Kantara Chapter 1 Box Office: ಓಟಿಟಿ ರಿಲೀಸ್ ಬಳಿಕ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ ಚಾಪ್ಟರ್ 1' 2025ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿಗೆ ಸೇರಿದೆ. ಬಾಲಿವುಡ್‌ನ 'ಛಾವ' ಸಿನಿಮಾದ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಸಾವಿರ ಕೋಟಿ ಕಲೆಕ್ಷನ್ ಮಾಡುವಲ್ಲಿ ಹಿಂದೆ ಬಿದ್ದಿದ್ದರೂ, ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.
'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಹೆಚ್ಚು ಕಡಿಮೆ ನಾಲ್ಕು ವಾರಗಳ ಕಾಲ ಥಿಯೇಟರ್‌ನಲ್ಲಿ ಅಬ್ಬರಿಸಿತ್ತು. ಹೀಗಿದ್ದರೂ, ಅಂದುಕೊಂಡಿದ್ದಕ್ಕಿಂತ ಮುನ್ನವೇ ನಾಲ್ಕು ಭಾಷೆಯಲ್ಲಿ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿತ್ತು. ಇಲ್ಲಿಂದ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಇಳಿಮುಖವಾಗುತ್ತಾ ಹೋಯ್ತು. ಆದರೆ, ಹಿಂದಿ ವರ್ಷನ್ ಎಂಟು ವಾರಗಳ ಬಳಿಕ ರಿಲೀಸ್ ಆಗಬೇಕೆಂಬ ಒಡಂಬಡಿಕೆ ಇದ್ದಿದ್ದರಿಂದ ಇನ್ನೂ ಓಟಿಟಿಗೆ ಲಗ್ಗೆ ಇಡಬೇಕಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಈ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವುದಕ್ಕೆ ಶುರುವಾದ ಮೇಲೂ ಕಲೆಕ್ಷನ್‌ನಲ್ಲಿ ಹಿಂದಿ ಬಿದ್ದಿಲ್ಲ. 'ಕಾಂತಾರ ಚಾಪ್ಟರ್ 1' ಹಿಂದಿ ವರ್ಷನ್ ಹಾಗೂ ಕನ್ನಡ ವರ್ಷನ್ ಎರಡರಲ್ಲೂ ಇಲ್ಲಿವರೆಗೆ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದೆ. ಹಾಗಿದ್ದರೆ, 'ಕಾಂತಾರ 1' ಓಟಿಟಿಗೆ ಲಗ್ಗೆ ಇಟ್ಟ ದಿನದಿಂದ ಇಲ್ಲಿವರೆಗೂ ಗಳಿಸಿದ್ದೆಷ್ಟು? ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
2025ರಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ
'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿತ್ತು. ಮೊದಲ ದಿನದಿಂದಲೇ ಬಾಕ್ಸಾಫೀಸ್ ದೋಚುವ ಯಾತ್ರೆ ಮುಂದುವರೆದಿತ್ತು. ಸುಮಾರು ನಾಲ್ಕು ವಾರಗಳ ಕಾಲ ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಲೂಟಿ ಮಾಡಿತ್ತು. ಸ್ಯಾಕ್ನಿಲ್ಕ್ ಪ್ರಕಾರ ಭಾರತದಾದ್ಯಂತ ಈ ಸಿನಿಮಾ ₹739.67 ಕೋಟಿ (Net) ಕಲೆಕ್ಷನ್ ಮಾಡಿದೆ. ಈ ಮೂಲಕ 2025ರಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾವಾಗಿ ಹೊರ ಹೊಮ್ಮಿದೆ. ಒಂದು ವೇಳೆ ಓಟಿಟಿಯಲ್ಲಿ ತಡವಾಗಿ ರಿಲೀಸ್ ಆಗಿದ್ದರೆ, ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.
ಓಟಿಟಿಗೆ ಲಗ್ಗೆ ಇಟ್ಮೇಲೆ ಎಷ್ಟಾಯ್ತು ಕಲೆಕ್ಷನ್
ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಓಟಿಟಿಗೆ ಲಗ್ಗೆ ಇಟ್ಮೇಲೂ ಬಾಕ್ಸಾಫೀಸ್ ಕಲೆಕ್ಷನ್ ಕಡಿಮೆ ಆಗಿರಲಿಲ್ಲ. ಟೈಮ್ ಆಫ್ ಇಂಡಿಯಾ ವರದಿ ಪ್ರಕಾರ, 'ಕಾಂತಾರ 1' ಓಟಿಟಿಗೆ ಲಗ್ಗೆ ಇಟ್ಟ ದಿನದಿಂದ ಈ ಸಿನಿಮಾ ಸುಮಾರು ₹21 ಕೋಟಿ ಕಲೆಕ್ಷನ್ ಮಾಡಿದೆ. ಅದರಲ್ಲೂ 'ಕಾಂತಾರ ಚಾಪ್ಟರ್ 1' ಹಿಂದಿ ವರ್ಷನ್ ₹12.82 ಕೋಟಿ ಕಲೆಕ್ಷನ್ ಮಾಡಿದ್ದು, ಕನ್ನಡ ವರ್ಷನ್ ₹6.41 ಕೋಟಿ ಗಳಿಸಿದೆ. ಅದೇ ತೆಲುಗು ವರ್ಷನ್ ₹49 ಲಕ್ಷ ಹಾಗೂ ತಮಿಳು ವರ್ಷನ್ ₹1.53 ಕೋಟಿ, ಮಲಯಾಳಂ ವರ್ಷನ್ ₹36 ಲಕ್ಷ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಕನ್ನಡ ಮಾರ್ಕೆಟ್ ಶೇರು ಹೆಚ್ಚಳ
'ಕಾಂತಾರ ಚಾಪ್ಟರ್ 1' ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ್ದರಿಂದ 2025 ಜನವರಿಯಿಂದ ಅಕ್ಟೋಬರ್‌ವರೆಗೆ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಮೀಡಿಯಾ ನ್ಯೂಸ್ ವರದಿ ಮಾಡಿದಂತೆ ಈ ಅವಧಿಯಲ್ಲಿ ಭಾರತದ ಬಾಕ್ಸಾಫೀಸ್ ₹11,077 ಕೋಟಿ (ಎಲ್ಲಾ ಸಿನಿಮಾಗಳಿಂದ) ಕಲೆಕ್ಷನ್ ಮಾಡಿದೆ. 2024ಕ್ಕೆ ಹೋಲಿಕೆ ಮಾಡಿದರೆ, ಶೇ.24ರಷ್ಟು ಏರಿಕೆಯಾಗಿದೆ ಎಂದು ಹೇಳಲಾಗಿದೆ. ಹಾಗೇ ಕನ್ನಡದ ಮಾರುಕಟ್ಟೆ ಶೇ.2 ರಿಂದ ಶೇ.4ಕ್ಕೆ ಏರಿಕೆಯಾಗಿದೆ.
ಇನ್ನೆಷ್ಟು ಕಲೆಕ್ಷನ್ ಮಾಡಬಹುದು?
ಓಟಿಟಿಗೆ ಲಗ್ಗೆ ಇಟ್ಟ ಬಳಿಕವೂ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಮುಂದುವರೆದಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, ಈ ಸಿನಿಮಾ ಇನ್ನೂ ₹10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ಈಗಾಗಲೇ ಈ ಸಿನಿಮಾ ವಿಶ್ವದಾದ್ಯಂತ ಸುಮಾರು ₹900 ಕೋಟಿ ದೋಚುವ ಸಮೀಪದಲ್ಲಿ ಇದೆ. ಇನ್ನು ಕೆಲವು ದಿನಗಳಲ್ಲಿ 900 ಕೋಟಿ ಕ್ಲಬ್ ಸೇರಬಹುದೆಂಬ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











