'ಅಪರಿಚಿತ' ಚಿತ್ರದ ನಾಯಕಿ ಶೋಭಾ ನೇಣಿಗೆ ಶರಣಾಗಿದ್ದೇಕೆ? ಇಂದಿರಾ ಗಾಂಧಿ ಪತ್ರ ಏನಾಯ್ತು?
ಶೋಭಾ, ಬದುಕಿದ್ದರೆ ಅದೆಷ್ಟು ಸಿನಿಮಾ ಮಾಡುತ್ತಿದ್ದರೋ.. ಅದೆಷ್ಟು ಅದ್ಭುತ ಸಿನಿಮಾಗಳಲ್ಲಿ ನಟಿಸುತ್ತಿದ್ದರೋ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶೋಭಾ ಬದುಕಿದ್ದು ಕೇವಲ 17 ವರ್ಷ. ಅಷ್ಟರಲ್ಲೇ ಕನಿಷ್ಠ ಒಂದು ಜನ್ಮಕ್ಕಾಗುವಷ್ಟು ಸಿನಿಮಾದಲ್ಲಿ ನಟಿಸಿ ಆಗಿತ್ತು. ಇನ್ನೂ ಬದುಕಿ ಬಾಳಬೇಕಿದ್ದ ನಟಿ ಒಂದು ದಿನ ದಿಢೀರನೇ ಆತ್ಮಹತ್ಯೆಗೆ ಶರಣಾಗಿಬಿಟ್ಟರು.
70ರ ದಶಕದಲ್ಲಿ ನಟಿ ಶೋಭಾ ದಕ್ಷಿಣ ಭಾರತದ ನಾಲ್ಕೂ ಚಿತ್ರರಂಗದ ಜನಪ್ರಿಯ ನಟಿ. ಅದರಲ್ಲೂ ತಮಿಳಿನಲ್ಲೇ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 17ನೇ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ, ಫಿಲ್ಮ್ ಫೇರ್, ರಾಜ್ಯ ಪ್ರಶಸ್ತಿಗಳು ಈಕೆಯ ಮುಡಿಗೇರಿದ್ದವು. ಅಕ್ಷರಶ: ಯಶಸ್ಸು ಈಕೆಗೆ ಅಂಟಿಕೊಂಡಿತ್ತು. ಇಷ್ಟೆಲ್ಲಾ ಇದ್ದರೂ ಶೋಭಾ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆಯಂತ ಕಠೋರ ನಿರ್ಧಾರಕ್ಕೆ ಬಂದಿದ್ದೇಕೆ?
ಚಿತ್ರರಂಗ ಇಂತಹ ಅದೆಷ್ಟೋ ದುರಂತಗಳನ್ನು ಕಂಡಿದೆ. ಕೆಲವು ಸಾವಿಗೆ ಉತ್ತರ ಸಿಕ್ಕಿದೆ. ಮತ್ತೆ ಕೆಲವು ನಿಗೂಢವಾಗಿಯೇ ಇವೆ. ಶೋಭಾ ಸಾವು ಕೂಡ ಅಷ್ಟೇ ನಿಗೂಢ. ಇದು ಆತ್ಮಹತ್ಯೆ ಅನ್ನೋದು ತನಿಖೆಯಿಂದ ಧೃಡವಾಗಿದ್ದರೂ, ಬೊಟ್ಟು ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಕಡೆ ತೋರುತ್ತಿತ್ತು. ಅಷ್ಟಕ್ಕೂ ಶೋಭಾ ಆತ್ಮಹತ್ಯೆ ಬಳಿಕ ಏನಾಯ್ತು? ತನಿಖೆ ಸಿಕ್ಕ ಸುಳಿವೇನು? ಈ ಸೀನ್‌ನಲ್ಲಿ ಎಂಜಿಆರ್ ಬಂದಿದ್ದೇಕೆ?

'ಅಪರಿಚಿತ' ಶೋಭಾ ಹಿನ್ನೆಲೆಯೇನು?
ಶೋಭಾರದ್ದು ಮೂಲತ: ಮಲಯಾಳಿ ಕುಟುಂಬ. ಕೆಪಿ ಮೆನನ್ ಹಾಗೂ ಪ್ರೇಮ ಮೆನನ್ ಈಕೆಯ ತಂದೆ-ತಾಯಿ. ಇವರಿಬ್ಬರು ಮಲಯಾಳಂ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಮಗಳನ್ನು ಸಿನಿಮಾಗಳಲ್ಲಿ ಪರಿಚಯಿಸಲು ಆಸೆ ಪಟ್ಟಿದ್ದರು. ಇಲ್ಲಿಂದ ಚಿಕ್ಕ ಪುಟ್ಟಗಳಲ್ಲಿ ನಟಿಸಲು ಶೋಭಾಗೆ ಅವಕಾಶ ಸಿಕ್ಕಿತ್ತು.
ಇಲ್ಲಿಂದ ಶೋಭಾ ಹಿಂತಿರುಗಿ ನೋಡಲೇ ಇಲ್ಲ. ಸಾಯುವವರೆಗೂ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇದರಲ್ಲಿ ಕನ್ನಡದ ಮೂರು ಸಿನಿಮಾಗಳು ಸೇರಿವೆ. ಅಸಲಿಗೆ ಈಕೆ ವೃತ್ತಿ ಬದುಕಿನ ಹಾದಿ ತಪ್ಪುವುದು ಇಲ್ಲಿಂದಲೇ.
ಕನ್ನಡದ ಮೊದಲ ಸಿನಿಮಾ 'ಕೋಕಿಲ'
ತಮಿಳಿನ ಜನಪ್ರಿಯ ಛಾಯಾಗ್ರಾಹಕರಾಗಿದ್ದ ಬಾಲು ಮಹೇಂದ್ರ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದರು. ಕಥೆ ಅಂದಿನ ಕಾಲಕ್ಕೆ ಪ್ರಬುದ್ಧ ಎನಿಸಿದ್ದರಿಂದ ತಮಿಳು ಬೇಡ ಕನ್ನಡದಲ್ಲಿ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದರು. ಅದುವೇ 'ಕೋಕಿಲಾ'. 1977ರಲ್ಲಿ ತೆರೆಕಂಡ ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯ್ತು. ಬಾಲು ಮಹೇಂದ್ರ ಗೆದ್ದುಬಿಟ್ಟರು.
'ಕೋಕಿಲಾ'ದಲ್ಲಿ ಕಮಲ್ ಹಾಸನ್, ಶೋಭಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕನ್ನಡ ನಟ ಕೋಕಿಲಾ ಮೋಹನ್‌ಗೆ ಇದು ಮೊದಲ ಸಿನಿಮಾ ಆಗಿತ್ತು. ಈ ಸಿನಿಮಾದ ಬಳಿಕ ಬಾಲು ಮಹೇಂದ್ರ ಹಾಗೂ ಶೋಭಾ ನಡುವೆ ಗಾಢ ಸಂಬಂಧ ಬೆಳೆದಿತ್ತು. ಮುಂದಿನ ವರ್ಷವೇ ಬಾಲು ಮಹೇಂದ್ರ ಅವರನ್ನು ವಿವಾಹವಾದರು. ಅದಾಗಲೇ ಬಾಲು ಮಹೇಂದ್ರಗೆ ಮದುವೆ ಆಗಿತ್ತು.

ಮದುವೆಯಾದ 2 ವರ್ಷಕ್ಕೆ ನಡೀತು ದುರಂತ
ಬಾಲು ಮಹೇಂದ್ರ ಅವರನ್ನು ಮದುವೆ ಆಗಲು ನಿರ್ಧರಿಸಿದ್ದು ಅಂದಿನ ಕಾಲಕ್ಕೆ ಶೋಭಾ ತೆಗೆದುಕೊಂಡಿದ್ದ ದಿಟ್ಟ ನಿರ್ಧಾರವಾಗಿತ್ತು. ಎಲ್ಲವೂ ಸರಿಯಾಗಿದೆ ಅನ್ನುವಾಗಲೇ 1980ರಲ್ಲಿ ಶೋಭಾ ಆತ್ಮಹತ್ಯೆ ಮಾಡಿಕೊಂಡು ಸುದ್ದಿ ದೊಡ್ಡ ಶಾಕ್ ಕೊಟ್ಟಿತ್ತು. ಆಗ ಪತಿ ಬಾಲು ಮಹೇಂದ್ರ ವಿರುದ್ಧ ಅನುಮಾನ ವ್ಯಕ್ತವಾಗಿತ್ತು.
ಶೋಭಾ ತಾಯಿ ಬಾಲು ಮಹೇಂದ್ರ ವಿರುದ್ಧ ಆರೋಪ ಮಾಡಿದ್ದರು. ಪೊಲೀಸರು ನಟಿಯ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಅದರಲ್ಲೂ ಆತ್ಮಹತ್ಯೆ ಅಂತಲೇ ವರದಿ ಬಂದಿತ್ತು. ಇನ್ನೂ ಶಾಕ್‌ನಲ್ಲೇ ಇತ್ತು ಚಿತ್ರರಂಗ. ಆಗಲೇ ಮತ್ತೊಂದು ಬೆಳವಣಿಗೆ ನಡೆದಿತ್ತು.

ಇಂದಿರಾ ಗಾಂಧಿಗೆ ಪತ್ರ
ಶೋಭಾ ತಾಯಿ ಪ್ರೇಮ ಮೆನನ್ ಮರಣೋತ್ತರ ವರದಿಗೆ ಸುಮ್ಮನಾಗಲಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಗೆ ಪತ್ರ ಬರೆದಿದ್ದರು. ಮಗಳ ವಿಷಯದಲ್ಲಿ ಮೋಸ ನಡೆದಿದೆ ಎಂದು ತನಿಖೆಗೆ ಮನವಿ ಮಾಡಿದ್ದರು. ನೇರವಾಗಿ ಶೋಭಾ ಪತಿ ಹಾಗೂ ನಿರ್ದೇಶಕ ಬಾಲು ಮಹೇಂದ್ರ ವಿರುದ್ಧ ಆರೋಪ ಮಾಡಿದ್ದರು.
ಇದು ಅಂದಿನ ತಮಿಳುನಾಡಿನ ಗವರ್ನರ್ ಕೈ ಸೇರಿತ್ತು. ಅವರು ಪೊಲೀಸರಿಗೆ ಸಂಪೂರ್ಣ ತನಿಖೆಗೆ ಆದೇಶ ನೀಡಿದ್ದರು. ಪೊಲೀಸರ ತನಿಖೆಯನ್ನು ಆರಂಭಿಸಿದ್ದರು. ಆದರೆ, ಅದು ಆತ್ಮಹತ್ಯೆ ಅಂತಲೇ ವರದಿ ನೀಡಿದರು. ಆದರೂ, ಶೋಭಾ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲೇ ಇಲ್ಲ.
ಶೋಭಾ ಸಾವಿನ ಗೊಂದಲಗಳೇನು?
ಶೋಭಾ ಸಾವು ಆತ್ಮಹತ್ಯೆ ಅಲ್ಲ ಅನ್ನೋದು ಹಲವರ ವಾದವಾಗಿತ್ತು. ತಾಯಿಯೂ ಸೇರಿದಂತೆ ಹಲವರು ಮೃತದೇಹವನ್ನು ಶಂಕೆಯಿಂದ ನೋಡಲು ಆರಂಭಿಸಿದ್ದರು. ಇತ್ತ ಬಾಲು ಮಹೇಂದ್ರ ಮದುವೆಯಾಗಿದ್ದರೂ, ಮೊದಲ ಪತ್ನಿ ಜೊತೆಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಇದನ್ನು ಶೋಭಾ ಪ್ರಶ್ನೆ ಮಾಡಿದ್ದರು. ಆದರೆ, ಮಗನ ಸಬೂಬು ಹೇಳಿ ಸುಮ್ಮನಾಗಿಸುತ್ತಿದ್ದರು ಎಂಬ ಮಾತು ಕೇಳಿ ಬಂದಿತ್ತು.
ಇನ್ನೊಂದು ಕಡೆ ಅಂದು ಆರಂಭದಲ್ಲಿ ತನಿಖಾ ನಡೆದಿದ್ದ ಅಧಿಕಾರಿ ಆರ್ ಕೆ ರಾಘವನ್ ಬರೆದ ಪುಸ್ತಕದಲ್ಲಿ ಎಂಜಿಆರ್ ಬಗ್ಗೆ ಬರೆದಿದ್ದಾರೆ. ಎಂಜಿಆರ್‌ಗೆ ಇದು ಕೊಲೆ ಅನ್ನೋ ಅನುಮಾನವಿತ್ತು. ಹೀಗಾಗಿ ಅಧಿಕಾರಿಯನ್ನು ಮನೆಗೆ ಕರೆಸಿ, ಹೇಗೆ ನಡೆದಿರಬಹುದು ಎಂದು ವಿವರಿಸಿ ಹೇಳಿದ್ದರು. ಅಲ್ಲದೆ ಈ ಆಂಗಲ್‌ನಲ್ಲಿ ತನಿಖೆ ನಡೆಸುವಂತೆ ಹೇಳಿದ್ದರು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಶೋಭಾ ಸಾವು ಆತ್ಮಹತ್ಯೆ ಎಂದರೂ ಕೆಲವು ನಂಬದವರೂ ಇದ್ದರು.


Click it and Unblock the Notifications











