ಮಾಧುರಿ ದೀಕ್ಷಿತ್ ಡ್ರೈವರ್ ಆಗಿದ್ದ ಬಾಲಿವುಡ್‌ನ ಈ ನಟ ಯಾರು ಗೊತ್ತೇ? ಈ ನಟನ ಹಿನ್ನೆಲೆಯೇನು?
ಬಾಲಿವುಡ್ ಅನ್ನೋದು ಸಾಗರವಿದ್ದಂತೆ. ಇಲ್ಲಿ ಸೂಪರ್‌ಸ್ಟಾರ್ ಆಗಬೇಕು ಅಂತ ಕನಸು ಕಟ್ಟಿಕೊಂಡು ಬರುವವರಿಗೇನು ಕಮ್ಮಿಯಿಲ್ಲ. ಪ್ರತಿ ದಿನ, ಪ್ರತಿ ಕ್ಷಣ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ಅದೆಷ್ಟೋ ಪ್ರತಿಭೆಗಳು ಬರುತ್ತಲೇ ಬರುತ್ತವೆ. ಆದರೆ, ಅವಕಾಶ ಸಿಗೋದು ಕೆಲವರಿಗೆ ಮಾತ್ರ. 1984ರಲ್ಲಿ ಹೀಗೆ ಒಬ್ಬ ನಟ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.
1984ರಲ್ಲಿ ಮೊದಲ ಸಿನಿಮಾದಲ್ಲಿಯೇ ಸೂಪರ್‌ಸ್ಟಾರ್ ರೇಖಾ ಜೊತೆ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಈ ನಟ ಮೊದಲ ಸಿನಿಮಾ ಯಶಸ್ಸು ಕೂಡ ಕಂಡಿತ್ತು. ಬಾಲಿವುಡ್‌ನಲ್ಲಿ ಈ ನಟನಿಗೆ ಅವಕಾಶಗಳು ಕೂಡ ಸಿಕ್ಕಿತ್ತು. ಮಾಧುರಿ ದೀಕ್ಷಿತ್, ಡಿಂಪಲ್ ಕಪಾಡಿಯಾ, ಪದ್ಮಿನಿ ಕೋಲಾಪುರಿ ಅಂತಹ ಜನಪ್ರಿಯೆ ನಟಿಯರೊಂದಿಗೆ ನಟಿಸುವ ಅವಕಾಶ ಕೂಡ ಸಿಕ್ಕಿತ್ತು.

ಇದೇ ನಟ ತನ್ನ ಆರಂಭದಲ್ಲಿ ದಿನಗಳಲ್ಲಿ ಮಾಧುರಿ ದೀಕ್ಷಿತ್‌ಗೆ ಡ್ರೈವರ್ ಆಗಬೇಕಾಗಿದ್ದ ಪರಿಸ್ಥಿತಿ ಕೂಡ ಬಂದಿತ್ತು. ಆ ಬಾಲಿವುಡ್ ನಟ ಮತ್ಯಾರೂ ಅಲ್ಲ ಶೇಖರ್ ಸುಮನ್. 80 ಹಾಗೂ 90ರ ದಶಕದ ಸಿನಿಪ್ರಿಯರಿಗೆ ಶೇಖರ್ ಸುಮನ್ ಪರಿಚಯ ಚೆನ್ನಾಗಿಯೇ ಇದೆ. ಆದರೆ, ಆರಂಭದ ದಿನಗಳಲ್ಲಿ ಸಿಕ್ಕ ಯಶಸ್ಸು ಈ ನಟನಿಗೆ ಮತ್ತೆ ಸಿಗಲೇ ಇಲ್ಲ. ಸಾಲು ಸಾಲು ಸೋಲುಗಳ ಈ ನಟನನ್ನು ಕಂಗೆಡಿಸಿತ್ತು. ಇದೀಗ ಇದೇ ನಟ ಮತ್ತೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಹೀರಾಮಂಡಿ' ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
1984ರಲ್ಲಿ ತೆರೆಕಂಡ 'ಉತ್ಸವ್' ಸಿನಿಮಾದಿಂದ ಶೇಖರ್ ಸುಮನ್ ತನ್ನ ವೃತ್ತಿ ಬದುಕು ಆರಂಭ ಆಗಿತ್ತು. ವಿಶೇಷ ಅಂದರೆ, ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಕನ್ನಡದವರೇ ಆದ ಗಿರೀಶ್ ಕಾರ್ನಾಡ್. ಬಾಲಿವುಡ್ ನಟ ಶಶಿ ಕಪೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಶೇಖರ್ ಸುಮನ್ ಬಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಹೆಚ್ಚು ಕಷ್ಟ ಪಡಬೇಕಾಗಿರಲಿಲ್ಲ. ಆದರೆ, ಬಾಲಿವುಡ್‌ಗೆ ಬಂದ್ಮೇಲೆ ಪರದಾಡಿದ್ದು ಹೆಚ್ಚು.

'ಉತ್ಸವ್' ಅಂತಹ ಸಿನಿಮಾದಲ್ಲಿ ನಟಿಸಿದ ಬಳಿಕ ಶೇಖರ್ ಸುಮನ್ 'ಮಾನವ್ ಹತ್ಯಾ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇದು ತುಂಬಾನೇ ಸ್ಮಾಲ್ ಬಜೆಟ್ ಸಿನಿಮಾ ಆಗಿತ್ತು. ಈ ಸಿನಿಮಾಗೆ ನಾಯಕಿಯಾಗಿ ಮಾಧುರಿ ದೀಕ್ಷಿತ್ ನಟಿಸಿದ್ದರು. ಆಗಿನ್ನೂ ಮಾಧುರಿ ದೀಕ್ಷಿತ್ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದರು. ಈ ಸಿನಿಮಾ ಬಜೆಟ್ ತುಂಬಾನೇ ಕಡಿಮೆ ಇದ್ದಿದ್ದರಿಂದ ಪ್ರತಿ ದಿನ ಮಾಧುರಿ ದೀಕ್ಷಿತ್ ಅವರನ್ನು ಕರೆದುಕೊಂಡು ಶೂಟಿಂಗ್ ಸ್ಪಾಟ್‌ಗೆ ಬರಬೇಕಿತ್ತು.
ಶೇಖರ್ ಸುಮನ್ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದರು. " ಸಿನಿಮಾಗೆ ಸಹಿ ಮಾಡಿದ್ದೇನೋ ಆಗಿತ್ತು. ಆದರೆ, ನಿರ್ಮಾಪಕರು ಇದು ಸ್ಮಾಲ್ ಬಜೆಟ್ ಸಿನಿಮಾ ಅಂದಿದ್ದರು. ಶೂಟಿಂಗ್ ಶುರುವಾಗುವ ವೇಳೆ ನನ್ನನ್ನು ಕರೆದು, ನೀವೇ ಮಾಧುರಿ ದೀಕ್ಷಿತ್ ಅನ್ನು ಕರೆದುಕೊಂಡು ಬರಬೇಕು. ಹೀರೊಯಿನ್‌ಗೆ ಕಾರನ್ನೆಲ್ಲ ಕಳಿಸುವಷ್ಟು ಹಣವಿಲ್ಲ ಎಂದಿದ್ದರು. ಹೀಗಾಗಿ ಅವರ ಮನೆ ಬಳಿಗೆ ಹೋಗಿ ಕರೆದುಕೊಂಡು ಬರಬೇಕಿತ್ತು" ಎಂದು ಶೇಖರ್ ಸುಮನ್ ಹೇಳಿಕೊಂಡಿದ್ದರು.
ಸುಮಾರು 5 ವರ್ಷಗಳ ಕಾಲ ಶೇಖರ್ ಸುಮನ್‌ಗೆ ಬಾಲಿವುಡ್‌ನಲ್ಲಿ ಸಕ್ಸಸ್ ಸಿಕ್ಕಿತ್ತು. ಆದರೆ, 1989ರ ಬಳಿಕ ಶೇಖರ್ ಸುಮನ್ ಒಂದರ ಹಿಂದೊಂದು ಪ್ಲಾಪ್ ಸಿನಿಮಾಗಳನ್ನು ಕೊಡುವುದಕ್ಕೆ ಶುರು ಮಾಡಿದ್ದರು. ಈ ಕಾರಣಕ್ಕೆ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆಗಿದ್ದವು. ಬಳಿಕ ಕಿರುತೆರೆಯಲ್ಲಿ 'ಮೂವರ್ಸ್ ಅಂಡ್ ಶೇಖರ್ಸ್' ಅನ್ನುವ ಶೋ ನಡೆಸಿಕೊಡುತ್ತಿದ್ದರು. ಆ ಮೂಲಕ ಮತ್ತೆ ಬದುಕು ಕಟ್ಟಿಕೊಂಡಿದ್ದರು. ವಿಚಿತ್ರ ಅಂದರೆ, ಶೇಖರ್ ಸುಮನ್ ಪುತ್ರ ಅಧ್ಯಾಯನ್ ಸುಮನ್ ಪರಿಸ್ಥಿತಿ ಕೂಡ ಬೇರೆಯೇನು ಇಲ್ಲ.


Click it and Unblock the Notifications