'ಚಕ್ರವ್ಯೂಹ' ಮಾಜಿ ಸಿಎಂ ರಿಯಲ್ ಲೈಫ್ ಸ್ಟೋರಿನಾ? ಮಾಜಿ ಸಿಎಂ ಗುಂಡೂರಾವ್ ಅವರ ಕಥೆಯೇ?
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿದ 'ಚಕ್ರವ್ಯೂಹ' ಕೂಡ ಒಂದು. ಅಂಬರೀಶ್‌ಗೆ ಸ್ಟಾರ್ ಇಮೇಜ್ ಕೊಟ್ಟ ಸಿನಿಮಾವಿದು. ವಿ. ರವಿಚಂದ್ರನ್ ಹಾಗೂ ವೀರಾಸ್ವಾಮಿ ನಿರ್ಮಾಣ ಮಾಡಿದ್ದ ಈ ಸಿನಿಮಾ ತೆಲುಗು ಹಾಗೂ ಹಿಂದಿ ಭಾಷೆಗಳಿಗೆ ರೀಮೇಕ್ ಆಗಿತ್ತು. ಆ ಮಟ್ಟಿಗೆ ಈ ಸಿನಿಮಾ ಕ್ರೇಜ್ ಹುಟ್ಟಿಸಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ ಅಂಬರೀಶ್ ಆಂಗ್ರಿ ಯಂಗ್ ಮ್ಯಾನ್ ಲುಕ್‌ನಿಂದ 'ರೆಬೆಲ್ ಸ್ಟಾರ್' ಅಂತ ಫೇಮಸ್ ಆಗಿದ್ದರು. ಕರ್ನಾಟಕದಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾ ನೋಡಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ರೀಮೇಕ್ ಮಾಡುವುದಕ್ಕೆ ಮುಂದಾಗಿದ್ದರು. ಅದುವೇ 'ಇಂಕ್ವಿಲಾಬ್'. ಹಾಗೇ ತೆಲುಗಿನಲ್ಲಿ 'ಮುಖ್ಯಮಂತ್ರಿ' ಅನ್ನೋ ಹೆಸರಿನಲ್ಲಿ ರಿಲೀಸ್ ಆಗಿತ್ತು. ಅದರಲ್ಲಿ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಈ ಸಿನಿಮಾಗೆ ಕಥೆ ಬರೆದಿದ್ದು ದಕ್ಷಿಣ ಭಾರತದ ಜನಪ್ರಿಯ ಕಥೆಗಾರ ಎಂ. ಡಿ. ಸುಂದರ್. ಕನ್ನಡದಲ್ಲಿ ಮೆಗಾ ಹಿಟ್ ಸಿನಿಮಾಗಳಿಗೆ ಕಥೆ ಹೆಣೆದಿದ್ದ ಎಂ ಡಿ ಸುಂದರ್‌ಗೆ 'ಚಕ್ರವ್ಯೂಹ' ಕಥೆ ಹೊಳೆದಿದ್ದು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಯೊಬ್ಬರ ರಿಯಲ್ ಲೈಫ್ ಸ್ಟೋರಿಯಿಂದ. ಬ್ಲಾಕ್ ಟಿಕೆಟ್ ಮಾರುತ್ತಿದ್ದ ವ್ಯಕ್ತಿಯೊಬ್ಬ ಮುಖ್ಯ ಮಂತ್ರಿ ಆಗುವ ಕಥೆಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ವಕ್ರವ್ಯೂಹ ಕಥೆ ಹೆಣೆದಿದ್ದರು. ಈ ಇಂಟ್ರೆಸ್ಟಿಂಗ್ ವಿಷಯವನ್ನು ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಎಂ ಡಿ ಸುಂದರ್ ಅವರ ಹಿರಿಯ ಪುತ್ರ ಬಾಲಾಜಿ ರಿವೀಲ್ ಮಾಡಿದ್ದಾರೆ.
ಎಂ ಡಿ ಸುಂದರ್ ಅವರದ್ದು ದುರಂತ ಬದುಕು. ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕಥೆ ಹೆಣೆದಿದ್ದರೂ, ಅವರ ಕೊನೆಯ ದಿನಗಳು ಶೋಚನೀಯವಾಗಿತ್ತು. ಅವರ ಬಗ್ಗೆ ಒಂದೇ ಒಂದು ಮಾಹಿತಿ ಕೂಡ ಇದೂವರೆಗೂ ಇರಲಿಲ್ಲ. ಈಗ ಅವರ ಹಿರಿಯ ಪುತ್ರ ಬಾಲಾಜಿಯವರನ್ನು ರಘುರಾಮ್ ಮಾತಾಡಿಸಿದ್ದು, ಆಸಕ್ತಿಕರ ವಿಷಯಗಳು ಹೊರಬಿದ್ದಿವೆ. ಅದರಲ್ಲೊಂದು ಚಕ್ರವ್ಯೂಹದ ಕಥೆ.
"ಚಕ್ರವ್ಯೂಹ ಇದು ಗುಂಡೂರಾವ್ ಅವರ ಕಥೆ. ಅವರು ಬ್ಲಾಕ್ ಟಿಕೆಟ್ ಮಾರಿದ್ದಾರೆ. ಆ ಬಗ್ಗೆ ಬೆಂಗಳೂರಿನಲ್ಲಿ ಸಾಕಷ್ಟು ಸ್ಪೂರ್ತಿ ಸಿಕ್ಕಿತ್ತು. ಆಲ್ ಓವರ್ ಇಂಡಿಯಾದಲ್ಲಿ ಮೊದಲ ಪೊಲಿಟಿಕಲ್ ಸಬ್ಜೆಕ್ಟ್ ಚಕ್ರವ್ಯೂಹನೇ." ಎಂದು ಕಥೆಗಾರ ಎಂ ಡಿ ಸುಂದರ ಅವರ ಹಿರಿಯ ಪುತ್ರ ಬಾಲಾಜಿ ಹೇಳುತ್ತಾರೆ.
ಅಂದ್ಹಾಗೆ ಚಕ್ರವ್ಯೂಹದ ಸಬ್ಜೆಕ್ಟ್ ಮೊದಲು ಕೆಸಿಎನ್ ಚಂದ್ರಶೇಖರ್ ಅವರ ಕೈಯಲ್ಲಿತ್ತು. ಸಿದ್ಧಲಿಂಗಯ್ಯ ಈ ಸಿನಿಮಾವನ್ನು ನಿರ್ದೇಶನ ಮಾಡಬೇಕಿತ್ತು. ಆದರೆ ಅವರಿಗೆ ಚಕ್ರವ್ಯೂಹ ಕಥೆ ಜನರಿಗೆ ಹಿಡಿಸುತ್ತಾ? ಅನ್ನೋ ಅನುಮಾನವಿತ್ತು. ಅಷ್ಟರಲ್ಲಿ ವೀರಾಸ್ವಾಮಿ ಕಥೆಯನ್ನು ಎಂಡಿ ಸುಂದರ್ ಅವರಿಂದ ಖರೀದಿ ಮಾಡಿದ್ದರು.
"ಮೊದಲು ಈ ಸಬ್ಜೆಕ್ಟ್ ಅನ್ನು ಕೆಸಿಎನ್ ಚಂದ್ರಶೇಖರ್, ಸಿದ್ಧಲಿಂಗಯ್ಯ ಅವರು ಇಟ್ಟುಕೊಂಡು ಆಲೋಚನೆ ಮಾಡುತ್ತಲೇ ಇದ್ದರು. ಸಿನಿಮಾ ಮಾಡೋಣ? ಬೇಡ್ವಾ? ಅಂತ ಆಲೋಚನೆ ಮಾಡುತ್ತಲೇ ಇದ್ದರು. ಆ ಮೇಲೆ ಕೆಸಿಎನ್ ಚಂದ್ರಶೇಖರ್ ಸಂಜೆ ಬಂದರು. ಚಕ್ರವ್ಯೂಹವನ್ನು ರೆಡಿ ಮಾಡಿಕೊಡಿ ಕ್ಯಾಶ್ ಕೊಡ್ತೀನಿ ಎಂದಿದ್ದರು. ಆದರೆ, ಕೆಸಿಎನ್ ಚಂದ್ರಶೇಖರ್ ಅವರು ಬರುವುದಕ್ಕೂ ಮೊದಲು ಅದೇ ದಿನ ಮಧ್ಯಾಹ್ನ ವೀರಾಸ್ವಾಮಿಯವರು ಫ್ಲೈಟ್‌ನಲ್ಲಿ ಬಂದು ತೆಗೆದುಕೊಂಡು ಹೋಗಿದ್ದರು." ಎಂದು ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
"ವೀರಸ್ವಾಮಿಯವರ ಪುತ್ರ ರವಿಚಂದ್ರನ್ ಅವರಿಗೆ ನಮ್ಮ ತಂದೆ ಮೇಲೆ ತುಂಬಾ ಪ್ರೀತಿ. ಹಾಗೇ ನಮ್ಮ ತಂದೆಗೂ ರವಿಚಂದ್ರನ್ ಅವರ ಮೇಲೆ ತುಂಬಾ ಪ್ರೀತಿ. ಆದರೆ, ಯಾರೋ ಇಬ್ಬರ ನಡುವೆ ತಂದಿಟ್ಟಿದ್ದರು. ಕನ್ನಡ ಸಿನಿಮಾ ಇಂಡಸ್ಟ್ರಿ ಚಿಕ್ಕದಿದೆ. ಆದರೆ, ಪಾಲಿಟಿಕ್ಸ್ ತುಂಬಾನೇ ದೊಡ್ಡದಿದೆ." ಎಂದು ಬಾಲಾಜಿಯವರು ಬೇಸರವನ್ನು ಹೊರ ಹಾಕಿದ್ದಾರೆ.


Click it and Unblock the Notifications











