Andhra King Taluka: ಉಪ್ಪಿಯ ತೆಲುಗು ಸಿನಿಮಾ 'ಆಂಧ್ರ ಕಿಂಗ್ ತಾಲೂಕಾ' ಬಾಕ್ಸಾಫೀಸ್ ಲೆಕ್ಕಾಚಾರವೇನು?
ರಿಯಲ್ ಸ್ಟಾರ್ ಉಪೇಂದ್ರ ತೆಲುಗು ಸಿನಿಮಾ ಇಂದು (ನವೆಂಬರ್ 27) ಗ್ರ್ಯಾಂಡ್ ರಿಲೀಸ್ ಆಗಿದೆ. ತೆಲುಗಿನ ಯುವ ನಟ ರಾಮ್ ಪೋತಿನೇನಿ ಈ ಸಿನಿಮಾ ಹೀರೋ. ರಾಮ್ ಪೋತಿನೇನಿ ಹಾಗೂ ಉಪ್ಪಿ ಕಾಂಬಿನೇಷನ್‌ನಲ್ಲಿ ಬಂದಿರುವ ಮೊದಲ ಸಿನಿಮಾವಿದು. ಅದುವೇ 'ಆಂಧ್ರ ಕಿಂಗ್ ತಾಲೂಕಾ'. ಕಳೆದ ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಮಾಡಿದ್ದ ಈ ಸಿನಿಮಾಗೆ ಓಪನಿಂಗ್ ಹೇಗೆ ಸಿಕ್ಕಿದೆ? ರಾಮ್‌ಗೆ ಮತ್ತೆ ಸಕ್ಸಸ್ ಸಿಗುತ್ತಾ? ಎಂದು ಟಾಲಿವುಡ್ ಮಂದಿ ಎದುರು ನೋಡುತ್ತಿದ್ದಾರೆ.
'ಆಂಧ್ರ ಕಿಂಗ್ ತಾಲೂಕಾ' ಸಿನಿಮಾವನ್ನು ತೆಲುಗು ಟಾಪ್ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪಾತ್ರ ಇಂಟ್ರೆಸ್ಟಿಂಗ್ ಆಗಿದ್ದು, ಇಲ್ಲಿಯೂ ಸೂಪರ್‌ಸ್ಟಾರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ಪಾಚಿಗೋಲ್ಲಾ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ತೆಲುಗು ಸಿನಿಮಾ 'ಆಂಧ್ರ ಕಿಂಗ್ ತಾಲೂಕಾ' ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದೆಂದು ಲೆಕ್ಕಾಚಾರ ಹಾಕಿದ್ದಾರೆ. ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಿದ್ದರಿಂದ ಫಸ್ಟ್ ಕಲೆಕ್ಷನ್ ಬಗ್ಗೆ ನಿರೀಕ್ಷೆಯಿದೆ. ಹಾಗಿದ್ದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ಆಂಧ್ರ ಕಿಂಗ್ ತಾಲೂಕಾ' ಬಜೆಟ್
ರಾಮ್ ಪೋತಿನೇನಿ ಹಾಗೂ ಉಪ್ಪಿ ಸಿನಿಮಾದ ಬಜೆಟ್ ಸುಮಾರು ₹70 ಕೋಟಿ ಎನ್ನಲಾಗಿದೆ. ಇದರಲ್ಲಿ ನಟರು, ತಂತ್ರಜ್ಞರ ಸಂಭಾವನೆ, ಪ್ರಚಾರ ಹಾಗೂ ಇನ್ನಿತರ ವೆಚ್ಚಗಳು ಸೇರಿಕೊಂಡಿವೆ. 'ಆಂಧ್ರ ಕಿಂಗ್ ತಾಲೂಕಾ' ಸಿನಿಮಾ ಬಿಡುಗಡೆಗೂ ಮುನ್ನವೇ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಭರ್ಜರಿ ಪ್ರಚಾರ ಪಡೆದುಕೊಂಡಿತ್ತು. ಹೀಗಾಗಿ ಮೊದಲ ದಿನ ಸಿನಿಮಾ ಕಲೆಕ್ಷನ್ ಎಷ್ಟಾಗುತ್ತೆಂದು ಎದುರು ನೋಡುತ್ತಿದ್ದಾರೆ.
ಮೊದಲ ದಿನ ಕಲೆಕ್ಷನ್ ಪ್ರಿಡಿಕ್ಷನ್ ಏನು?
ರಾಮ್ ಪೋತಿನೇನಿ, ಉಪೇಂದ್ರ ಜೊತೆಗೆ ಮುರಳಿ ಶರ್ಮಾ, ರಾವ್ ರಮೇಶ್, ತುಳಸಿ, ಸಿಂಧು ತುಲಾನಿ, ರಾಹುಲ್ ರಾಮಕೃಷ್ಣ, ಸತ್ಯ, ಮತ್ತು ವಿಟಿವಿ ಗಣೇಶ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಸುಮಾರು ದೇಶ-ವಿದೇಶಗಳಲ್ಲಿ ಸೇರಿ ಸುಮಾರು 176 ಲೋಕೇಶನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ಫಸ್ಟ್ ಡೇ ಕಲೆಕ್ಷನ್ ಬಗ್ಗೆ ನಿರೀಕ್ಷೆಯಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಭಾರತದಾದ್ಯಂತ ಈ ಸಿನಿಮಾ ಮೊದಲ ದಿನ ₹4.5 ಕೋಟಿಯಿಂದ ₹5 ಕೋಟಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.

ವಿಶ್ವದಾದ್ಯಂತ ಕಲೆಕ್ಷನ್ ಎಷ್ಟಾಗಬಹುದು?
'ಆಂಧ್ರ ಕಿಂಗ್ ತಾಲೂಕಾ' ಅಮೆರಿಕಾದ 211 ಸ್ಥಳಗಳಲ್ಲಿ 412 ಪ್ರೀಮಿಯರ್ ಶೋಗಳನ್ನು ಹಾಕಲಾಗಿತ್ತು. ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್‌ನಿಂದ ₹35.72 ಲಕ್ಷ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ. ಇನ್ನು ಮೊದಲ ದಿನ ಅಮೆರಿಕಾ ಒಂದರಲ್ಲಿಯೇ ₹1.5 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋ ಒಳ್ಳೆಯ ಓಪನಿಂಗ್ ಸಿಕ್ಕಿರುವುದರಿಂದ ಮೊದಲ ದಿನ ವರ್ಲ್ಡ್‌ವೈಡ್ ಕಲೆಕ್ಷನ್ ₹8 ರಿಂದ ₹10 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಶೋ? ಭವಿಷ್ಯವೇನು?
ಟ್ರೇಡ್ ಎಕ್ಸ್‌ಪರ್ಟ್ ಪ್ರಕಾರ, 'ಆಂಧ್ರ ಕಿಂಗ್ ತಾಲೂಕಾ' ಹೈದರಾಬಾದ್‌ನಲ್ಲಿ 439 ಶೋಗಳು, ಬೆಂಗಳೂರಿನಲ್ಲಿ 316 ಶೋಗಳು, ವಿಜಯವಾಡದಲ್ಲಿ 100 ಶೋಗಳು ಹಾಗೂ ವಿಶಾಖಪಟ್ಟಣಂನಲ್ಲಿ 115 ಶೋಗಳು ಪ್ರದರ್ಶನಗೊಂಡಿವೆ ಎಂದು ವರದಿಯಾಗಿದೆ. ಇನ್ನು ಮೊದಲ ದಿನ ತೆಲುಗು ರಾಜ್ಯಗಳಲ್ಲಿ ₹2.50 ಕೋಟಿ, ಕರ್ನಾಟಕ ಮತ್ತು ಉಳಿದ ಏರಿಯಾಗಳಲ್ಲಿ ₹1 ರಿಂದ ₹2 ಕೋಟಿ, ವಿದೇಶಗಳಲ್ಲಿ ₹2 ಕೋಟಿ ಗಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.


Click it and Unblock the Notifications











