Toxic VS Eetha ; ಯಶ್ ಅಬ್ಬರ, ಕಣದಿಂದ ಹಿಂದೆ ಸರಿದ ಶ್ರದ್ಧಾ ಕಪೂರ್ - ರಾಯ ಹಾವಳಿಗೆ ಮತ್ತೆ ಬೆದರಿದ ಬಾಲಿವುಡ್
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರು ಕೂಡ, ಅಯ್ಯೋ .. ಅವರ ಚಿತ್ರ ಬಂದಾಗ ನಮ್ಮ ಚಿತ್ರ ಯಾರು ನೋಡುತ್ತಾರೆ ಎಂದು ಮಾತನಾಡುತ್ತಿದ್ದರು.
ಹಬ್ಬ-ಹರಿದಿನಗಳಂತೂ ಬರೀ ಈ ಬೇರೆ ಭಾಷೆಯ ಸ್ಟಾರ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಇವತ್ತು ಕೂಡ ಪರಭಾಷೆ ಚಿತ್ರಗಳ ಅಬ್ಬರ ಕರುನಾಡಿನಲ್ಲಿ ಇದ್ದೇ ಇದೆ. ಹಲವರು ಈಗಲೂ ಕೂಡ ತಮ್ಮ ಚಿತ್ರಗಳನ್ನು ಬೇರೆ ಭಾಷೆಯ ದೊಡ್ಡ ಸ್ಟಾರ್‌ಗಳ ಎದುರು ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಾರೆ.

ಆದರೆ .. ಈಗೀಗ ಬದಲಾದ ಕಾಲದಲ್ಲಿ ಕನ್ನಡದಲ್ಲಿ ಅಲ್ಲೊಬ್ಬರು .. ಇಲ್ಲೊಬ್ಬರು .. ಪರಭಾಷೆಯ ಚಿತ್ರಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಾಕ್ಸಾಫೀಸ್ ಸಮರದಲ್ಲಿ ಮಣ್ಣನ್ನೂ ಕೂಡ ಮುಕ್ಕಿಸಿದ್ದಾರೆ.
ಹೀಗಾಗಿ ಕನ್ನಡದ ಸ್ಟಾರ್‌ಗಳ ಎದುರು ಬರಲು ಪರಭಾಷೆಯ ಸ್ಟಾರ್‌ಗಳು ಕೂಡ ಈಗ ಕವಡೆ ಹಾಕುತ್ತಿದ್ದಾರೆ. ಹೆದರುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಎದುರು ಅಬ್ಬರಿಸಲು ಅಣಿಯಾಗಿದ್ದ ಶ್ರದ್ದಾ ಕಪೂರ್ ಕಣದಿಂದ ಹಿಂದೆ ಸರಿದಿದ್ದಾರೆ ಎನ್ನುವ ಸುದ್ದಿಯೊಂದು ಮುಂಬೈನೆಲ್ಲೆಡೆ ಕೇಳಿ ಬರುತ್ತಿದೆ.
ಟಾಕ್ಸಿಕ್ VS ಈಥಾ
ಹೌದು, ಅಸಲಿಗೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಯಶ್ ಅಭಿನಯದ ಮಹತ್ವಕಾಂಕ್ಷೆಯ ''ಟಾಕ್ಸಿಕ್'' ಬಿಡುಗಡೆಯಾದ ಎರಡು ದಿನದ ನಂತರ ಅಂದರೆ ಆಗಸ್ಟ್ 28ರಂದು ಬಾಲಿವುಡ್ ವತಿಯಿಂದ ಶ್ರದ್ದಾ ಕಪೂರ್ ಕಣಕ್ಕಿಳಿಯಬೇಕಿತ್ತು. ಬೆಳ್ಳಿತೆರೆಯಲ್ಲಿ ''ಈಥಾ'' ಕಥೆ ಅನಾವರಣ ಆಗಬೇಕಿತ್ತು.
ಈ ಹಿನ್ನೆಲೆ ಹಲವರು ಈ ಪೈಪೋಟಿಯನ್ನು ಯಶ್ VS ಶ್ರದ್ದಾ ಕಪೂರ್ ನಡುವಿನ ಬಾಕ್ಸಾಫೀಸ್ ಸಮರ ಎಂದೇ ಬಿಂಬಿಸಿದ್ದರು. ಆದರೆ ಈಗ ಪ್ಲಾನ್ ಚೇಂಜ್ ಆಗಿದೆ. ಆ ಪ್ರಕಾರ ''ಟಾಕ್ಸಿಕ್''ಗೆ ''ಈಥಾ'' ದಾರಿ ಬಿಟ್ಟು ಕೊಟ್ಟಿದ್ದಾಳೆ.

''ಈಥಾ'' ಬಿಡುಗಡೆಯ ದಿನಾಂಕ ಬದಲು..?
''ಬಾಲಿವುಡ್ ಹಂಗಾಮ'' ಈ ಕುರಿತು ವರದಿಯನ್ನು ಮಾಡಿದ್ದು ಆ ಪ್ರಕಾರ ''ಈಥಾ'' ನಿರ್ಮಾಪಕ ದಿನೇಶ್ ವಿಜ್ಜನ್ ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಿಸುವ ಯೋಚನೆಯಲ್ಲಿದ್ದಾರೆ. ಸಹಜವಾಗಿ ಇದರ ಹಿಂದೆ ವ್ಯಾಪಾರದ ಲೆಕ್ಕ ಇದೆ.
ಯಾಕೆಂದರೆ.. ''ಈಥಾ'' ವಿಠಾಬಾಯಿ ನಾರಾಯಣಗಾಂವ್ಕರ್ ನೈಜ ಕಥೆಯನ್ನಾಧರಿಸಿದ ಚಿತ್ರ. ಮಹಾರಾಷ್ಟ್ರದಲ್ಲಿ
ಚಿತ್ರಕ್ಕೆ ಅತ್ಯುತ್ತಮವಾದ ಸ್ವಾಗತ ಸಿಕ್ಕಿಯೇ ಸಿಗುತ್ತೆ. ಅದರಲ್ಲಿ ಅನುಮಾನ ಇಲ್ಲ. ಆದರೆ. ''ಟಾಕ್ಸಿಕ್'' ಎದುರು ಬಂದರೆ ಈ ಲೆಕ್ಕ ತಪ್ಪುವ ಸಾಧ್ಯತೆ ಹೆಚ್ಚಿದೆ.
ಹೀಗಾಗಿ ದಿನೇಶ್ ವಿಜ್ಜನ್ ''ಈಥಾ'' ಚಿತ್ರವನ್ನು ''ಟಾಕ್ಸಿಕ್''ಗಿಂತ ಮೊದಲು ಅಂದರೆ ಆಗಸ್ಟ್ 15ರಂದು ಬಿಡುಗಡೆ ಮಾಡಬಹುದು. ಆದರೆ, ಅವತ್ತು ಕೂಡ ''ಬಟ್ವಾರ'' ಸೇರಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಆಗಸ್ಟ್ 7 ಇರುವ ಮತ್ತೊಂದು ಆಯ್ಕೆ. ಅಂದು ಕೂಡ ಸಾಧ್ಯವಾಗದಿದ್ದರೆ ''ಈಥಾ'' ಸೆಪ್ಟೆಂಬರ್ ಗೆ ಮುಂದೂಡಬಹದು. ಅಥವಾ ವರ್ಷಾಂತ್ಯಕ್ಕೆ ''ಈಥಾ'' ಶಿಫ್ಟ್ ಆಗಬಹುದು ಎಂದು ''ಬಾಲಿವುಡ್ ಹಂಗಾಮ'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಒಟ್ನಲ್ಲಿ ಸದ್ಯ ''ಈಥಾ'' ಪಥ ಬದಲಿಸುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್ 26ಕ್ಕೆ ಬೆಳ್ಳಿಪರದೆಯ ಮೇಲೆ ಕೇವಲ ''ಟಾಕ್ಸಿಕ್'' ಮಾತ್ರ ಧಗಧಗಿಸುವ ಸಾಧ್ಯತೆಗಳು ಕೂಡ ಗಾಢವಾಗಿವೆ. ''ಈಥಾ'' ಬಿಡುಗಡೆಯ ದಿನಾಂಕದ ಬದಲಾವಣೆಯ ಕುರಿತು ಚಿತ್ರತಂಡ ಶೀಘ್ರದಲ್ಲಿಯೇ ಘೋಷಣೆ ಮಾಡುವ ಸಾಧ್ಯತೆಯೂ ಇದೆ.


Click it and Unblock the Notifications

