'ನೀ ತಂದ ಕಾಣಿಕೆ' ಸೋಲಿನ ಬಳಿಕ ದಾದಾಗೆ ದ್ವಾರಕೀಶ್ ಸವಾಲೆಸೆದಿದ್ದೇಕೆ? ಇಬ್ಬರ ನಡುವೆ ಏನಾಗಿತ್ತು?
ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ವಿಚಿತ್ರ ನೋಡಿರೋಕೆ ಸಾಧ್ಯವಿಲ್ಲ. ಒಂದೊಂದು ಒಳ್ಳೆ ಗೆಳೆಯರಿರುತ್ತಾರೆ. ಇಲ್ಲಾ ಪಕ್ಕಾ ವಿರೋಧಿಗಳಾಗಿರುತ್ತಾರೆ. ಆದರೆ, ಕನ್ನಡ ಚಿತ್ರರಂಗ ದ್ವಾರಕೀಶ್-ವಿಷ್ಣುವರ್ಧನ್‌ರಲ್ಲಿ ಅದ್ಭುತ ಸ್ನೇಹವನ್ನೂ ಕಂಡಿದೆ. ಹಾಗೇ ಇಬ್ಬರ ದ್ವೇಷವನ್ನೂ ನೋಡಿದೆ.
ದ್ವಾರಕೀಶ್ ನಿರ್ಮಿಸಿ, ನಿರ್ದೇಶಿಸಿದ ಸಿನಿಮಾಗಳಲ್ಲಿ ವಿಷ್ಣುವರ್ಧನ್ ಇರಲೇ ಬೇಕಿತ್ತು. ಇನ್ನೊಂದು ಕಡೆ ದ್ವಾರಕೀಶ್, ವಿಷ್ಣುವರ್ಧನ್ ಅವರಿಗಾಗೇ ಸಿನಿಮಾ ಮಾಡುತ್ತಿದ್ರಾ? ಅನ್ನೋ ಅನುಮಾನ ಮೂಡುವುದು ಸಹಜ.

ವಿಷ್ಣುವರ್ಧನ್-ದ್ವಾರಕೀಶ್ ಜೊತೆಯಾಗಿದ್ದ ಬಹುತೇಕ ಸಿನಿಮಾಗಳು ಗೆದ್ದಿವೆ. ಮತ್ತೆ ಕೆಲವು ಸೋತಿವೆ. ಇದರಲ್ಲಿ 'ನೀ ತಂದ ಕಾಣಿಕೆ' ಈ ಸಿನಿಮಾ ಸೋಲಿನ ಬಗ್ಗೆ ಇಬ್ಬರೂ ಮುನಿಸಿಕೊಂಡಿದ್ದರು. ದ್ವಾರಕೀಶ್ ವಿರುದ್ಧ ವಿಷ್ಣುದಾದಾ ಬೇಸರ ವ್ಯಕ್ತಪಡಿಸಿದ್ದರು. ಇತ್ತ ವಿಷ್ಣುದಾದಾಗೆ ದ್ವಾರಕೀಶ್ ಸವಾಲೆಸೆದಿದ್ದರು. ಹಾಗಿದ್ದರು ಆ ಸವಾಲು ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ನೀ ತಂದ ಕಾಣಿಕೆ' ಬಳಿಕ ಏನಾಯ್ತು?
ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಕಾಂಬಿನೇಷನ್‌ನಲ್ಲಿ 'ನೀ ತಂದ ಕಾಣಿಕೆ' ಸಿನಿಮಾ ರಿಲೀಸ್ ಆಯ್ತು. ಆದರೆ, ಸಿನಿಮಾ ಗೆಲ್ಲಲಿಲ್ಲ. ಇದರಿಂದ ಹತಾಶರಾದ ವಿಷ್ಣುವರ್ಧನ್ ಒಂದು ಹೇಳಿಕೆಯನ್ನು ಕೊಟ್ಟಿದ್ದರು. ಅದು ದ್ವಾರಕೀಶ್ ಕೋಪಕ್ಕೆ ಕಾರಣವಾಗಿತ್ತು. ತಕ್ಷಣವೇ ವಿಷ್ಣುದಾದಾಗೆ ಸವಾಲೆಸೆದಿದ್ದರು ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್, ವೀನಸ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.

"ಸಾಹಸ ಸಿಂಹ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ 'ನೀ ತಂದ ಕಾಣಿಕೆ' ಸಿನಿಮಾ ಬಿಡುಗಡೆಯಾಗಿ ಫ್ಲಾಪ್ ಆಗಿರುತ್ತೆ. ದ್ವಾರಕೀಶ್ ನಿರ್ಮಾಣ ಹಾಗೂ ನಿರ್ದೇಶನದ ಸಿನಿಮಾ. ಆ ಸಿನಿಮಾ ಸೋತಿದ್ದರಿಂದ ವಿಷ್ಣುವರ್ಧನ್ ಅವರು ಒಂದು ಹೇಳಿಕೆಯನ್ನು ಕೊಡುತ್ತಾರೆ. ಈ ದ್ವಾರಕೀಶ್ ನಂಬಿಕೆಗೆ ಅರ್ಹನಾದ ವ್ಯಕ್ತಿ ಅಲ್ಲ ಅಂತ ಹೇಳಿದ್ದರು." ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಹೇಳಿದ್ದಾರೆ.
ದ್ವಾರಕೀಶ್ ಸವಾಲು ಏನಾಗಿತ್ತು?
ವಿಷ್ಣುವರ್ಧನ್ ಹೇಳಿಕೆಗೆ ಪ್ರತಿಯಾಗಿ ದ್ವಾರಕೀಶ್ ಕೂಡ ಒಂದು ಹೇಳಿಕೆ ನೀಡುತ್ತಾರೆ. ಇದರಲ್ಲಿ ವಿಷ್ಣುದಾದಾಗೆ ಸವಾಲು ಕೂಡ ಹಾಕುತ್ತಾರೆ. "ರಜನಿಕಾಂತ್ ಅಂತೆ ನನಗೂ ಒಂದು ತಮಿಳು ಸಿನಿಮಾವನ್ನು ಮಾಡು ಎಂದು ಪೀಡಿಸುತ್ತಾನೆ. ಇವನಿಗಾಗಿ ನಾನು ಎಷ್ಟೆಲ್ಲಾ ಮಾಡಿದ್ದೇನೆ. ನಾನು ರಜನಿಕಾಂತ್, ಶ್ರೀದೇವಿ ಅಂತಹ ಸ್ಟಾರ್‌ಗಳನ್ನು ಹಾಕಿಕೊಂಡು ಹಿಂದಿ, ತಮಿಳು ಸಿನಿಮಾಗಳನ್ನು ಮಾಡಿದಂತಹ ಪ್ರಡ್ಯೂಸರ್. ಇವನಿಲ್ಲದೆಯೂ ನಾನು ಸಿನಿಮಾ ಮಾಡಿ ಗೆಲ್ಲಬಲ್ಲೆ. ನನ್ನಂಥಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ." ಎಂದು ಸವಾಲೆಸೆದಿದ್ದರು ಎಂದು ಹರಿಹರಪುರ ಮಂಜುನಾಥ್ ರಿವೀಲ್ ಮಾಡಿದ್ದಾರೆ.
ಇಷ್ಟೆಲ್ಲದೇ, ವಿಷ್ಣುವರ್ಧನ್ ವಿರುದ್ಧ ಸಿನಿಮಾ ಮಾಡಲು ಮುಂದಾಗಿದ್ದರಂತೆ. ಕಥೆ ಕೂಡ ಸಿದ್ದಪಡಿಸಿದ್ದರಂತೆ. "ಸ್ಕ್ರಿಪ್ಟ್ ರೈಟರ್ ಕ್ಲೈಮ್ಯಾಕ್ಸ್‌ನಲ್ಲಿ ಬೆನ್ನಿಗೆ ಚೂರಿ ಹಾಕುವಂತೆ ಮಾಡಿದ್ದಾರೆ. ಇಲ್ಲ.. ನೇರವಾಗಿ ಎದೆಗೆ ಚುಚ್ಚುವಂತೆ ಬದಲಾಯಿಸಿದ್ದೇನೆ." ಎಂದು ದ್ವಾರಕೀಶ್ ಹೇಳಿಕೆ ಕೊಟ್ಟಿದ್ದರಂತೆ. ಆದರೆ, ಆ ಸಿನಿಮಾ ಕೊನೆ ಬಿಡುಗಡೆಯಾಗಲಿಲ್ಲ.
ದಾದಾ ಬಿಟ್ಟು ಮಾಡಿದ ಸಿನಿಮಾಗಳೇನಾಯ್ತು?
ದ್ವಾರಕೀಶ್ ಕೋಪದಲ್ಲಿ ವಿಷ್ಣುವರ್ಧನ್ ಬಿಟ್ಟು ಸಿನಿಮಾ ಮಾಡಲು ಮುಂದಾಗಿದ್ದರು. ಕನ್ನಡ ಹಲವು ನಾಯಕರೊಂದಿಗೆ ಸುಮಾರು 18 ಸಿನಿಮಾ ಮಾಡಿದ್ದರು. ಅದರಲ್ಲಿ ಕೇವಲ 'ಶೃತಿ' ಸಿನಿಮಾ ಮಾತ್ರ ಗೆದ್ದಿತ್ತು. ಉಳಿದಿದ್ದು ಸೋತಿದ್ದವು. ಬಳಿಕ ಮತ್ತೆ ಈ ಜೋಡಿ ಮುನಿಸನ್ನು ಮರೆತು ಆಪ್ತಮಿತ್ರದಲ್ಲಿ ಒಂದಾಯ್ತು.
ಅಂದ್ಹಾಗೆ 'ನೀ ತಂದ ಕಾಣಿಕೆ' ಹಿಂದಿಯ 'ಶರಾಭಿ' ಸಿನಿಮಾದ ರಿಮೇಕ್. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೊ ನಂಬಿಕೆ ವಿಷ್ಣುವರ್ಧನ್ ಅವರಲ್ಲಿ ಇತ್ತು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಆದರೆ, ಸಿನಿಮಾ ಗೆಲ್ಲಲಿಲ್ಲ.


Click it and Unblock the Notifications











