Kantara Chapter 1 Box Office Day 50: 50ನೇ ದಿನ 'ಕಾಂತಾರ' ಕಲೆಕ್ಷನ್ ಎಷ್ಟು? ಇಲ್ಲಿವರೆಗೂ ಗಳಿಸಿದ್ದೆಷ್ಟು ಕೋಟಿ?
'ಕಾಂತಾರ ಚಾಪ್ಟರ್ 1' ಮೂಲಕ ರಿಷಬ್ ಶೆಟ್ಟಿ ತನ್ನ ವೃತ್ತಿ ಬದುಕಿನಲ್ಲಿ ಮತ್ತೊಂದು ಮೆಗಾ ಬ್ಲಾಕ್ ಬಸ್ಟರ್ ಅನ್ನು ದಾಖಲಿಸಿದ್ದಾರೆ. 'ಕಾಂತಾರ' ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ರಿಷಬ್ ಪ್ರೀಕ್ವೆಲ್‌ನಲ್ಲೂ ಸದ್ದು ಮಾಡುತ್ತಾರಾ? ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಕಳೆದ ಕೆಲವು ತಿಂಗಳಿನಿಂದ ಸೋತು ಸುಣ್ಣವಾಗಿದ್ದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಯಶಸ್ಸನ್ನು ತಂದು ಕೊಟ್ಟಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ ಚಾಪ್ಟರ್ 1' ಈಗ ಬರೋಬ್ಬರಿ 50 ದಿನಗಳನ್ನು ಪೂರೈಸಿದೆ. ಈಗಾಗಲೇ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ 'ಕಾಂತಾರ 1' 2025ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿ ಹೊರಹೊಮ್ಮಿದೆ. ಮತ್ತೆ ಕನ್ನಡ ಚಿತ್ರರಂಗ ಭಾರತದ ಎಲ್ಲಾ ಪ್ರಮುಖ ಭಾಷೆಗಳ ಸಿನಿಮಾಗಳಿಗೆ ಸೆಡ್ಡು ಹೊಡೆದಿದೆ.

ರಿಷಬ್ ಶೆಟ್ಟಿ ಸಿನಿಮಾ ಕನ್ನಡದಲ್ಲೂ ದಾಖಲೆಗಳನ್ನು ಬರೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಯನ್ನು ಬರೆದಿದೆ. ಹಾಗಿದ್ದರೆ, 50 ದಿನಗಳನ್ನು ಪೂರೈಸಿರುವ ಸಂಭ್ರಮದಲ್ಲಿರುವ 'ಕಾಂತಾರ ಚಾಪ್ಟರ್ 1' ಇಲ್ಲಿವರೆಗೂ ಗಳಿಸಿದ್ದೆಷ್ಟು? ಓಟಿಟಿಗೆ ಸಿನಿಮಾ ಬಂದ್ಮೇಲೂ ಸಿನಿಮಾದ ಕಲೆಕ್ಷನ್‌ನಲ್ಲಿ ಬದಲಾವಣೆ ಆಗಿದೆಯೇ? ತಿಳಿಯುವುದಕ್ಕೆ ಮುಂದೆ ಓದಿ.
'ಕಾಂತಾರ ಚಾಪ್ಟರ್ 1' 50ನೇ ದಿನ ಗಳಿಸಿದ್ದೆಷ್ಟು?
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ ಅನ್ನು ಲೂಟಿ ಮಾಡಿದೆ. ವಿಶ್ವದಾದ್ಯಂತ ಈ ಸಿನಿಮಾದ ಕಲೆಕ್ಷನ್ ದಾಖಲೆ ಅಂತಲೇ ಹೇಳಬಹುದು. ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದರೂ ಕೆಲವೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 50ನೇ ದಿನ ಈ ಸಿನಿಮಾ 13 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಸದ್ಯ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ.
50 ದಿನಗಳ ಕಲೆಕ್ಷನ್ ಎಷ್ಟು?
ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಕಾಂಬಿನೇಷನ್ ಮತ್ತೆ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಹಾಗೂ ಮಲಯಾಳಂ ನಟ ಜಯರಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಶ್ವದಾದ್ಯಂತ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. 50 ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ₹900 ಕೋಟಿ (Gross) ಕಲೆಕ್ಷನ್ ಮಾಡಿದೆ ಎಂಬ ವರದಿಯಿದೆ. ಇನ್ನು ಸ್ಯಾಕ್ನಿಲ್ಕ್ ಪ್ರಕಾರ 50 ದಿನಕ್ಕೆ ಭಾರತದಲ್ಲಿ ₹740.15 ಕೋಟಿ (Gross) ಕಲೆಕ್ಷನ್ ಆಗಿದೆ.

ಎಷ್ಟು ಸ್ಕ್ರೀನ್‌ಗಳಲ್ಲಿದೆ 'ಕಾಂತಾರ'?
ಕರ್ನಾಟಕದ ವಿತರಕರ ಪ್ರಕಾರ, ಓಟಿಟಿಗೆ ಬಂದ್ಮೇಲೆ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಸುಮಾರು 15 ರಿಂದ 16 ಸ್ಕ್ರೀನ್‌ಗಳಲ್ಲಿ ಇನ್ನೂ 'ಕಾಂತಾರ ಚಾಪ್ಟರ್ 1' ಪ್ರದರ್ಶನ ಕಾಣುತ್ತಿದೆ. ಇದರಿಂದ ಕರ್ನಾಟಕದಲ್ಲಿ 50ನೇ ದಿನ ₹5 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಸಾವಿರ ಕೋಟಿ ಕ್ಲಬ್ ಸೇರಿದೇ ಹೋದರೂ ₹900 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











