"2 ತಿಂಗಳು ಇದ್ದಿದ್ರೆ ನಮ್ಮ ಅಪ್ಪನ ಕೊಂದವರಿಗೆ ಮರಣ ದಂಡನೆ ಶಿಕ್ಷೆ ಆಗ್ತಿತ್ತು"; ಆದಿ ಲೋಕೇಶ್
ಕನ್ನಡ ಚಿತ್ರರಂಗ ಎಷ್ಟು ಒಳ್ಳೆಯ ಸಿನಿಮಾಗಳಿಗೆ ಹೆಸರು ವಾಸಿಯಾಗಿಯೋ ಅಷ್ಟೇ ಕೆಲವು ಬೇಡದ ವಿಷಯಗಳಿಂದಲೂ ಸುದ್ದಿಯಲ್ಲಿತ್ತು. ಅದರಲ್ಲೂ ಕನ್ನಡ ಚಿತ್ರರಂಗದ ವಿವಾದಾತ್ಮಕ ಲವ್ ಸ್ಟೋರಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಅದರಲ್ಲಿ ಒಂದು ಮೈಸೂರು ಲೋಕೇಶ್ ಹಾಗೂ ಸರ್ವಮಂಗಳ ಲವ್ ಸ್ಟೋರಿ. ಇದು ದುರಂತದಲ್ಲಿ ಅಂತ್ಯ ಕಂಡಿದ್ದು ಇಂದಿಗೂ ಅವರ ಅಭಿಮಾನಿ ಹಾಗೂ ಕುಟುಂಬವನ್ನು ಕಾಡುತ್ತಲೇ ಇದೆ.
ಮೈಸೂರು ಲೋಕೇಶ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ಬಹಗಾರ. ಮೈಸೂರು ಲೋಕೇಶ್ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ, ಹಾಸ್ಯ ನಟನಾಗಿ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದರು. ಒಂದು ಕಾಲದಲ್ಲಿ ಮೈಸೂರು ಲೋಕೇಶ್ ಇದ್ದಾರೆ ಅಂದ್ರೇನೆ ಸಿನಿಮಾ ನೋಡುವುದಕ್ಕೆ ಹೋಗುವ ಕಾಲವಿತ್ತು. ಇವರ ಡೇಟ್‌ಗಳು ಸಿಗದಷ್ಟು ಬ್ಯುಸಿಯಾಗಿದ್ದರು.

ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಮೈಸೂರು ಲೋಕೇಶ್‌ಗೆ ಮತ್ತೊಮ್ಮೆ ಪ್ರೀತಿ ಹುಟ್ಟಿತ್ತು. ಕನ್ನಡ ಚಿತ್ರರಂಗದ ಡಬ್ಬಿಂಗ್ ಆರ್ಟಿಸ್ಟ್ ಹಾಗೂ ನಟಿ ಸರ್ವಮಂಗಳ ಪ್ರೀತಿಯಲ್ಲಿ ಬಿದ್ದಿದ್ದರು. ಈಕೆ ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪತ್ನಿಯಾಗಿದ್ದರು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರೇ ತಮ್ಮ ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ಮೈಸೂರು ಲೋಕೇಶ್ ಪುತ್ರ ಆದಿ ಲೋಕೇಶ್ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಮೈಸೂರು ಲೋಕೇಶ್ ಹಾಗೂ ಸರ್ವಮಂಗಳ ನಡುವಿನ ಅಫೇರ್ ಆದಿ ಲೋಕೇಶ್ ತಾಯಿಗೆ ಗೊತ್ತಾಗಿತ್ತು. ಮೈಸೂರು ಲೋಕೇಶ್ ಎಲ್ಲಿಗೆ ಹೋದರೂ ಯಾರಾದರೂ ಒಬ್ಬರು ಅವರೊಂದಿಗೆ ಹೋಗುತ್ತಿದ್ದರು. ಹೀಗಾಗಿ ಇಬ್ಬರ ಭೇಟಿಗೆ ಬ್ರೇಕ್ ಬಿದ್ದಿತ್ತು. ಇದು ಸರ್ವಮಂಗಳ ಅವರ ಕೋಪಕ್ಕೆ ಕಾರಣವಾಗಿತ್ತು. ತನಗೆ ಸಿಗದೇ ಇದ್ದಿದ್ದು ಯಾರಿಗೂ ಸಿಗಬಾರದು ಅಂತ ನಿರ್ಧರಿಸಿದ ಅಪ್ಪನ ಸಾವಿಗೆ ಕಾರಣವಾದರು ಎಂದು ಈ ಹಿಂದೆ ನೀಡಿದ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಈಗ ಇನ್ನು ಇನ್ನೆರಡು ತಿಂಗಳು ಇದ್ದಿದ್ದರೆ ಸರ್ವಮಂಗಳ ಅವರಿಗೆ ಮರಣದಂಡನೆ ಆಗುತ್ತಿತ್ತು ಎಂದಿದ್ದಾರೆ.
ಮೈಸೂರು ಲೋಕೇಶ್ ಹಾಗೂ ಸರ್ವಮಂಗಳ ಸಂಬಂಧ ಎರಡೂ ಕಡೆಯ ಮನೆಯಲ್ಲಿ ಗೊತ್ತಾಗುತ್ತೆ. ಎರಡೂ ಕಡೆಗೂ ಕಿತ್ತಾಟ ಶುರುವಾಗುತ್ತೆ. ಆಗ ಇವರು ನಮ್ಮನ್ನು ಪ್ರೀತಿ ಮಾಡುವುದಕ್ಕೆ ಬಿಡುವುದಿಲ್ಲ. ವಿಷ ಕುಡಿಯೋಣ ಸರ್ವಮಂಗಳ ಅಂತ ಸಲಹೆ ನೀಡುತ್ತಾರೆ. ಒತ್ತಾಯ ಪೂರ್ವಕವಾಗಿ ಮೈಸೂರು ಲೋಕೇಶ್‌ಗೆ ವಿಷ ಕುಡಿಸುತ್ತಾರೆ. ಆದರೆ, ಸರ್ವಮಂಗಳ ವಿಷ ಕುಡಿಯುವುದಿಲ್ಲ. ತನ್ನ ಎದೆಯ ಮೇಲೆ ಚೆಲ್ಲಿಕೊಳ್ಳುತ್ತಾರೆ. ಅಲ್ಲೆಲ್ಲ ಸುಟ್ಟು ಹೋಗುತ್ತೆ ಎಂದು ಆದಿ ಲೋಕೇಶ್ ಬಿಗ್ ಬಾಸ್ ಮನೆಯೊಳಗೆ ಇರುವಾಗಲೂ ಹೇಳಿದ್ದರು.

ಮೈಸೂರು ಲೋಕೇಶ್ ಸಾವು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಿದ್ದು ಸುಳ್ಳಲ್ಲ. ಈ ಪ್ರಕರಣ ದೊಡ್ಡ ವಿವಾದವನ್ನೇ ಹುಟ್ಟಾಕಿತ್ತು. ಈ ಪ್ರಕರಣವನ್ನು ಭೇದಿಸಲು ಸಿಬಿಐ ಎಂಟ್ರಿ ಕೊಟ್ಟಿತ್ತು. ಸರ್ವಮಂಗಳ ಅವರೇ ಇದೆಲ್ಲಕ್ಕೂ ಕಾರಣ ಅಂತನೂ ವರದಿ ನೀಡಿತ್ತು. ಡೈಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲೂ ಆದಿ ಲೋಕೇಶ್ ಇದೇ ಮಾತು ಹೇಳಿದ್ದಾರೆ. ತಮ್ಮ ತಂದೆಯನ್ನು ಹತ್ಯೆ ಮಾಡಲಾಗಿದೆ. ಆ ಕೃತ್ಯ ಎಸಗಿದವರು ಇನ್ನೆರಡು ತಿಂಗಳು ಬದುಕಿದ್ದರೆ, ಕೋರ್ಟ್ ಅವರಿಗೆ ಮರಣ ದಂಡನೆಯನ್ನು ವಿಧಿಸುತ್ತಿತ್ತು ಎಂದಿದ್ದಾರೆ.
"ಜನರು ಮನಸ್ಸಿಗೆ ಬಂದಂತೆ ಮಾತಾಡಿದರು. ಕಾನೂನು, ಸಿಬಿಐ ವರದಿಯ ಪ್ರಕಾರ ಅಪ್ಪನನ್ನು ಮರ್ಡರ್ ಮಾಡಲಾಗಿದೆ. ಅದಂತೂ ಸತ್ಯ. ಯಾಕಂದ್ರೆ ಹೇಳಿಕೆಗಳನ್ನು ರೆಕಾರ್ಡ್ ಮಾಡಲಾಗಿದೆ. ಅದೊಂದು ಸಾಕ್ಷಿಯಂತೂ ಇದೆ. ಒಂದು ವೇಳೆ ಈ ಕೃತ್ಯ ಮಾಡಿದವರು ಇದ್ದಿದ್ದರೆ, ಅವರಿಗೆ ಮರಣ ದಂಡನೆ ಆಗುತ್ತಿತ್ತು. ಇನ್ನೊಂದು ತಿಂಗಳು, ಎರಡು ತಿಂಗಳು ಬದುಕಿದ್ದರೆ ಮುಂದಿನ ವಿಚಾರಣೆಯಲ್ಲಿ ಮರಣ ದಂಡನೆ ಶಿಕ್ಷೆ ಆಗಿಬಿಡುತ್ತಿತ್ತು." ಎಂದು ಆದಿ ಲೋಕೇಶ್ ಹೇಳಿದ್ದಾರೆ.
ಅಂದ್ಹಾಗೆ ಮೈಸೂರು ಲೋಕೇಶ್ ನಟಿಸಿದ ಕೊನೆಯ ಸಿನಿಮಾ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದ 'ತರ್ಲೆ ನನ್ ಮಗ'. "ಉಪೇಂದ್ರ ಅವರು ನಿರ್ದೇಶಿಸಿದ ಕೊನೆಯ ಸಿನಿಮಾ ತರ್ಲೆ ನನ್ ಮಗ ಕೊನೆಯ ಸಿನಿಮಾ. ಡಬ್ಬಿಂಗ್ ಎಲ್ಲಾ ಮುಗಿಸಿಕೊಟ್ಟಿದ್ದರು. ನನ್ನ ವೃತ್ತಿ ಬದುಕಿನಲ್ಲಿ ಉಪೇಂದ್ರ ಅವರದ್ದು ಮೊದಲ ಸಿನಿಮಾ. ನಮ್ಮ ಅಪ್ಪನ ಕೊನೆಯ ಸಿನಿಮಾಗೆ ಕೊನೆಯದಾಗಿ ಆಕ್ಷನ್ ಕಟ್ ಹೇಳಿದ್ದು ಅವರೇ." ಎಂದು ಆದಿ ಲೋಕೇಶ್ ಹೇಳಿದ್ದಾರೆ.


Click it and Unblock the Notifications











