Thamma Box Office Day 3: ರಶ್ಮಿಕಾ ಮಂದಣ್ಣ ಸಿನಿಮಾ 'ಥಮ್ಮಾ' 3 ದಿನಗಳಲ್ಲಿ ಗಳಿಸಿದ್ದಿಷ್ಟೇ!
ರಶ್ಮಿಕಾ ಮಂದಣ್ಣ ಹಾಗೂ ಆಯುಷ್ಮಾನ್ ಖುರಾನ ಕಾಂಬಿನೇಷನ್ ಸಿನಿಮಾ 'ಥಮ್ಮಾ' ಬೆಳಕಿನ ಹಬ್ಬಕ್ಕೆ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬಾಲಿವುಡ್‌ನಲ್ಲಿ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಲ್ಲೂ ಹಾರರ್-ಕಾಮಿಡಿ ಜಾನರ್ ಸ್ಟೋರಿಯಲ್ಲಿ ಹಿಂದೆಂದೂ ನಟಿಸಿರಲಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು.
ಈ ಬಾರಿ ಬೆಳಕಿನ ಹಬ್ಬ ಯಾಕೋ ಸಿನಿಮಾ ಮಂದಿಗೆ ಲಕ್ಕಿ ಅಂತ ಸಾಬೀತಾಗಿಲ್ಲ. ಬ್ಯಾಕ್ ಟು ಬ್ಯಾಕ್ ರಜೆಗಳು ಇದ್ದಿದ್ದರಿಂದ ಸಿನಿಮಾಗಳ ಕಲೆಕ್ಷನ್ ಚೆನ್ನಾಗಿ ಆಗಬಹುದೆಂಬ ನಿರೀಕ್ಷೆಯಿತ್ತು. 'ಥಮ್ಮಾ' ಅಷ್ಟೇ ಅಲ್ಲ, 'ಕಾಂತಾರ ಚಾಪ್ಟರ್ 1' ಕೂಡ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಾಡಲಿಲ್ಲ. ಬೇರೆ ಬೇರೆ ಭಾಷೆಗಳಲ್ಲಿ ತೆರೆಕಂಡ ಸಿನಿಮಾಗಳು ಕೂಡ ಗಳಿಸಿದ್ದು ಅಷ್ಟಕ್ಕಷ್ಟೇ.

'ಥಮ್ಮಾ' ಮೇಲೆ ನಿರೀಕ್ಷೆ ಹೆಚ್ಚಿದ್ದಿದ್ದಕ್ಕೆ ಕಾರಣ 'ಸ್ತ್ರೀ 2'. ಮ್ಯಾಡಾಕ್ ಸಂಸ್ಥೆ ನಿರ್ಮಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹900 ಕೋಟಿಗೂ ಅಧಿಕ ಗಳಿಸಿತ್ತು. ಇದೇ ಸಂಸ್ಥೆ ಮತ್ತೊಂದು ಹಾರರ್-ಕಾಮಿಡಿ 'ಥಮ್ಮಾ' ಮೂಲಕ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿತ್ತು. ಸಿನಿಮಾಗೆ ಪಾಸಿಟಿವ್ ರಿವ್ಯೂ ಸಿಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲೂ ಪಾಸಿಟಿವ್ ಕಮೆಂಟ್‌ಗಳೇ ಇವೆ. ಆದರೂ ಮೊದಲ ಮೂರು ದಿನಗಳಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಆಗಿಲ್ಲ. ಹಾಗಿದ್ದರೆ, ಮೊದಲ ಮೂರು ದಿನಗಳ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
3ನೇ ದಿನ 'ಥಮ್ಮಾ' ಗಳಿಸಿದ್ದೆಷ್ಟು?
ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ. ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟಿರುವ ನಟಿ ಮತ್ತೊಂದು ಸಕ್ಸಸ್‌ಫುಲ್ ಸಿನಿಮಾ ಕೊಡುವ ತವಕದಲ್ಲಿದ್ದಾರೆ. ಆದರೆ, ಮೊದಲ 3 ದಿನಗಳ ಕಲೆಕ್ಷನ್ ನಿರೀಕ್ಷೆ ಮಾಡದಷ್ಟು ಆಗಿಲ್ಲ. ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಂಡಿರುವ ಈ ಸಿನಿಮಾ 3ನೇ ದಿನ ಶೇ.32.42ರಷ್ಟು ಡ್ರಾಪ್ ಆಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಥಮ್ಮಾ' 3ನೇ ದಿನದ ಕಲೆಕ್ಷನ್ 12.57 ಕೋಟಿ ರೂಪಾಯಿ.
₹50 ಕೋಟಿ ಕ್ಲಬ್ ಸೇರಿದ 'ಥಮ್ಮಾ'
ಆಯುಷ್ಮಾನ್ ಖುರಾನ ಹಾಗೂ ರಶ್ಮಿಕಾ ಜೋಡಿ 'ಥಮ್ಮಾ' ಮೊದಲ ಮೂರು ದಿನಗಳಲ್ಲಿ ₹50 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಭಾರತದಾದ್ಯಂತ ₹24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ₹18.6 ಕೋಟಿ ಗಳಿಕೆ ಕಂಡಿರೆ, ಅದೇ ಮೂರನೇ ದಿನ ₹12.57 ಕೋಟಿ ಗಳಿಸಿದೆ. ಈ ಮೂಲಕ 55.26 ಕೋಟಿ ಕಲೆಕ್ಷನ್ ಮಾಡಿದೆ. ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿದ್ದರಿಂದ ಈ ಸಿನಿಮಾದ ಕಲೆಕ್ಷನ್ ₹80 ರಿಂದ ₹100 ಕೋಟಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, 50 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದೆಯಷ್ಟೇ.

ತೆಲುಗು ಮಂದಿಯಿಂದ ನಿರಾಸಕ್ತಿ
'ಥಮ್ಮಾ'ದ ಪ್ರಮುಖ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಇದ್ದರೂ ತೆಲುಗು ಮಂದಿಯಿಂದ ಸಿನಿಮಾ ಬಗ್ಗೆ ನಿರಾಸಕ್ತಿ ವ್ಯಕ್ತವಾಗಿದೆ. ಈ ಸಿನಿಮಾ ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ತೆಲುಗು ವರ್ಷನ್ ಮೊದಲ ದಿನ ₹25 ಲಕ್ಷ, 2ನೇ ದಿನ ₹10 ಲಕ್ಷ ಹಾಗೂ 3ನೇ ದಿನ ₹10 ಲಕ್ಷ ರೂಪಾಯಿ ಕಲೆ ಹಾಕಿದೆ. ಒಟ್ಟಾರೆ ತೆಲುಗು ವರ್ಷನ್‌ನಿಂದ ಕೇವಲ ₹45 ಲಕ್ಷ ರೂಪಾಯಿ ಗಳಿಕೆ ಕಂಡಿದೆ. ಕನಿಷ್ಠ ದಿನಕ್ಕೆ ₹50 ಲಕ್ಷನಾದರೂ ಕಲೆ ಹಾಕಿದ್ದರೂ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಿತ್ತು.
ವೀಕೆಂಡ್ ಮೇಲೆ ನೀರಿಕ್ಷೆ
'ಥಮ್ಮಾ' ಸಿನಿಮಾ ದೀಪಾವಳಿಯಲ್ಲಿ ಅವರೇಜ್ ಕಲೆಕ್ಷನ್ ಆಗಿದ್ದರೂ, ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಮಾಡುವ ನಿರೀಕ್ಷೆಯಿದೆ. ಹಬ್ಬದ ಮೂಡ್‌ನಲ್ಲಿ ಇರುವ ಜನರು ಅದರಿಂದ ಹೊರ ಬಂದಿದ್ದು, ವೀಕೆಂಡ್‌ನಲ್ಲಿ ಥಿಯೇಟರ್ ಕಡೆಗೆ ಮುಖ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











