ಡಿಡಿಯ 'ಮಹಾಭಾರತ'ದಲ್ಲಿ ರಮ್ಯಾ ಕೃಷ್ಣ 'ದ್ರೌಪದಿ' ಆಗಲಿಲ್ಲ ಏಕೆ? ಕೊನೆಯ ಕ್ಷಣದಲ್ಲಿ ಏನಾಯ್ತು?
ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅದೆಷ್ಟೇ ಅದ್ಧೂರಿಯಾಗಿ ಮಹಾಭಾರತವನ್ನು ಚಿತ್ರೀಕರಿಸಿದರೂ, ದೂರದರ್ಶನದ ಮಹಾಭಾರತವನ್ನು ಹಿಂದಿಕ್ಕುವುದಕ್ಕೆ ಸಾಧ್ಯವಾಗಿಲ್ಲ. ಮೊದಲು ಪ್ರಸಾರಗೊಂಡ ದಿನದಿಂದ ಇಂದಿನವರೆಗೂ ಡಿಡಿಯ ಮಹಾಭಾರತವೇ ವೀಕ್ಷಕರ ಫೇವರಿಟ್. ಅಂದು ಈ ಧಾರಾವಾಹಿಯಲ್ಲಿ ನಟಿಸಿದ ಪ್ರತಿಯೊಬ್ಬರೂ ಇಂದಿಗೂ ಆ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡಿದ್ದಾರೆ.
1988ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ 'ಮಹಾಭಾರತ' ಪ್ರಸಾರಗೊಂಡಿತ್ತು. ಅದಕ್ಕೆ ವೀಕ್ಷಕರಿಂದ ತುಂಬಾನೇ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಮೊದಲ ಬಾರಿಗೆ ಮಹಾಭಾರತವನ್ನು ಜನರು ಧಾರಾವಾಹಿಯ ರೂಪದಲ್ಲಿ ಟಿವಿಯಲ್ಲಿ ನೋಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ವೀಕ್ಷಕರಿಗೆ ಈ ಧಾರಾವಾಹಿ ಯಾವಾಗ ಮುಗೀತು ಅನ್ನೋದೇ ಗೊತ್ತಾಗಿರಲಿಲ್ಲ.

ದೂರದರ್ಶನದಲ್ಲಿ ಸುಮಾರು 94 ಎಪಿಸೋಡ್‌ಗಳು ಪ್ರಸಾರಗೊಂಡಿತ್ತು. 'ಮಹಾಭಾರತ' ಅಷ್ಟೊಂದು ಸಕ್ಸಸ್ ಆಗುವುದಕ್ಕೆ ಪ್ರತಿಯೊಂದು ಪಾತ್ರಕ್ಕೂ ಆಯ್ಕೆ ಮಾಡಿಕೊಂಡ ಕಲಾವಿದರು. ಪ್ರತಿ ಪಾತ್ರಕ್ಕೂ ಹೊಂದುವಂತೆ ಇದ್ದರು. ಈ ಮಹಾ ಧಾರಾವಾಹಿಯ ಪ್ರತಿಯೊಂದು ಪಾತ್ರಕ್ಕೂ ಇಂತಹವರೇ ಬೇಕು ಅಂತ ನಿರ್ದೇಶಕ ಬಿಆರ್ ಚೋಪ್ರಾ ಆಯ್ಕೆ ಮಾಡಿದ್ದರು. ನಿರೀಕ್ಷೆಯಂತೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಅದರಲ್ಲೊಂದು ದ್ರೌಪದಿಯ ಪಾತ್ರಧಾರಿಯನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಿನದ್ದಾಗಿತ್ತು.
ಆರಂಭದಲ್ಲಿ ನಿರ್ದೇಶಕ ಬಿ ಆರ್ ಚೋಪ್ರಾ ಆರು ನಟಿಯನ್ನು ದ್ರೌಪದಿ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ. ಕೊನೆಗೆ ಅವರಲ್ಲಿ ಇಬ್ಬರ ಹೆಸರು ಇಟ್ಟುಕೊಳ್ಳಲಾಗಿತ್ತು. ಅದರಲ್ಲೂ 'ಬಾಹುಬಲಿ' ಮೂಲಕ ಮೂಲಕ ದೇಶಾದ್ಯಂತ ಸದ್ದು ಮಾಡಿರುವ ರಮ್ಯಾ ಕೃಷ್ಣನ್ ಕೂಡ ಒಬ್ಬರಾಗಿದ್ದರು. ಇನ್ನೊಬ್ಬರು ದ್ರೌಪದಿ ಪಾತ್ರದಲ್ಲಿ ನಟಿಸಿರುವ ರೂಪಾ ಗಂಗೂಲಿ.
ಇವರಿಬ್ಬರಿಗೂ ಮುನ್ನ ಬಾಲಿವುಡ್‌ನ ಸ್ಟಾರ್ ನಟಿ ಜೂಹಿ ಚಾವ್ಲಾಗೆ ನಿರ್ದೇಶಕರು ಆಫರ್ ಕೊಟ್ಟಿದ್ದರು. ಆದರೆ, ಜೂಹಿ ಚಾವ್ಲಾ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು. ಅದಾಗಲೇ ಆಮಿರ್ ಖಾನ್ ನಟಿಸುತ್ತಿದ್ದ 'ಖಯಾಮತ್ ಸೇ ಖಯಾಮತ್ ತಕ್' ಸಿನಿಮಾಗೆ ನಾಯಕಿಯಾಗಿ ಜೂಹಿ ಚಾವ್ಲಾ ಆಯ್ಕೆ ಆಗಿದ್ದರು. ಹೀಗಾಗಿ ದ್ರೌಪದಿ ಪಾತ್ರ ಮಾಡುವುದಕ್ಕೆ ಜೂಹಿ ಚಾವ್ಲಾ ಹಿಂದೇಟು ಹಾಕಿದ್ದರು.

'ಮಹಾಭಾರತ'ದ ದ್ರೌಪದಿ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದರೆ ಹೇಗಿರುತ್ತಿತ್ತು? ಈ ಪ್ರಶ್ನೆಗೆ ಅಂದು ಉತ್ತರ ಹುಡುಕುವುದು ಕಷ್ಟವಾಗಿರುತ್ತಿತ್ತು. ಆದರೆ, 'ಬಾಹುಬಲಿ' ಸಿನಿಮಾ ಬಳಿಕ ರಮ್ಯಾ ಕೃಷ್ಣ ಕೂಡ ದ್ರೌಪದಿ ಪಾತ್ರಕ್ಕೆ ಸರಿ ಹೊಂದುತ್ತಿದ್ದರೇನೋ? ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಖಂಡಿತಾ ಮೂಡುತ್ತೆ. ಅಷ್ಟಕ್ಕೂ ಶಾರ್ಟ್‌ಲಿಸ್ಟ್ ಆಗಿದ್ದ ರಮ್ಯಾ ಕೃಷ್ಣರನ್ನು ಈ ಪಾತ್ರದಿಂದ ಕೈ ಬಿಡುವುದಕ್ಕೆ ಒಂದೇ ಒಂದು ಕಾರಣ.
ದ್ರೌಪದಿ ಪಾತ್ರಕ್ಕೆ ರಮ್ಯಾ ಕೃಷ್ಣ ಆಯ್ಕೆ ಆಗಿದ್ದರೂ, ಕೊನೆಯಲ್ಲಿ ಅವರಿಗೆ ಹಿಂದಿ ಭಾಷೆ ಮಾತಾಡಲು ಚೆನ್ನಾಗಿ ಬಾರದೆ ಇದ್ದಿದ್ದರಿಂದ ಕೈ ಬಿಡಲಾಯಿತು. ಮಹಾಭಾರತದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿದ್ದ ರೂಪಾ ಗಂಗೂಲಿ ಹಿಂದಿ ಭಾಷೆಯನ್ನು ಚೆನ್ನಾಗಿ ಮಾತಾಡುತ್ತಿದ್ದಿದ್ದರಿಂದ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಇಂದಿಗೂ ದ್ರೌಪದಿಯ ಹೆಸರು ಯಾರೇ ತೆಗೆದರೂ ಮೊದಲಿಗೆ ನೆನಪಾಗುವುದೇ ರೂಪಾ ಗಂಗೂಲಿ. ಆದರೆ, ರಮ್ಯಾ ಕೃಷ್ಣ ಈಗ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.


Click it and Unblock the Notifications











