ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ರಾಯಬಾರಿಯಾದರೆ ಏನು ಲಾಭ? ಟಾರ್ಗೆಟ್ ತಲುಪುತ್ತಾ ಕರ್ನಾಟಕ ಸರ್ಕಾರ?
ಕಳೆದ ಕೆಲವು ದಿನಗಳಿಂದ ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ಭಾಟಿಯಾರನ್ನು ರಾಯಬಾರಿ ಮಾಡಿದ್ದಕ್ಕೆ ಸರ್ಕಾರವನ್ನು ಟೀಕಿಸಲಾಗುತ್ತಿದೆ. ಪರಭಾಷೆಯ ನಟಿಗೆ ದುಬಾರಿ ಸಂಭಾವನೆ ಕೊಟ್ಟು ರಾಯಬಾರಿಯನ್ನಾಗಿ ಮಾಡುವುದಕ್ಕಿಂತ ಕನ್ನಡದ ನಟಿಯರಿಗೆ ಅವಕಾಶವನ್ನು ಕೊಡಬೇಕಿತ್ತು ಎನ್ನುವುದು ಈ ಆಕ್ರೋಶಕ್ಕೆ ಕಾರಣ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ.
ಕಳೆದ ಕೆಲವು ದಿನಗಳಿಂದ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ನಟಿಯರಿಗೆ ಅವಕಾಶ ಕೊಡಬಹುದಿತ್ತು. ತಮನ್ನಾ ಭಾಟಿಯಾ ಯಾಕೆ? ಅದೂ ಆರು ಕೋಟಿಯಷ್ಟು ಸಂಭಾವನೆ ಕೊಟ್ಟು ರಾಯಬಾರಿಯನ್ನಾಗಿ ಮಾಡಿದ್ದು ಏಕೆ? ಅನ್ನೋದು ಪ್ರಶ್ನೆ. ಈಗಾಗಲೇ ನಟಿ ತಮನ್ನಾ ಆಯ್ಕೆಯ ಬಗ್ಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಈ ಬಗ್ಗೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಹಾಗಿದ್ರೆ, ತಮನ್ನಾ ರಾಯಬಾರಿ ಆಗುವುದರಿಂದ ಮೈಸೂರು ಸ್ಯಾಂಡಲ್ ಸೋಪು ಸಂಸ್ಥೆಗೆ ಏನು ಲಾಭ? ಕರ್ನಾಟಕದ ಸೋಪಿನ ಮೌಲ್ಯ ಹೆಚ್ಚಾಗಬಹುದೇ?

ಮೈಸೂರು ಸ್ಯಾಂಡಲ್ ಸೋಪು ಕರ್ನಾಟಕದ ಹೆಮ್ಮೆ. ಕರ್ನಾಟಕ ಸರ್ಕಾರದ ಒಂದು ಉದ್ಯಮ ಆಗಿದ್ದು, ಈ ಸೋಪಿಗೆ ಕರ್ನಾಟಕ ಅಷ್ಟೇ ಅಲ್ಲದೇ, ದೇಶದ ಹಲವು ಕಡೆ ಬೇಡಿಕೆಯಿದೆ. ಈ ಕಾರಣಕ್ಕೆ ಸರ್ಕಾರ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಇಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ಪೈಪೋಟಿ ನೀಡುವುದಕ್ಕೆ ಮುಂದಾಗಿದೆ. ಹೀಗಾಗಿ ಎರಡು ವರ್ಷಗಳ ಕಾಲ ತಮನ್ನಾ ಭಾಟಿಯಾರನ್ನು ರಾಯಾಬಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದೇ ವೇಳೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಈಗ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಕೂಡ ಕನ್ನಡದ ನಟಿಯರಿಗೆ ಅವಕಾಶ ಕೊಡಬಹುದಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
"ಒಂದು ಅವಕಾಶ ನಮ್ಮ ಕನ್ನಡಿಗರಿಗೆ ಕೊಟ್ಟಿದ್ದರೆ ಒಳ್ಳೆಯದು ಎಂಬುವುದು ನಮ್ಮ ಭಾವನೆ. ನಮ್ಮ ರಾಜ್ಯದಲ್ಲಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವವರು ಇದ್ದರು. ನಮ್ಮ ಸಚಿವರು ತಮನ್ನಾಗೆ ಫಾಲೋವಿಂಗ್ ಜಾಸ್ತಿ ಇತ್ತು ಅಂತ ಹೇಳಿದ್ದಾರೆ. ಕನ್ನಡಿಗರಿಗೆ ಅವಕಾಶ ತಪ್ಪಿತು. ದೀಪಿಕಾ ಪಡುಕೋಣೆ ಇದ್ದರು. ನಮ್ಮ ರಶ್ಮಿಕಾ ಮಂದಣ್ಣ ಇದ್ದರು. ಇನ್ನು ಅನೇಕ ಜನ ಕಲಾವಿದರು ಇದ್ದಾರೆ. ಅವರಿಗೆ ಕೊಟ್ಟಿದ್ದರೆ ಕನ್ನಡಿಗರಿಗೆ ಸಂತೋಷ ಆಗುತ್ತಿತ್ತು. ಈ ಭಾವನೆ ಇದ್ದರೂ ಮತ್ತೊಂದು ಕಡೆ ಮೈಸೂರು ಸ್ಯಾಂಡಲ್ ಒಂದು ನ್ಯಾಷನಲ್ ಲೆವೆಲ್‌ಗೆ ಹೋಗಿ ಮತ್ತೊಂದು ರಾಜ್ಯದ ಹೆಣ್ಣು ಮಗಳು ನಮಗೆ ಪ್ರೊಜೆಕ್ಟ್ ಮಾಡುತ್ತಾರೆ ಎನ್ನುವುದಾರೇ, ಮೈಸೂರು ಸ್ಯಾಂಡಲ್ ಕಂಪನಿಗೆ ಲಾಭ ಆಗುತ್ತೆ ಎನ್ನುವುದಾರೇ, ಇದೇನು ದೊಡ್ಡ ಸಮಸ್ಯೆ ಆಗುವುದಿಲ್ಲ." ಎಂದು ಕುಮಾರ್ ಬಂಗಾರಪ್ಪ ಹೇಳಿಕೆ ಕೊಟ್ಟಿದ್ದಾರೆ.
ತಮನ್ನಾ ರಾಯಬಾರಿ ಆಗುವುದರಿಂದ ಏನು ಲಾಭ ಆಗುತ್ತೆ? ತಮನ್ನಾ ಬಹುಭಾಷಾ ನಟಿ. ದಕ್ಷಿಣ ಭಾರತದಲ್ಲಿ ಚಿರಪರಿಚಿತ ಫೇಸ್. ತೆಲುಗು, ತಮಿಳು ಭಾಷೆಯಲ್ಲಿ ನಟಿಸಿದ್ದಾರೆ. ಈಗ ಹಿಂದಿ ಭಾಷೆಯಲ್ಲೂ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ತಮನ್ನಾಗೆ ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಫಾಲೋವರ್ಸ್ ಇರುವುದು ನಿಜ. ಇವರು ರಾಯಬಾರಿ ಆಗುವುದರಿಂದ ಕರ್ನಾಟಕದ ಸೋಪಿಗೆ ಲಾಭ ಆಗುತ್ತಾ? ಮೈಸೂರು ಸ್ಯಾಂಡಲ್ ಸೋಪು ರಾಷ್ಟ್ರ ಮಟ್ಟವನ್ನು ತಲುಪುತ್ತಾ? ಟಾರ್ಗೆಟ್ ಎಷ್ಟು ಕೋಟಿ?
ಕರ್ನಾಟಕ ಸರ್ಕಾರ ಮೈಸೂರು ಸ್ಯಾಂಡಲ್ ಸೋಪಿನ ವಿವಿಧ ಉತ್ಪನ್ನಗಳಿಂದ ಸುಮಾರು 5 ಸಾವಿರ ಕೋಟಿ ರೂಪಾಯಿ ಗಳಿಸುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಸದ್ಯ ಈಗ ಕರ್ನಾಟಕದಲ್ಲಿ ಅತೀ ಹೆಚ್ಚು ಸೋಪುಗಳು ಮಾರಾಟ ಆಗುತ್ತಿವೆ. ಹಾಗೇ ಬೇರೆ ಬೇರೆ ರಾಜ್ಯಗಳಲ್ಲಿ ಮಾರಾಟವನ್ನು ವಿಸ್ತರಣೆ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಕಾರಣಕ್ಕೆ ತಮನ್ನಾರನ್ನು ರಾಯಬಾರಿಯನ್ನಾಗಿ ಮಾಡಿಕೊಂಡು ರಾಷ್ಟ್ರವ್ಯಾಪಿ ಮಾರುಕಟ್ಟೆಯನ್ನು ವೃದ್ಧಿಸುವುದು ಇವರ ಟಾರ್ಗೆಟ್. ಈ ಬಗ್ಗೆ ಕೈಗಾರಿಕ ಸಚಿವ ಎಂ.ಬಿ ಪಾಟೀಲ್ ಕೆಲವು ಅಂಕಿ ಅಂಶಗಳನ್ನು ಕೊಟ್ಟಿದ್ದಾರೆ. ಬೇರೆ ಯಾವ್ಯಾವ ನಟಿಯನ್ನು ಟಾರ್ಗೆಟ್ ಮಾಡಿದ್ದೇವೆಂದು ಹೇಳಿದ್ದಾರೆ.
"ರಶ್ಮಿಕಾ ಮಂದಣ್ಣ ಅವರಿಗೆ ಕಾಂಟೆಕ್ಟ್ ಮಾಡಿದ್ವಿ. ಅವರು ಈಗಾಗಲೇ ಬೇರೆ ಕಡೆ ಸಹಿ ಮಾಡಿದ್ದಾರೆ. ಆ ಕಾರಣಕ್ಕೆ ರಶ್ಮಿಕಾ ಮಂದಣ್ಣ ನಮಗೆ ಆಗುವುದಿಲ್ಲ ಎಂದು ಹೇಳಿದ್ದರು. ಆಮೇಲೆ ಶ್ರೀಲೀಲಾ ಅವರು ಕೂಡ ಸ್ಕಿನ್ ಕೇರ್ ಪ್ರಾಡಕ್ಟ್‌ಗೆ ಸಹಿ ಮಾಡಿದ್ದಾರೆ. ಅವರು ಸಿಗುವುದಿಲ್ಲ ಎಂದು ಹೇಳಿದ್ದಾರೆ. ಕಿಯಾರಾ ಅಡ್ವಾಣಿ ಅವರು ಕೂಡ ಬೇರೊಂದು ಉತ್ಪನ್ನಕ್ಕೆ ಸಹಿ ಮಾಡಿದ್ದಾಗಿ ಹೇಳಿದ್ದಾರೆ. ಮೈಸೂರು ಸ್ಯಾಂಡಲ್ ಸೋಪು ಶೇ.18ರಷ್ಟು ಕರ್ನಾಟಕದಲ್ಲಿ ಮಾರಾಟ ಆಗುತ್ತಿದೆ. ಇನ್ನು ಉಳಿದ ಶೇ.72ರಷ್ಟು ಬೇರೆ ಬೇರೆ ರಾಜ್ಯದಲ್ಲಿ ಆಗುತ್ತಿದೆ. ನಾವೀಗ ಈ ಸೋಪ್ ಅನ್ನು ಪ್ಯಾನ್ ಇಂಡಿಯಾ ಮಾಡಬೇಕು ಅಂತಿದ್ದೀವಿ. ತಮನ್ನಾ ಭಾಟಿಯಾಗೆ 2.8 ಕೋಟಿ ಫಾಲೋವರ್ಸ್ ಇದ್ದಾರೆ. ದೀಪಿಕಾ ಪಡುಕೋಣೆಯವರು ನಮ್ಮ ಬಜೆಟ್‌ಗೆ ನಿಲುಕುವುದಿಲ್ಲ. ಮತ್ತು ಅವರದ್ದೇ ಒಂದು ಬ್ರ್ಯಾಂಡ್ ಇದೆ. ಇದೆಲ್ಲವನ್ನೂ ವಿಚಾರ ಮಾಡಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ." ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದರು.

ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆ (KSDL) ಮಾರುಕಟ್ಟೆಯಲ್ಲಿರುವ ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿ ಇದೆ. ಎಂ ಬಿ ಪಾಟೀಲ್ ನೀಡಿರುವ ಮಾಹಿತಿ ಪ್ರಕಾರ, ಶೇಕಡವಾರ ಮಾರುಕಟ್ಟೆಯ ವಿವರ ಹೀಗಿದೆ.
ಕೆಎಸ್‌ಡಿಎಲ್ 15%
ಗೋದ್ರೇಜ್ 11%
ಮಾರಿ ಕೋ 10%
ಹಿಂದೂಸ್ತಾನ್ ಲಿವರ್ 9%
ಐಟಿಸಿ 8%
ವಿಪ್ರೋ 7%
ಕರ್ನಾಟಕ ಸರ್ಕಾರ ಹಾಗೂ ಕೆಎಸ್‌ಡಿಎಲ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಬಲ ನೀಡಿದ್ದರು. "ಯಾರನ್ನೂ ತೆಗೆದುಕೊಳ್ಳಬಾರದು ಅಂದರೆ ಏನು? ಹಾಗಿದ್ದರೆ, ಸಿನಿಮಾವೇ ನೋಡಬೇಡಿ. ಈಗ ಶಿವರಾಜ್‌ಕುಮಾರ್ ಜೈಲರ್ ಸಿನಿಮಾದಲ್ಲಿ ತಮಿಳಿನಲ್ಲಿ ಮಾತಾಡಿದ್ದಾರೆ. ಆಗ ತಮಿಳಿನಲ್ಲಿ ಮಾತಾಡಿದ್ದಾರೆ ಅಂತ ಉಪದೇಶ ಮಾಡುವುದಕ್ಕೆ ಆಗುತ್ತಾ? ಅಲ್ಲೊಂದು ಬೋರ್ಡ್ ಇರುತ್ತೆ. ಆ ಬೋರ್ಡ್‌ಗೆ ಹಕ್ಕನ್ನು ಕೊಟ್ಟಿರುತ್ತೇವೆ. ಆ ಹಕ್ಕನ್ನು ಪ್ರತಿಪಾದಿಸಿ, ಆ ಹಕ್ಕನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿರುತ್ತಾರೆ. ಎಲ್ಲದರೂ ತಪ್ಪನ್ನು ಹುಡುಕುವ ಚಾಳಿ ಇದ್ದರೆ, ನೀವು ಅದನ್ನು ರಿಪೇರಿ ಮಾಡುವುದಕ್ಕೆ ಆಗುವುದಿಲ್ಲ." ಎಂದು ಮಧು ಬಂಗಾರಪ್ಪ ಹೇಳಿದ್ದರು. ತಮನ್ನಾ ಭಾಟಿಯಾ ಮೈಸೂರು ಸ್ಯಾಂಡಲ್ ಸೋಪಿನ ರಾಯಬಾರಿ ಆಗುವುದರಿಂದ ನಷ್ಟವೇನು ಆಗಲ್ಲ. ಕರ್ನಾಟಕದ ಸೋಪು 'ಕೆಜಿಎಫ್', 'ಕಾಂತಾರ'ದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡುವ ಸಾಧ್ಯತೆಯಿದೆ.


Click it and Unblock the Notifications











