Thug Life Day 2 Boxoffice; 2ನೇ ದಿನವೇ ಮುಗ್ಗರಿಸಿದ 'ಥಗ್ ಲೈಫ್'; ಒಟ್ಟು ಗಳಿಸಿದ್ದೆಷ್ಟು?
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನವೇ ಚಿತ್ರಕ್ಕೆ ನೆಗೆಟಿವ್ ಟಾಕ್ ಶುರುವಾಗಿತ್ತು. 2ನೇ ದಿನ ಸಿನಿಮಾ ಕಲೆಕ್ಷನ್ ತಗ್ಗಿದೆ. ವಿವಾದದ ನಡುವೆ ಕರ್ನಾಟಕ ಬಿಟ್ಟು ಹೊರರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ಸಿನಿಮಾ ತೆರೆಗೆ ಬಂದಿದೆ.
ಮಣಿರತ್ನಂ ಹಾಗೂ ಕಮಲ್ ಹಾಸನ್ ಸೇರಿ ಮಾಡಿರುವ ಸಿನಿಮಾ ಎನ್ನುವ ಕಾರಣಕ್ಕೆ 'ಥಗ್ ಲೈಫ್' ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ ಸಿನಿಮಾ ನೋಡಿ ತಮಿಳು ಪ್ರೇಕ್ಷಕರೇ ಬೇಸರ ಹೊರಹಾಕುತ್ತಿದ್ದಾರೆ. ಸರಿಯಾದ ಸ್ಕ್ರಿಪ್ಟ್ ಇಲ್ಲ, ಮಣಿರತ್ನಂ ನಿರ್ದೇಶನ ಚೆನ್ನಾಗಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ತಮಿಳು ಪ್ರೇಕ್ಷಕರೇ ಚಿತ್ರವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಆಗಿ ಒಳ್ಳೆ ಕೆಲಸ ಮಾಡಿದ್ರು, ಈ ಸಿನಿಮಾ ನೋಡದೇ ಕನ್ನಡ ಪ್ರೇಕ್ಷಕರು ಬಚಾವಾದರು ಎಂದು ವ್ಯಂಗ್ಯವಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಟ್ರೋಲ್ ವಿಷಯವಾಗಿ ಮಾರ್ಪಟ್ಟಿದೆ.

ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'ಥಗ್ ಲೈಫ್' ಸಿನಿಮಾ ನಿರ್ಮಾಣವಾಗಿತ್ತು. ಕಮಲ್ ಜೊತೆಗೆ ಸಿಂಬು ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಅಭಿರಾಮಿ ಹಾಗೂ ತ್ರಿಷಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಗ್ಯಾಂಗ್‌ಸ್ಟರ್ ಕಥೆ ಹೇಳಿ ಮಣಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. "ಹಳೇ ಬಾಟಲಿಯಲ್ಲಿ ಹೊಸ ಮದ್ಯ" ಎನ್ನುವಂತೆ ಈಗಾಗಲೇ ಸಾಕಷ್ಟು ಬಾರಿ ನೋಡಿರುವ ಕಥೆಯನ್ನೇ ಮತ್ತೆ ಹೊಸದಾಗಿ ಹೇಳುವ ಮಣಿ ಲೆಕ್ಕಾಚಾರ ಕೈಕೊಟ್ಟಿದೆ. ಕಮಲ್ ಹಾಗೂ ಮಣಿರತ್ನಂ ಇಬ್ಬರೂ ಸೇರಿ ಕಥೆ ಚಿತ್ರಕಥೆ ಸಿದ್ಧಪಡಿಸಿದ್ದರು.
2ನೇ ದಿನದ ಟಿಕೆಟ್ ಬುಕ್ಕಿಂಗ್
ಇತ್ತೀಚೆಗೆ ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. 'ಥಗ್ ಲೈಫ್' ಚಿತ್ರಕ್ಕೆ 2ನೇ ದಿನ ಹೇಗಿದೆ ರೆಸ್ಪಾನ್ಸ್ ಎನ್ನುವುದು ಅದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. 3 ಲಕ್ಷದ 65 ಸಾವಿರ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿತ್ತು. ಇನ್ನು ಮೊದಲ ದಿನ 1 ಲಕ್ಷದ 55 ಸಾವಿರ ಟಿಕೆಟ್ ಅನ್ನು ಪ್ರೇಕ್ಷಕರು ಕಾಯ್ದಿರಿಸಿದ್ದರು. ಆದರೆ 2ನೇ ದಿನ ಅದು ಕೇವಲ 67 ಸಾವಿರಕ್ಕೆ ಕುಸಿದಿದೆ. ಇದರಲ್ಲೇ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.
2ನೇ ದಿನದ ಕಲೆಕ್ಷನ್
ಮೊದಲ ದಿನ ಭಾರತದಲ್ಲಿ 'ಥಗ್ ಲೈಫ್' ಸಿನಿಮಾ 17 ಕೋಟಿ ಕಲೆಕ್ಷನ್ ಮಾಡಿರುವುದಾಗಿ Sacnilk.com ವೆಬ್ ಸೈಟ್ ವರದಿ ಮಾಡಿತ್ತು. 2ನೇ ದಿನ 7.50 ಕೋಟಿ ರೂ. ಕಲೆಕ್ಷನ್ ಮಾಡಿರಬಹುದು ಎಂದು ಮಾಹಿತಿ ನೀಡಿದೆ. ಹಾಗಾಗಿ ಚಿತ್ರದ ಗಳಿಕೆ 2 ದಿನ್ಕೆ 25 ಕೋಟಿ ರೂ. ಕೂಡ ದಾಟಿಲ್ಲ. ಮುಂದೆ ಇದು ಮತ್ತಷ್ಟು ಕುಸಿಯುವ ಸುಳಿವು ಸಿಗುತ್ತಿದೆ.
ಕರ್ನಾಟಕದಲ್ಲಿ ಬಿಡುಗಡೆ?
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲು ಕಮಲ್ ಹಾಸನ್ ಹರಸಾಹಸ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿಯೂ ಹಿನ್ನಡೆ ಆಗಿತ್ತು. ಕಮಲ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ ಬಳಿಕವೇ ಅರ್ಜಿಯ ವಿಚಾರಣೆ ಎಂದು ಕೋರ್ಟ್ ಹೇಳಿದೆ. ಆದರೆ ಕಮಲ್ ಹಾಸನ್ ಮಾತ್ರ ಇದಕ್ಕೆ ಸಿದ್ಧರಿಲ್ಲ. ಇನ್ನು 8.10 ಕೋಟಿ ರೂ.ಗೆ ವಿತರಕರೊಬ್ಬರು ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗದೇ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಮಲ್ ಹಾಸನ್ ಸುಪ್ರೀಂ ಕೋರ್ಟ್‌ಗೆ ಹೋಗಬಹುದು ಎಂದು ಕೆಲವರು ಭಾವಿಸುತ್ತಿದ್ದಾರೆ. ಜೂನ್ 10ರಂದು ಮತ್ತೆ ಹೈಕೋರ್ಟ್‌ನಲ್ಲಿ ಕಮಲ್ ಅರ್ಜಿ ವಿಚಾರಣೆ ನಡೆಯಲಿದೆ.


Click it and Unblock the Notifications











