ವಿಧಾನ ಸೌಧದಲ್ಲಿ ಇಬ್ಬರು 'ಮುಖ್ಯಮಂತ್ರಿ'; ಕೊನೆಗೆ ಮುಖ್ಯಮಂತ್ರಿ ಚಂದ್ರು ಅಧಿಕೃತಗೊಂಡಿದ್ದೇಗೆ?
ಕನ್ನಡ ಚಿತ್ರರಂಗದಲ್ಲಿ ಮುಖ್ಯಮಂತ್ರಿ ಚಂದ್ರು ಹೆಸರು ಚಿರಪರಿಚಿತ. ಎಲ್ಲರಿಗೂ ಈ ಹೆಸರು ಹೇಳಿದ ಕೂಡ ಕಣ್ಮುಂದೆ ಹೆಸರು ಬಂದು ಬಿಡುತ್ತೆ. ಇವರ ಜನಪ್ರಿಯ ನಾಟಕ 'ಮುಖ್ಯಮಂತ್ರಿ'ಯಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಚಂದ್ರಶೇಖರ್ ಅನ್ನೋ ಹೆಸರಿಗೆ ಮುಖ್ಯಮಂತ್ರಿ ಸೇರಿಕೊಂಡಿತ್ತು. ನಾಟಕದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗ ಇವರು ಮುಖ್ಯಮಂತ್ರಿ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದರು. ಹೀಗಾಗಿ ಸಿನಿಮಾ ಮಂದಿ ಬಾಯಲ್ಲೂ ಮುಖ್ಯಮಂತ್ರಿ ಚಂದ್ರು ಅಂತಲೇ ಹರಿದಾಡುವುದಕ್ಕೆ ಶುರುವಾಗಿತ್ತು.
ಮುಖ್ಯಮಂತ್ರಿ ಚಂದ್ರು ಸಿನಿಮಾರಂಗದಲ್ಲಿ ಇರುವವರೆಗೂ ಈ ಹೆಸರಿಗೆ ಏನೂ ಸಮಸ್ಯೆ ಇರಲಿಲ್ಲ. ಆದರೆ, ಚಂದ್ರು ಅವರು ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ.. ಅಲ್ಲಿಂದ ಸಮಸ್ಯೆ ಶುರುವಾಗಿತ್ತು. ಮುಖ್ಯಮಂತ್ರಿ ಚಂದ್ರು 1985ರಲ್ಲಿ ಗೌರಿಬಿದನೂರು ಕ್ಷೇತ್ರದಲ್ಲಿ ಜನತಾ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆ ಸ್ಪರ್ಧೆಯಲ್ಲಿ ಗೆದ್ದು ಎಂಎಲ್‌ಎ ಆಗಿ ವಿಧಾನಸೌಧಕ್ಕೂ ಪ್ರವೇಶ ಮಾಡಿದ್ದರು.

ಮುಖ್ಯಮಂತ್ರಿ ಚಂದ್ರು ವಿಧಾನ ಸೌಧಕ್ಕೆ ಪ್ರವೇಶ ಮಾಡುತ್ತಿದ್ದಂತೆ ವಿರೋಧ ಪಕ್ಷದವರು ಒಂದೇ ಸದನದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಇರುವುದಕ್ಕೆ ಹೇಗೆ ಸಾಧ್ಯ ಅಂತ ಗಲಾಟೆ ಎಬ್ಬಿಸಿದ್ದರು. ಒಬ್ಬ ಸಾಮಾನ್ಯ ಎಂಎಲ್‌ಎ ಅನ್ನು 'ಮುಖ್ಯಮಂತ್ರಿ' ಅಂತ ಹೇಗೆ ಕರೆಯೋದು ಎಂದು ವಿರೋಧ ವ್ಯಕ್ತಪಡಿಸಿದ್ದರು. ಆ ವೇಳೆ ಜೆ.ಎಚ್ ಪಟೇಲ್ ಅವರು ಮುಖ್ಯಮಂತ್ರಿ ಚಂದ್ರು ಅನ್ನೋ ಹೆಸರನ್ನು ಅಧಿಕೃತಗೊಳಿಸಿದ್ದರು. ಅದು ಹೇಗೆ ಅನ್ನೋದನ್ನು ಸ್ವತ: ಮುಖ್ಯಮಂತ್ರಿ ಚಂದ್ರು ಅವರೇ ಈ ಹಿಂದೆ ಟಿವಿ9 ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ವಾರಸ್ಯಕರವಾಗಿ ಹೇಳಿದ್ದಾರೆ.
ನಾನು ಖಾಯಂ ಮುಖ್ಯಮಂತ್ರಿ
ಮುಖ್ಯಮಂತ್ರಿ ಚಂದ್ರು ಕೇವಲ ಸಿನಿಮಾದಲ್ಲಷ್ಟೇ ಅಲ್ಲ, ರಾಜಕೀಯದಲ್ಲೂ ಹೆಸರು ಮಾಡಿದ್ದಾರೆ. ಆದರೆ, ಸಹಜವಾಗಿಯೇ ತಮ್ಮ ಹೆಸರಿನೊಂದಿಗೆ ಮುಖ್ಯಮಂತ್ರಿ ಸೇರಿಕೊಂಡಾಗ, ಅವರಿಗೆ ಮುಖ್ಯಮಂತ್ರಿ ಆಗಬೇಕು ಅಂತ ಅನಿಸಲಿಲ್ಲವೇ? ಅನ್ನೋ ಪ್ರಶ್ನೆ ಎದುರಾಗಿತ್ತು. ಆಗ ಅವರು ಹೇಳಿದ್ದಿಷ್ಟು.
"ಕನಸು ಕಾಣಲು ಕಷ್ಟ ಆಗುವಂತಹ ಸಮಾಜದಲ್ಲಿ ಇದ್ದೀವಿ ನಾವು. ಚಿಕ್ಕ ಸಮಾಜ, ಆರ್ಥಿಕವಾಗಿ ಭದ್ರತೆ ಇಲ್ಲ. ಇವತ್ತು ಅವೆಲ್ಲವೂ ಅನಿವಾರ್ಯವಾಗಿವೆ. ಆತರ ಕಟ್ಟಿಕೊಂಡು ಹೋಗುವ ವಯಸ್ಸು ಹೋಯ್ತು ಈಗ. ಇನ್ನೊಂದು 15-20 ವರ್ಷ ಇದೆ ಅಂದಿದ್ರೆ ಬೇರೆ ಮಾತು. ಆಗದೇ ಇರುವಂತಹ ಕನಸು ಯಾಕೆ ಕಾಣಬೇಕು. ಆ ಮೇಲೆ ನನಗೆ ಸಂತೋಷ ಆಯ್ತು. ಖಾಯಂ ಮುಖ್ಯಮಂತ್ರಿ ಆಗಿ ಹೋದ್ನಲ್ಲ ಅಂತ. ಇಡೀ ರಾಜ್ಯದಲ್ಲಿ ಅವಿಶ್ವಾಸ ಇಲ್ಲದೆ ಇರೋ, ಮತದಾರ ಇಲ್ಲದೇ ಇರೋ ಜನರು ಕೊಟ್ಟು ಬಿಟ್ಟರಲ್ಲ. ಈ ಮುಖ್ಯಮಂತ್ರಿಯನ್ನು ಕಿತ್ತಾಕೋಕೆ ಸಾಧ್ಯನೇ ಇಲ್ವಲ್ಲ" ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಸರ್ಕಾರವೇ ಹೆಸರು ಅಧಿಕೃತಗೊಳಿಸಿತ್ತು
ವಿಧಾನ ಸೌಧದದಲ್ಲಿ ಮುಖ್ಯಮಂತ್ರಿ ಹೆಸರು ವಿಚಾರಕ್ಕೆ ವಿರೋಧ ವ್ಯಕ್ತವಾದಾಗ ಅದನ್ನು ಸರ್ಕಾರವೇ ಹೇಗೆ ಅಧಿಕೃತಗೊಳಿಸಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಸರ್ಕಾರದವರು ಈ ಹೆಸರನ್ನು ಅಧಿಕೃತ ಮಾಡಿಬಿಟ್ಟರು. ವಿಧಾನ ಸೌಧದಲ್ಲಿ ಈ ಹೆಸರಿಗೆ ಜಗಳ ಆಗಿತ್ತು. ಇಬ್ಬರು ಮುಖ್ಯಮಂತ್ರಿಗಳು ಒಂದೇ ಸದನದಲ್ಲಿ ಇರುವ ಹಾಗಿಲ್ಲ ಎಂದು ಜಗಳ ಆಗಿತ್ತು. ಜೆ.ಎಚ್ ಪಟೇಲ್ ಅವರು ಯಾಕೆ ಹೊಟ್ಟೆ ಉರಿ ಪಡ್ತೀರಾ. ನಾವೆಲ್ಲ ಮಾಜಿಗಳು ಆಗುತ್ತೇವೆ. ದಿವಂಗತರಾಗುತ್ತೇವೆ. ಅವರೊಬ್ಬರೇ ಆಗದೇ ಇರೋರು. ನೀವ್ಯಾಕೆ ಸಂಕಟ ಪಡುತ್ತೀರ. ನಾನಂತೂ ಒಪ್ಪಿದ್ದೀನಿ. ಅವರ ಹೆಸರನ್ನು ಅಧಿಕೃತವಾಗಿ ಡಿಕ್ಲೇರ್ ಮಾಡಿ ಅಂದರು" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಅಪಾಯ ಇಲ್ಲದೆ ಇರೋ ಮುಖ್ಯಮಂತ್ರಿ
ಅಂದಿನ ಜೆ.ಎಚ್.ಪಟೇಲ್ ಸರ್ಕಾರ ಇವರ ಹೆಸರನ್ನು 'ಮುಖ್ಯಮಂತ್ರಿ ಚಂದ್ರು' ಎಂದು ಅಧಿಕೃತಗೊಳಿಸಿತ್ತು. ಅದನ್ನು ನೆನಸಿಕೊಂಡು ಅಪಾಯ ಇಲ್ಲದ ಒಬ್ಬ ದೀರ್ಘಕಾಲದ ಮುಖ್ಯಮಂತ್ರಿ ನಾನೇ ಎಂದಿದ್ದಾರೆ. "ನನ್ನ ಹೆಸರು ಅಧಿಕೃತವಾಗಿ ಚಂದ್ರಶೇಖರ್ ಅಂತ ಇದ್ದಿದ್ದು, ಮುಖ್ಯಮಂತ್ರಿ ಚಂದ್ರು ಅಂತ ಬದಲಾಯ್ತು. ಪಾಸ್‌ಪೋರ್ಟ್‌ನಲ್ಲಿ ಎಲ್ಲಾ ಹೆಸರನ್ನು ಬದಲಾಯಿಸಿದ್ದಾಯ್ತು. ಈಗ ನನ್ನ ಅಧಿಕೃತ ಹೆಸರೇ ಮುಖ್ಯಮಂತ್ರಿ ಚಂದ್ರು. ಆಮೇಲೆ ಅಪಾಯವೂ ಇಲ್ಲದೇ ಇರೋ ಮುಖ್ಯಮಂತ್ರಿ ಒಬ್ಬ ದೀರ್ಘಕಾಲ ಇರುವುದಕ್ಕೆ ಸಾಧ್ಯ ಅಂತಾದರೆ, ಅಪಾಯ ಆಗುವ ಮುಖ್ಯಮಂತ್ರಿ ಯಾಕೆ ಬೇಕು?" ಎಂದು ಮುಖ್ಯಮಂತ್ರಿ ಚಂದ್ರು ಹೇಳಿಕೊಂಡಿದ್ದರು.


Click it and Unblock the Notifications
