Avatar 3: 'ಅವತಾರ್ 3' ಮೊದಲ ದಿನ ವರ್ಲ್ಡ್‌ವೈಡ್ ಎಷ್ಟು ಕಲೆಕ್ಷನ್ ಮಾಡಬಹುದು?
ಡಿಸೆಂಬರ್ ತಿಂಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅವುಗಳಲ್ಲಿ ಜೇಮ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಆಂಡ್ ಆಶ್' ಕೂಡ ಒಂದು. ಇದು ಹಾಲಿವುಡ್‌ನ 'ಅವತಾರ್' ಸೀರಿಸ್‌ನ ಮೂರನೇ ಚಾಪ್ಟರ್. ಈಗಾಗಲೇ 'ಅವತಾರ್'ನ ಎರಡು ಸೀಕ್ವೆಲ್‌ಗಳು ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದೆ. ಈಗ ಮತ್ತೊಂದು 3ನೇ ಅವತರಣಿಕೆ ರಿಲೀಸ್ ರೆಡಿಯಾಗಿದೆ.
ವಿಶ್ವದ ಕ್ರಿಯೇಟಿವ್ ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ಹಾಗೂ ಜಾನ್ ಲ್ಯಾಂಡೌ ನಿರ್ಮಾಣ ಮಾಡಿರುವ ಈ ಸಿನಿಮಾ ವಿಶ್ವದ ಗಮನ ಸೆಳೆದಿದೆ. 'ಅವತಾರ್ 3' ಹೇಗಿರುತ್ತೋ? ಜೇಮ್ಸ್ ಕ್ಯಾಮರೂನ್ ಇನ್ಯಾವ ರೀತಿ ಸಿನಿಮಾ ಮಾಡಿರಬಹುದೋ ಎಂದು ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಹಾಲಿವುಡ್ ಜನಪ್ರಿಯ ತಾರೆಯರಾದ ಸ್ಯಾಮ್ ವರ್ತಿಂಗ್‌ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್‌ಲೆಟ್, ಊನಾ ಚಾಪ್ಲಿನ್ ಸೇರಿದಂತೆ ಸ್ಟಾರ್‌ಗಳ ದೊಡ್ಡ ತಂಡವೇ ಇದೆ.

'ಅವತಾರ್ 3' ವಿಶ್ವದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಕೂಡ ಸುಮಾರು $400 ಮಿಲಿಯನ್ ಬಜೆಟ್‌ನಲ್ಲಿ ನಿರ್ಮಾಣ ಆಗಿದೆಯೆಂದು ವರದಿಯಾಗಿದೆ. ಈ ಸಿನಿಮಾ ಡಿಸೆಂಬರ್ 19ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದೆಂಬ ಲೆಕ್ಕಾಚಾರಗಳು ಈಗಿನಿಂದಲೇ ಶುರುವಾಗಿವೆ. ಅಷ್ಟಕ್ಕೂ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.
ಹಾಲಿವುಡ್‌ನ ಹಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ವಿಶ್ವವೇ ಊಹಿಸದಷ್ಟು ಬಾಕ್ಸಾಫೀಸ್ ಕಲೆಕ್ಷನ್ ಆಗಿದೆ. ಅಂತಹ ಸಿನಿಮಾಗಳಲ್ಲಿ 'ಅವತಾರ್' ಸಿನಿಮಾ ಕೂಡ ಒಂದು. 2009ರಲ್ಲಿ ತೆರೆಕಂಡಿದ್ದ 'ಅವತಾರ್' ವಿಶ್ವದಾದ್ಯಂತ 2.9 ಬಿಲಿಯನ್ ಡಾಲರ್ ಅನ್ನು ಕಲೆ ಹಾಕಿತ್ತು. ಅದೇ 'ಅವತಾರ್ 2'ಗೆ ಸ್ವಲ್ಪ ಕ್ರೇಜ್ ಕಮ್ಮಿಯಾಗಿತ್ತು. ಹೀಗಾಗಿ ಈ ಸಿನಿಮಾ ವಿಶ್ವದಾದ್ಯಂತ ಕಲೆ ಹಾಕಿದ್ದು 2.3 ಬಿಲಿಯನ್ ಡಾಲರ್. ಆದರೂ, 2022ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಆ ವರ್ಷ 3ನೇ ಅತಿ ದೊಡ್ಡ ಸಿನಿಮಾ ಆಯ್ತು.
ಈಗ 'ಅವತಾರ್ 3' ಜೇಮ್ಸ್ ಕ್ಯಾಮರೂನ್ ಕಲ್ಪನೆ ಹೇಗಿದೆಯೋ ಅಂತ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ತಾಂತ್ರಿಕವಾಗಿ ಸಿನಿಮಾ ಹೇಗಿರಬಹುದು? ಎಎಫ್‌ಎಕ್ಸ್ ಹೇಗಿರುತ್ತೆ? ಅನ್ನೋ ಕುತೂಹಲವಿದ್ದೇ ಇರುತ್ತೆ. ಇನ್ನು ಗ್ರಾಫಿಕ್ಸ್ ಜೊತೆಗೆ ಕಲ್ಪನೆಗೂ ಮೀರಿದ ಹೊಸ ಲೋಕ, ಅಲ್ಲಿ ನಡೆಯೋ ಸಂಘರ್ಷಗಳು, ಅಲ್ಲಿನ ಜನರ ಭಾವನೆಗಳು ಇವುಗಳ ಮೇಲೆ ಜನರ ಕಣ್ಣಿದೆ. ಈಗಾಗಲೇ ವರದಿಯಾಗಿರುವಂತೆ ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಸುಮಾರು ₹3600 ಕೋಟಿ ಸುರಿದಿದ್ದಾರೆ ಎನ್ನಲಾಗಿದೆ.
ಇನ್ನು ಇಷ್ಟು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣಗೊಂಡಿರೋ 'ಅವತಾರ್ 3' ಕಲೆಕ್ಷನ್ ಬಗ್ಗೆನೂ ಈಗಾಗಲೇ ಲೆಕ್ಕಾಚಾರ ಹಾಕಲಾಗುತ್ತಿದೆ. ವಿಶ್ವದಾದ್ಯಂತ ಈ ಸಿನಿಮಾ ಮೊದಲ ದಿನ ₹350 ಕೋಟಿಯಿಂದ ₹500ಯ ಮೇಲೆ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಇನ್ನು ಭಾರತದಲ್ಲೂ ಈ ಸಿನಿಮಾದ ಕ್ರೇಜ್ ಇರುವುದರಿಂದ 'ಅವತಾರ್ 3' ದೊಡ್ಡ ಮೊತ್ತ, ಅಂದರೆ, ₹20 ರಿಂದ ₹25 ಕೋಟಿವರೆಗೂ ಹೋಗಬಹುದೆಂಬ ಲೆಕ್ಕಾಚಾರ ಹಾಕಲಾಗಿದೆ.
ಇನ್ನೂ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕರೆ, ಭಾರತದಲ್ಲಿ ಮೊದಲ ವೀಕೆಂಡ್‌ನಲ್ಲಿ ₹100 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂದು ನಂಬಲಾಗಿದೆ. ಅದೇ 2009ರಲ್ಲಿ ತೆರೆಕಂಡ 'ಅವತಾರ್' ₹100 ಕೋಟಿ ಗಳಿಸಿದ್ದರೆ, 'ಅವತಾರ್ 2' ಮೊದಲ ವಾರವೇ ₹478 ರಿಂದ ₹484 ಕೋಟಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಹೀಗಾಗಿ 'ಅವತಾರ್ 3' ಭಾರತದ ಕಲೆಕ್ಷನ್ ₹500 ಕೋಟಿ ದಾಟುತ್ತೆ ಎಂದು ಲೆಕ್ಕಾಚಾರ ಹಾಕಲಾಗಿದೆ.


Click it and Unblock the Notifications











