"ನನಗೆ ಸಿಗದೆ ಇದ್ದಿದ್ದು ಯಾರಿಗೂ ಸಿಗಬಾರದು ಅಂತ ನಮ್ಮಪ್ಪನನ್ನು ವಿಷ ಕೊಟ್ಟು ಸಾಯಿಸಿದ್ರು"- ಆದಿ ಲೋಕೇಶ್
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಮೈಸೂರು ಲೋಕೇಶ್. ಖಳನಾಯಕನಾಗಿ, ಹಾಸ್ಯ ನಟನಾಗಿ ಹಲವು ವರ್ಷಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದರು. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ಮೈಸೂರು ಲೋಕೇಶ್ ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದಾರೆ. ಇವರ ಇಬ್ಬರು ಮಕ್ಕಳು ಆದಿ ಲೋಕೇಶ್ ಹಾಗೂ ಪವಿತ್ರಾ ಲೋಕೇಶ್ ಚಿತ್ರರಂಗದ ಜನಪ್ರಿಯ ನಟರು.
ಮೈಸೂರು ಲೋಕೇಶ್ ವೃತ್ತಿ ಬದುಕು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಇವರ ಬಾಳಿನಲ್ಲಿ ಎರಡನೇ ಬಾರಿ ಪ್ರೀತಿ ಹುಟ್ಟಿತ್ತು. ಕನ್ನಡ ಚಿತ್ರರಂಗದ ಡಬ್ಬಿಂಗ್ ಆರ್ಟಿಸ್ಟ್ ಹಾಗೂ ಕಲಾವಿದೆಯಾಗಿದ್ದ ಸರ್ವಮಂಗಳಾ ಅವರ ಪ್ರೀತಿಯಲ್ಲಿ ಬಿದ್ದಿದ್ದರು. ಅದಾಗಲೇ ಅವರು ಕನ್ನಡದ ಮತ್ತೊಬ್ಬ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರನ್ನು ವಿವಾಹವಾಗಿದ್ದರು.

ಎರಡೂ ಮನೆಯವರಿಗೆ ವಿಷಯ ಗೊತ್ತಾದಾಗ ಮೈಸೂರು ಲೋಕೇಶ್ ಹಾಗೂ ಸರ್ವಮಂಗಳ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಇವರಿಬ್ಬರ ದುರಂತ ಅಂತ್ಯದ ಬಗ್ಗೆ, ಸಿಬಿಐ ತನಿಖೆ ಬಗ್ಗೆ, ಅದರಲ್ಲಿ ಸರ್ವಮಂಗಳ ಕೊಟ್ಟ ಹೇಳಿಕೆ ಬಗ್ಗೆ ಮೈಸೂರು ಲೋಕೇಶ್ ಪುತ್ರ ಹಾಗೂ ನಟ ಆದಿ ಲೋಕೇಶ್, ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿಸ್ತಾರವಾಗಿ ಹೇಳಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಸರ್ವಮಂಗಳ ಮೇಲೆ ಪ್ರೀತಿ ಹುಟ್ಟಿದ್ದೇಗೆ?
"ಏನಾಗುತ್ತಿತ್ತು ಆಗಿನ ಕಾಲದಲ್ಲಿ ಅಂದರೆ, ಬೆಳಗ್ಗೆ ಎಲ್ಲಾ ಶೂಟಿಂಗ್ ಮಾಡೋರು. ಸಂಜೆ ಹೊತ್ತಿಗೆ ಅವರು ಡ್ರಾಮ ಮಾಡೋರು. ಇದು ಅವರಿಗೆ ಬೇರೊಂದು ಆದಾಯದ ಮೂಲ ಆಗಿರುತ್ತಿತ್ತು. ಈ ಸಾಯಂಕಾಲದ ಚಟುವಟಿಕೆಗಳಲ್ಲಿ ಇವರು ಪರಿಚಯ ಆಗುತ್ತಾರೆ. ಅಲ್ಲಿ ಇಬ್ಬರು ಪ್ರೀತಿ ಮಾಡುತ್ತಾರೆ. ಅದ್ಯಾವಾಗ ಈ ಕಡೆ ನಮ್ಮ ಅಮ್ಮನಿಗೆ ಗೊತ್ತಾಯ್ತು. ಆ ಕಡೆ ಅವರಿಗೆ ಗೊತ್ತಾಯ್ತು. ನಮ್ಮ ಅಮ್ಮ ಬೌಂಡರಿ ಹಾಕಿದ್ದರು" ಎಂದು ಆದಿ ಲೋಕೇಶ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

"ಒಂದು ಕರೆ ಬರುತ್ತೆ"
"ಒಂದು ದಿನ ನಮ್ಮ ತಂದೆಗೆ ಫೋನ್ ಬರುತ್ತೆ ಹೊರಟು ಬಿಡ್ತಾರೆ. ನಿಮ್ಮ ಮನೆಯಲ್ಲೂ ಗೊತ್ತಾಗಿದೆ. ನಮ್ಮ ಮನೆಯಲ್ಲೂ ಗೊತ್ತಾಗಿದೆ. ದೊಡ್ಡ ಕಿತ್ತಾಟವೇ ನಡೆದಿದೆ. ಇನ್ನು ತಪ್ಪಿಸಿಕೊಂಡು ಹೋಗುವುದಕ್ಕೆ ಆಗುವುದಿಲ್ಲ. ನಿನ್ನ ಜೀವನ ನಿನಗೆ. ನನ್ನ ಜೀವನ ನನಗೆ. ಇಲ್ಲ ತರ ಜೀವನ ಬೇಡ ಸತ್ತೋಗಿಬಿಡೋಣ ಅಂತ ಅವರು ಪ್ಲಾನ್ ಮಾಡುತ್ತಾರೆ. ನಮ್ಮ ತಂದೆ ಪ್ಲಾನ್ ಮಾಡಲ್ಲ. ಮಗಳನ್ನು ಅವರು ತುಂಬಾನೇ ಪ್ರೀತಿ ಮಾಡುತ್ತಿದ್ದರು." ಎಂದು ಆದಿ ಲೋಕೇಶ್ ಹೇಳಿದ್ದಾರೆ.
"ನನ್ನ ಬದುಕಿಸು ಅಂತಾರೆ"
"ಫೋರ್ಸ್‌ಫುಲ್ ಆಗಿ ಡಿಸೈಡ್ ಆಗುತ್ತೆ ಇಬ್ಬರೂ ವಿಷ ಕುಡಿಯೋಣ ಅಂತ. ನಮ್ಮ ತಂದೆ ಕುಡಿಯುತ್ತಾರೆ. ಆದರೆ, ಅವರು ಕುಡಿಯಲ್ಲ ಎದೆ ಮೇಲೆ ಸುರಿದು ಕೊಳ್ಳುತ್ತಾರೆ. ಒಂದು ಘಳಿಗೆಯಲ್ಲಿ ನಮ್ಮ ತಂದೆ ಕಾಲು ಹಿಡಿದು ಕೊಳ್ಳುತ್ತಾರೆ. ಕೇಳಿಕೊಳ್ಳುತ್ತಾರೆ, ನನ್ನ ಬದುಕಿಸು ಅಂತಾರೆ. ನನಗೊಬ್ಬ ಮಗಳಿದ್ದಾಳೆ. ಅವಳನ್ನು ಮದುವೆ ಮಾಡಬೇಕು ಅಂತಾರೆ. ನನಗೆ ಸಿಗುತ್ತಿಲ್ಲ. ತೆಗೆಯುವುದಕ್ಕೆ ಆಗುತ್ತಿಲ್ಲ ಎನ್ನುತ್ತಾರೆ." ಎಂದಿದ್ದಾರೆ.
"ಬದುಕುವ ಚಾನ್ಸ್ ಇರಲಿಲ್ಲ"
"ಒಂದೂವರೆ ದಿನ ಆದರೂ, ಹೋಟೆಲ್ ಬಾಗಿಲು ತೆಗೆಯದೇ ಇದ್ದಿದ್ದರಿಂದ ಹೋಟೆಲ್‌ನಲ್ಲಿ ಕೆಲಸ ಮಾಡುವವನು ಬಂದು ನೋಡಿದಾಗ, ನಮ್ಮ ತಂದೆ ಒದ್ದಾಡುತ್ತಿರುತ್ತಾರೆ. ಆಗ ಬಾಗಿಲು ಒಡೆದು ತೆಗೆದು ಹೊಸಪೇಟೆ ಆಸ್ಪತ್ರೆಗೆ ಸೇರಿಸುತ್ತಾರೆ. ಅಷ್ಟರಲ್ಲಿ ಆಗಲೇ ಅವರ ವಿಷ ತೆಗೆದುಕೊಂಡಾಗ ಆ ಭಾಗ ಪೂರ್ತಿ ಸುಟ್ಟು ಹೋಗಿತ್ತು. ಅವರು ಬದುಕುವ ಚಾನ್ಸ್ ಇರಲಿಲ್ಲ. ಬದುಕಿದ್ದರೂ, ಅವರು ಮಾತಾಡುವುದಕ್ಕೆ ಆಗುತ್ತಿರಲಿಲ್ಲ." ಎಂದು ಆದಿ ಲೋಕೇಶ್ ಹೇಳಿಕೊಂಡಿದ್ದಾರೆ.
"ನನಗೆ ಸಿಗದಿದ್ದು ಇನ್ಯಾರಿಗೂ ಸಿಗಬಾರದು"
"ಇದೆಲ್ಲ ನಮಗೆ ಹೇಗೆ ಗೊತ್ತಾಯ್ತು ಅಂದರೆ, ಆ ವೇಳೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿರುತ್ತಾರೆ. ಅವರು ಈ ಕೇಸ್ ಅನ್ನು ಸಿಬಿಐಗೆ ಕೊಡುತ್ತಾರೆ. ಅಲ್ಲಿ ರೇವಣ ಸಿದ್ಧಯ್ಯ ಅಂತ ಕಮಿಷನರ್ ಇರುತ್ತಾರೆ. ಅವರು ತನಿಖೆ ಮಾಡಿದಾಗ, ರೆಕಾರ್ಡ್ ಮಾಡುತ್ತಾರೆ. ಅದನ್ನು ನಮ್ಮ ತಾಯಿಗೆ ಮಾತ್ರ ತೋರಿಸಿದ್ದಾರೆ. ಅದರಲ್ಲಿ ನಾನು ಹೇಳಿದ್ದಷ್ಟನ್ನು ಅವರೇ ಹೇಳಿದ್ದಾರೆ. ನನಗೆ ಸಿಗದಿದ್ದು ಇನ್ಯಾರಿಗೂ ಸಿಗಬಾರದು ಅಂತ ಹೀಗೆ ಮಾಡಿದೆ ಅಂತ ಹೇಳಿದ್ದಾರೆ." ಎಂದು ಮೈಸೂರು ಲೋಕೇಶ್ ಹಾಗೂ ಸರ್ವಮಂಗಳ ಬಗ್ಗೆ ಸಿಬಿಐ ತನಿಖೆಯಲ್ಲಿ ಹೊರಬಿದ್ದ ಸತ್ಯವನ್ನು ಮತ್ತೆ ಆದಿ ಲೋಕೇಶ್, ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications











