ನಷ್ಟದಲ್ಲಿದ್ದ ತಂದೆಗಾಗಿ ಚಿತ್ರರಂಗಕ್ಕೆ ಬಂದ ಈ ನಟಿ ಅವರಿಂದಲೇ ಮೋಸ ಹೋಗಿದ್ದೇಗೆ? ಕಾಂಚನಾ ಬಾಳಲ್ಲಿ ಏನಾಯ್ತು?
"ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು.." ಬಬ್ರುವಾಹನ ಸಿನಿಮಾದ ಈ ಹಾಡಿನಲ್ಲಿ ರಾಜ್‌ಕುಮಾರ್ ಜೊತೆ ನಟಿಸಿ ಜನರ ಮನಗೆದ್ದಿದ್ದ ಈ ಕಲಾವಿದೆಯ ಹೆಸರು ಕಾಂಚನಾ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಜನಪ್ರಿಯ ನಟಿಯೀಕೆ. ಉದ್ಯಮಿಯಾಗಿದ್ದ ತಂದೆ ನಷ್ಟಕ್ಕೆ ಸಿಲುಕಿದಾಗ ಓದುವುದನ್ನು ಬಿಟ್ಟು ತನ್ನ ಎಳೆಯ ವಯಸ್ಸಿನಲ್ಲಿಯೇ ದುಡಿಯುವುದಕ್ಕೆ ಆರಂಭ ಮಾಡುತ್ತಾರೆ. ಮುಂದೆ ಅದೇ ತಂದೆಯಿಂದ ದ್ರೋಹ ಆಗಿ ಸಂಕಷ್ಟಕ್ಕೆ ಸಿಲುಕುತ್ತಾರೆ.
ನಟಿ ಕಾಂಚನಾ ಅವರ ಜನನ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯೆ ಕರವಾಡಿಯಲ್ಲಿ ಆಗುತ್ತೆ. ಅವರ ತಂದೆ ಒಬ್ಬ ಉದ್ಯಮಿ. ವ್ಯಾಪಾರ ಅಂದಾಗ ಲಾಭ, ನಷ್ಟ ಆಗುತ್ತಲೇ ಇರುತ್ತೆ. ಕಾಂಚನಾ ತಂದೆ ಉದ್ಯಮದಲ್ಲಿ ನಷ್ಟ ಮಾಡಿಕೊಂಡಿದ್ದರು. ಈ ವೇಳೆ ತನ್ನ ತಂದೆ- ತಾಯಿ ನೆಮ್ಮದಿಯಾಗಿ ಇರಬೇಕು ಅಂತ ಕಾಂಚಾನಾ ದುಡಿಯುವುದಕ್ಕೆ ಆರಂಭಿಸುತ್ತಾರೆ. ಆಗ ಅವರ ಹೆಸರು ವಸುಂದರ ದೇವಿ. ಒಂದು ಏರ್‌ಲೈನ್ಸ್‌ನಲ್ಲಿ ಗಗನ ಸಖಿಯಾಗಿ ಕೆಲಸ ಮಾಡುವುದಕ್ಕೆ ಆರಂಭಿಸುತ್ತಾರೆ.

1957ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಗಗನ ಸಖಿಯಾಗಿದ್ದು ಕೊಂಡೇ ಸಿನಿಮಾಗಳಲ್ಲಿ ನಟಿಸುತ್ತಾರೆ. ಆಗ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ತೆರೆಗೆ ಬಂದಂತಹ 'ಸುವರ್ಣ ಸುಂದರಿ' ಸಿನಿಮಾದಲ್ಲಿ ನಾಗ ಕನ್ಯೆಯಾಗಿ ಕಾಣಿಸಿಕೊಳ್ಳುತ್ತಾರೆ. ಆ ಸಿನಿಮಾದಲ್ಲಿ ಅವರ ಹೆಸರನ್ನು ವಸುಂದರಾ ದೇವಿ ಅಂತಲೇ ಹೇಳಲಾಗಿದೆ. 1964ರಲ್ಲಿ ಅವರ ಅದೃಷ್ಟ ಬದಲಾಗುತ್ತೆ. ಅವರು ಗಗನ ಸಖಿಯಾಗಿ ಕೆಲಸ ಮಾಡುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಆಕೆಯನ್ನು ಗುರುತಿಸುತ್ತಾರೆ. ಅವರು ತಮಿಳು ಚಿತ್ರರಂಗದ ದಿಗ್ಗಜ ನಿರ್ದೇಶಕ ಸಿವಿ ಶ್ರೀಧರ್ ಅವರ ಸ್ನೇಹಿತ. ಅವರು ಈಕೆಯ ಫೋಟೊವನ್ನು ಸಿವಿ ಶ್ರೀಧರ್ ಅವರಿಗೆ ಕೊಡುತ್ತಾರೆ. ಅದೇ ವರ್ಷ ನಿರ್ದೇಶಿಸಿದ 'ಕಾದಲಿಕ್ಕ ನೇರಮಿಲ್ಲೈ' ಅನ್ನೋದಲ್ಲಿ ನಟಿಸಲು ಅವಕಾಶ ಕೊಡುತ್ತಾರೆ. ಅಲ್ಲಿಂದ ಈಕೆ ಬದುಕು ಬದಲಾಗುತ್ತೆ. ಈಕೆಯ ವೈಯಕ್ತಿಕ ಬದುಕಿನ ಬಗ್ಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
'ಕಾದಲಿಕ್ಕ ನೇರಮಿಲ್ಲೈ' ಸಿನಿಮಾ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತೆ. ಅದೇ ವೇಳೆ ಸಿವಿ ಶ್ರೀಧರ್ ಈ ನಟಿಯ ಹೆಸರನ್ನು ಬದಲಿಸಿ ಕಾಂಚನಾ ಅಂತ ಇಡುತ್ತಾರೆ. ಮಾತೃಭಾಷೆ ತೆಲುಗು ಆಗಿದ್ದರೂ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಅವಕಾಶವನ್ನು ಪಡೆಯುತ್ತಾ ಹೋಗುತ್ತಾರೆ. ಕಾಂಚನಾ ಕನ್ನಡಕ್ಕೆ ಬಹಳ ತಡವಾಗಿ ಎಂಟ್ರಿ ಕೊಡುತ್ತಾರೆ. ಡಾ.ರಾಜ್‌ಕುಮಾರ್ ನಟಿಸಿದ 'ಬಬ್ರುವಾಹ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ.

"ಡಾ.ರಾಜ್‌ಕುಮಾರ್ ಅವರ ಜೊತೆಯಲ್ಲಿ ಏಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಾರೆ. 'ನಾನೊಬ್ಬ ಕಳ್ಳ', 'ಶಂಕರ್ ಗುರು', 'ಭಾಗ್ಯವಂತ', 'ಭಕ್ತಪ್ರಹ್ಲಾದ', 'ಸಮಯದ ಗೊಂಬೆ', 'ದೇವತಾ ಮನುಷ್ಯ' ಅಂತಹ ಸಿನಿಮಾಗಳಲ್ಲಿ ಕಾಂಚನಾ ನಟಿಸಿದ್ದಾರೆ. ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿಯೂ ಕಾಂಚನಾ ಅವರು ಕಾಣಿಸಿಕೊಂಡಿದ್ದರು." ಎಂದು ಹರಿಹರಪುರ ಮಂಜುನಾಥ್ ಅವರ ಸಿನಿಮಾ ಜರ್ನಿಯ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ತಂದೆ ನಷ್ಟದಲ್ಲಿ ಸಿಲುಕಿ ಜೀವನ ಕಷ್ಟ ಎನಿಸಿದಾಗ, ಓದನ್ನು ಅರ್ಧಕ್ಕೆ ನಿಲ್ಲಿಸಿ ಗಗನ ಸಖಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸಿ ಅವರಿಗೆ ನೆರವಾಗುತ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ತಂದೆ ಕಾಲಿ ಕಾಗದಕ್ಕೆ ಕಾಂಚನಾ ಅವರ ಸಹಿ ಮಾಡಿಕೊಳ್ಳುತ್ತಾರೆ. ಮುಂದೆ ಮದ್ರಾಸ್‌ನ ಟಿ ನಗರದಲ್ಲಿರುವ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾರೆ. ಅದು ಗೊತ್ತಾದ ಬಳಿಕ ಕಾಂಚನಾ ನ್ಯಾಯಾಲಯದ ಮೆಟ್ಟಿಲು ಏರುತ್ತಾರೆ.
"2010ರಲ್ಲಿ ಆ ಜಮೀನು ನ್ಯಾಯಾಲಯದ ಮೂಲಕ ಕಾಂಚನಾ ಅವರಿಗೆ ಹಸ್ತಾಂತರ ಆಗುತ್ತೆ. ಅವತ್ತಿನ ಕಾಲಕ್ಕೆ 15 ಕೋಟಿ ರೂಪಾಯಿಗೆ ಬಾಳುತ್ತಿದ್ದಂತಹ ಜಮೀನನ್ನು ಯಾವುದೇ ಆಸೆ ಆಮಿಷವೂ ಇಲ್ಲದೆ, ಕಾಂಚನಾ ಅವರು ನೇರವಾಗಿ ಅಕ್ಟೋಬರ್ 25, 2010ರಲ್ಲಿ, ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್‌ಗೆ ಬರೆದುಕೊಡುತ್ತಾರೆ. ತಂದೆಯಿಂದ ಮೋಸ ಆಗಿದ್ದು ನೋವಾಗಿರುತ್ತೆ. ಹೀಗಾಗಿ ಆಧ್ಯಾತ್ಮಕ್ಕೆ ಕಡೆಗೆ ಒಲವು ಬೆಳೆಸಿಕೊಂಡಿದ್ದಾರೆ." ಎನ್ನುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
ಸದ್ಯ ಕಾಂಚನಾ ತಮ್ಮ ತಂಗಿ ಗಿರಿಜಾ ಹಾಗೂ ಅವರ ಪತಿಯವರ ಜೊತೆಯಲ್ಲಿ ಅವಿವಾಹಿತೆಯಾಗಿ ಹೈದರಾಬಾದ್‌ನ ಫ್ಲಾಟ್‌ವೊಂದರಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.


Click it and Unblock the Notifications











