ರಶ್ಮಿಕಾ, ಕೀರ್ತಿ ಸುರೇಶ್, ಶ್ರೀಲೀಲಾ, ಸಮಂತಾ; 2024ರಲ್ಲಿ ಫುಲ್ ಬ್ಯುಸಿ ಇರೋ ನಟಿಯರ ಲಿಸ್ಟ್!
ದಕ್ಷಿಣ ಭಾರತದ ನಟಿಯರು ಕೇವಲ ತೆಲುಗು, ತಮಿಳಿ ಭಾಷೆಯಷ್ಟೇ ಅಲ್ಲ ಬಾಲಿವುಡ್‌ಗೂ ಲಗ್ಗೆ ಇಟ್ಟಿದ್ದಾರೆ. ಇಲ್ಲಿನ ಸ್ಟಾರ್ ನಟಿಯರಿಗೆ 2023ರಲ್ಲಿ ಬಾಲಿವುಡ್ ಮಂದಿ ಮಣೆ ಹಾಕಿದ್ದರು. ಕೆಲವರು ಸಿಕ್ಕ ಈ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಇವರಲ್ಲಿ ರಶ್ಮಿಕಾ ಮಂದಣ್ಣ, ಸಮಂತಾ ಸೇರಿದಂತೆ ಹಲವು ನಟಿಯರು ಇದ್ದಾರೆ.
2023 ದಕ್ಷಿಣ ಭಾರತದ ನಟಿಯರಿಗೆ ಯಶಸ್ವಿ ವರ್ಷ. ಸೌತ್‌ನ ಬಹುತೇಕ ಸ್ಟಾರ್ ನಟಿಯರೆಲ್ಲರಿಗೂ ದೊಡ್ಡ ಸಕ್ಸಸ್ ಸಿಕ್ಕಿದೆ. ಅವರಲ್ಲಿ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್, ಶ್ರೀಲೀಲಾ, ಶ್ರುತಿ ಹಾಸನ್, ಶ್ರೀಲೀಲಾ, ಸಮಂತಾ ಅಂತ ಹೆಸರುಗಳು ಕೂಡ ಇವೆ. ಇನ್ನು 2024ರಲ್ಲೂ ಇವರ ಬಳಿ ದೊಡ್ಡ ಪ್ರಾಜೆಕ್ಟ್‌ಗಳಿವೆ. ಹಾಗಿದ್ದರೆ, ಯಾರ ಬಳಿ ಎಷ್ಟೆಷ್ಟು ಪ್ರಾಜೆಕ್ಟ್‌ಗಳಿವೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಶ್ಮಿಕಾ ಮಂದಣ್ಣ
2023ರಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. ದಳಪತಿ ವಿಜಯ್ ಜೊತೆ ನಟಿಸಿದ 'ವಾರಸುಡು' ಹಾಗೂ ರಣ್‌ಬೀರ್ ಕಪೂರ್ ಜೊತೆ ನಟಿಸಿದ 'ಅನಿಮಲ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿವೆ. ಹಾಗೇ 2024ರಲ್ಲಿ ಅವರ ವೃತ್ತಿ ಬದುಕಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪುಷ್ಪ 2' ರಿಲೀಸ್ ಆಗಲಿದೆ. ಹಾಗೇ 'ರೈಂಬೋ', 'ದಿ ಗರ್ಲ್‌ಫ್ರೆಂಡ್' ಸಿನಿಮಾಗಳು ಕೂಡ ಇವೆ.
ಕೀರ್ತಿ ಸುರೇಶ್
ದಕ್ಷಿಣ ಭಾರತದ ಮತ್ತೊಬ್ಬ ಬ್ಯೂಟಿ ಕೀರ್ತಿ ಸುರೇಶ್ ಕೂಡ 2024ರಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಕೀರ್ತಿ ನಟಿಸಿದ ಕೊನೆಯ ಸಿನಿಮಾ 'ದಸರಾ' 2023ರಲ್ಲಿ ರಿಲೀಸ್ ಆಗಿತ್ತು. ಈ ವರ್ಷ 'ರಘು ತಾತ', 'ರಿವಾಲ್ವರ್ ರೀಟಾ', 'ಕನ್ನಿವೆಡಿ' ಸಿನಿಮಾಗಳು ರಿಲೀಸ್ ಆಗಲಿವೆ.
ಶ್ರೀಲೀಲಾ
ಕನ್ನಡದ ನಟಿ ಶ್ರೀಲೀಲಾ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. 2024, ಜನವರಿಯಲ್ಲಿ ಮಹೇಶ್ ಬಾಬು ಜೊತೆ ನಟಿಸಿರೋ 'ಗುಂಟೂರ್ ಖಾರಂ' ಸಿನಿಮಾ ರಿಲೀಸ್ ಆಗಲಿದೆ. ಸಂಕ್ರಾಂತಿಗೆ ರಿಲೀಸ್ ಆಗುತ್ತಿರುವ ಈ ಸಿನಿಮಾ ಗೆದ್ದರೆ, ಶ್ರೀಲೀಲಾ ಟಾಲಿವುಡ್‌ನಲ್ಲೇ ಗಟ್ಟಿಯಾಗಿ ನೆಲೆಯೂರುವ ಎಲ್ಲಾ ಸಾಧ್ಯತೆಗಳೂ ಇವೆ. ಇದರ ಜೊತೆಗೆ ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್'ನಲ್ಲೂ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಹಲವು ತೆಲುಗು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ.
ಶ್ರುತಿ ಹಾಸನ್
2023, ಶ್ರುತಿ ಹಾಸನ್ ಪಾಲಿಗೆ ಅದೃಷ್ಟದ ವರ್ಷ. ಈಕೆ ನಟಿಸಿದ 'ವೀರನರಸಿಂಹ ರೆಡ್ಡಿ', 'ವಾಲ್ತೇರು ವೀರಯ್ಯ' ಹಾಗೂ 'ಸಲಾರ್' ಸಿನಿಮಾಗಳಿಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗೇ 2024ರಲ್ಲಿ 'ಡಕಾಯಿತ್', ಹಾಲಿವುಡ್ ಸಿನಿಮಾ 'ದಿ ಐ' ಕೈಯಲ್ಲಿವೆ. ಹಾಗೇ 'ಸಲಾರ್ 2' ಸಿನಿಮಾ ಕೂಡ ಸೆಟ್ಟೇರುವ ಸಾಧ್ಯತೆಯಿದೆ.
ಸಮಂತಾ ರುಥ್ ಪ್ರಭು
2023, ಸಮಂತಾಗೆ ಅಷ್ಟೊಂದು ಆಶಾದಾಯಕವಾಗಿರಲಿಲ್ಲ. 'ಶಾಕುಂತಲಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ವಿಜಯ್ ದೇವರಕೊಂಡ ಜೊತೆ ನಟಿಸಿದ 'ಖುಷಿ' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಅನಾರೋಗ್ಯ ಹಿನ್ನೆಲೆ ಬ್ರೇಕ್ ತೆಗೆದುಕೊಂಡಿರೋ ಸಮಂತಾ, 2024ರಲ್ಲಿ 'ಸಿಟಾಡೆಲ್' ಓಟಿಟಿ ಸೀರಿಸ್ ಮೂಲಕ ಪ್ರತ್ಯಕ್ಷ ಆಗಲಿದ್ದಾರೆ.
ಮೃಣಾಲ್ ಠಾಕೂರ್, ತ್ರಿಶಾ
'ಸೀತಾರಾಮಂ' ನಟಿ ಮೃಣಾಲ್ ಠಾಕೂರ್ 2024ರಲ್ಲಿ ಫುಲ್ ಬ್ಯುಸಿ. ತಮಿಳಿನ ಎರಡು ಪ್ರಾಜೆಕ್ಟ್‌ಗಳಿಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೆ ಲಾರೆನ್ಸ್ ಜೊತೆ ತೆಲುಗು, ತಮಿಳು ಪ್ರಾಜೆಕ್ಟ್‌ಗೂ ಜೈ ಎಂದಿದ್ದಾರೆ. ಇನ್ನು ತ್ರಿಶಾ ಕೂಡ ಕಳೆದ ವರ್ಷ ಎರಡು ಮೆಗಾ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಲಿಯೋ' ಹಾಗೂ 'ಪಿಎಸ್2' ಗೆದ್ದ ಬಳಿಕ ವಸಿಷ್ಠ ನಟಿಸುತ್ತಿರುವ ಸಿನಿಮಾ ಹಾಗೂ ಮಣಿರತ್ನಂ ಹಾಗೂ ಕಮಲ್ ಹಾಸನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಸಾಯಿ ಪಲ್ಲವಿ
ಕಳೆದ ವರ್ಷ ಸಾಯಿ ಪಲ್ಲವಿಗೆ ಹೆಜ್ಜೆ ಸಿನಿಮಾಗಳಲ್ಲಿ ನಟಿಸಲಿಲ್ಲ. ಆದರೆ, ಈ ವರ್ಷ ಸಾಯಿ ಪಲ್ಲವಿ ಕೈಯಲ್ಲಿ ಈಗಾಗಲೇ ಎರಡು ಸಿನಿಮಾಗಳಿವೆ. ನಾಗ ಚೈತನ್ಯ ಜೊತೆ ನಟಿಸುತ್ತಿರುವ 'ತಾಂಡೇಲ್' ಹಾಗೂ ಬಾಲಿವುಡ್ ಸಿನಿಮಾ 'ರಾಮಾಯಣ'ದಲ್ಲಿ ನಟಿಸುತ್ತಿದ್ದಾರೆ. 'ರಾಮಾಯಣ' ಸಾಯಿ ಪಲ್ಲವಿ ವೃತ್ತಿ ಬದುಕಿನ ದುಬಾರಿ ಸಿನಿಮಾ. ಮಾರ್ಚ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











