'ಕಾಂತಾರ 1' ದಾಖಲೆ ಮುರಿದ 'ಧುರಂಧರ್'; ದೈವ ಅಣಕಿಸಿ ವಿವಾದಕ್ಕೆ ಸಿಲುಕಿದ್ದ ರಣ್‌ವೀರ್..ಮುನಿಸಿಕೊಳ್ಳಲಿಲ್ಲ ಪಂಚುರ್ಲಿ
ಈ ವರ್ಷ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಸಿಕ್ಕಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 2025ರಲ್ಲಿ ಭಾರತದ ಎಲ್ಲಾ ಚಿತ್ರರಂಗದಲ್ಲಿ ದಾಖಲೆ ಬರೆದಿದ್ದ ಸಿನಿಮಾಗಳನ್ನು ಹಿಂದಿಕ್ಕಿ ಅತೀ ಹೆಚ್ಚು ಗಳಿಕೆ ಕಂಡಿತ್ತು. ಈ ವರ್ಷದ ನಂಬರ್ 1 ಸಿನಿಮಾ ಆಗಿದ್ದ 'ಕಾಂತಾರ ಚಾಪ್ಟರ್'ಗೆ ಬಾಲಿವುಡ್ ಸಿನಿಮಾ 'ಧುರಂಧರ್' ಟಕ್ಕರ್ ಕೊಟ್ಟಿದೆ.
ರಣ್‌ವೀರ್ ಸಿಂಗ್ ಹಾಗೂ ಆದಿತ್ಯಧರ್ ಕಾಂಬಿನೇಷನ್ ಸಿನಿಮಾ 'ಧುರಂಧರ್' ಮೂರನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಂದೊಂದೇ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ. ಅದರಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ ಚಾಪ್ಟರ್ 1' ದಾಖಲೆಯನ್ನು ಉಡೀಸ್ ಮಾಡಿದೆ.

'ಧುರಂಧರ್' ಸಿನಿಮಾ ರಿಲೀಸ್‌ಗೂ ಮುನ್ನ ರಣ್‌ವೀರ್ ಸಿಂಗ್ ವಿವಾದಕ್ಕೆ ಸಿಲುಕಿದ್ದರು. ಗೋವಾದ ಅಂತರರಾಷ್ಟ್ರೀಯ ಫಿಲ್ಮ್‌ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ರಿಷಬ್ ಶೆಟ್ಟಿಯನ್ನು ಹೊಗಳುವ ಭರಾಟೆಯಲ್ಲಿ ರಣ್‌ವೀರ್ ಸಿಂಗ್ ದೈವನ್ನು ಅಣಕಿಸಿದ್ದರು. ಅದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗಾಗಿ ರಣ್‌ವೀರ್ ಸಿಂಗ್ ಅವರನ್ನು ದೈವ ಸುಮ್ಮನೆ ಬಿಡುವುದಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಆದರೆ, ದೈವ ಈ ಬಾಲಿವುಡ್ ನಟನ ವಿರುದ್ಧ ಮುನಿಸಿಕೊಂಡಿಲ್ಲ ಅನ್ನೋದು 'ಧುರಂಧರ್' ಸಿನಿಮಾ ಸಾಬೀತು ಮಾಡಿದೆ. ಹಾಗಿದ್ದರೆ, 'ಧುರಂಧರ್' ಸಿನಿಮಾ ಇಲ್ಲಿವರೆಗೂ ಮಾಡಿದ ಕಲೆಕ್ಷನ್ ಎಷ್ಟು? 'ಕಾಂತಾರ ಚಾಪ್ಟರ್ 1'ಗೂ 'ಧುರಂಧರ್'ಗೂ ಎಷ್ಟು ಅಂತರವಿದೆ? ತಿಳಿಯುವುದಕ್ಕೆ ಮುಂದೆ ಓದಿ.
ದೈವ ಅಣಕಿಸಿದ ಬಳಿಕ ರಣ್‌ವೀರ್ ಸಿಂಗ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದ್ದವು. ಹೀಗಾಗಿ 'ಧುರಂಧರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುವುದು ಗ್ಯಾರಂಟಿ ಅಂತಲೇ ಭಾವಿಸಲಾಗಿತ್ತು. ಆದರೆ, ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಈ ಲೆಕ್ಕಾಚಾರಗಳೆಲ್ಲವೂ ತಲೆ ಕೆಳಗಾಗಿದೆ. ಮೂರನೇ ಸೋಮವಾರ ಬಾಕ್ಸಾಫೀಸ್‌ನಲ್ಲಿ ಶೇ.50ರಷ್ಟು ಡ್ರಾಪ್ ಆಗಿದ್ದರೂ, ದಾಖಲೆ ಮುರಿಯುವುದರಲ್ಲಿ ಹಿಂದೆ ಬಿದ್ದಿಲ್ಲ.
ಮೂರನೇ ಸೋಮವಾರ ಅಂದರೆ, 18ನೇ ದಿನ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ₹16.5 ಕೋಟಿ. ಈ ಮೂಲಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಈ ಮೂಲಕ 'ಧುರಂಧರ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ನಾಳೆ (ಡಿಸೆಂಬರ್ 24) ₹900 ಕೋಟಿ ದಾಟಲಿದೆ. ಹಾಗೇ ಭಾರತದ ಬಾಕ್ಸಾಫೀಸ್‌ನಲ್ಲಿ 'ಧುರಂಧರ್' ಗಳಿಸಿದ್ದು ₹598.9 ಕೋಟಿ ರೂಪಾಯಿ.

ಇತ್ತ ಡಿಸೆಂಬರ್ ತಿಂಗಳ ಎರಡನೇ ವಾರದ ವರೆಗೂ 'ಕಾಂತಾರ ಚಾಪ್ಟರ್ 1' ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಎನಿಸಿಕೊಂಡಿತ್ತು. ವಿಶ್ವದಾದ್ಯಂತ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ ಬರೋಬ್ಬರಿ ₹852.31 ಕೋಟಿ (Gross) ಕಲೆಕ್ಷನ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ನಿರ್ಮಾಣ ಸಂಸ್ಥೆ 'ಕಾಂತಾರ ಚಾಪ್ಟರ್ 1' ₹900 ಕೋಟಿ ದಾಟಿದ್ದಾಗಿ ಅಂಕಿ-ಅಂಶಗಳನ್ನು ನೀಡಿತ್ತು. ಈ ಮೂಲಕ ನಾಳೆಗೆ 'ಧುರಂಧರ್' ಅಧಿಕೃತವಾಗಿ 'ಕಾಂತಾರ ಚಾಪ್ಟರ್ 1' ಅನ್ನು ಹಿಂದಿಕ್ಕಲಿದೆ.
ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್' 2025ರಲ್ಲಿ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾ ಆಗಿ ಹೊರಹೊಮ್ಮಿದೆ. ಸದ್ಯ ಮೂರನೇ ವಾರವೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ವಿಶ್ವದ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ದಾಟುವ ಎಲ್ಲಾ ಲಕ್ಷಣಗಳು ಇವೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಗುಂಗಿನಲ್ಲಿರುವ ಜನರು ಥಿಯೇಟರ್‌ಗೆ ಲಗ್ಗೆ ಇಡಬಹುದೆಂಬ ನಂಬಿಕೆಯಲ್ಲಿ ಟ್ರೇಡ್ ಎಕ್ಸ್‌ಪರ್ಟ್‌ಗಳು ಇದ್ದಾರೆ.


Click it and Unblock the Notifications











