'ಬಾಹುಬಲಿ: ದಿ ಎಪಿಕ್' ಅಡ್ವಾನ್ಸ್ ಬುಕಿಂಗ್ ಸಖತ್ ರೆಸ್ಪಾನ್ಸ್: ಸಿನಿಮಾದ ರನ್‌ಟೈಮ್ ಎಷ್ಟು ಗೊತ್ತೇ?
ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಕಲ್ಪನೆ ಮತ್ತೆ ಚಿಗುರೊಡೆಯುವುದಕ್ಕೆ ಈ ಸಿನಿಮಾಗಳೇ ಕಾರಣ. ರಾಜಮೌಳಿಯ 'ಬಾಹುಬಲಿ: ದಿ ಬಿಗಿನಿಂಗ್' ಮತ್ತು 'ಬಾಹುಬಲಿ: ದಿ ಕನ್‌ಕ್ಲೂಷನ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಇಂದು ಸೌತ್ ಸಿನಿಮಾ ಇಂಡಸ್ಟ್ರಿಯ ಹಲವು ಸಿನಿಮಾಗಳಿಗೆ ವರದಾನವಾಗಿದೆ.
'ಬಾಹುಬಲಿ: ದಿ ಬಿಗಿನಿಂಗ್' ಮತ್ತು 'ಬಾಹುಬಲಿ: ದಿ ಕನ್‌ಕ್ಲೂಷನ್' ಈ ಎರಡೂ ಸಿನಿಮಾಗಳು ಭಾರತ ಹಾಗೂ ವಿದೇಶಿ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಅದರಲ್ಲೂ ಭಾರತದ ಬಾಕ್ಸಾಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿತ್ತು. ಬಾಹುಬಲಿ ತೆರೆಕಂಡ 10 ವರ್ಷ ಆಗುತ್ತಿರುವ ಬೆನ್ನಲ್ಲೇ ಈ ಎರಡೂ ಪಾರ್ಟ್‌ಗಳನ್ನು ಒಟ್ಟಿಗೆ ಸೇರಿಸಿ, 'ಬಾಹುಬಲಿ: ದಿ ಎಪಿಕ್' ಹೆಸರಿನಲ್ಲಿ ಒಂದೇ ಸಿನಿಮಾವಾಗಿ ರೀ ರಿಲೀಸ್ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಿನಿಮಾ ಅಕ್ಟೋಬರ್ 31, 2025 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

'ಬಾಹುಬಲಿ' ಸೀರಿಸ್‌ನಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಸತ್ಯರಾಜ್, ನಾಜರ್ ಹಾಗೂ ಸುಬ್ಬರಾಜು ಸೇರಿದಂತೆ ತೆಲುಗಿನ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ದೊಡ್ಡ ತಾರಾಗಣ, ಅದ್ಧೂರಿ ಸೆಟ್, ಆಕ್ಷನ್ ಸೀಕ್ವೆನ್ಸ್, ಹಾಡುಗಳು ಸಿನಿಪ್ರೇಮಿಗಳನ್ನು ಮನಸ್ಸನ್ನು ಸೆಳೆದಿತ್ತು. ಈ ರಾಜಮೌಳಿಯ ಮತ್ತೊಂದು ಪ್ರಯತ್ನಕ್ಕೆ ಅಮೆರಿಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
'ಬಾಹುಬಲಿ: ದಿ ಎಪಿಕ್' ಸಿನಿಮಾಗೆ ಇತ್ತೀಚೆಗೆ ಸೆನ್ಸಾರ್ ಆಗಿದೆ. ಎರಡು ಭಾಗಗಳನ್ನು ಸೇರಿಸಿದ ಸಿನಿಮಾ ರನ್ ಟೈಮ್ ಸುಮಾರು 3 ಗಂಟೆ 44 ನಿಮಿಷ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಸಿನಿಮಾಗೆ ವಿದೇಶಗಳಲ್ಲಿ ಅಡ್ವಾನ್ಸ್ ಬುಕಿಂಗ್ ಒಪನ್ ಮಾಡಲಾಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ 15 ದಿನಗಳ ಮುಂಚೆಯೇ ಪ್ರೀ-ಸೇಲ್ಸ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಅಮೆರಿಕದಲ್ಲಿ ಈ ಸಿನಿಮಾ ನೋಡುವುದಕ್ಕೆ ಸಿಕ್ಕಾಪಟ್ಟೆ ಆಸಕ್ತಿಯನ್ನು ತೋರುತ್ತಿದ್ದಾರೆ. ಅದರಲ್ಲೂ ಅಮೆರಿಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಕೊಯ್‌ಮೊಯ್ ವರದಿ ಪ್ರಕಾರ, ಅಮೆರಿಕದ ಸುಮಾರು 111 ಸ್ಥಳಗಳಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. 112 ಶೋಗಳಿಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಇದೂವರೆಗೆ ಸುಮಾರು 5500 ಟಿಕೆಟ್‌ಗಳು ಸೇಲ್ ಆಗಿರುವ ಬಗ್ಗೆ ವರದಿಯಾಗಿದೆ. ಈ ಟಿಕೆಟ್‌ಗಳಿಂದ 102,500 ಯುಎಸ್ ಡಾಲರ್ ಅಂದರೆ, ₹89 ಲಕ್ಷ ಗಳಿಸಿದೆ ಎಂದು ವರದಿ ಮಾಡಲಾಗಿದೆ. ಇದು ರೀ ರಿಲೀಸ್ ಆಗುತ್ತಿರುವ ಸಿನಿಮಾಗೆ ಸಿಕ್ಕಿರುವ ಅತೀ ದೊಡ್ಡ ರೆಸ್ಪಾನ್ಸ್ ಎಂದು ಹೇಳಲಾಗುತ್ತಿದೆ.

ಇನ್ನು ಅಮೆರಿಕ ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿಯೂ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಈ ಹಿಂದೆ ರಿ-ರಿಲೀಸ್ ಆದ ಸಿನಿಮಾಗಳಲ್ಲಿ ದಳಪತಿ ವಿಜಯ್ ನಟಿಸಿದ 'ಗಿಲ್ಲಿ' ಅತಿ ಹೆಚ್ಚು ಅಂದರೆ, ₹32.5 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೇ ವಿಜಯ್ ನಟಿಸಿದ್ದ ಮತ್ತೊಂದು ಸಿನಿಮಾ 'ಸಚಿನ್' ₹13.6 ಕೋಟಿ, ಮಹೇಶ್ ಬಾಬು ಸಿನಿಮಾ 'ಖಲೇಜಾ' ₹11 ಕೋಟಿ, 'ಮುರಾರಿ' ₹9 ಕೋಟಿ, ಪವನ್ ಕಲ್ಯಾಣ್ ಸಿನಿಮಾ 'ಗಬ್ಬರ್ ಸಿಂಗ್' ₹8 ಕೋಟಿ ಹಾಗೂ 'ಖುಷಿ' ₹7.5 ಕೋಟಿ ಕಲೆಕ್ಷನ್ ಆಗಿತ್ತು. ಈ ದಾಖಲೆಗಳನ್ನು 'ಬಾಹುಬಲಿ: ದಿ ಎಪಿಕ್' ಮುರಿಯುತ್ತಾ ಅನ್ನೋ ಕುತೂಹಲವಿದೆ.
ರಾಜಮೌಳಿ ನಿರ್ದೇಶಿಸಿದ ಈ ಎಪಿಕ್ ಸಿನಿಮಾ ಮೊದಲ ಭಾಗ ಅಂದರೆ, 'ಬಾಹುಬಲಿ: ದಿ ಬಿಗಿನಿಂಗ್' ಸುಮಾರು ₹650 ಕೋಟಿ ಗಳಿಸಿತ್ತು. ಹಾಗೇ 'ಬಾಹುಬಲಿ: ದಿ ಕನ್‌ಕ್ಲೂಷನ್' ಸಿನಿಮಾ ₹1810 ಕೋಟಿ ಕಲೆಕ್ಷನ್ ಮಾಡಿತ್ತು. ಒಟ್ಟಾರೆ ಈ ಎರಡು ಪಾರ್ಟ್‌ಗಳನ್ನು ಸೇರಿದ ₹2460 ಕೋಟಿ ಕಲೆಕ್ಷನ್ ಮಾಡಿದ್ದವು. ಇದೀಗ 'ಬಾಹುಬಲಿ: ದಿ ಎಪಿಕ್' ವಿದೇಶದಲ್ಲಿ ಸಖತ್ ಆಗಿಯೇ ಅಡ್ವಾನ್ಸ್ ಬುಕಿಂಗ್ ಆಗುತ್ತಿದೆ. ಇತ್ತ ಭಾರತದಲ್ಲಿ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋದು ನೋಡಬೇಕಿದೆ.


Click it and Unblock the Notifications











