25 ದಿನ ಪೂರೈಸಿದ 'ಡೆವಿಲ್'; ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' 2025ರ ಕೊನೆಯ ತಿಂಗಳಲ್ಲಿ ರಿಲೀಸ್ ಆಗಿತ್ತು. ಡಿಸೆಂಬರ್ 11ರಂದು ರಾಜ್ಯಾದ್ಯಂತ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ರಿಲೀಸ್ ಆಗಿದ್ದ ಸಿನಿಮಾ ಮೊದಲ ವಾರ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ, ನಂತರದ ದಿನಗಳಲ್ಲಿ ಕಲೆಕ್ಷನ್ ಡ್ರಾಪ್ ಆಗುವುದಕ್ಕೆ ಶುರುವಾಗಿತ್ತು. ಹೀಗಿದ್ದರೂ 'ಡೆವಿಲ್' ಇಂದಿಗೆ (ಜನವರಿ 4) ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ.
ಯಾವುದೇ ಸಿನಿಮಾ ಬಂದರೂ ಕರ್ನಾಟಕದಲ್ಲಿ 'ಡೆವಿಲ್' ಅಬ್ಬರಿಸೋದು ಗ್ಯಾರಂಟಿ ಎಂದೇ ಭಾವಿಸಲಾಗಿತ್ತು. ಆದರೆ, ಒಂದು ವಾರ ಮುನ್ನ ತೆರೆಕಂಡಿದ್ದ 'ಧುರಂಧರ್' ನಿರೀಕ್ಷೆಗೂ ಮುನ್ನ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಇನ್ನೊಂದು ಕಡೆ ನಂದಮೂರಿ ಬಾಲಕೃಷ್ಣ ಸಿನಿಮಾ 'ಅಖಂಡ 2' ರಿಲೀಸ್ ಆಗಿತ್ತು. ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳೇ ಹೆಚ್ಚು ಪೈಪೋಟಿ ಕೊಟ್ಟಿದ್ದವು. ಹೀಗಾಗಿ 'ಡೆವಿಲ್' 2ನೇ ವಾರದ ಹೊತ್ತಿಗೆ ಬಾಕ್ಸಾಫೀಸ್‌ನಲ್ಲಿ ಕೊಂಚ ಮಂಕಾಯ್ತು.

ದರ್ಶನ್ ಜೈಲಿನಿಂದ ಹೊರಗೆ ಬಂದಿದ್ದರೆ, ಸಿನಿಮಾದ ಪ್ರಚಾರ ಇನ್ನೂ ಜೋರಾಗೇ ಆಗುತ್ತಿತ್ತು. ದರ್ಶನ್ ಅನುಸ್ಥಿತಿಯಲ್ಲಿ 'ಡೆವಿಲ್' ರಿಲೀಸ್ ಆಗಿದ್ದು ಕೂಡ ಕೊಂಚ ಮಟ್ಟಿಗೆ ಏಟು ಕೊಟ್ಟಿತ್ತು. ಹೀಗಾಗಿ 'ಡೆವಿಲ್' ಕಲೆಕ್ಷನ್ ವೀಕೆಂಡ್ ಹೊರತು ಪಡಿಸಿ ಉಳಿದ ದಿನಗಳಲ್ಲಿ ಅದ್ಭುತ ಎನ್ನುವಂತಹ ಕಲೆಕ್ಷನ್ ಏನೂ ಆಗಲಿಲ್ಲ. ಈಗ 25ನೇ ದಿನಕ್ಕೆ ಕಾಲಿಟ್ಟಿದ್ದು, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸಿದೆ? ಯಾರಿಗೆ ನಷ್ಟ? ಯಾರಿಗೆ ಲಾಭ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
25ನೇ ದಿನಕ್ಕೆ ಕಾಲಿಟ್ಟ 'ಡೆವಿಲ್'
ದರ್ಶನ್ ಜೈಲಿನಿಂದ ಹೊರಗೆ ಇದ್ದಿದ್ದರೆ 'ಡೆವಿಲ್' ಸಿನಿಮಾ ತಂಡ ಜೋರಾಗಿ ಸೆಲೆಬ್ರೆಟ್ ಮಾಡುತ್ತಿತ್ತು. ಆದರೆ, ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿ ಇರುವುದರಿಂದ 'ಡೆವಿಲ್' ತಂಡ 25 ದಿನಗಳ ಸೆಲೆಬ್ರೆಷನ್ ಮಾಡುತ್ತಿಲ್ಲ. ಆದರೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ಸಿನಿಮಾ 25 ದಿನಗಳ ಪೂರೈಸಿದ್ದಕ್ಕೆ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೇ 'ಡೆವಿಲ್' ಸಿನಿಮಾ ಹಿಟ್ ಎಂದು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಘೋಷಿಸಿದ್ದಾರೆ.
'ಡೆವಿಲ್' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ದರ್ಶನ್ ಸಿನಿಮಾ 'ಡೆವಿಲ್' ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿತ್ತು. ಅಡ್ವಾನ್ಸ್ ಬುಕಿಂಗ್‌ನಿಂದ ಹಿಡಿದು ಮೊದಲ ದಿನ ಹೌಸ್‌ಫುಲ್ ಕಲೆಕ್ಷನ್‌ವರೆಗೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ 21 ದಿನಗಳವರೆಗೆ ಅಂಕಿ ಅಂಶಗಳನ್ನು ನೀಡಿದ್ದು, ಅದರಲ್ಲಿ ₹34.52 ಕೋಟಿ (Gross) ಹಾಗೇ ₹29.39 ಕೋಟಿ (Net) ಕಲೆಕ್ಷನ್ ಮಾಡಿದೆ ಎಂದು ಹೇಳಿದೆ. ಅದೇ ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ 24 ದಿನಗಳಲ್ಲಿ ₹36.30 ಕೋಟಿ (Net) ಕಲೆಕ್ಷನ್ ಆಗಿದೆ ಎನ್ನಲಾಗಿದೆ.
24 ದಿನಗಳಲ್ಲಿ 'ಡೆವಿಲ್' ಏರಿಯಾವಾರು ಕಲೆಕ್ಷನ್
ಬೆಂಗಳೂರು, ಕೋಲಾರ, ತುಮಕೂರು ₹19 ಕೋಟಿ (Net)
ಮಂಡ್ಯ, ಮೈಸೂರು, ಕೊಡಗು, ಹಾಸನ ₹6.40 ಕೋಟಿ
ಚಿತ್ರದುರ್ಗ+ ದಾವಣಗೆರೆ ₹2.70 ಕೋಟಿ
ಶಿವಮೊಗ್ಗ+ದಕ್ಷಿಣ ಕನ್ನಡ ₹2.10 ಕೋಟಿ
ಹುಬ್ಬಳ್ಳಿ ₹5.10 ಕೋಟಿ
ಹೈದರಾಬಾದ್ ಕರ್ನಾಟಕ ₹1.30 ಕೋಟಿ
ಒಟ್ಟು ₹36.60 ಕೋಟಿ

'ಡೆವಿಲ್' ಸಿನಿಮಾದ ಶೇರ್ ಎಷ್ಟು?
ಕರ್ನಾಟಕದ ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಅಂಕಿ-ಅಂಶಗಳ ಪ್ರಕಾರ ದರ್ಶನ್ ಸಿನಿಮಾ 'ಡೆವಿಲ್' ₹36.60 ಕೋಟಿ (Net) ಕಲೆಕ್ಷನ್ ಆಗಿದ್ದರೂ, ವಿತರಕರಿಗೆ ಜೇಬು ಸೇರಿದ್ದು ₹19 ಕೋಟಿ (Share) ಎನ್ನಲಾಗಿದೆ. ಈ ಸಿನಿಮಾವನ್ನು ಸುಮಾರು ₹30 ಕೋಟಿ ರೂಪಾಯಿಗೆ ವಿತರಕರು ಖರೀದಿ ಮಾಡಿದ್ದರು ಎಂದೂ ಸಿನಿಮಾ ಮಂದಿ ಬಾಯಲ್ಲಿ ಹರಿದಾಡುತ್ತಿರುವ ಅಂಕಿ-ಅಂಶಗಳು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











