2 ಬಾರಿ ಅಪಘಾತ, ಸಿಕ್ಕಿತ್ತಾ ಸಾವಿನ ಸೂಚನೆ? 3ನೇ ಬಾರಿಯ ಅಪಘಾತದಲ್ಲಿ ಬದುಕಿ ಉಳಿಯಲಿಲ್ಲ ಸುನೀಲ್!
ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟ ಸುನೀಲ್. ಇನ್ನೂ ಬದುಕಿದಿದ್ದರೆ, ಸ್ಯಾಂಡಲ್‌ವುಡ್‌ನಲ್ಲಿ ಸೂಪರ್‌ಸ್ಟಾರ್ ಮರೆಯುತ್ತಿದ್ದರು. ಮಹಿಳಾ ಅಭಿಮಾನಿಗಳನ್ನು ಅತೀ ಹೆಚ್ಚು ಹೊಂದಿದ ನಟರ ಸಾಲಿನಲ್ಲಿ ಸುನೀಲ್ ನಿಲ್ಲುತ್ತಿದ್ದರು. ಆದರೆ, ಹಾಗಾಗುವುದಕ್ಕೆ ವಿಧಿ ಬಿಡಲೇ ಇಲ್ಲ. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಸುನೀಲ್ ಇಹಲೋಕವನ್ನು ತ್ಯಜಿಸಬೇಕಾಯಿತು.
ಸುನೀಲ್ ಯಕ್ಷಗಾನದ ವೇಷ ಹಾಕಿ ಅಭ್ಯಾಸವಿತ್ತು. ಓದಿನಲ್ಲೂ ಮುಂದಿದ್ದ ಸುನೀಲ್ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಪ್ರತಿಷ್ಠಿತ ಆರ್‌ವಿ ಕಾಲೇಜಿನಲ್ಲಿ ಸೇರಿಕೊಂಡಿದ್ದರು. ವಿದ್ಯಾಭ್ಯಾಸ ಮಾಡುತ್ತಲೇ ಅವರ ಮನಸ್ಸು ಸಿನಿಮಾ ಕಡೆಗೆ ವಾಲಿತ್ತು. ಆಗಾಗ, ಯಕ್ಷಗಾನ, ಸಿನಿಮಾ ಅಂತ ತೊಡಗಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರು.

ಅದ್ಹೇಗೆ ಸಿನಿಮಾ ನಂಟು ಬೆಳೆಯಿತೋ ಅವರ ಮನೆಯವರಿಗೂ ಸರಿಯಾಗಿ ಗೊತ್ತಿಲ್ಲ. ಸುನೀಲ್‌ಗೆ ಸಿನಿಮಾ ಬಗ್ಗೆ ಆಸಕ್ತಿ ಇದ್ದಿದ್ದು ಕೂಡ ಮನೆಯವರಿಗೆ ಗೊತ್ತಿರಲಿಲ್ಲ. ಹುಟ್ಟೂರಿನಲ್ಲಿ ಇರುವಾಗ ದ್ವಾರಕೀಶ್ ಅವರಿಂದ 'ಶೃತಿ' ಸಿನಿಮಾಗೆ ಆಡಿಷನ್ ಕೊಡುವಂತೆ ಕರೆ ಬಂದಿತ್ತು. ಮನೆಯವರಿಗೆ ಇಷ್ಟವಿರಲಿಲ್ಲ. ಆದರೂ, ಸುನೀಲ್ ಆಸೆ ಪಟ್ಟಿದ್ದರಿಂದ ಸಿನಿಮಾದಲ್ಲಿ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದ್ದರು. ಇಲ್ಲಿಂದ ಸುನೀಲ್ ಮತ್ತೆ ಹಿಂತಿರುಗಿ ನೋಡಿಯೇ ಇಲ್ಲ.
ಸುನೀಲ್ ವೃತ್ತಿ ಬದುಕು ಯಶಸ್ಸಿನತ್ತ ಸಾಗುತ್ತಿತ್ತು. ಸಿನಿಮಾ ಒಂದೊಂದಾಗೇ ಹಿಟ್ ಲಿಸ್ಟ್ ಸೇರುತ್ತಿತ್ತು. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ವಿಧಿ ಬೇರೆ ಏನಕ್ಕೋ ಕಾದು ಕೂತಂತೆ ಇತ್ತು. ಸುನೀಲ್ ಚಿತ್ರರಂಗದ ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದರು. ಚಿತ್ರರಂಗದಲ್ಲಿ ಬ್ಯುಸಿ ಇದ್ದರು. ಸಿನಿಮಾಗಳ ಜೊತೆ ಜೊತೆಗೆ ಕಾರ್ಯಕ್ರಮಗಳಿಗೂ ಹೋಗಿ ಬರುತ್ತಿದ್ದರು. ಉತ್ತರ ಕರ್ನಾಟಕದ ಕಡೆ ಇಂತಹದ್ದೇ ಒಂದು ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು.

1994ರಲ್ಲಿ ಸುನೀಲ್ ಅಪಘಾತದಲ್ಲಿ ಅಗಲುವುದಕ್ಕೂ ಮುನ್ನ ಎರಡು ಬಾರಿ ಆಕ್ಸಿಡೆಂಟ್ ಆಗಿತ್ತು. ಇದು ವಿಧಿ ನೀಡಿದ ಸೂಚನೆಯೇ? ಯಾವ ಸಂದರ್ಭದಲ್ಲಿ ಮೊದಲ ಎರಡು ಬಾರಿ ಅಪಘಾತ ಆಗಿತ್ತು? ಈ ಎಲ್ಲಾ ವಿಷಯಗಳನ್ನು ಸುನೀಲ್ ಅವರ ಅಕ್ಕ ಸುಚಿತ್ರಾ ಶೆಟ್ಟಿ ಈ ಹಿಂದೆ ಹೆಗ್ಗದ್ದೆ ಸ್ಟುಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿ ಕೊಂಡಿದ್ದರು. ಸ್ನೇಹದ ಕಡಲಲ್ಲಿ ಸಿನಿಮಾ ಮಾಡುವಾಗ ಮೊದಲ ಬಾರಿಗೆ ಸುನೀಲ್‌ಗೆ ಅಪಘಾತ ಆಗಿತ್ತು.
"ಸ್ನೇಹದ ಕಡಲಲ್ಲಿ ಸಿನಿಮಾ ಮಾಡುವಾಗ ಒಮ್ಮೆ ಶೂಟಿಂಗ್‌ಗೆ ಹೋಗುತ್ತಿದ್ದ ವ್ಯಾನ್ ಆಕ್ಸಿಡೆಂಟ್ ಆಗಿತ್ತು. ವ್ಯಾನ್ ಪಲ್ಟಿ ಆಗಿತ್ತು. ನಾವು ಶೂಟಿಂಗ್ ನೋಡಿ ಬಂದಿದ್ವಿ ಅಷ್ಟೆ. ಹಿಂದೆನೇ ಫೋನ್ ಬಂದಿತ್ತು. ಹೆಚ್ಚು ಪೆಟ್ಟು ಆಗಿರಲಿಲ್ಲ. ಸ್ವಲ್ಪ ಸ್ಕ್ರ್ಯಾಚ್ ಆಗಿತ್ತು. ಮಾರನೇ ದಿನ ಮತ್ತೆ ಶೂಟಿಂಗ್ ಹೋಗಿದ್ದ" ಎಂದು ಸುನೀಲ್ ಅವರ ಅಕ್ಕ ಸುಚಿತ್ರಾ ಶೆಟ್ಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಎರಡನೇ ಬಾರಿ ಸುನೀಲ್‌ಗೆ ಹೈದಾಬಾದ್ ವೇಳೆ ಗಂಭೀರ ಅಪಘಾತ ಆಗುವುದರಲ್ಲಿ ಇತ್ತು. ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಸುನೀಲ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ಬಾರಿ ಸುನೀಲ್ ಜೊತೆ ಮಾಲಾಶ್ರೀ ಇದ್ದರು. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹೊಲದಲ್ಲಿ ಲ್ಯಾಂಡ್ ಆಗಿತ್ತು. ಇದು ಎರಡನೇ ಬಾರಿ ಆದ ಅಪಘಾತ. "ಇನ್ನೊಮ್ಮೆ ಹೈದರಾಬಾದ್‌ಗೆ ಹೋಗುವಾಗ ವಿಮಾನ ಅಪಘಾತ ಆಗಿತ್ತು. ಸೀದಾ ಗದ್ದೆಯಲ್ಲಿ ಬಂದು ಇಳಿದಿತ್ತು. ಆಗಲೂ ಮಾಲಾಶ್ರೀ ಮತ್ತು ಇವನೇ ಇದ್ದರು. ಆ ಅಪಘಾತದಲ್ಲಿ ಅವನು ಹೆದರಿದ್ದ. ನ್ಯೂಸ್‌ನಲ್ಲಿ ಬಂದಿತ್ತು. ನಮಗೂ ಸಿಕ್ಕಾಪಟ್ಟೆ ಭಯ ಆಗಿತ್ತು. ಬ್ಯಾಗ್ ಎಲ್ಲಾ ಬಿಟ್ಟು ಓಡಿ ಬಂದಿದ್ನಂತೆ. ಮೂರನೇ ಸಲ ಹೋಗಿಯೇ ಬಿಟ್ಟ." ಎಂದು ಸಂದರ್ಶನದ ಸಮಯದಲ್ಲಿ ಭಾವುಕರಾಗಿದ್ದರು.
ಮೂರನೇ ಬಾರಿ ಅಪಘಾತ ಆದಾಗ ಸುನೀಲ್‌ಗೆ ಹೀಗೆ ಚಿಕ್ಕ ಪುಟ್ಟ ಗಾಯಗಳಾಗಿರಬಹುದು ಅಂದುಕೊಳ್ಳಲಾಗಿತ್ತು. ಆದರೆ, ಈ ಬಾರಿ ವಿಧಿ ನಟ ಸುನೀಲ್ ಅನ್ನು ಬಲಿ ಪಡೆದುಕೊಂಡಿತ್ತು. ಚಿತ್ರದುರ್ಗದ ಸಮೀಪ ಸುನೀಲ್ ಕಾರು ಚಾಲಕ ನಿದ್ದೆಗೆ ಜಾರಿದ್ದರಿಂದ ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿದ್ದರು. ಈ ಅಪಘಾತದಲ್ಲಿ ಸುನೀಲ್ ಗಂಭೀರವಾಗಿ ಗಾಯಕೊಂಡಿದ್ದರು. ಸುನೀಲ್ ಹಾಗೂ ಕಾರು ಚಾಲಕ ಕೃಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಶಿಫ್ಟ್ ಮಾಡಬೇಕು ಅಂದುಕೊಂಡರೂ ಅದೂ ಸಾಧ್ಯವಾಗಲಿಲ್ಲ.


Click it and Unblock the Notifications











