Love Mocktail 3 Day 1 Box office: 'ಲವ್ ಮಾಕ್ಟೇಲ್ 3' ರೆಸ್ಪಾನ್ಸ್ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು?
ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಧುರಂಧರ್ 2' ಎದುರು ಕನ್ನಡದ ಸಿನಿಮಾ 'ಲವ್ ಮಾಕ್ಟೇಲ್ 3' ರಿಲೀಸ್ ಆಗಿತ್ತು. 'ಲವ್ ಮಾಕ್ಟೇಲ್' ಸೀಕ್ವೆಲ್‌ನ ಕೊನೆಯ ಚಾಪ್ಟರ್ ಆಗಿರುವ ಈ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ಇತ್ತು. ಏಪ್ರಿಲ್ 10ರಂದು ರಿಲೀಸ್ ಆಗಬೇಕಿದ್ದ ಸಿನಿಮಾ 'ಟಾಕ್ಸಿಕ್' ಪೋಸ್ಟ್‌ಪೋನ್ ಆಗುತ್ತಿದ್ದಂತೆ ಮಾರ್ಚ್ 19ಕ್ಕೆ ಶಿಫ್ಟ್ ಆಗಿತ್ತು. ಹೀಗಾಗಿ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ 'ಧುರಂಧರ್ 2' ಜೊತೆ 'ಲವ್ ಮಾಕ್ಟೇಲ್ 3' ಪೈಪೋಟಿಗೆ ಬಿದ್ದಿದೆ.
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿರುವ 'ಲವ್ ಮಾಕ್ಟೇಲ್ 3'ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಿರ್ದೇಶನವನ್ನೂ ಮೆಚ್ಚಿಕೊಂಡಿದ್ದಾರೆ. ಆದರೆ, 'ಧರಂಧರ್ 2' ಎದುರು 'ಲವ್ ಮಾಕ್ಟೇಲ್ 3' ಬಾಕ್ಸಾಫೀಸ್‌ನಲ್ಲಿ ಹೇಗೆ ಪೈಪೋಟಿ ಕೊಡುತ್ತೆ ಅನ್ನೋದು ಕುತೂಹಲವಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಕರ್ನಾಟಕದಲ್ಲಿಯೂ 'ಧುರಂಧರ್ 2' ಕ್ರೇಜ್ ಜೋರಾಗಿದೆ. ಕನ್ನಡ ಚಿತ್ರಮಂದಿರಗಳು ಕೂಡ ಈ ಸಿನಿಮಾವನ್ನು ಪ್ರದರ್ಶನ ಮಾಡುತ್ತಿವೆ. ಹೀಗಾಗಿ ಒಳ್ಳೆಯ ಕನ್ನಡ ಸಿನಿಮಾವೊಂದು ಈ ಅಲೆಯಲ್ಲಿ ಕೊಚ್ಚಿ ಹೋಗುತ್ತಾ? ಅನ್ನೋ ಅನುಮಾನ ಕಾಡಿತ್ತು. ಆದರೆ, ಕನ್ನಡಿಗರು ಥಿಯೇಟರ್‌ಗೆ ಹೋಗಿ ಸಿನಿಮಾವನ್ನು ನೋಡಿದ್ದಾರೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಿದೆ.
'ಲವ್ ಮಾಕ್ಟೇಲ್ 3' ಮೊದಲ ದಿನ ಕಲೆಕ್ಷನ್
ಡಾರ್ಲಿಂಗ್ ಕೃಷ್ಣಗೆ 'ಲವ್ ಮಾಕ್ಟೇಲ್' ಸೀರಿಸ್ ಕೈ ಹಿಡಿದ ಹಾಗೆ ಮತ್ಯಾವ ಸಿನಿಮಾನೂ ಹಿಡಿದಿಲ್ಲ. ಚಿತ್ರರಂಗದಲ್ಲಿ ಅವರಿಗೆ ಯಶಸ್ಸು ಕೊಟ್ಟಿದ್ದೇ 'ಲವ್ ಮಾಕ್ಟೇಲ್'. ಇಲ್ಲಿಂದ ಶುರುವಾದ ಜರ್ನಿ 'ಲವ್ ಮಾಕ್ಟೇಲ್ 3'ವರೆಗೂ ಬಂದು ನಿಂತಿದೆ. ಮಾರ್ಚ್ 19ರಂದು ರಿಲೀಸ್ ಆಗಿದ್ದ ಈ ಸಿನಿಮಾಗೆ ಕನ್ನಡಿಗರ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಅಂಕಿ-ಅಂಶಗಳ ಪ್ರಕಾರ ಈ ಸಿನಿಮಾ ಮೊದಲ ದಿನದ ಕಲೆಕ್ಷನ್ 1.90 ಕೋಟಿ ರಿಂದ 2 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
ಮತ್ತೊಂದು ಲೆಕ್ಕ ಎಷ್ಟು?
'ಲವ್ ಮಾಕ್ಟೇಲ್ 3' ಬಗ್ಗೆ ಕರ್ನಾಟಕದ ವಿತರಕರ ವಲಯದಲ್ಲಿ ಸಿಕ್ಕಿರುವ ಲೆಕ್ಕ ಬಹುತೇಕ ಪಕ್ಕಾ ಇರುತ್ತೆ. ಆದರೂ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಹೇಳುವ ಸ್ಯಾಕ್ನಿಲ್ಕ್ ಪ್ರಕಾರ 'ಲವ್ ಮಾಕ್ಟೇಲ್ 3' ಮೊದಲ ದಿನ 1.36 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್‌ನಲ್ಲಿ ವ್ಯತ್ಯಾಸವಿದೆ. ಏನೇ ಇದ್ದರೂ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಸಿನಿಮಾದ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕಿದೆ.

2ನೇ ದಿನದಿಂದ ಅಸಲಿ ಆಟ
ಮೊದಲ ದಿನ ಯುಗಾದಿ ಹಬ್ಬದ ಸಂಭ್ರಮದಲ್ಲಿ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದರು. ಆದರೆ, 2ನೇ ದಿನವೂ 'ಲವ್ ಮಾಕ್ಟೇಲ್ 3'ಗೆ ಅದೇ ಕ್ರೇಜ್ ಇರುತ್ತಾ? ಅನ್ನೋದು ಕುತೂಹಲ ಸಿನಿಮಾ ಮಂದಿಯಲ್ಲಿದೆ. ಅದರಲ್ಲೂ ಟ್ರೇಡ್ ಎಕ್ಸ್‌ಪರ್ಟ್‌ಗಳು 2ನೇ ದಿನ ಎಷ್ಟು ಕಲೆಕ್ಷನ್ ಮಾಡಬಹುದೆಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಮಧ್ಯಾಹ್ನ ಹಾಗೂ ಸಂಜೆಯ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications















