ಗುಂಡು ಹಾರಿದ್ದು ಬಾಲಣ್ಣ ಹಿಡಿದ ಗನ್‌ನಿಂದ, ವಿಷ್ಣುದಾದ ಮೇಲೆ ಅಪವಾದ ಹೇಗೆ ಬಂತು? ಘಟನೆ ಹೇಗೆ ನಡೀತು?
ಸಿನಿಮಾರಂಗದಲ್ಲಿ ಅದೆಷ್ಟೋ ವಿವಾದಗಳಿಗೆ ತಾರ್ಕಿಕ ಅಂತ್ಯ ಸಿಗದೆ ಹಾಗೇ ಉಳಿದು ಬಿಟ್ಟಿದೆ. ಯಾರೇ ಬಂದು ಅದೇನೇ ಸಮಜಾಯಿಷಿ ಕೊಟ್ಟರೂ ಅಭಿಮಾನಿಗಳು ಮಾತ್ರ ಒಪ್ಪುವ ಸ್ಥಿತಿಯಲ್ಲಿಯೇ ಇಲ್ಲ. 'ಗಂಧದ ಗುಡಿ' ಘಟನೆ ಕೂಡ ಅದೇ. ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಜೊತೆಯಾಗಿ ನಟಿಸಿದ ಏಕೈಕ ಸಿನಿಮಾ 'ಗಂಧದ ಗುಡಿ'. ಈ ಸಿನಿಮಾದ ಕೊನೆಯ ಕ್ಲೈ ಮ್ಯಾಕ್ಸ್ ಸೀನ್ ಈ ಕಾಂಬಿನೇಷನ್‌ನ ಕೊನೆಯ ಸೀನ್ ಮಾಡಿ ಬಿಟ್ಟಿತ್ತು.
'ಗಂಧದ ಗುಡಿ'ಯ ಕ್ಲೈಮ್ಯಾಕ್ಸ್ ಸೀನ್ ತೆಗೆಯುವಾಗ ಬಾಲಕೃಷ್ಣ ಅಣ್ಣಾವ್ರಿಗೆ ಶೂಟ್ ಮಾಡಬೇಕಿತ್ತು. ಅಣ್ಣಾವ್ರ ತಪ್ಪಿಸಿಕೊಳ್ಳಬೇಕಿತ್ತು. ಇದೂ ಕ್ಲೈಮ್ಯಾಕ್ಸ್ ಸೀನ್. ಅದಾಗಲೇ ಸಿನಿಮಾದ ಉದ್ದಕ್ಕೂ ವೈರಿಗಳಾಗಿಯೇ ಇದ್ದ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಸೀನ್ ಕ್ಲೈಮ್ಯಾಕ್ಸ್‌ನಲ್ಲಿ ಬದಲಾಗಿತ್ತು. ಅಣ್ಣಾವ್ರ ತಮ್ಮ ಅನ್ನೋದು ವಿಷ್ಣುದಾದಗೆ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಗೊತ್ತಾಗಿರುತ್ತೆ.

ಬಾಲಣ್ಣ ಗನ್ ಹಿಡಿದು ರಾಜ್‌ಕುಮಾರ್‌ಗೆ ಶೂಟ್ ಮಾಡುವ ಕೊನೆಯ ಸೀನ್ ವೇಳೆಗಾಗಲೇ ವಿಷ್ಣುದಾದನ ಪಾತ್ರ ಸತ್ತು ಹೋಗಿತ್ತು. ಹೀಗಾಗಿ ಅಲ್ಲಿ ವಿಷ್ಣುವರ್ಧನ್ ಶೂಟ್ ಮಾಡುವ ಪ್ರಸಂಗ ಬಂದಿರಲಿಲ್ಲ. ಹಾಗಿದ್ದರೂ ವಿಷ್ಣುವರ್ಧನ್ ಮೇಲೆ ಯಾಕೀ ಅಪವಾದ ಬಂತು? ಗನ್‌ನಲ್ಲಿ ರಿಯಲ್ ಬುಲೆಟ್ ಬಂದಿದ್ದೇಗೆ? ಬುಲೆಟ್ ಹಾರಿದ್ದು ಯಾರ ಗನ್‌ನಿಂದ? ಅನ್ನೋ ಪ್ರಶ್ನೆಗಳು ಇಂದಿಗೂ ಸಿನಿಪ್ರಿಯರನ್ನು ಕಾಡುತ್ತಲೇ ಇದೆ.
'ಗಂಧದ ಗುಡಿ' ವಿವಾದಾತ್ಮಕ ಘಟನೆಯನ್ನು ಮನವರಿಕೆ ಮಾಡಿಸುವುದಕ್ಕೆ ಹಲವು ಪ್ರಯತ್ನ ಮಾಡಿದ್ದಾರೆ. ಆದರೆ, ಅದ್ಯಾವುದಕ್ಕೂ ಸಮಾಧಾನ ಆದಂತಿಲ್ಲ. ಈಗ ಗಂಧದ ಗುಡಿ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಾಗೇಶ್ ಈ ಘಟನೆಯನ್ನು ವಿವರಿಸಿದ್ದಾರೆ. ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಹಿರಿಯ ನಟ, ನಿರ್ದೇಶಕ ಇಂಚಿಂಚಾಗಿ ವಿವರಿಸಿದ್ದಾರೆ.
"ಗಂಧದ ಗುಡಿ ಸಮಯದಲ್ಲಿ ಏನೋ ಆಗಿದೆ ಅಂತ ಬಹಳ ಜನ ಅಂದುಕೊಂಡಿದ್ದಾರೆ. ಆ ಘಟನೆ ನಡೆದಾಗ ಆ ಸಿನಿಮಾಗೆ ನಾನು ಕೋ ಡೈರೆಕ್ಟರ್ ಆಗಿದ್ದಾಗ ನಾನು ಅಲ್ಲೇ ಇದ್ದೆ. ನಿಜವಾಗಿಯೂ ಏನಾಯ್ತು ಅಂದರೆ, ಅದು ಸಿನಿಮಾದ ಕೊನೆಯ ಸೀನ್. ಬಾಲಣ್ಣ ಆ ಸಿನಿಮಾದ ವಿಲನ್. ರಾಜ್‌ಕುಮಾರ್‌ಗೆ ಅವರು ಶೂಟ್ ಮಾಡಬೇಕು. ಎಂಪಿ ಶಂಕರ್ ಹತ್ತಿರ ಯಾವಾಗಲೂ ದೊಡ್ಡ ಗನ್ ಇರುತ್ತೆ. ಇದನ್ನು ತೆಗೆದುಕೊಳ್ಳಿ ಅಂತ ಕೊಟ್ರು. ಬಾಲಣ್ಣ ತೆಗೊಂಡ್ರು ಡೈಲಾಗ್ ಹೇಳಿದ್ರು ಕ್ಲಿಕ್ ಮಾಡುವುದಕ್ಕೆ ಹೋದರು. ಆದರೆ, ಆಗಲಿಲ್ಲ. ಇನ್ನೊಂದು ಸಾರಿ ಮಾಡಿ ಅಂದರು. ಆದರೆ, ಆಗಲೂ ಕ್ಲಿಕ್ ಆಗಲಿಲ್ಲ." ಎಂದು ಆ ಘಟನೆಯನ್ನು ವಿವರಿಸಿದ್ದಾರೆ.
ಗನ್‌ನ ಟ್ರಿಗರ್ ಒತ್ತಿದರೂ ಹಾರದೇ ಇದ್ದಾಗ ಬಾಲಣ್ಣ ಅವರು ಈ ಗನ್ ಹೆಣಬಾರ. ಎಂತಹ ಗನ್ ಅನ್ನು ತಂದಿದ್ದೀಯ ಅಂತ ಹಿಂತಿರುಗಿಸಿದ್ದರು. ಆಗ ಆ ನಿರ್ಮಾಪಕರೂ ಆಗಿದ್ದ ಎಂಪಿ ಶಂಕರ್ ಆ ಗನ್ ಅನ್ನು ಒಂದೇ ಕೈಯಲ್ಲಿ 10 ಎಣಿಸುವವರೆಗೆ ಮೇಲೆ ಹಿಡಿದುಕೊಂಡಿದ್ದರು. ಆ ಮೇಲೆ ಕೆಳಗಡೆ ಇಳಿಸಿ ಟ್ರಿಗರ್ ಒತ್ತಿದ್ರು. ಆಗ ಗನ್‌ನಿಂದ ಗುಂಡು ಹಾರಿತ್ತು. ಸುಮಾರು ಅಡಿ ಗುಂಡಿ ಬಿದ್ದಿತ್ತು. ಒಂದು ವೇಳೆ ರಾಜ್‌ಕುಮಾರ್ ಅವರಿಗೆ ಗುರಿಯಿಟ್ಟಾಗ ಗುಂಡು ಹಾರಿದ್ದರೆ ದೊಡ್ಡ ಅನಾಹುತವೇ ಸಂಭವಿಸಿ ಬಿಡುತ್ತಿತ್ತು.
"ನಿಜವಾದ ಹಂಟರ್ ಕೈಯಲ್ಲಿ ಗುರಿ ಇದ್ದಲಿಗೆ ಹೋಗುತ್ತೆ. ಹಾಗೇನಾದರೂ ಆಗಿದ್ದರೆ, ರಾಜ್‌ಕುಮಾರ್ ನಿಜವಾಗಿಯೂ ಇರುತ್ತಿರಲಿಲ್ಲ. ನಾವು ಡಮ್ಮಿ ಬುಲೆಟ್ ಅನ್ನೇ ಬಳಕೆ ಮಾಡೋದು. ನೋಡುವುದಕ್ಕೆ ಬೆಂಕಿ ಬರುತ್ತೇ ಹೊರತು, ನಿಜವಾದ ಬುಲೆಟ್ ಅನ್ನು ಯಾರೂ ಬಳಕೆ ಮಾಡುವುದಿಲ್ಲ. ಅದ್ಯಾಕೆ ಹೀಗಾಯ್ತು ಅಂದ್ರೆ, ಶೂಟಿಂಗ್ ಮುಗಿದ ಮೇಲೆ ರಾತ್ರಿ ಬೇಟೆಗೆ ಹೋಗೋರು. ಆಗ ರಾತ್ರಿ ರಿಯಲ್ ಗುಂಡನ್ನು ಹಾಕಿದ್ದಾರೆ. ಬಹಳ ಹೊತ್ತಾಗಿದ್ದರಿಂದ ಬೆಳಗ್ಗೆ ತೆಗೆದರೆ ಆಯ್ತು ಅಂತ ಬಂದು ಮಲಗಿದ್ದಾರೆ. ಬೆಳಗ್ಗೆ ಅವಸರದಲ್ಲಿ ಮರೆತು ಹೋಗಿದ್ದಾರೆ." ಎನ್ನುತ್ತಾರೆ ನಾಗೇಶ್.
ಈ ಘಟನೆ ನಡೆಯುವ ಹೊತ್ತಿಗಾಗಲೇ ವಿಷ್ಣುವರ್ಧನ್ ಪಾತ್ರ ಸತ್ತು ಹೋಗಿರುತ್ತೆ. ವಿಷ್ಣುವರ್ಧನ್ ಶೂಟ್ ಮಾಡುವುದಕ್ಕೆ ಚಾನ್ಸ್ ಇಲ್ಲ. ಯಾವುದೇ ಕಾರಣಕ್ಕೂ ಅವರು ಶೂಟ್ ಮಾಡುವುದಕ್ಕೆ ಚಾನ್ಸ್ ಇಲ್ಲ. ಆದರೆ, ಈ ಘಟನೆ ವಿಷ್ಣುವರ್ಧನ್ ಮೇಲೆ ಬಹಳ ಪ್ರಭಾವ ಬೀರಿತ್ತು. ಈ ಘಟನೆ ನಡೆಯುವಾಗ ಹಿರಿಯ ನಟ ನಾಗೇಶ್ ಆ ಸ್ಥಳದಲ್ಲಿಯೇ ಇದ್ದರು. ವಿಷ್ಣುದಾದಗೆ ಈ ಘಟನೆಯನ್ನು ಕ್ಲಿಯರ್ ಮಾಡುತ್ತೇನೆ ಅಂತ ಹೇಳಿದ್ದರು. ಆಗ ವಿಷ್ಣುದಾದ "ಬೇಡ ನಾಗೇಶ್ ಅವರೇ. ಅದೆಲ್ಲ ಮರೆತು ಹೋಗಿದೆ ಬಿಟ್ಟಿಬಿಡಿ" ಅಂತ ಹೇಳಿದ್ದರಂತೆ.


Click it and Unblock the Notifications











