ರಿಷಬ್ ಶೆಟ್ಟಿ ಮುಂದೆ ಅಣ್ಣಾವ್ರನ್ನು ದೇವರು ಎಂದಿದ್ದ ಅಮಿತಾಭ್ ಬಚ್ಚನ್; ಬಿಗ್ ಬಿಗಾಗಿ ಉರುಳು ಸೇವೆ ಮಾಡಿದ್ದ ರಾಜ್
ಕನ್ನಡದ ಕಣ್ಮಣಿ ಡಾ.ರಾಜ್‌ಕುಮಾರ್ ಅಗಲಿ ಎರಡು ದಶಕಗಳಾಗಿವೆ. ಆದರೂ ಅವರ ಮೇಲಿನ ಅಭಿಮಾನ ಮಾತ್ರ ಕಮ್ಮಿ ಆಗಿಲ್ಲ. ಅವರ ವ್ಯಕ್ತಿತ್ವಕ್ಕೆ, ಅವರ ಅಭಿನಯಕ್ಕೆ, ಸಿನಿಮಾಗಳಿಗೆ ಫಿದಾ ಆಗುವ ಅಭಿಮಾನಿಗಳ ವರ್ಗ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಇಷ್ಟು ವರ್ಷ ಆದರೂ ಅಣ್ಣಾವ್ರನ್ನು ಹತ್ತಿರದಿಂದ ನೋಡಿರುವ ಪ್ರತಿಯೊಬ್ಬ ಸೆಲೆಬ್ರೆಟಿಗಳು ತಮಗಾದ ಒಂದೊಂದು ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ರಾಜ್‌ಕುಮಾರ್ ಅನ್ನೋ ವ್ಯಕ್ತಿತ್ವ ಕೇವಲ ಕನ್ನಡಿಗರಿಗೆ ಅಷ್ಟೇ ಅಲ್ಲ. ಬೇರೆ ಭಾಷೆಯ ಸೆಲೆಬ್ರೆಟಿಗಳು ಕೂಡ ಬೆರಗು ಕಣ್ಣಿನಿಂದ ನೋಡಿದ್ದುಇದೆ. ಅಷ್ಟೊಂದು ಜನಪ್ರಿಯತೆ ಗಳಿಸಿರುವ ನಟ ಇಷ್ಟೊಂದು ಸಿಂಪಲ್ ಆಗಿ ಇರೋಕೆ ಹೇಗೆ ಸಾಧ್ಯ ಅಂತ ಮೂಗಿನ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಅಣ್ಣಾವ್ರ ಸರಳತೆಗೆ ಬೆರಗಾಗಿದ್ದಾರೆ. ಅವರಲ್ಲಿ ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಕೂಡ ಒಬ್ಬರು.

'ಕಾಂತಾರ' ಸಿನಿಮಾದ ಪ್ರಚಾರದ ವೇಳೆ ರಿಷಬ್ ಶೆಟ್ಟಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ 'ಕರೋಡ್ಪತಿ' ಕಾರ್ಯಕ್ರಮಕ್ಕೆ ಹೋಗಿದ್ದರು. ಆ ವೇಳೆ ಅಮಿತಾಭ್ ಬಚ್ಚನ್ ಅವರ ಮುಂದೇನೆ ಅಣ್ಣಾವ್ರ ಗುಣಗಾನ ಮಾಡಿದ್ದರು. ಇತ್ತ ವರನಟನಿಗೂ ಕೂಡ ಅಮಿತಾಭ್ ಬಚ್ಚನ್ ಮೇಲೆ ಅಷ್ಟೇ ಅಭಿಮಾನವಿತ್ತು. 'ಕೂಲಿ' ಸಿನಿಮಾದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಮಿತಾಭ್ ಆರೋಗ್ಯಕ್ಕಾಗಿ ಅಣ್ಣಾವ್ರು ಉರುಳು ಸೇವೆ ಮಾಡಿದ್ದರು.
ಅಮಿತಾಭ್ ಬಚ್ಚನ್ ಹಾಗೂ ಅಣ್ಣಾವ್ರ ಸ್ನೇಹದ ಬಗ್ಗೆ ಸಾಕಷ್ಟು ಮಂದಿ ಸೆಲೆಬ್ರೆಟಿಗಳು ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಬೆಂಗಳೂರಿಗೆ ಬಂದಾಗ ಅಣ್ಣಾವ್ರನ್ನು ಭೇಟಿ ಮಾಡುತ್ತಿದ್ದರು. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆದರೆ, ಇಬ್ಬರ ಭೇಟಿ ಆಗುತ್ತಿತ್ತು. ಹೀಗಾಗಿ ಅಮಿತಾಭ್ ಬಚ್ಚನ್ ಬೆಂಗಳೂರಿನಲ್ಲಿ ಇದ್ದಾಗ ಅಣ್ಣಾವ್ರ ಅಭಿಮಾನಿಗಳನ್ನು, ಅವರಿಗೆ ಇರುವ ಕ್ರೇಜ್ ಅನ್ನು ನೋಡಿದ್ದಾರೆ.
ಹೀಗಾಗಿ ರಿಷಬ್ ಶೆಟ್ಟಿ 'ಕರೋಡ್ಪತಿ' ಶೋಗೆ ಹೋಗಿದ್ದಾಗ ಅಣ್ಣಾವ್ರ ಹಾಗೂ ಕನ್ನಡಿಗರು ಅವರ ಮೇಲೆ ಇಟ್ಟಿರುವ ಅಭಿಮಾನದ ಬಗ್ಗೆ ಗುಣಗಾನ ಮಾಡಿದ್ದಾರೆ. "ಕರ್ನಾಟಕದಲ್ಲಿ ಅವರು ದೇವರು ಇದ್ದಂತೆ. ಕನ್ನಡಿಗರು ಅವರನ್ನು ದೇವರಂತೆ ಪೂಜೆ ಮಾಡುತ್ತಾರೆ. ನೀವು ಅವರನ್ನು ನೋಡಿ ಮಾತಾಡಿದಾಗ ಎಷ್ಟು ಸಾಧಾರಣ ವ್ಯಕ್ತಿ ಅನಿಸುತ್ತೆ. ತೀರಾ ಸಾಧಾರಣ ಬಟ್ಟೆಯನ್ನು ಧರಿಸಿ ಕೂತಿರುತ್ತಿದ್ದರು. ಅವರು ಇಷ್ಟು ದೊಡ್ಡ ನಟ ಅನ್ನೋದು ಗೊತ್ತೇ ಆಗುವುದಿಲ್ಲ. ಇಷ್ಟು ಜನರೊಂದಿಗೆ ಹೆಸರು ಗಳಿಸಿದ್ದಾರೆ. ನಾವು ಯಾವಾಗಲಾದರೂ ಅಲ್ಲಿಗೆ ಹೋದರೆ, ಅವರಿಗೆ ನಮಸ್ಕಾರ ಮಾಡುತ್ತಿದ್ವಿ. ಅವರ ಆಶೀರ್ವಾದವನ್ನು ಪಡೆಯುತ್ತಿದ್ವಿ. ಅವರೊಬ್ಬ ಅದ್ಭುತ ವ್ಯಕ್ತಿ. ನಿಜಕ್ಕೂ ಅವರೊಬ್ಬ ಅದ್ಭುತ ವ್ಯಕ್ತಿ" ಎಂದು ಅಮಿತಾಭ್ ಬಚ್ಚನ್ ಹೇಳಿದ್ದರು.
ಲಿವಿಂಗ್ ಲೆಜೆಂಡ್ ಅಮಿತಾಭ್ ಬಚ್ಚನ್ ಅಂತಹವರು ಅಣ್ಣಾವ್ರ ಬಗ್ಗೆ ಮಾತಾಡಿದಾಗ ಕನ್ನಡಿಗರು ಇನ್ನೂ ಹೆಮ್ಮೆ ಪಡುತ್ತಾರೆ. ಹಾಗಂತ ಈ ಅಭಿಮಾನ ಏಕಮುಖವಾಗೇನು ಇರಲಿಲ್ಲ. ಸಾಹಿತಿ ಜಯಂತ್ ಕಾಯ್ಕಿಣಿ ಸಂದರ್ಶನವೊಂದರಲ್ಲಿ ಅಮಿತಾಭ್ ಬಚ್ಚನ್‌ಗಾಗಿ ಅಣ್ಣಾವ್ರ ಉರುಳು ಸೇವೆ ಮಾಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 'ಕೂಲಿ' ಸಿನಿಮಾದ ಶೂಟಿಂಗ್ ನಡೆಯುವಾಗ ಅಮಿತಾಭ್ ಬಚ್ಚನ್ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಬದುಕಿಗಾಗಿ ಹೋರಾಟ ನಡೆಸಿದ್ದರು.
ಆಗ ಅಣ್ಣಾವ್ರು ರಹಸ್ಯವಾಗಿ ನಂಜನಗೂಡಿನಲ್ಲಿರುವ ದೇವಸ್ಥಾನಕ್ಕೆ ತೆರಳಿದ್ದರು. ಯಾರಿಗೂ ಗೊತ್ತಾಗದ ಹಾಗೆ ಅಮಿತಾಭ್ ಬಚ್ಚನ್ ಬಹುಬೇಗನೇ ಗುಣಮುಖರಾಗಲಿ ಅಂತ ಉರುಳು ಸೇವೆ ಮಾಡಿ ಬಂದಿದ್ದರಂತೆ. ಇದನ್ನು ಜಯಂತ್ ಕಾಯ್ಕಿಣಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಅಣ್ಣಾವ್ರ ಸ್ವಭಾವ, ಸರಳತೆಯನ್ನೆ ಅಮಿತಾಭ್ ಬಚ್ಚನ್ ಮೆಚ್ಚಿಕೊಂಡಿದ್ದಾರೆ.


Click it and Unblock the Notifications
