Thug Life Day 1 collection: ಬಾಕ್ಸಾಫೀಸ್‌ನಲ್ಲಿ ನಡೀತ್ತಿಲ್ಲ ಕಮಲ್ 'ಥಗ್ ಲೈಫ್'; ಫಸ್ಟ್ ಡೇ ಗಳಿಸಿದ್ದೆಷ್ಟು?
ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಈ ವಾರ ತೆರೆಗೆ ಬಂದಿರುವ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಿಳು ಪ್ರೇಕ್ಷಕರೇ ಸಿನಿಮಾ ನೋಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ
'ನಾಯಕನ್' ಬಳಿಕ ಕಮಲ್ ಹಾಗೂ ಮಣಿರತ್ನಂ ಒಟ್ಟಿಗೆ ಕೈ ಜೋಡಿಸಿದ್ದ ಸಿನಿಮಾ ಇದು. ಸಿಂಬು ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತ್ರಿಷಾ, ಅಭಿರಾಮಿ, ನಾಸರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಆದರೆ ಸಿನಿಮಾ ಮಾತ್ರ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ.

ಅದ್ಧೂರಿ ಮೇಕಿಂಗ್, ಕಮಲ್ ಹಾಗೂ ಸಿಂಬು ನಟನೆ ಬಿಟ್ಟರೆ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಂಶಗಳಿಲ್ಲ ಎಂದು ತಮಿಳು ಪ್ರೇಕ್ಷಕರೇ ಚಿತ್ರಕ್ಕೆ ಛೀಮಾರಿ ಹಾಕಿದ್ದಾರೆ. ಈ ಚಿತ್ರವನ್ನು ಯಾಕಾದರೂ ಮಾಡಿದ್ರೋ? ಅಷ್ಟು ಬಿಲ್ಡಪ್ ಯಾಕೆ ಕೊಟ್ರೋ ಗೊತ್ತಿಲ್ಲ ಎಂದು ಮೂದಲಿಸುತ್ತಿದ್ದಾರೆ. ಅದ್ಯಾವ ಮಟ್ಟಿಗೆ ಸಿನಿಮಾ ಟ್ರೋಲ್ ಆಗ್ತಿದೆ ಅಂದ್ರೆ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬ್ಯಾನ್ ಆಗಿದ್ದೇ ಒಳ್ಳೆಯದಾಯಿತು. ಈ ಸಿನಿಮಾ ನೋಡದೇ ಕನ್ನಡಿಗರು ಬಚಾವ್ ಆಗಿದ್ದಾರೆ ಎಂದು ತಮಿಳು ಪ್ರೇಕ್ಷಕರೇ ಅಣಕವಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗದೇ ಇರುವುದು ಕಲೆಕ್ಷನ್ ಲೆಕ್ಕದಲ್ಲಿ ಕೂಡ ಪೆಟ್ಟು ಬಿದ್ದಿದೆ. ಸದ್ಯ ಹೊರ ರಾಜ್ಯಗಳಲ್ಲಿ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ ಕರ್ನಾಟಕದಲ್ಲಿ ತೆರೆಕಂಡರೂ ಜನ ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುವುದು ಗ್ಯಾರಂಟಿ. ತಮಿಳಿನಲ್ಲಿ ಸಿನಿಮಾ ಗಳಿಕೆ ಪರವಾಗಿಲ್ಲ ಎನ್ನುವಂತಿದೆ. ಮೊದಲ ದಿನ ಆಗಿದ್ದರಿಂದ ಅಡ್ವಾನ್ಸ್ ಬುಕ್ಕಿಂಗ್ ನಡೆದು ಜನ ಸಿನಿಮಾ ನೋಡಲು ಮುಗಿಬಿದ್ದಿದ್ದರು. ಮೌತ್ ಟಾಕ್ ನೋಡಿದರೆ 2ನೇ ದಿನವೇ ಸಿನಿಮಾ ಗಳಿಕೆ ಕುಸಿಯುವ ಸುಳಿವು ಸಿಕ್ಕಿದೆ.
'ಥಗ್ ಲೈಫ್' ಮೊದಲ ದಿನದ ಗಳಿಕೆ
ಕಮಲ್ ಹಾಸನ್ ಹಾಗೂ ಮಣಿರತ್ನಂ 'ಥಗ್ ಲೈಫ್' ಚಿತ್ರ ನಿರ್ಮಾಣ ಮಾಡಿದ್ದಾರೆ. ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. Sacnilk.com ವರದಿ ಪ್ರಕಾರ ದೇಶದಲ್ಲಿ 17 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ತಮಿಳು ವರ್ಷನ್ 15 ಕೋಟಿ ರೂ. ಹಾಗೂ ತೆಲುಗು ವರ್ಷನ್ 1.5 ಕೋಟಿ ರೂ. ಗಳಿಕೆ ಕಂಡಿದೆ. ಹಿಂದಿ ವರ್ಷನ್ ನೋಡುವವರೇ ಇಲ್ಲ. ಕೇರಳದಲ್ಲಿ ಕೂಡ ಪರಿಸ್ಥಿತಿ ಹೀಗೆ ಇದೆ. ಆಂಧ್ರ, ತೆಲಂಗಾಣದಲ್ಲಿ ಪರವಾಗಿಲ್ಲ ಎನ್ನುವಂತಾಗಿದೆ. ಇನ್ನು ವಿಶ್ವದಾದ್ಯಂತ 36 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಕರ್ನಾಟಕದಲ್ಲಿ ಬಿಡುಗಡೆ ಯಾವಾಗ?
ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ಕೇಳಿ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೂಕ್ತ ಭದ್ರತೆ ಒದಗಿಸುವಂತೆ ಕೇಳಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಕಮಲ್ ಹಾಸನ್ ಹೇಳಿಕೆ ಬಗ್ಗೆ ತರಾಟೆಗೆ ತೆಗೆದುಕೊಂಡಿತ್ತು. ಕಮಲ್ ಹೇಳಿಕೆ ನೀಡಿದ್ದು ತಪ್ಪು. ಅದಕ್ಕೆ ಕ್ಷಮೆ ಕೇಳಬೇಕು. ಆ ನಂತರವೇ ಅರ್ಜಿ ವಿಚಾರಣೆ ಎಂದು ಹೇಳಿ ಜೂನ್ 10ಕ್ಕೆ ವಿಚಾರಣೆ ಮುಂದೂಡಲಾಗಿದೆ. ಜೂನ್ 10ರಂದು ಕೂಡ ಸಿನಿಮಾ ಬಿಡುಗಡೆಗೆ ಅವಕಾಶ ಸಿಗುವುದು ಅನುಮಾನ ಎನ್ನುವಂತಾಗಿದೆ.
ಕರ್ನಾಟಕದಲ್ಲಿ ಎಷ್ಟು ನಷ್ಟ?
ಕಮಲ್ ಹಾಸನ್ ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಓಪನಿಂಗ್ ಏನು ಸಿಗುತ್ತಿರಲಿಲ್ಲ. ಮಣಿರತ್ನಂ ಜೊತೆ ಕೈ ಜೋಡಿಸಿದ್ದರಿಂದ ಕೊಂಚ ಮಟ್ಟಿಗೆ ನಿರೀಕ್ಷೆ ಇತ್ತು. 8.10 ಕೋಟಿ ರೂ.ಗೆ ವೆಂಕಟೇಶ್ ಎಂಬುವವರು 'ಥಗ್ ಲೈಫ್' ಚಿತ್ರದ ಕರ್ನಾಟಕ ರೈಟ್ಸ್ ಕೊಂಡುಕೊಂಡಿದ್ದರು. ಒಂದು ವೇಳೆ ಸಿನಿಮಾ ಚೆನ್ನಾಗಿದೆ ಎನ್ನುವ ಟಾಕ್ ಬಂದಿದ್ದರೆ ಮೊದಲ ದಿನ 4ರಿಂದ 5 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಆದರೆ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ ಮರುದಿನವೇ ಕಲೆಕ್ಷನ್ ಡ್ರಾಪ್ ಆಗುತ್ತಿತ್ತು ಎಂದು ಕೆಲ ವಿತರಕರು ಅಂದಾಜಿಸಿದ್ದಾರೆ.


Click it and Unblock the Notifications











