ಅಣ್ಣಾವ್ರ ಕೊನೆಯ ಬಾಂಡ್ ಸಿನಿಮಾ ನಾಯಕಿ; 20ವರ್ಷ ನಾಯಕಿಯಾಗಿ ಮೆರೆದಿದ್ದ ಪದ್ಮಪ್ರಿಯಾ ಅಂತ್ಯ ಹೇಗಾಯ್ತು?
ಈ ಬಣ್ಣದ ಪ್ರಪಂಚವೇ ಹಾಗೆ. ಬಣ್ಣ ಹಚ್ಚಿ ನಟಿಸುವ ಕನಸು ಹೊತ್ತು ಬಂದವರು ಗೆದ್ದಿದ್ದು ವಿರಳ. ಗೆದ್ದವರು ತಮ್ಮ ಬದುಕಿಯ ದಿನದವರೆಗೂ ಯಶಸ್ಸನ್ನೇ ಕಂಡಿದ್ದಾರೆ. ಅದೇ ಮತ್ತೆ ಕೆಲವರು ಗೆಲುವು ಸೋಲು ಎರಡನ್ನೂ ಕಂಡಿದ್ದಾರೆ. ಆದರೆ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಬದುಕು ದುರಂತ ಕಂಡಿದ್ದೂ ಇದೆ. ಅಂತವರಲ್ಲಿ ಬಹುಭಾಷಾ ನಟಿ ಪದ್ಮ ಪ್ರಿಯಾ ಕೂಡ ಒಬ್ಬರು.
ಪದ್ಮಪ್ರಿಯಾ ಬಹುಶ: ಇಂದಿನ ಪೀಳಿಗೆ ಮರೆತು ಹೋಗಿರಬಹುದು. ಯಾಕಂದ್ರೆ ಅವರ ಬಗ್ಗೆ ಇಂಟರ್‌ನೆಟ್‌ನಲ್ಲಿ ಹೇರಳವಾದ ಮಾಹಿತಿ ಸಿಗುವುದಿಲ್ಲ. ಈ ನಟಿಯ ಬದುಕೇ ವಿಚಿತ್ರ. ಪದ್ಮಪ್ರಿಯಾ ಹುಟ್ಟಿದ ದಿನಾಂಕ ಯಾವುದು ಅನ್ನೋದು ಗೊತ್ತಿಲ್ಲ. ಅವರ ಕುಟುಂಬದವರು ಯಾರು? ಈಗ ಎಲ್ಲಿದ್ದಾರೆ ಅನ್ನೋ ಮಾಹಿತಿನೂ ಇಲ್ಲ. ಆದರೆ, ಅಣ್ಣಾವ್ರ ಕೊನೆಯ ಬಾಂಡ್ ಸಿನಿಮಾ 'ಅಪರೇಷನ್ ಡೈಮಂಡ್ ರಾಕೆಟ್' ಸಿನಿಮಾದ ನಾಯಕಿಯ ಸಿನಿಮಾಗಳು ಮಾತ್ರ ಆಕೆಯ ಕಥೆಯನ್ನು ಹೇಳುತ್ತವೆ.

ಪದ್ಮಪ್ರಿಯಾ ಕನ್ನಡದವರು. ಟಿ.ನರಸೀಪುರದ ಸಾಹುಕಾರ್ ಜಮೀನ್ದಾರ್ ಕೃಷ್ಣಮಚಾರಿಯವರ ಮೊಮ್ಮಗಳು. ತಾಯಿ ಹೆಸರು ಜಯಮ್ಮ, ತಂದೆ ಬಗ್ಗೆ ಮಾಹಿತಿಯಿಲ್ಲ. ಆರಂಭದ ದಿನಗಳಲ್ಲಿ ಒಂದಿಷ್ಟು ಕಾಲ ಮೈಸೂರಿನಲ್ಲಿ ಇರುತ್ತಾರೆ. ಆ ಬಳಿಕ ಅಂದಿನ ಮದ್ರಾಸ್‌ಗೆ ವಲಸೆ ಹೋಗಿ ನೆಲೆಸುತ್ತಾರೆ. ಅಲ್ಲಿಂದ ಪದ್ಮಪ್ರಿಯಾ ಅವರ ಸಿನಿಮಾ ಜರ್ನಿ ಆರಂಭ ಆಗುತ್ತೆ. ಸುಮಾರು 1975 ರಿಂದ 1995ರವರೆಗೆ 20 ವರ್ಷಗಳ ಕಾಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ದಕ್ಷಿಣ ಭಾರತದ ಹೇಮಾ ಮಾಲಿನಿ' ಅಂತ ಜನಪ್ರಿಯರಾಗುತ್ತಾರೆ. ದಿಗ್ಗಜರೊಂದಿಗೆ ನಟಿಸುತ್ತಾರೆ. ಎರಡು ದಶಕ ಚಿತ್ರರಂಗದಲ್ಲಿ ಮೆರೆದ ಈ ನಟಿಯ ಕೊನೆಯ ದಿನಗಳ ಮಾತ್ರ ನಿಜಕ್ಕೂ ದುರಂತ.
ಪದ್ಮಪ್ರಿಯಾ ಅವರ ಸಿನಿಮಾ ಜರ್ನಿ 1974 ರಿಂದಲೇ ಆರಂಭ ಆಗುತ್ತೆ. ನೋಡುವುದಕ್ಕೆ ಹೆಚ್ಚು ಕಡಿಮೆ ಹೇಮಾ ಮಾಲಿನಿಯನ್ನೇ ಹೋಲುತ್ತಿದ್ದ ನಟಿ ಚಿತ್ರರಂಗಕ್ಕೆ ಬರುವುದಕ್ಕೆ ಹೆಚ್ಚು ಪ್ರಯಾಸವೇ ಪಟ್ಟಿರಲಿಲ್ಲ. ಸಿನಿಮಾ ಮಾಡುವುದಕ್ಕೆ ಶುರು ಮಾಡಿದ ಆರಂಭದಲ್ಲೇ ಶಿವಾಜಿ ಗಣೇಶನ್, ಎಂಜಿಆರ್ ಅಂತಹ ದಿಗ್ಗಜರೊಂದಿಗೆ ನಟಿಸುವುದಕ್ಕೆ ಆರಂಭಿಸಿದ್ದರು. ಯಶಸ್ಸು ಕೂಡ ಹಾಗೇ ಒಲಿದು ಬಂದಿತ್ತು. ತೆಲುಗು, ತಮಿಳು ಚಿತ್ರರಂಗಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಪದ್ಮಪ್ರಿಯಾ ಕನ್ನಡಕ್ಕೂ ಬಂದಿದ್ದರು. ಇವರ ಸಿನಿಮಾ ಜರ್ನಿ ಹಾಗೂ ದುರಂತ ಬದುಕಿನ ಬಗ್ಗೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹರಿಹರಪುರ ಮಂಜುನಾಥ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ಕನ್ನಡದ ಹುಡುಗಿಯೊಬ್ಬಳು ನೆರೆ ನಾಡಿನಲ್ಲಿ ಚಲನ ಚಿತ್ರದಲ್ಲಿ ಸಕ್ರಿಯವಾಗಿ ಸಾಕಷ್ಟು ಹೆಸರನ್ನು ಮಾಡುತ್ತಿರುತ್ತಾರೆ. ಆಗ ನಮ್ಮವರು ಕೂಡ ಆಕೆಯನ್ನು ಕರೆಯುತ್ತಾರೆ. 1976ರಲ್ಲಿ ವಿಷ್ಣುವರ್ಧನ್ ನಾಯಕತ್ವದ ಬಂಗಾರದ ಗುಡಿ ಸಿನಿಮಾದ ನಾಯಕಿಯಾಗಿ ಕನ್ನಡಕ್ಕೆ ಬರುತ್ತಾರೆ. ಅದಕ್ಕಿಂತ ಮುನ್ನ ರಹಸ್ಯ ರಾತ್ರಿ ಅನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಆದರೆ, ಆ ಸಿನಿಮಾ ಅರ್ಧಕ್ಕೆ ನಿಂತು ಹೋಗಿರುತ್ತೆ. ಈ ಸಿನಿಮಾ ಬಂದ್ಮೇಲೆ ಕನ್ನಡದ ಎಲ್ಲಾ ನಾಯಕರೊಂದಿಗೂ ಅಭಿನಯಿಸುತ್ತಾರೆ." ಎನ್ನುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
1978 ಪದ್ಮಪ್ರಿಯಾ ಅವರ ಪಾಲಿಗೆ ಸುವರ್ಣ ಯುಗವಾಗಿತ್ತು. ಡಾ.ರಾಜ್‌ಕುಮಾರ್ ನಟಿಸಿದ ಕೊನೆಯ ಬಾಂಡ್ ಸಿನಿಮಾ 'ಆಪರೇಷನ್ ಡೈಮಂಡ್ ರಾಕೆಟ್'ಗೆ ಇವರೇ ನಾಯಕಿಯಾಗಿದ್ದರು. ಅದೇ ವರ್ಷ ತೆರೆಕಂಡು ಇತಿಹಾಸ ಸೃಷ್ಟಿಸಿದ 'ಶಂಕರ್ ಗುರು' ಸಿನಿಮಾಗೂ ಇವರೇ ನಾಯಕಿ. ಹಾಗೇ 'ತಾಯಿಗೆ ತಕ್ಕ ಮಗ' ಸಿನಿಮಾದಲ್ಲೂ ನಟಿಸಿದ್ದರು. ಅಣ್ಣಾವ್ರ ಜೊತೆ ನಟಿಸಿದ ಸಿನಿಮಾಗಳು ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ್ದವು.
ಹಾಗೇ ವಿಷ್ಣುದಾದ ಜೊತೆನೂ 'ಅಸಾಧ್ಯ ಅಳಿಯ', 'ಊರಿಗೆ ಉಪಕಾರಿ', 'ನನ್ನ ರೋಷ ನೂರು ವರುಷ', ಹೀಗೆ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಾಗೇ ಅನಂತ್‌ನಾಗ್, ಲೋಕೇಶ್, ಶ್ರೀನಾಥ್, ಅಶೋಕ್ ಅಂತಹ ಅಂದಿನ ಸ್ಟಾರ್ ನಟರೊಂದಿಗೂ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಹೀಗೆ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇಲ್ಲಿಂದ ಇವರ ಬದುಕು ಬೇರೆಯದ್ದೇ ದಾರಿ ಹಿಡಿಯುತ್ತೆ.
"ಸುಮಾರು 10 ವರ್ಷ ದಕ್ಷಿಣ ಭಾರತದ ಎಲ್ಲಾ ನಾಯಕರ ಜೊತೆಯಲ್ಲಿ ಎಲ್ಲಾ ಭಾಷೆಗಳಲ್ಲಿ ಮಿಂಚಿದ ಪದ್ಮ ಪ್ರಿಯಾ ಅವರಿಗೆ ನಿಜ ಜೀವನದಲ್ಲಿ ಮಾಂಗಲ್ಯ ಯೋಗ ಕೂಡಿ ಬರುತ್ತೆ. ಶ್ರೀನಿವಾಸನ್ ಅನ್ನುವವರನ್ನು ಅವರು ವಿವಾಹವಾಗುತ್ತಾರೆ. ಅಮೆರಿಕದಲ್ಲಿ ನೆಲೆಸುವುದಕ್ಕೆ ಅಂತ ಹೋಗುತ್ತಾರೆ. ಆದರೆ, ಆ ಮದುವೆ ಹೆಚ್ಚು ಕಾಲ ಬಾಳುವುದಿಲ್ಲ. ಕೆಲವೇ ದಿನಗಳಲ್ಲಿ ಅವರು ಡಿವೋರ್ಸ್‌ಗೆ ಅರ್ಜಿಯನ್ನು ಸಲ್ಲಿಸುತ್ತಾರೆ. ಈ ಕಾನೂನು ಪ್ರಕ್ರಿಯೆ ಸುಮಾರು ನಾಲ್ಕು ವರ್ಷಗಳ ಕಾಲ ಎಳೆದಾಡುತ್ತೆ. ಕೊನೆಗೂ ಅದರಿಂದ ಅವರಿಗೆ ಬಿಡುಗಡೆ ಸಿಗುತ್ತೆ. ಅದಾದ ಮೇಲೆ ಅವರ ಕುಟುಂಬದವರ ಜೊತೆ ಚೆನ್ನೈನಲ್ಲಿ 12 ವರ್ಷಗಳ ಕಾಲ ಇರುತ್ತಾರೆ" ಎನ್ನುತ್ತಾರೆ ಹರಿಹರಪುರ ಮಂಜುನಾಥ್.
ಶ್ರೀನಿವಾಸನ್ ಜೊತೆಗಿನ ವೈವಾಹಿಕ ಜೀವನ ಹೆಚ್ಚು ದಿನ ಉಳಿಯಲಿಲ್ಲ. ತಾಯ್ನಾಡಿಗೆ ಮರಳಿದ ಬಳಿಕ ಪೋಷಕರ ಜೊತೆಯಲ್ಲಿ ಪದ್ಮಪ್ರಿಯಾ ಇರುತ್ತಾರೆ. ಸ್ವಲ್ಪ ದಪ್ಪಾಗಿದ್ದ ಪದ್ಮಪ್ರಿಯಾ ಮತ್ತೆ ನಟ ಕಡೆಗೆ ಮುಖ ಮಾಡುವುದಕ್ಕೆ ಬಯಸುತ್ತಾರೆ. ಯಾವುದೇ ಪಾತ್ರವಿದ್ದರೂ ಸರಿ ಅವಕಾಶ ಕೊಡಿ ಅಂತ ಹೇಳಿಕೊಳ್ಳುತ್ತಾರೆ. ತಾಯಿ ಪಾತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುತ್ತಾರೆ. ಈ ಸಂಬಂಧ 1990ರಲ್ಲಿ ಪತ್ರಿಕಾ ಗೋಷ್ಠಿ ಕರೆದು ನಾನು ಭಾರತಕ್ಕೆ ಬಂದಿದ್ದೇನೆ.
ನನಗೆ ಯಾವುದೇ ಪಾತ್ರವಾದರೂ ಸರಿ, ನನಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಾರೆ. ಆಗ ಸಿಕ್ಕಿದ್ದು ಒಂದೇ ಸಿನಿಮಾ ನಂಜುಂಡೇಶ್ವರ ಮಹಿಮೆ. ಆದರೆ, ಅದು ಗೆಲ್ಲಲಿಲ್ಲ. ಕೊನೆಯ ದಿನಗಳಲ್ಲಿ ವೈವಾಹಿಕ ಜೀವನದ ನೋವಿನಿಂದಲೇ ಅನಾರೋಗ್ಯಕ್ಕೀಡಾಗುತ್ತಾರೆ. 1997, ನವೆಂಬರ್ 17ರಂದು ಹೃದಯ ಸಂಬಂಧಿ ಹಾಗೂ ಕಿಡ್ನಿ ಸಮಸ್ಯೆಯಿಂದ ಕೊನೆಯುಸಿರೆಳೆಯುತ್ತಾರೆ.


Click it and Unblock the Notifications











