿದ್ದವು ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್?
ಕರ್ನಾಟಕದ ವಿತರಕರ ವಲಯ 'ಗುಡ್ ಬ್ಯಾಡ್ ಅಗ್ಲಿ' ಮೊದಲ ದಿನದ ಕಲೆಕ್ಷನ್‌ಗೆ ಖುಷಿಯಾಗಿದೆ. ಕರ್ನಾಟಕದಲ್ಲಿ ಫಸ್ಟ್ ಡೇ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ 'ಗುಡ್ ಬ್ಯಾಡ್ ಅಗ್ಲಿ'ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನವೇ ಈ ಸಿನಿಮಾ 2 ರಿಂದ 2.5 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಲೆಕ್ಕ ಹಾಕಲಾಗಿದೆ. ಈ ಕಲೆಕ್ಷನ್ ಬಗ್ಗೆ ವಿತರಕರು ಇನ್ನೂ ಅಧಿಕೃತವಾಗಿ ಅನೌನ್ಸ್ ಮಾಡಬೇಕಿದೆ.
ಅತೀ ಹೆಚ್ಚು ಕಲೆಕ್ಷನ್ ಆದ 2ನೇ ಸಿನಿಮಾ
ಆಕ್ಷನ್, ಮಾಸ್ ಮಸಾಲ ಸಿನಿಮಾ ಸಹಜವಾಗಿ ಒಳ್ಳೆ ಓಪನಿಂಗ್ ಪಡೆದು ಕೊಳ್ಳುತ್ತೆ. ಅಲ್ಲದೆ, ಅಡ್ವಾನ್ಸ್ ಬುಕಿಂಗ್‌ನಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ನಿರೀಕ್ಷೆ ಮಾಡಿದಂತೆ 'ಗುಡ್ ಬ್ಯಾಡ್ ಅಗ್ಲಿ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಇದು ಅಜಿತ್ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ. 2022ರಲ್ಲಿ ತೆರೆಕಂಡಿದ್ದ 'ವಾಲಿಮೈ' ಮೊದಲ ದಿನ 29.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ 'ಗುಡ್ ಬ್ಯಾಡ್ ಅಗ್ಲಿ' ಮೊದಲ ದಿನ 28.50 ಕೋಟಿ ರೂ. ಕಲೆಕ್ಷನ್ ಮಾಡಿದೆ.
'ವಿಡಾಮುಯಾರ್ಚಿ' ಗಳಿಸಿದ್ದೆಷ್ಟು?
ಇದೇ ವರ್ಷ ಫೆಬ್ರವರಿಯಲ್ಲಿ ತೆರೆಕಂಡಿದ್ದ 'ವಿಡಾಮುಯಾರ್ಚಿ' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದರೂ, ಮೊದಲ ದಿನ ಬಾಕ್ಸಾಫೀಸ್‌ನಲ್ಲಿ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಸಿನಿಮಾಗೆ ಮೊದಲ ದಿನವೇ ನೆಗೆಟಿವ್ ವಿಮರ್ಶೆಗಳು ವ್ಯಕ್ತವಾಗಿದ್ದವು. ಹೀಗಾಗಿ ಬಾಕ್ಸಾಫೀಸ್ ಹೆಚ್ಚು ದಿನ ಸದ್ದು ಮಾಡಲೇ ಇಲ್ಲ. ಅದೇ 'ಗುಡ್ ಬ್ಯಾಡ್ ಅಗ್ಲಿ'ಗೂ ರಿಪೀಟ್ ಆಗಿದೆ. ಆದರೆ, ಇನ್ನು ನಾಲ್ಕು ದಿನ ಬ್ಯಾಕ್ ಟು ಬ್ಯಾಕ್ ರಜೆ ಇರುವುದರಿಂದ 70 ರಿಂದ 90 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











