ರಜನಿಕಾಂತ್ 'ಕೂಲಿ' ನಿರ್ಮಾಪಕರಿಗೆ ಲಾಭ.. ಆದರೆ ವಿತರಕರಿಗೆ? ಈ ಬ್ಯುಸಿನೆಸ್ ಲೆಕ್ಕಾಚಾರವನ್ನೊಮ್ಮೆ ನೋಡಿ
ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಕೊಂಡು ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದ ಸಿನಿಮಾ 'ಕೂಲಿ' ಕೆಲವರಿಗೆ ಇಷ್ಟ ಆಯ್ತು. ಮತ್ತೆ ಕೆಲವರಿಗೆ ಕಷ್ಟ ಆಯ್ತು. ರಜನಿಕಾಂತ್ ಬಗ್ಗೆ ಯಾರಿಗೂ ತಕರಾರು ಇಲ್ಲ. ಅದೇ ಲೋಕೇಶ್ ಕನಕರಾಜ್ ಬಗ್ಗೆ ನೂರೆಂಟು ಟೀಕೆಗಳು ಬಂದಿವೆ. ದೊಡ್ಡ ಬಜೆಟ್, ದೊಡ್ಡ ಸ್ಟಾರ್ ಕಾಸ್ಟ್ ಎರಡನ್ನೂ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಲೋಕೇಶ್ ಕನಕರಾಜ್ ವಿಫಲರಾಗಿದ್ದಾರೆ. 9ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಏನೂ ಮಾಡಿಲ್ಲ.
ಎರಡನೇ ವಾರಕ್ಕೆ ಕಾಲಿಟ್ಟಿರುವ 'ಕೂಲಿ' ಬಾಕ್ಸಾಫೀಸ್‌ನಲ್ಲಿ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಹಾಗಿದ್ಮೇಲೆ ರಜನಿಕಾಂತ್ ಸಿನಿಮಾಗೆ ಹಾಕಿದ ಬಂಡವಾಳ ವಾಪಸ್ ಬಂತೇ? ನಿರ್ಮಾಪಕರಿಗೆ ನಷ್ಟ ಆಯ್ತಾ? ವಿತರಕರಿಗೆ ನಷ್ಟ ಆಯ್ತಾ? ಆಗಿದ್ದರೆ ಎಷ್ಟು ಆಗಿದೆ? ಒಂದು ವೇಳೆ ಫಸ್ಟ್ ಡೇ ಫಸ್ಟ್ ಶೋ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದರೆ, ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಬಹುದಿತ್ತು.

'ಕೂಲಿ' ಸಿನಿಮಾ ರಿಲೀಸ್ ಆದ 9 ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು ₹425 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ವೀಕೆಂಡ್ ವೇಳೆಗೆ ಈ ಸಿನಿಮಾದ ಕಲೆಕ್ಷನ್ ₹450 ಕೋಟಿ ದಾಟುವ ಸಾಧ್ಯತೆಯಿದೆ. 'ಕೂಲಿ' ತಮಿಳು ಚಿತ್ರರಂಗದ ಮೊದಲ ₹1000 ಕೋಟಿ ಕ್ಲಬ್ ಸೇರುವ ಸಿನಿಮಾ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣದೆ ಇರುವುದರಿಂದ ಈ ದಾಖಲೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಹಾಗಿದ್ದರೆ, 'ಕೂಲಿ' ಲಾಭ ಆಗಿದ್ದು ಯಾರಿಗೆ? ಈ ಸಿನಿಮಾದ ಬ್ಯುಸಿನೆಸ್ ಹೇಗಾಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಹೈಲೈಟ್
'ಕೂಲಿ' ಸಿನಿಮಾದ ವೆಚ್ಚ ಹಾಗೂ ಗಳಿಕೆಯ ಅಂತರವೇನು?
ರಜನಿ-ಲೋಕೇಶ್ ಸಂಭಾವನೆ ಲಾಭದ ಅಂತರ ತಗ್ಗಿಸಿತೇ?
ನಿರ್ಮಾಪಕರಿಗೆ ಲಾಭ? ವಿತರಕರಿಗೆ ನಷ್ಟ ಆಯಿತೇ?
ಥಿಯೇಟರ್‌ನಿಂದ ಬಂದಿದ್ದೆಷ್ಟು? ರೈಟ್ಸ್‌ನಿಂದ ಬಂದಿದ್ದೆಷ್ಟು?
ರಜನಿಕಾಂತ್ 'ಕೂಲಿ' ಸಿನಿಮಾ ನಿರ್ಮಾಣ ವೆಚ್ಚ ಬಾರ್ಡರ್ ಕ್ರಾಸ್ ಮಾಡಿದೆ. ಇದಕ್ಕೆ ಕಾರಣ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಅವರ ಸಂಭಾವನೆ ಕಾರಣ ಎನ್ನಲಾಗಿದೆ. ಹಾಗೇ ಸಿನಿಮಾದಲ್ಲಿ ಉಪೇಂದ್ರ, ನಾಗಾರ್ಜುನ, ಆಮಿರ್ ಖಾನ್ ಅಂತಹ ನಟರನ್ನು ದೊಡ್ಡ ಮೊತ್ತಕ್ಕೆ ಕರೆದುಕೊಂಡು ಬಂದಿರೋದು ಬಜೆಟ್‌ನಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣ. ಆದರೆ, ಬಜೆಟ್ ಎಷ್ಟೇ ಆಗಿದ್ದರೂ ರಜನಿಕಾಂತ್ ಸಿನಿಮಾಗೆ ರಿಕವರಿ ಮಾಡುವ ತಾಕತ್ತಿದೆ. ಇಲ್ಲಿ ಕೈ ಕೊಟ್ಟಿದ್ದು ನಿರ್ದೇಶಕ ಲೋಕೇಶ್ ಕನಕರಾಜ್. ಬಜೆಟ್, ಸ್ಟಾರ್‌ಕಾಸ್ಟ್ ಎಲ್ಲವೂ ಇದ್ದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿದೆ.
ಪಿಂಕ್‌ವಿಲ್ಲಾ ವರದಿ ಮಾಡಿರುವಂತೆ 'ಕೂಲಿ' ರಿಲೀಸ್‌ಗೂ ಮುನ್ನ ದೊಡ್ಡ ಬ್ಯುಸಿನೆಸ್ ಮಾಡಿತ್ತು. ಥಿಯೇಟರ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಸೇಲ್ ಮಾಡಲಾಗಿತ್ತು. ಇದರ ಜೊತೆಗೆನೇ ಓಟಿಟಿ, ಸ್ಯಾಟಲೈಟ್, ಆಡಿಯೋ ರೈಟ್ಸ್ ಸೇರಿದಂತೆ ಬಿಡುಗಡೆಗೂ ಮುನ್ನವೇ ಈ ಸಿನಿಮಾ 35 ರಿಂದ 40 ಕೋಟಿ ರೂಪಾಯಿ ಲಾಭದಲ್ಲಿ ಇತ್ತೆಂದು ವರದಿಯಾಗಿದೆ.
'ಕೂಲಿ' ಸಿನಿಮಾದ ಬಜೆಟ್
'ಕೂಲಿ' ಸಿನಿಮಾವನ್ನು ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದೆ. ಇದರ ಜೊತೆ ಪ್ರಚಾರ, ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಸೇರಿಸಿ ಸುಮಾರು 50 ಕೋಟಿ ರೂಪಾಯಿ ಆಗಿದೆ. ಒಟ್ಟು ಸಿನಿಮಾಗೆ ಬಿದ್ದಿದ್ದು ಬರೋಬ್ಬರಿ ₹400 ಕೋಟಿ ಎಂದು ವರದಿಯಾಗಿದೆ. ಬಿಡುಗಡೆಗೂ ಮುನ್ನ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಮಾಡಿದ ಬ್ಯುಸಿನೆಸ್ ಇಷ್ಟು.
'ಕೂಲಿ' ಬ್ಯುಸಿನೆಸ್ (ವಿತರಣೆ)
ತಮಿಳುನಾಡು- ₹60.00 ಕೋಟಿ
AP/TS - ₹44.00 ಕೋಟಿ
ಕರ್ನಾಟಕ -₹22.00 ಕೋಟಿ
ಕೇರಳ - ₹13.50 ಕೋಟಿ
ಭಾರತ - ₹13.00 ಕೋಟಿ
ವಿದೇಶದ ಹಕ್ಕು- ₹80.00 ಕೋಟಿ
ಒಟ್ಟು-232.50 ಕೋಟಿ
ನಾನ್-ಥಿಯೇಟ್ರಿಕಲ್ ರೈಟ್ಸ್
ಓಟಿಟಿ- ₹130.00 ಕೋಟಿ
ಆಡಿಯೋ- ₹20.00 ಕೋಟಿ
ಸ್ಯಾಟಲೈಟ್ -₹50.00 ಕೋಟಿ
ಒಟ್ಟಿ- ₹200 ಕೋಟಿ
ನಿರ್ಮಾಪಕರಿಗೆ ಲಾಭ, ವಿತರಕರಿಗೆ ನಷ್ಟ?
ಈ ವರದಿಯ ಪ್ರಕಾರ ಸನ್ ಪಿಕ್ಚರ್ಸ್‌ಗೆ 432.50 ಕೋಟಿ ಬಿಡುಗಡೆಗೂ ಮುನ್ನವೇ ಬಂದಿದೆ. ಹೀಗಾಗಿ ಸುಮಾರು 33 ಕೋಟಿ ರೂಪಾಯಿ ಲಾಭದಲ್ಲಿದೆ. ಆದರೆ, ವಿತರಕರು ₹33 ಕೋಟಿ ನಷ್ಟವನ್ನು ಅನುಭವಿಸಲಿದ್ದಾರೆ ಎನ್ನಲಾಗಿದೆ. ಆಂಧ್ರ-ತೆಲಂಗಾಣದಲ್ಲಿ ₹12 ಕೋಟಿ ನಷ್ಟ, ಕರ್ನಾಟಕದಿಂದ ₹3 ಕೋಟಿ, ಕೇರಳದಿಂದ ₹4 ಕೋಟಿ ಹಾಗೂ ವಿದೇಶದಿಂದ ₹10-15 ಕೋಟಿ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications











