ಲೂಸ್ ಮಾದ ಯೋಗಿ ಹೀರೋ ಆಗಿದ್ದೇಗೆ? 'ನಂದ ಲವ್ಸ್ ನಂದಿತಾ' ಹುಡುಕೊಂಡು ಬಂದಿದ್ದೇಗೆ?
'ದುನಿಯಾ' ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನಷ್ಟೇ ತಿರುಗಿಸಿರಲಿಲ್ಲ. ಇಬ್ಬರು ನಟರ ಬದುಕನ್ನೇ ಬದಲಾಯಿಸಿತ್ತು. ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ದುನಿಯಾ ವಿಜಯ್ ಹೀರೋ ಆಗಿ ಹೊರಹೊಮ್ಮಿದ್ದರು. ಅದೇ ಸಿನಿಮಾದಲ್ಲಿ ಲೂಸ್ ಮಾದ ಅನ್ನೋ ಚಿಕ್ಕದೊಂದು ಪಾತ್ರದಲ್ಲಿ ನಟಿಸಿದ್ದ ಯೋಗಿ ಕೂಡ ಫೇಮಸ್ ಆಗಿದ್ದರು. ಇಬ್ಬರು ನಟರು ಸ್ಯಾಂಡಲ್‌ವುಡ್ ಮಂದಿಯ ಕಣ್ಣಿಗೆ ಬಿದ್ದಿದ್ದರು.
ಸೂರಿ ನಿರ್ದೇಶಿಸಿದ 'ದುನಿಯಾ' ರಿಲೀಸ್ ಬಳಿಕ ಲೂಸ್ ಮಾದ ಯೋಗಿ ಬಗ್ಗೆ ಚರ್ಚೆಯಾಗುವುದಕ್ಕೆ ಶುರುವಾಗಿತ್ತು. ಆದರೆ, ಹೀರೋ ಮಾಡಬೇಕು ಅಂತ ಯಾವ ನಿರ್ಮಾಪಕನೂ ಮುಂದೆ ಬಂದಿರಲಿಲ್ಲ. ಯಾಕಂದ್ರೆ, ಆಗಿನ್ನೂ ಚಿಕ್ಕ ಪಾತ್ರದ ಮೂಲಕ ಯೋಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ಲೂಸ್ ಮಾದ ಪಾತ್ರ ನೋಡಿ ಯೋಗಿಯನ್ನು ಹೀರೋ ಅಂತ ಯಾರೂ ಊಹಿಸಿಕೊಂಡಿರಲಿಲ್ಲ.

ಆದರೆ, ಯೋಗಿಯ ತಂದೆ ಸಿದ್ಧರಾಜು ಅವರೇ ಪುತ್ರನನ್ನು ಹೀರೋ ಮಾಡಬೇಕು ಅಂತ ಓಡಾಡುತ್ತಿದ್ದರು. ಮಗನಿಗಾಗಿ ಕಥೆಯ ಹುಡುಕಾಟದಲ್ಲಿ ಇದ್ದರು. ಇನ್ನೊಂದು ಕಡೆ ಕಥೆಗಾರ ಅಜಯ್ ಕುಮಾರ್ ಹಾಗೂ ನಿರ್ಮಾಪಕ ರಮೇಶ್ ಕಶ್ಯಪ್ ಶಿವಣ್ಣನಿಗೆ ಸಿನಿಮಾ ಮಾಡಬೇಕು ಅಂತ ಓಡಾಡುತ್ತಿದ್ದರು. ಆದರೆ, ಶಿವಣ್ಣನ ಡೇಟ್ ಒಂದು ವರ್ಷ ಸಿಕ್ಕಿರಲಿಲ್ಲ. ದುನಿಯಾ ಹಿಟ್ ಆಗಿದ್ದರಿಂದ ದುನಿಯಾ ವಿಜಯ್‌ಗೆ ಕಥೆ ಹೇಳುವುದಕ್ಕೆ ಹೊರಟಿದ್ದರು. ಅದೂ ಸಾಧ್ಯವಾಗಲಿಲ್ಲ. ಕಣ್ಣಿಗೆ ಬಿದ್ದಿದ್ದೇ ಲೂಸ್ ಮಾದ ಯೋಗಿ. ಅಷ್ಟಕ್ಕೂ ಇಷ್ಟೆಲ್ಲ ಹೇಗೆ ನಡೀತು ಅನ್ನೋದನ್ನು ಅಜಯ್ ಕುಮಾರ್ ಟೋಟಲ್ ಕನ್ನಡ ಯೂಟ್ಯೂನ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. ಹಾಗೇ ಸಿದ್ದರಾಜು 'ನಂದ ಲವ್ ನಂದಿತಾ' ಎಷ್ಟು ದುಡ್ಡು ಬಾಚಿಕೊಳ್ತು ಅನ್ನೋದನ್ನು ರಿಲೀಸ್ ವೇಳೆ ಏನಾಯ್ತು ಅಂತ ಡೈಲಿ ಮಾಧ್ಯಮದಲ್ಲಿ ವಿವರಿಸಿದ್ದಾರೆ.
ಶಿವಣ್ಣ ಹಾಗೂ ವಿಜಯ್ ಡೇಟ್ ಸಿಗದೆ ಇದ್ದಿದ್ದರಿಂದ ನಿರ್ಮಾಪಕ ರಮೇಶ್ ಕಶ್ಯಪ್ ಬೇಸರಗೊಂಡಿದ್ದರು. ಆಗ ಅಜಯ್ ಕುಮಾರ್ ಸೂಚಿಸಿದ ಹೆಸರು ಲೂಸ್ ಮಾದ ಯೋಗಿ "ಸರ್ ನೀವು ಎಸ್ ಅಂದರೆ, ಲೂಸ್ ಮಾದನನ್ನು ಇಟ್ಕೊಂಡು ಸಿನಿಮಾ ಮಾಡುತ್ತೇನೆ ಅಂದೆ. ಅವರು ಅವನನ್ನು ನೋಡಿಯೇ ಇಲ್ಲ. ಬೆಂಗಳೂರಿಗೆ ಬಂದ್ಮೇಲೆ ಸಿನಿಮಾ ನೋಡಿ ಅಂತ ಹೇಳಿದೆ. ಆಮೇಲೆ ಹೋಗಿ ಸಿನಿಮಾ ತೋರಿಸಿದೆ. ಏನ್ ಸರ್ ಇವರು ಹೀರೋನಾ ಅಂದರು. ನಾನು ಅವರನ್ನು ಇಟ್ಕೊಂಡು ಸಿನಿಮಾ ಮಾಡುವುದಕ್ಕೆ ರೆಡಿಯಿದ್ದೇನೆ. ನೀವು ರೆಡಿ ಇದ್ದೀರಾ ಅಂದೆ. ಅವರಿಗೆ ಧೈರ್ಯ ಬರಲಿಲ್ಲ. ನೋಡೋಣ ಸರ್ ಎರಡು ಮೂರು ದಿನ ಆದ್ಮೇಲೆ ಹೇಳ್ತೀನಿ ಅಂತ ಸುಮ್ಮನಾದರು." ಎಂದು ಆರಂಭದ ಘಟನೆಗಳನ್ನು ವಿವರಿಸಿದ್ದಾರೆ.

ಮೂರು ದಿನ ಆದ್ಮೇಲೆ ರಮೇಶ್ ಕಶ್ಯಪ್ ಮತ್ತೆ ಅಜಯ್ ಕುಮಾರ್ ಬಳಿ ಬಂದಿದ್ದರು. ಸಿನಿಮಾ ಮಾಡುವುದಕ್ಕೆ ಧೈರ್ಯ ಮಾಡಿದ್ದರು. "ಮೂರು ದಿನ ಆದ್ಮೇಲೆ ನಮ್ಮ ಹತ್ತಿರ ಬಂದರು. ನಿಮ್ಮ ಮೇಲೆ ನಂಬಿಕೆ ಇದೆ. ಆದರೆ, ಸಿನಿಮಾ ಓಡುತ್ತಾ? ಇಲ್ಲ ಲಾಸ್ ಆಗುತ್ತಾ? ಗೊತ್ತಾಗುತ್ತಿಲ್ಲ ಅಂದರು. ತಲೆ ಕೆಡಿಸಿಕೊಳ್ಳಬೇಡಿ. ನನ್ನ ಮೇಲೆ ನಂಬಿಕೆ ಇದ್ದರೆ ಮಾಡಿ ಅಂದೆ. ಸರಿ ಸಿನಿಮಾ ಮಾಡುತ್ತೇನೆ. ಒಂದು ಕೋಟಿಯೊಳಗೆ ಸಿನಿಮಾ ಆಗಬೇಕು ಅಂದರು. ಜಿಂಕೆ ಮರಿ ಸಾಂಗ್ ಬರೆದಿದ್ದಾನಲ್ಲ ಅವನು ನನ್ನ ಅಸಿಸ್ಟೆಂಟ್. ಅವನಿಗೆ ಕತೆ ಹೇಳಿದೆ ಚೆನ್ನಾಗಿದೆಯಲ್ಲ ಸರ್ ಕತೆ ಶುರು ಮಾಡೋಣ ಅಂತ ಹೇಳಿದ. ಅಲ್ಲಿಂದ ಸಿನಿಮಾ ಶುರುವಾಯ್ತು." ಎಂದಿದ್ದಾರೆ.
ಮೊದಲು ಈ ಸಿನಿಮಾವನ್ನು ಉಪೇಂದ್ರ ಅವರ ಸಹಾಯಕರೊಬ್ಬರು ಮಾಡಬೇಕಿತ್ತು. ಆದರೆ, ಅವರು ಲೇಟಾಗಿ ಬರುತ್ತಿದ್ದರು. ಒಂದು ದಿನ ತನಗೆ ಯಾಕೋ ಸರಿ ಹೋಗುತ್ತಿಲ್ಲ ಬೇರೆಯವರನ್ನು ಇಟ್ಟುಕೊಂಡು ಮಾಡಿಕೊಳ್ಳಿ ಎಂದರು. ಆಗ ನಿರ್ದೇಶಕರೇ ಇಲ್ಲದಂತಾಗಿತ್ತು. ಪ್ರಕಾಶ್ ಅನ್ನೋರು ಮ್ಯಾನೇಜರ್ ಇದ್ದರು. ಅವರ ಮೂಲಕ ಲೂಸ್ ಮಾದ ಯೋಗಿ ತಂದೆ ಸಿದ್ದರಾಜು ಅವರನ್ನು ಭೇಟಿ ಮಾಡಿ ಕಥೆ ಹೇಳಿದ್ದರು.
"ಯೋಗಿ ತಂದೆ ಸಿದ್ಧರಾಜು ಅವರಿಗೆ ಭಯ ಆಗಿತ್ತು. ಅವರು ತಾವೇ ಸಿನಿಮಾ ಮಾಡಬೇಕು ಅಂತಿದ್ದರು. ಯಾಕಂದ್ರೆ ಯಾರಾದರೂ ಹೇಗಾದರೂ ಸಿನಿಮಾ ಮಾಡಿ ಎಡವಟ್ಟು ಆದರೆ ಅಂತ ಭಯವಿತ್ತು. ಆಮೇಲೆ ಪ್ರಕಾಶ್ ಅನ್ನೋರು ಅವರಿಗೆ ಚೆನ್ನಾಗಿ ಸಿನಿಮಾ ಮಾಡುತ್ತಾರೆ. ಸಿನಿಮಾ ಮಾಡಿಸಿ ಅಂತ ಹೇಳಿದ್ದರು. ಸಿದ್ಧರಾಜು ಮೂರು ದಿನ ಟೈಮ್ ಕೇಳಿದ್ದರು. ಆ ಮೂರು ದಿನದಲ್ಲಿ ಎಲ್ಲರಿಗೂ ಕೇಳಿದ್ದಾರೆ. ರಮೇಶ್ ಕಶ್ಯಪ್, ಅಜಯ್ ಕುಮಾರ್ ಅಂತ ಬಂದಿದ್ದಾರೆ. ನಮ್ಮ ಹುಡುಗನನ್ನು ಇಟ್ಕೊಂಡು ಸಿನಿಮಾ ಮಾಡಬಹುದಾ? ಅಂತ ಕೇಳಿದ್ದಾರೆ. ಏನು ಮಾಡೋದು ಅಂತ ಕೇಳಿಕೊಂಡು ಬಂದಿದ್ದಾರೆ. ಎಲ್ಲರಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಹಾಗಾಗಿ ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಅಂತ ಹೇಳಿ ಗ್ರೀನ್ ಸಿಗ್ನಲ್ ಕೊಟ್ಟರು." ಎನ್ನುತ್ತಾರೆ ಅಜಯ್ ಕುಮಾರ್.
ಇತ್ತ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ನಲ್ಲಿ ಯೋಗಿ ಹೀರೋ ಆದ ಮೊದಲ ಸಿನಿಮಾ 'ನಂದ ಲವ್ಸ್ ನಂದಿತಾ' ಬಗ್ಗೆ ಟಿ ಪಿ ಸಿದ್ಧರಾಜು ಹೀಗಂದಿದ್ದಾರೆ. "ಯೋಗಿನಾ ನಾನೇ ಮೊದಲು ಹೀರೋ ಮಾಡಬೇಕು ಅಂತಿದ್ದೆ. ರಮೇಶ್ ಕಶ್ಯಪ್ ಹಾಗೂ ಅಜಯ್ ಕುಮಾರ್ ಬಂದು ಯೋಗಿ ಕರೆದುಕೊಂಡು ಹೋಗಿ ಸಿನಿಮಾ ಮಾಡಿದರು. ನಾನು ತಲೆ ಮೇಲೆ ಹಾಕೊಂಡು ಕೆಲಸ ಮಾಡಿದೆ. ನಾನೇ ಸಿನಿಮಾವನ್ನು ಕೊಂಡುಕೊಂಡು ಪ್ರಚಾರಕ್ಕೆಲ್ಲ ಖರ್ಚು ಮಾಡಿದೆ. ಅದು ಒಂದೊಳ್ಳೆ ಸಿನಿಮಾ ಆಯ್ತು. ಆದರೂ ಪಬ್ಲಿಸಿಟಿಗೆ ಹೆಚ್ಚು ಖರ್ಚು ಮಾಡಿದ್ದೆ. ಹೀಗಾಗಿ 35 ಲಕ್ಷ ರೂ. ಲಾಸ್ ಆಯ್ತು." ಎಂದಿದ್ದಾರೆ.


Click it and Unblock the Notifications











