"ನನಗೆ ಅಣ್ಣನದ್ದೇ ಚಿಂತೆ, ಅವನ ಭವಿಷ್ಯ ನೋಡಬೇಕಲ್ಲ"; ಅಗಲುವ ಮುನ್ನ ಅಪರ್ಣ ವಸ್ತಾರೆ ಹೀಗಂದಿದ್ಯಾಕೆ?
ಅಚ್ಚ ಕನ್ನಡದ ನಿರೂಪಕಿ ಅಪರ್ಣ ವಸ್ತಾರೆ ಅಗಲಿಕೆಯ ದು:ಖದಿಂದ ಇನ್ನೂ ಅವರ ಆಪ್ತರು ಹೊರಬಂದಿಲ್ಲ. ಎರಡು ವರ್ಷಗಳ ಕಾಲ ದೇಹದೊಳಗೆ ನೋವಿಟ್ಟುಕೊಂಡು ಸದಾ ನಗುಮುಖದಲ್ಲಿ ಪ್ರತ್ಯಕ್ಷ ಆಗುತ್ತಿದ್ದ ಅಪರ್ಣ ಅಗಲಿಕೆ ಆಪ್ತರಿಗೆ ಶಾಕಿಂಗ್ ಆಗಿತ್ತು. ತಮ್ಮ ನಿರೂಪಣೆಯಿಂದ ಕಾರ್ಯಕ್ರಮಕ್ಕೆ ಮೆರೆಗು ಕೊಡುತ್ತಿದ್ದ ಅಪರ್ಣ ಇಂದು ನೆನಪು ಮಾತ್ರ.
ಕೆಲವು ದಿನಗಳ ಹಿಂದಷ್ಟೇ ಅಪರ್ಣಗಾಗಿ ಪತಿ ನಾಗರಾಜ ವಸ್ತಾರೆ ಪ್ರಾರ್ಥನಾ ಸಭೆಯನ್ನು ಹಮ್ಮಿಕೊಂಡಿದ್ದರು. ಅವರನ್ನು ತೀರಾ ಹತ್ತಿರದಿಂದ ಬಲ್ಲವರಿಗೆ ಆಹ್ವಾನ ನೀಡಲಾಗಿತ್ತು. ಚಿತ್ರರಂಗದ ಗಣ್ಯರು, ಆತ್ಮೀಯರು ಈ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಅಪರ್ಣ ಈ ಮಹಾಮಾರಿಗೆ ಎಂದಿಗೂ ಹೆದರಿಕೊಂಡಿಲ್ಲ. ಆದರೂ ಅವರಿಗೆ ಒಂದು ಚಿಂತೆ ಕಾಡುತ್ತಿತ್ತು.

ಅಪರ್ಣಗೆ ಅವರ ಅಣ್ಣ ಚೈತನ್ಯ ಅಂದರೆ ತುಂಬಾನೇ ಇಷ್ಟ. ಆದರೆ, ಅವರೂ ಕೂಡ ಅನಾರೋಗ್ಯಕ್ಕೀಡಾಗಿದ್ದಾರೆ. ಈ ಕಾರಣಕ್ಕೆ ಅಣ್ಣನ ಬಗ್ಗೆ ತುಂಬಾನೇ ಚಿಂತೆಯಲ್ಲಿದ್ದರು. ಈ ವಿಷಯವನ್ನು ಹಿರಿಯ ಪತ್ರಕರ್ತ ಎನ್‌ಎಸ್ ಶ್ರೀಧರಮೂರ್ತಿ ಅವರು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಅಪರ್ಣ ಅಗಲುವ 10 ದಿನ ಮುನ್ನ ಫೋನ್‌ನಲ್ಲಿ ಏನು ಸಂಭಾಷಣೆ ನಡೀತು? ಅನ್ನೋದನ್ನು ವಿವರಿಸಿದ್ದಾರೆ.
ಅಪರ್ಣ ವಸ್ತಾರೆ ಹಾಗೂ ಹಿರಿಯ ಪತ್ರಕರ್ತ, ಲೇಖಕ ಎನ್‌ಎಸ್ ಶ್ರೀಧರಮೂರ್ತಿಗಳು ಒಟ್ಟಿಗೆ ಹಲವು ಕಾರ್ಯಕ್ರಮಗಳಿಗೆ ಕೆಲಸ ಮಾಡಿದ್ದಾರೆ. ಬಹಳ ದಿನಗಳಿಂದ ಇಬ್ಬರಿಗೂ ಉತ್ತಮ ಪರಿಚಯವೇ ಇತ್ತು. ಆದರೂ, ತಮ್ಮ ಕಾಯಿಲೆ ವಿಷಯವನ್ನು ಹೇಳಿಕೊಂಡಿರಲಿಲ್ಲ. "ನಾಗರಾಜ್ ವಸ್ತಾರೆ ಅವರು ಒಂದು ಮೆಸೇಜ್ ಹಾಕಿದ್ದರು. ಎರಡು ವರ್ಷ ಆಗಿತ್ತು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಅಂತ. ತಕ್ಷಣ ನನ್ನ ಫೋನ್‌ನ ಕಾಲ್‌ಲಾಗ್ ತೆಗೆದು ನೋಡಿದೆ. ಆ ಎರಡು ವರ್ಷದಲ್ಲಿ ಸುಮಾರು 20ಕ್ಕೂ ಹೆಚ್ಚು ಬಾರಿ ಫೋನ್ ಮಾಡಿದ್ದೀನಿ. ಎಲ್ಲವೂ 10 ರಿಂದ 12 ನಿಮಿಷಗಳಷ್ಟು ಫೋನ್ ಕಾಲ್‌ಗಳಾಗಿದ್ದವು." ಎಂದು ಹೇಳಿದ್ದಾರೆ.
ಅಪರ್ಣ ಅಗಲುವ 10 ದಿನಗಳಿಗೆ ಮೊದಲು ಎನ್‌ಎಸ್ ಶ್ರೀಧರಮೂರ್ತಿ ಕರೆ ಮಾಡಿದ್ದರು. ಆಗಲೂ ತಮಗಿರುವ ಕಾಯಿಲೆ ಬಗ್ಗೆ ಹೇಳಿರಲಿಲ್ಲ. "ಅವರು ಸಾಯುವ 10 ದಿನ ಮುನ್ನ ನಾನು ಮಾತಾಡಿದ್ದೀನಿ. ಅವತ್ತೂ ಈ ಬಗ್ಗೆ ಹೇಳಲಿಲ್ಲ. ನಾನು ಅವರು ಒಂದು ಚಾನೆಲ್‌ಗೆ ಕಾರ್ಯಕ್ರಮವನ್ನು ಮಾಡುತ್ತಿದ್ವಿ. ಅದರ ಎರಡನೇ ಸೀಸನ್ ಮುಂದುವರೆಸೋಣ ಅಂತ ಬಹಳ ಆಸೆಯಿತ್ತು. ಆಯ್ತು, ನಮ್ಮ ಮನೆಯೊಳಗೆ ಶೂಟಿಂಗ್ ಮಾಡುವುದಾದರೆ ಓಕೆ. ಚಾನೆಲ್‌ಗೆ ಬರಲಾರೆ ಎಂದು ಹೇಳಿದ್ದರು. ಯಾಕೆ ಚಾನೆಲ್‌ಗೆ ಬರಲ್ಲ ಅಂತ ಹೇಳಬೇಕು ಅನ್ನೋದು ಹೊಳೆಯಲಿಲ್ಲ." ಎಂದು ರಿಕಾಲ್ ಮಾಡಿಕೊಂಡಿದ್ದಾರೆ.

ಅಪರ್ಣ ವಸ್ತಾರೆಗೆ ಕೋಲ್ಡ್ ಪ್ರಾಬ್ಲಮ್ ಇತ್ತು. 'ಜೋಗುಳ' ಸೀರಿಯಲ್ ಮಾಡುವಾಗ ಕೋಲ್ಡ್‌ನಿಂದ ತುಂಬಾನೇ ಕಷ್ಟ ಪಟ್ಟಿದ್ದರು. ಮಲೆನಾಡಿನ ಕೊಪ್ಪದ ಸಮೀಪ ಎಲ್ಲೋ ಔಷಧಿ ತೆಗೆದುಕೊಳ್ಳುತ್ತಿದ್ದರು. ಅದೇ ಸಮಸ್ಯೆ ಇರಬಹುದು ಅಂತ ಎನ್ ಎಸ್ ಶ್ರೀಧರ ಮೂರ್ತಿಗಳು ಅಂದುಕೊಂಡಿದ್ದರು. ಆದರೆ, ಅವರಿಗೆ ತಮ್ಮ ಆರೋಗ್ಯಕ್ಕಿಂತ ಅಣ್ಣನ ಆರೋಗ್ಯದ ಬಗ್ಗೆನೇ ಚಿಂತೆಯಿತ್ತು.
"ನಾನು ಕೊನೆಯ ಸಲ ಮಾತಾಡಿದಾಗ ಅವರಿಗೆ ಅಣ್ಣ ಚೈತನ್ಯ ಅಂದರೆ ಬಹಳ ಇಷ್ಟ. ಅವರು ಒಳ್ಳೆಯ ಸಾಫ್ಟ್ ವೇರ್ ಇಂಜಿನಿಯರ್ ಕೂಡ ಸ್ವಲ್ಪ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಮುಂದೆ ಹೇಗಿರುತ್ತಾರೆ ಅನ್ನೋದೇ ನನಗೆ ಬಹಳ ಯೋಚನೆ. ನಮ್ಮ ಮನೆ ಹತ್ತಿರನೇ ಅವರಿಗೆ ಮನೆ ಮಾಡಿಕೊಟ್ಟಿದ್ದೀನಿ. ಮೇಲೆ ನರ್ಸ್ ಇದ್ದಾರೆ. ಅಂದರು. ಯಾಕಿಷ್ಟು ತಲೆ ಕೆಡಿಸಿಕೊಳ್ಳುತ್ತೀರ ಅಂದೆ. ಅವನ ಭವಿಷ್ಯವನ್ನು ನೋಡಬೇಕಲ್ಲ ಎಂದಿದ್ರು. ಅದರ ಅರ್ಥ ಏನು ಅನ್ನೋದು ನಿಜಕ್ಕೂ ಅರ್ಥ ಆಗಿರಲಿಲ್ಲ" ಎಂದು ಅಂದು ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.
ಕೊನೆಯ ಬಾರಿ ಭೇಟಿಯಾದಾಗ ಅಪರ್ಣ ಅವರಿಗೆ ಯಾಕಿಷ್ಟು ತೆಳ್ಳಗೆ ಆಗಿದ್ದೀರಾ? ಎಂದು ಶ್ರೀಧರಮೂರ್ತಿಗಳು ಪ್ರಶ್ನೆ ಮಾಡಿದ್ದಂತೆ. ಆಗ ಅವರು "ಅಪರ್ಣ ಅಂದರೆ ಏನು ಹೇಳಿ? ಎಲೆ ತಿಂದು ಬದುಕೋಳು. ಹಾಗಿದ್ಮೇಲೆ ಎಲೆ ತಿಂದು ಬದುಕುವವರು ಹೇಗೆ ದಪ್ಪ ಇರುತ್ತಾರೆ? ನಾವೆಲ್ಲ ಹಂಗೆ ಇರೋದು ಅಂತ ಹೇಳಿದ್ರು. ಇವೆಲ್ಲದರ ಹಿಂದೆ ಇದೆಲ್ಲ ಇದೆ ಅನ್ನೋದು ಅರ್ಥ ಆಗಿರಲಿಲ್ಲ. ಅಪರ್ಣ ಹಾಗೆ ಅವರು ಯಾವತ್ತೂ ನೋವನ್ನು ತೋರಿಸಿಕೊಂಡವರಲ್ಲ. ಇನ್ನೊಬ್ಬರ ನೋವಿಗೆ ಧ್ವನಿಯಾದವರು." ಎನ್ನುತ್ತಾರೆ ಶ್ರೀಧರ ಮೂರ್ತಿಗಳು.


Click it and Unblock the Notifications











