ಮದುವೆಗೂ ಮುನ್ನ ಅನಂತ್‌ನಾಗ್ ಬಾಳಲ್ಲಿ ಬಂದಿದ್ದ ಆ ಮರಾಠಿ ನಟಿ ಯಾರು ಗೊತ್ತೇ? ಬ್ರೇಕಪ್ ಆಗಿದ್ದೇಕೆ?
ಕನ್ನಡ ಚಿತ್ರರಂಗ ಕಂಡ ಹ್ಯಾಂಡ್‌ಸಮ್ ನಾಯಕ ನಟರಲ್ಲಿ ಅನಂತ್‌ನಾಗ್ ಕೂಡ ಒಬ್ಬರು. 80ರ ದಶಕದಲ್ಲಿ ಅನಂತ್‌ನಾಗ್‌ರನ್ನು ಚಾಕಲೇಟ್ ಬಾಯ್ ಅಂತಲೇ ಕರೆಯುತ್ತಿದ್ದರು. ಇಂತಹ ಸುಂದರ ನಟನಿಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಅದಾಗಲೇ ಹುಟ್ಟಿಕೊಂಡಿದ್ದರು. ಅನಂತ್‌ನಾಗ್‌ಗೆ ಸಿನಿಮಾದಿಂದ ಸಿನಿಮಾಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದರು.
ನಾಟಕಗಳಿಂದ ಅನಂತ್‌ನಾಗ್ ಮೊದಲು ವೃತ್ತಿ ಬದುಕು ಆರಂಭ ಮಾಡಿದ್ದರು. ಮುಂಬೈನಲ್ಲಿ ನೆಲೆಸಿದ್ದಾಗ, ಅನಂತ್‌ನಾಗ್ ಕೊಂಕಣಿ, ಮರಾಠಿ, ಕನ್ನಡ ಹಾಗೂ ಹಿಂದಿ ಭಾಷೆಯ ನಾಟಕಗಳಲ್ಲಿ ನಟಿಸಿದ್ದರು. ಬಳಿಕ 1973ರಲ್ಲಿ 'ಸಂಕಲ್ಪ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಮೊದಲ ಸಿನಿಮಾದಲ್ಲಿ ಮೆಚ್ಚುಗೆ ಗಳಿಸಿದ ಬಳಿಕ ಅನಂತ್‌ನಾಗ್ ಬೆಂಗಾಲಿ ಸಿನಿಮಾಗಳ ನಿರ್ದೇಶಕ ಶ್ಯಾಮ್ ಬೆನಗಲ್ ಕಣ್ಣಿಗೆ ಬಿದ್ದಿದ್ದರು.

ನಿರ್ದೇಶಕ ಶ್ಯಾಮ್ ಬೆನೆಗಲ್ ನಿರ್ದೇಶಿಸಿದ 'ಅಂಕುರ್' ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೂ ಪ್ರವೇಶ ಮಾಡಿದ್ದರು. ಇದೇ ಸಿನಿಮಾದಲ್ಲಿ ಮರಾಠಿ ರಂಗಭೂಮಿ ಹಾಗೂ ಕಿರುತೆರೆ ನಟಿ ಪ್ರಿಯಾ ತೆಂಡೂಲ್ಕರ್ ಕೂಡ ನಟಿಸಿದ್ದರು. ಈ ವೇಳೆ ಅನಂತ್‌ನಾಗ್ ಹಾಗೂ ಪ್ರಿಯಾ ತೆಂಡೂಲ್ಕರ್ ನಡುವೆ ಆತ್ಮೀಯತೆ ಬೆಳೆದಿತ್ತು. ನಟಿ ಗಾಯತ್ರಿಯರವನ್ನು ವಿವಾಹವಾಗುವುದಕ್ಕೂ ಮುನ್ನ ಅನಂತ್‌ನಾಗ್ ಬಾಳಲ್ಲಿ ಪ್ರಿಯಾ ತೆಂಡೂಲ್ಕರ್ ಪ್ರವೇಶ ಮಾಡಿ ಆಗಿತ್ತು.
ಪ್ರಿಯಾ ತೆಂಡೂಲ್ಕರ್ ಅದಾಗಲೇ ದೂರದರ್ಶನದಲ್ಲಿ ಪ್ರಸಾರ ಆಗುತ್ತಿದ್ದ 'ರಜನಿ' ಅನ್ನೋ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆಗಿದ್ದರು. ಆದರೆ, 'ಅಂಕುರ್' ಸಿನಿಮಾ ಅನಂತ್‌ನಾಗ್ ಹಾಗೂ ಪ್ರಿಯಾ ತೆಂಡೂಲ್ಕರ್ ಅವರನ್ನು ಒಂದು ಮಾಡಿತ್ತು. ಇವರಿಬ್ಬರ ಪ್ರೇಮಕಥೆಯ ಬಗ್ಗೆ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಒಮ್ಮೆ ಹಂಚಿಕೊಂಡಿದ್ದರು.
"ಅನಂತ್‌ನಾಗ್ ಜೀವನದಲ್ಲಿ ಮೊದಲು ಬಂದವರು ಗಾಯತ್ರಿ ಅಲ್ಲ ಪ್ರಿಯಾ ತೆಂಡೂಲ್ಕರ್. ಮರಾಠಿಯ ಸುಪ್ರಸಿದ್ಧ ನಾಟಕಗಾರ ವಿಜಯ ತೆಂಡೂಲ್ಕರ್ ಅವರ ಮಗಳು ಪ್ರಿಯಾ ತೆಂಡೂಲ್ಕರ್. ಇವರು ಅನಂತ್‌ನಾಗ್ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರವೇಶ ಮಾಡಿದ್ದರು. ಅದಾಗಲೇ ರಜನಿ ಅನ್ನೋ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದರು." ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅನಂತ್‌ನಾಗ್ ಪ್ರೀತಿಯಲ್ಲಿ ಬಿದ್ದಿದ್ದ ಪ್ರಿಯಾ ತೆಂಡೂಲ್ಕರ್ ಕನ್ನಡದ 'ಮಿಂಚಿನ ಓಟ' ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಇವರಿಬ್ಬರು ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. "ಶಂಕರ್ ನಾಗ್ ಮಿಂಚಿನ ಓಟ ಸಿನಿಮಾ ಮಾಡುವಾಗ ಕೂಡ ಆ ಸಿನಿಮಾದಲ್ಲಿ ಪ್ರಿಯಾ ತೆಂಡೂಲ್ಕರ್ ಆ ಸಿನಿಮಾದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆದಿದ್ದರಿಂದ ಪ್ರೇಮ ಸಂಬಂಧವಾಗಿ ಬೆಳೆಸಿಕೊಳ್ಳದೆ, ಸ್ನೇಹ ಸಂಬಂಧವಾಗಿ ಬೆಳೆಸಿಕೊಂಡರು. ಕೊನೆಯವರೆಗೂ ಪ್ರಿಯಾ ತೆಂಡೂಲ್ಕರ್ ಹಾಗೂ ಅನಂತ್‌ನಾಗ್ ಸ್ನೇಹಿತರಾಗಿಯೇ ಮುಂದುವರೆದರು." ಎಂದು ಎನ್ ಎಸ್ ಶ್ರೀಧರಮೂರ್ತಿ ಹೇಳಿದ್ದಾರೆ.
ಪ್ರಿಯಾ ತೆಂಡೂಲ್ಕರ್‌ರಿಂದ ದೂರವಾದ ಬಳಿಕ ಅನಂತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಮತ್ತೆ ಅವರಿಗೆ ಪ್ರೀತಿ ಹುಟ್ಟಿದ್ದು 'ಆಟೋ ರಾಜ' ಸಿನಿಮಾದ ನಟಿ ಗಾಯತ್ರಿಯವರನ್ನೇ ನೋಡಿದಾಗಲೇ, "ಗಾಯತ್ರಿಯವರು ಮೂಲತ: ಪಂಜಾಬ್‌ನಿಂದ ಬಂದವರು. ಸಫೇದಿ ಹಾತಿ ಅಂತ ಪಂಜಾಬಿ ಚಿತ್ರರಂಗದಲ್ಲಿ ವೃತ್ತಿಯನ್ನು ಆರಂಭಿಸಿದವರು. ಆಟೋರಾಜ ಸಿನಿಮಾದಲ್ಲಿ ಶಂಕರ್‌ನಾಗ್‌ಗೆ ನಾಯಕಿಯಾಗಿ ಬಂದವರು. ಆಟೋರಾಜ ಸಿನಿಮಾ ನಡೆಯುವಾಗಲೇ ಮೊದಲು ಅನಂತ್‌ನಾಗ್ ಅವರನ್ನು ನೋಡಿದ್ದು. ಅಲ್ಲೇ ಪರಿಚಯ ಆಗಿದ್ದು. ವಸಂತ ಗೀತೆ ಸಿನಿಮಾ ಮಾಡುವಾಗ ಇಬ್ಬರ ನಡುವೆ ಪರಸ್ಪರ ಸ್ನೇಹ ಸಂಬಂಧ ಬೆಳೆಯುತ್ತಾ ಹೋಯ್ತು." ಎನ್ನುತ್ತಾರೆ ಎನ್ ಎಸ್ ಶ್ರೀಧರಮೂರ್ತಿ.
ಅನಂತ್‌ನಾಗ್ ಹಾಗೂ ಗಾಯತ್ರಿ ಸಂಬಂಧ ಆತ್ಮೀಯರಾಗಿದ್ದರು. ಅನಂತ್‌ನಾಗ್ ಅವರಿಗೆ ಗಾಯತ್ರಿ ಅವರ ಮೇಲೆ ಮನಸ್ಸಾಗಿತ್ತು. ಆದರೆ, ಇಬ್ಬರ ನಡುವೆ 15 ವರ್ಷಗಳ ಅಂತರವಿತ್ತು. ಅನಂತ್‌ನಾಗ್ ಪ್ರಪೋಸ್ ಮಾಡಿದಾಗ, ಗಾಯತ್ರಿ ಒಂದು ಷರತ್ತು ಹಾಕಿದ್ದರು. "ಸುಖ ಸಂಸಾರಕ್ಕೆ 12 ಸೂತ್ರಗಳು ಸಿನಿಮಾದಲ್ಲಿ ಇಬ್ಬರು ನಾಯಕ ನಾಯಕಿಯಾಗಿ ಅಭಿನಯಿಸಿದ್ದರು. ಇಬ್ಬರು ಒಟ್ಟಿಗೆ ನಟಿಸುವಾಗಲೇ ಅನಂತ್‌ನಾಗ್ ಅವರಿಗೆ ಗಾಯತ್ರಿ ತನ್ನ ಜೀವನಕ್ಕೆ ಆಧಾರವಾಗಿ ನಿಲ್ಲುತ್ತಾರೆ ಅಂತ ಅನಿಸಿತ್ತು. ಆದರೆ, ಸಮಸ್ಯೆ ಅನಂತ್‌ನಾಗ್ ಹಾಗೂ ಗಾಯತ್ರಿ ನಡುವಿನ ವಯಸ್ಸಿನ ಅಂತರ 15 ವರ್ಷ. ವಯಸ್ಸಿನ ಅಂತರವಿದ್ದಿದ್ದರಿಂದ ಗಾಯತ್ರಿ ಒಪ್ಪುತ್ತಾರೋ ಇಲ್ಲವೋ ಅಂತ ಯೋಚನೆ ಮಾಡಿ ಕೇಳಿದ್ರು. ಮದುವೆ ಬಳಿಕ ಸಿನಿಮಾದಲ್ಲಿ ನಟಿಸಲ್ಲ ಅನ್ನೋ ಷರತ್ತು ಹಾಕಿ ಒಪ್ಪಿಗೆ ಸೂಚಿಸಿದ್ದರು." ಎಂದು ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications











