ಆರತಿ- ಅಂಬರೀಶ್ 'ಬಂಧನ' ಸಿನಿಮಾ ಒಪ್ಪಿಕೊಳ್ಳಲಿಲ್ಲ: ಸುಹಾಸಿನಿ-ವಿಷ್ಣುದಾದ ಜೋಡಿಯಾಗಿದ್ದೇಗೆ?
ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನು ನಿರ್ಮಿಸಿದ ಸಿನಿಮಾ 'ಬಂಧನ'. ಡಾ.ವಿಷ್ಣುವರ್ಧನ್ ಹಾಗೂ ಸುಹಾಸಿನಿ ಕಾಂಬಿನೇಷನ್‌ಗೆ ಜನರು ಮನಸೋಲುವಂತೆ ಮಾಡಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ ಇದೇ 'ಬಂಧನ'. ಹೊಂಬಿಸಿಲು ಬಳಿಕ ವಿಷ್ಣುದಾದ ವೈದ್ಯನಾಗಿ ಮತ್ತೆ ಈ ಸಿನಿಮಾ ಮೂಲಕ ತೆರೆಮೇಲೆ ರಂಜಿಸಿದ್ದರು.
ಇಂದಿಗೂ ಕನ್ನಡ ಸಿನಿಪ್ರಿಯರ ಪಾಲಿಗೆ 'ಬಂಧನ' ಒಂದು ಅದ್ಭುತ ಸಿನಿಮಾ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಸಿನಿಮಾ ಕನ್ನಡಿಗರ ಪಾಲಿಗೆ ಎವರ್‌ಗ್ರೀನ್ ಸಿನಿಮಾ ಆಯ್ತು. ಹಾಡುಗಳು ಸೂಪರ್ ಹಿಟ್ ಆದವು. ಕಾಮಿಡಿ, ಲವ್, ಸೆಂಟಿಮೆಂಟ್ ಎಲ್ಲವನ್ನೂ ಒಳಗೊಂಡಿದ್ದ 'ಬಂಧನ' ಕನ್ನಡಿಗರು ಎಂದೂ ಮರೆಯದ ಸಿನಿಮಾ ಆಯ್ತು. ಇಂತಹದ್ದೊಂದು ಸಿನಿಮಾ ನಿರ್ಮಾಣ ಆಗಿದ್ದರ ಹಿಂದೆ ವಿಶಿಷ್ಟವಾದ ಕಥೆಯೊಂದು ಇದೆ. ಈ ಕಥೆಯನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಸಿನೆರಮಾ ಪಿಕ್ಚರ್ಸ್ ಅನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಉಷಾ ನವರತ್ನರಾಂ ಕನ್ನಡ ಸಾಹಿತ್ಯ ಲೋಕದ ಒಬ್ಬ ಖ್ಯಾತ ಲೇಖಕಿ. ಅವರ ಅನೇಕ ಕಥೆಗಳು, ಕಾದಂಬರಿಗಳು ಸಿನಿಮಾ ಲೋಕಕ್ಕೆ ಅಳವಡಿಸಲಾಗಿದೆ. 1978ರಲ್ಲಿ ಗೀತಪ್ರಿಯ ಅವರ ನಿರ್ದೇಶನದಲ್ಲಿ ಉಷಾ ನವರತ್ನರಾಂ ಅವರ ಹೊಂಬಿಸಿಲು ಕಾದಂಬರಿಯನ್ನು ಆಧರಿಸಿ ವಿಷ್ಣು ಹಾಗೂ ಆರತಿ ನಾಯಕತ್ವದಲ್ಲಿ ಸಿನಿಮಾ ಬಿಡುಗಡೆಯಾಗಿ ಅದ್ಭುತವಾದ ಯಶಸ್ಸನ್ನು ಗಳಿಸಿತ್ತು. ಈ ಸಿನಿಮಾದಲ್ಲೂ ವಿಷ್ಣುವರ್ಧನ್ ಅವರದ್ದು ವೈದ್ಯರ ಪಾತ್ರ ಮಾಡಿದ್ದರು. ಬಂಧನದಲ್ಲೂ ವಿಷ್ಣುವರ್ಧನ್ ವೈದ್ಯರಾಗಿಯೇ ನಟಿಸಬೇಕಿತ್ತು.
"ರಾಜೇಂದ್ರ ಸಿಂಗ್ ಬಾಬುಗೆ ಬಂಧನ ಸಿನಿಮಾವನ್ನು ಮಾಡಬೇಕು ಅಂತ 1977ರಿಂದಲೇ ಇತ್ತು. ಬಾಬು ಅವರು ಸಿದ್ಧತೆಗಳನ್ನು ಮಾಡಿಕೊಳ್ಳುವ ಹೊತ್ತಿಗೆ ಹೊಂಬಿಸಿಲು ಸಿನಿಮಾ ಬಿಡುಗಡೆಯಾಗಿತ್ತು. ಈ ವೇಳೆ ಒಂದು ತೊಂದರೆ ಆಗಿತ್ತು. ಬಾಬು ಅವರು ಹಕ್ಕುಗಳನ್ನು ಕೇಳುವುದಕ್ಕೆ ಹೋದಾಗ ಬಂಧನದ ಹಕ್ಕುಗಳು ಮಿನುಗುತಾರೆ ಕಲ್ಪನಾ ಬಳಿ ಇತ್ತು." ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಹೋಗಿ ಕೇಳಿದಾಗ 'ಬಂಧನ'ದ ಹಕ್ಕುಗಳನ್ನು ಕಲ್ಪನಾ ಅವರು ಕೊಡುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡು ಇಹಲೋಕವನ್ನೇ ತ್ಯಜಿಸುತ್ತಾರೆ. ಕೊನೆಗೂ 1980ರಲ್ಲಿ 'ಬಂಧನ' ಸಿನಿಮಾ ಸೆಟ್ಟೇರುತ್ತೆ. ರಾಜೇಂದ್ರ ಸಿಂಗ್ ಬಾಬುಗೆ ನಾಯಕ ಹಾಗೂ ನಾಯಕಿಯ ಆಯ್ಕೆ ವಿಚಾರದಲ್ಲಿ ಗೊಂದಲವಿರುತ್ತೆ.
"ರಾಜೇಂದ್ರ ಸಿಂಗ್ ಬಾಬು ಅವರಿಗೆ ಆರತಿ ಹಾಗೂ ವಿಷ್ಣುವರ್ಧನ್ ಅವರೇ ನಾಯಕಿ ಹಾಗೂ ನಾಯಕಿ ಪಾತ್ರದಲ್ಲಿ ನಟಿಸಬೇಕು ಅಂತಿರುತ್ತೆ. ಆದರೆ, ಆರತಿಯವರು ಬ್ಯುಸಿಯಾಗಿದ್ದರಿಂದ ಅವರ ಡೇಟ್ ಸಿಗುವುದಿಲ್ಲ. ಆಗ ಬಾಬು ಅವರ ಸಹೋದರಿ ವಿಜಯಲಕ್ಷ್ಮಿ ಸಿಂಗ್ ಅವರ ತಮ್ಮ ಗೆಳೆಸಿ ಸುಹಾಸಿನಿಯವರನ್ನು ಪರಿಚಯಿಸುತ್ತಾರೆ. ಇನ್ನು ಸಿನಿಮಾದಲ್ಲಿ ಬರುವ ನೆಗೆಟಿವ್ ಪಾತ್ರದಲ್ಲಿ ಅಂಬರೀಶ್ ನನಟಿಸುವಂತೆ ಬಯಸುತ್ತಾರೆ. ಆದರೆ, ಕಥೆ ಕೇಳಿದಾಗ ಅಂಬರೀಶ್ ಅವರು ಆ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ." ಎಂದಿದ್ದಾರೆ.
ವಿಷ್ಣುವರ್ಧನ್ ಈ ಸಿನಿಮಾ ಒಪ್ಪಿಕೊಂಡಾಗ ಅದಾಗಲೇ ಆಕ್ಷನ್ ಹೀರೋ ಆಗಿರುತ್ತಾರೆ. ಇದಕ್ಕಿಂತಲೂ ಮುನ್ನ 'ಸಾಹಸ ಸಿಂಹ' ಸಿನಿಮಾ ರಿಲೀಸ್ ಆಗಿ ಗೆದ್ದಿರುತ್ತೆ. ಹೀಗಾಗಿ ಸಾಫ್ಟ್ ಪಾತ್ರ ಒಗ್ಗುತ್ತಾ ಅಂತ ಅನ್ನೋ ಭಾವನೆ ಅನೇಕರಲ್ಲಿ ಇರುತ್ತೆ. ಆದರೆ, ರಿಲೀಸ್ ಆದಮೇಲೆ 'ಬಂಧನ' ಹೊಸ ಇತಿಹಾಸವನ್ನೇ ಸೃಷ್ಟಿಸಿ ಗೊಂದಲಗಳಿಗೆ ತೆರೆ ಎಳೆದಿತ್ತು.


Click it and Unblock the Notifications











