Dhurandhar 2: ₹900 ಕೋಟಿ ಗಳಿಸಿದ 'ಧುರಂಧರ್ 2' ಹಿಂದಿ;'ಬಾಹುಬಲಿ 2' ದಾಖಲೆ ಮುರಿಯಲು ಬೇಕಿರೋದು ಇಷ್ಟೇ
ಭಾರತದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಧುರಂಧರ್ 2' ತನ್ನ ಆರ್ಭಟವನ್ನು ಮುಂದುವರೆಸಿದೆ. ರಣ್‌ವೀರ್ ಸಿಂಗ್ ನಟಿಸಿರುವ ಈ ಸಿನಿಮಾಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಮಾರು 3 ಗಂಟೆ 49 ನಿಮಿಷದ ಸಿನಿಮಾವನ್ನು ಜನರು ಥಿಯೇಟರ್‌ನಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್ ದಾಖಲೆಯನ್ನು ಉಡೀಸ್ ಮಾಡಬಹುದೆಂಬ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳ ಮುಂದೆ ಮಂಡಿಯೂರಿದ್ದ ಬಾಲಿವುಡ್ ಮತ್ತೆ ಎದ್ದು ನಿಂತಿದೆ. ಕಳೆದ ಕೆಲವು ದಿನಗಳಿಂದ ಕನ್ನಡ, ತಮಿಳು ಭಾಷೆಯ ಪ್ಯಾನ್ ಇಂಡಿಯಾ ರಿಲೀಸ್‌ನಿಂದ ಕಂಗಾಲಾಗಿ ಹೋಗಿತ್ತು. ಬಾಕ್ಸಾಫೀಸ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಮಾಡಿದ ಬಾಕ್ಸಾಫೀಸ್ ದಾಖಲೆಯನ್ನು ಹಿಂದಿಕ್ಕುವಲ್ಲಿ ಪರದಾಡಿತ್ತು. ಆದ್ರೀಗ 'ಧುರಂಧರ್ 2' ಆ ಕೊರತೆಯನ್ನು ನೀಗಿಸಿದೆ.

'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿ ಸಿನಿಮಾ ಮಂದಿಯಲ್ಲಿ ಅಚ್ಚರಿ ಮೂಡಿಸಿತ್ತು. ಈಗ 'ಧುರಂಧರ್ 2' ಕೂಡ ಅದೇ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಕೇವಲ ಹಿಂದಿ ವರ್ಷನ್ ಸುಮಾರು 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆಯನ್ನು ಬರೆದಿದೆ. ಇಲ್ಲಿವರೆಗೂ 'ಧುರಂಧರ್ 2' ಹಿಂದಿ ಅವತರಣಿಕೆ ಮಾಡಿದ ಸಾಧನೆಗಳೇನು? 15 ದಿನಗಳಲ್ಲಿ 'ಧುರಂಧರ್ 2' ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
900 ಕೋಟಿ ಕ್ಲಬ್ ಸೇರಿದ 'ಧುರಂಧರ್ 2'
'ಧುರಂಧರ್ 2' ಭಾರತದಲ್ಲಿ ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿದೆ. ಇದು ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಐದು ಭಾಷೆಗಳ ಒಟ್ಟು ಕಲೆಕ್ಷನ್ ಆಗಿದ್ದು, ವಿಶ್ವದಾದ್ಯಂತ ಹೊಸ ದಾಖಲೆಯನ್ನು ಸೃಷ್ಟಿಸುವತ್ತ ಮುನ್ನುತ್ತಿದೆ. ಸದ್ಯ ಬಾಲಿವುಡ್ ಮಂದಿ ಎದೆಯುಬ್ಬಿಸಿ ನಡೆಯುವಂತೆ ಈ ಸಿನಿಮಾ ಮಾಡಿದೆ. ಹೌದು, ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ ಎಕ್ಸ್ ಪೋಸ್ಟ್ ಪ್ರಕಾರ, 'ಧುರಂಧರ್ 2' ಹಿಂದಿ ವರ್ಷನ್ 900 ಕೋಟಿ ರೂಪಾಯಿಯನ್ನು ಗಳಿಸಿದೆ. ಈ ಮೂಲಕ ಅತೀ ವೇಗವಾಗಿ ಹಿಂದಿ ವರ್ಷನ್ ಸಿನಿಮಾವೊಂದು 900 ಕೋಟಿ ಕ್ಲಬ್ ಸೇರಿದೆ. ಇದು ಬಾಲಿವುಡ್‌ಗೆ ಕಿಕ್ ಕೊಟ್ಟಿದೆ ಎಂದೇ ಹೇಳಬಹುದು.
'ಧುರಂಧರ್ 2' (ಹಿಂದಿ ವರ್ಷನ್)
1ನೇ ವಾರ ₹649 ಕೋಟಿ
2ನೇ ವಾರ ₹251 ಕೋಟಿ
ಒಟ್ಟು ₹900 ಕೋಟಿ (Net)

ವಿಶ್ವದಾದ್ಯಂತ ಎಷ್ಟು ಕಲೆಕ್ಷನ್
sacnilk.com ಪ್ರಕಾರ, 'ಧುರಂಧರ್ 2' ಸಿನಿಮಾ ಕೇವಲ ಭಾರತದಲ್ಲಿ 15ನೇ ದಿನ ₹18.30 ಕೋಟಿ ((Net) ಕಲೆಕ್ಷನ್ ಆಗಿದೆ. ಅದೇ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ವಿಶ್ವದಾದ್ಯಂತ ದಾಖಲೆ ಗಳಿಕೆ ಮಾಡಿದ್ದು, 15 ದಿನಗಳಲ್ಲಿ 1501 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಬಾಕ್ಸಾಫೀಸ್ ಗಳಿಕೆ ಹೀಗೆ ಮುಂದುವರೆದರೆ, 'ಬಾಹುಬಲಿ 2' ಲೈಫ್ ಟೈಮ್ ಕಲೆಕ್ಷನ್ 1810 ಕೋಟಿಯ ದಾಖಲೆಯನ್ನು ಮುರಿಯಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com, https://x.com/taran_adarsh ಹಾಗೂ ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications















