'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಮಾಡುವುದಕ್ಕೆ ಆರಂಭದಲ್ಲಿ ಹಿಂದೇಟು ಹಾಕಿದ್ದರೇ ದರ್ಶನ್? ಯಾಕೆ?
ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೋರಾಟದ ಕಥೆ ಭಾರತೀಯರಿಗೆ ಸ್ಪೂರ್ತಿ. ಬ್ರಿಟಿಷರ ವಿರುದ್ಧ ಹೋರಾಡಿದ ಈ ಸ್ವಾತಂತ್ರ್ಯ ಹೋರಾಟಗಾರ ಇಂದಿಗೂ ದೇಶಭಕ್ತರಿಗೆ ಪ್ರೀತಿ. ಬದುಕಿದ್ದು ಕೇವಲ 32 ವರ್ಷವೇ ಆದರೂ ಕೆಚ್ಚೆದೆಯಿಂದ ಬ್ರಿಟಿಷರ ವಿರುದ್ಧ ನಿಂತು ಹೋರಾಟದ ವೀರಾ ಸೇನಾನಿ ಸಂಗೋಳ್ಳಿ ರಾಯಣ್ಣ.
ಸಂಗೊಳ್ಳಿ ರಾಯಣ್ಣ ಆಂಗ್ಲರಿಗೆ ದುಸ್ವಪ್ನವಾಗಿ ಕಾಡಿದ್ದ. ಬಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದ. ತನ್ನದೇ ಒಂದು ಸೇನೆಯನ್ನು ಕಟ್ಟುಕೊಂಡು ಆಂಗ್ಲರ ದಬ್ಬಾಳಿಕೆ ವಿರುದ್ಧ ಕಿಡಿಕಾರಿದ್ದ. ಗೆರಿಲ್ಲಾ ತಂತ್ರವನ್ನು ಬಳಸಿ ಬ್ರಿಟಿಷರು ಬಡವರಿಂದ ಕಿತ್ತುಕೊಂಡಿದ್ದನ್ನು ಮತ್ತೆ ಅವರಿಗೆ ಹಿಂತಿರುಗಿಸಿದ್ದ ವೀರ. ಬೆಳಗಾವಿ ಭಾಗದಲ್ಲಿ ಇಂದಿಗೂ ಸಂಗೊಳ್ಳಿ ರಾಯಣ್ಣನನ್ನು ನೆನೆಯದ ಜನರೇ ಕಾಣ ಸಿಗುವುದಿಲ್ಲ.

ಇಂತಹ ವೀರ ಯೋಧನ ಮೇಲೆ ಸಿನಿಮಾ ಮಾಡುವುದಕ್ಕೆ ಬೆಳಗಾವಿ ಮೂಲದ ಉದ್ಯಮಿ ಆನಂದ್ ಅಪ್ಪುಗೋಳ್ ಮುಂದೆ ಬಂದಿದ್ದರು. ಅದುವೇ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ಈ ಸಿನಿಮಾ ಮೂಲಕ ಸಂಗೊಳ್ಳಿರಾಯಣ್ಣ ವೀರಗಾಥೆಯನ್ನು ಕರ್ನಾಟಕದಾದ್ಯಂತ ಹೇಳಬೇಕು ಎಂದು ನಿರ್ಧರಿಸಿದ್ದರು. ಹೀಗಾಗಿ ಈ ಪಾತ್ರವನ್ನು ಮಾಡುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಸಿನಿಮಾದ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಅಂಶಗಳು ಇಲ್ಲಿವೆ.
ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ಚಿತ್ರತಂಡದ ಮೊದಲ ಆಯ್ಕೆ ಅರ್ಜುನ್ ಸರ್ಜಾ ಆಗಿದ್ದರು. ಹಾಗೇ ಮಲ್ಲವ್ವನ ಪಾತ್ರಕ್ಕೆ ಪ್ರಿಯಾಮಣಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಇಬ್ಬರೂ ಈ ಪಾತ್ರವನ್ನು ಮಾಡುವುದಕ್ಕೆ ಹಿಂದೇಟು ಹಾಕಿದ್ದರು. ಹೀಗಾಗಿ ದರ್ಶನ್‌ಗೆ ಆ ಪಾತ್ರವನ್ನು ನೀಡಲಾಯಿತು. ಹಾಗೇ ಪ್ರಿಯಾಮಣಿ ಮಾಡಬೇಕಿದ್ದ ಪಾತ್ರವನ್ನು ನಿಖಿತಾ ತುಕ್ರಾಲ್ ಪಾಲಾಯಿತು ಎನ್ನಲಾಗಿತ್ತು.
'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಆರಂಭ ಆಗುವುದಕ್ಕೂ ಮುನ್ನ ದರ್ಶನ್‌ಗೆ ಇಡೀ ಕಥೆಯನ್ನು ಕೊಡಲಾಗಿತ್ತು. ಜೊತೆಗೆ ಸಂಗೊಳ್ಳಿ ರಾಯಣ್ಣನ ಬಗೆಗಿನ ಕೆಲವು ಪುಸ್ತಕಗಳನ್ನು ನೀಡಲಾಗಿತ್ತು. ಇದನ್ನು ಓದುವಂತೆ ಚಿತ್ರತಂಡ ದರ್ಶನ್‌ಗೆ ಹೇಳಿತ್ತು. ಆ ಪುಸ್ತಕಗಳನ್ನು ಓದುತ್ತಿದ್ದಂತೆ ದರ್ಶನ್‌ಗೆ ಭಯ ಹುಟ್ಟುವುದಕ್ಕೆ ಆರಂಭ ಆಗಿತ್ತು. ಹೀಗಾಗಿ ಸಂಗೊಳ್ಳಿ ರಾಯಣ್ಣ ಪಾತ್ರವನ್ನು ಮಾಡಲು ಹಿಂದೇಟು ಹಾಕಿದ್ದರು. ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಕೊನೆಗೂ ದರ್ಶನ್‌ರನ್ನು ಸಂಗೊಳ್ಳಿ ರಾಯಣ್ಣ ಪಾತ್ರಕ್ಕೆ ಒಪ್ಪಿಸಲಾಗಿತ್ತು. ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ದರ್ಶನ್ ಈ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಕಸರತ್ತು ಮಾಡಿದ್ದರು. ಬಾಡಿ ಲ್ಯಾಂಗ್ವೇಜ್, ಮ್ಯಾನರಿಸಂ ಎಲ್ಲದರ ಬಗ್ಗೆನೂ ದರ್ಶನ್ ಅಭ್ಯಾಸ ಮಾಡಿದ್ದರು. 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಫೋಟೊಶೂಟ್ ಮಾಡುವುದಕ್ಕೂ ಮುನ್ನ ದರ್ಶನ್ ಆ ಪಾತ್ರಕ್ಕೆ ಸಂಪೂರ್ಣವಾಗಿ ತಯಾರಿ ನಡೆಸಿದ್ದರು.
2012ರಲ್ಲಿ ಸೆಟ್ಟೇರಿದ್ದ ಈ ಸಿನಿಮಾ ದರ್ಶನ್ ವೃತ್ತಿ ಬದುಕಿನಲ್ಲಿಯೇ ಅತೀ ದೊಡ್ಡ ಬಜೆಟ್‌ನ ಸಿನಿಮಾ ಆಗಿತ್ತು. ಅಂದಿನ ಕಾಲಕ್ಕೆ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ ಬಜೆಟ್ ಕೇವಲ 22 ದಿನಗಳಲ್ಲಿ ಗಳಿಕೆ ಕಂಡಿತ್ತು. ಸಂಗೊಳ್ಳಿ ರಾಯಣ್ಣ ಸಿನಿಮಾ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಸುಮಾರು ಒಂದು ವರ್ಷ ಪ್ರದರ್ಶನ ಕಂಡಿತ್ತು.
ಹೀಗಾಗಿ ದರ್ಶನ್ ತಮ್ಮ 'ರಾಬರ್ಟ್' ಸಿನಿಮಾದ ಕಾರ್ಯಕ್ರಮವನ್ನು ಉತ್ತರ ಕರ್ನಾಟಕದಲ್ಲಿ ಇಟ್ಟುಕೊಂಡಿದ್ದರು. ಆ ಸಮಯದಲ್ಲಿ ದರ್ಶನ್ ವೇದಿಕೆ ಮೇಲೆ ಚಪ್ಪಲಿ ಬಿಟ್ಟು ಆಗಮಿಸಿದ್ದರು. ಇದು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹಾಗೂ ಉತ್ತರ ಕರ್ನಾಟಕದ ಜನತೆಗೆ ಕೊಡುತ್ತಿರುವ ಗೌರವ ಎಂದು ಹೇಳಿದ್ದರು.


Click it and Unblock the Notifications











