Akash Box Office Day 1 Prediction: ಅಪ್ಪು ಸಿನಿಮಾ 'ಆಕಾಶ್'ಗೆ ಭರ್ಜರಿ ರೆಸ್ಪಾನ್ಸ್; ಮೊದಲ ಕಲೆಕ್ಷನ್ ಎಷ್ಟು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಆಕಾಶ್' ಇಂದು (ಮಾರ್ಚ್ 13) ರಿ-ರಿಲೀಸ್ ಆಗಿದೆ. ಅಪ್ಪು 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಗಾಗಿ 'ಆಕಾಶ್' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಗ್ ಸ್ಕ್ರೀನ್‌ನಲ್ಲಿ ಪುನೀತ್ ಅನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ವೃತ್ತಿ ಬದುಕಿನಲ್ಲಿ ಅತ್ಯಂತ ಯಶಸ್ಸು ಕಂಡ ಸಿನಿಮಾಗಳಲ್ಲಿ 'ಆಕಾಶ್' ಕೂಡ ಒಂದು. 2005ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಸುಮಾರು 25 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಹೀಗಾಗಿ ಮರು ಬಿಡುಗಡೆಯಾದಾಗಲೂ ಈ ಸಿನಿಮಾ ಕಲೆಕ್ಷನ್ ಎಷ್ಟಾಗಬಹುದು? ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಇಂದು (ಮಾರ್ಚ್ 13) ಮರುಬಿಡುಗಡೆಯಾಗಿರುವ 'ಆಕಾಶ್'ಗೆ ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆಲವು ಶೋಗಳು ಹೌಸ್‌ಫುಲ್ ಆಗಿವೆ. ಮಹೇಶ್ ಬಾಬು ನಿರ್ದೇಶಿಸಿದ ಈ ಸಿನಿಮಾ ರಿ-ರಿಲೀಸ್ ಆದಾಗ ಎಷ್ಟು ಕಲೆಕ್ಷನ್ ಆಗಬಹುದು? ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್? ಮುಂದಿನ ದಿನಗಳಲ್ಲಿ ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗಬಹುದು? ಕರ್ನಾಟಕದ ವಿತರಕರ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್?
ಪುನೀತ್ ರಾಜ್‌ಕುಮಾರ್ ಬರ್ತ್‌ಡೇಗೆ 'ಆಕಾಶ್' ರಿ-ರಿಲೀಸ್ ಆಗಿದ್ದರಿಂದ ಅವರ ಅಭಿಮಾನಿಗಳು ಥಿಯೇಟರ್‌ನಲ್ಲಿ ಸಂಭ್ರಮಿಸಿದ್ದಾರೆ. ಕರ್ನಾಟಕದ ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸುಮಾರು 108 ಸ್ಕ್ರೀನ್‌ಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಮೈಸೂರು ಹಾಗೂ ಮಂಡ್ಯ ಭಾಗಗಳಲ್ಲಿ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ.
ರೆಸ್ಪಾನ್ಸ್ ಹೇಗಿದೆ?
'ಆಕಾಶ್' ರಿ-ರಿಲೀಸ್ ಆದ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಎರಡೂ ನಗರಗಳಿಂದ ಸುಮಾರು 18 ರಿಂದ 20 ಶೋಗಳು ಹೌಸ್‌ಫುಲ್ ಆಗಿವೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಸಂಜೆ ಶೋ ಡಲ್ ಆಗಿದ್ದರೆ, ರಾತ್ರಿ ಶೋಗಳು ಸಾಧಾರಣ ಪ್ರತಿಕ್ರಿಯೆಯಿದೆ ಎನ್ನಲಾಗಿದೆ.

ಬಾಕ್ಸಾಫೀಸ್ ಲೆಕ್ಕಾಚಾರವೇನು?
ವಿತರಕರ ವಲಯದಲ್ಲಿ ಚರ್ಚೆ ಆಗುತ್ತಿರುವಂತೆ 'ಆಕಾಶ್' ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಲಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 40 ಲಕ್ಷ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಇದರಲ್ಲಿ ಕೇವಲ ಬೆಂಗಳೂರು ಒಂದರಿಂದಲೇ ಸುಮಾರು 20 ಲಕ್ಷಕ್ಕೂ ಅಧಿಕ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ. ನಿಖರವಾಗಿ ಬಾಕ್ಸಾಫೀಸ್ ಕಲೆಕ್ಷನ್ ನಾಳೆ (ಮಾರ್ಚ್ 14) ಸಿಗುವ ಸಾಧ್ಯತೆಯಿದೆ.
ಒಟ್ಟು ಎಷ್ಟು ಕಲೆಕ್ಷನ್ ಮಾಡಬಹುದು?
ಮೊದಲ ದಿನ ಸಿಕ್ಕಿರುವ ರೆಸ್ಪಾನ್ಸ್ ಅನ್ನು ಆಧಾರವಾಗಿಟ್ಟುಕೊಂಡು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ. ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ವರೆಗೂ ಈ ಸಿನಿಮಾ ಅಂದಾಜು 80 ಲಕ್ಷ ರೂಪಾಯಿಯಿಂದ ಹಿಡಿದು ಸುಮಾರು 1 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದೆಂಬ ನಿರೀಕ್ಷಿಸಲಾಗಿದೆ. ಒಟ್ಟಾರೆ, 'ಆಕಾಶ್' ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗಿರುತ್ತೆ? ಅನ್ನೋದು ಭವಿಷ್ಯವೇ ಹೇಳಲಿದೆ.


Click it and Unblock the Notifications















