'ಮೆಜೆಸ್ಟಿಕ್' ಬಳಿಕವೇ 'ಮದಕರಿ ನಾಯಕ' ಸಿನಿಮಾ ಮಾಡ್ಬೇಕಿತ್ತು: ದರ್ಶನ್ ನೋಡಿ ಈಗಲೇ ಬೇಡ ಎಂದಿದ್ದೇಕೆ ಆ ನಿರ್ದೇಶಕ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಇನ್ನು ಕೆಲವು ದಿನಗಳು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲೇ ದರ್ಶನ್ ಇರಬೇಕಾಗುತ್ತೆ. ಈ ಕಾರಣಕ್ಕೆ ದರ್ಶನ್ ಅವರನ್ನೇ ನಂಬಿಕೊಂಡಿದ್ದ ನಿರ್ಮಾಪಕರು ಕಂಗಾಲಾಗಿದ್ದಾರೆ. ಇದೊಂದು ಕಡೆಯಾದರೆ, ಇನ್ನೊಂದು ಕಡೆ ದರ್ಶನ್ ಬೆಳೆದು ಬಂದ ಹಾದಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅಂತ ಚಿತ್ರರಂಗದ ಗಣ್ಯರು ಕಿವಿ ಮಾತು ಹೇಳುವುದಕ್ಕೆ ಶುರು ಮಾಡಿದ್ದಾರೆ.
ದರ್ಶನ್ 'ಮೆಜೆಸ್ಟಿಕ್' ಸಿನಿಮಾ ಗೆದ್ದ ಬಳಿಕ ಐತಿಹಾಸಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಕೆಲ ವರ್ಷಗಳ ಹಿಂದಷ್ಟೇ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುವುದಕ್ಕೆ ಹೊರಟಿದ್ದ 'ವೀರ ಮದಕರಿ ನಾಯಕ' ಸದ್ಯಕ್ಕೆ ನಿಂತಿದೆ. ಆದರೆ, 'ಮೆಜೆಸ್ಟಿಕ್' ಸಿನಿಮಾ ಮುಗಿಯುತ್ತಿದ್ದಂತೆ ದರ್ಶನ್‌ಗೆ 'ಮದಕರಿ ನಾಯಕ' ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ನಿರ್ಮಾಪಕರು ಅಡ್ವಾನ್ಸ್ ಕೊಟ್ಟಿದ್ದರು. ಲುಕ್ ಟೆಸ್ಟ್ ಕೂಡ ನಡೆದಿತ್ತು. ಆದರೂ ಈ ಸಿನಿಮಾ ಟೆಕ್ ಆಫರ್ ಆಗಲೇ ಇಲ್ಲ.

ದರ್ಶನ್ ಮೊದಲ ಸಿನಿಮಾ 'ಮೆಜೆಸ್ಟಿಕ್' ಸೂಪರ್ ಹಿಟ್ ಆಗಿತ್ತು. ದರ್ಶನ್ ಪರ್ಸನಾಲಿಟಿ ನೋಡಿ ಕ್ಯಾಮರಾ ಮ್ಯಾನ್ ಟಿ. ಜನಾರ್ಧನ್‌ಗೆ ಮತ್ತೊಂದು ಸಿನಿಮಾ ಮಾಡೋಣ ಅಂತ ಅನಿಸಿತ್ತು. ಆಗ ನಿರ್ಮಾಪಕ ಕೆಸಿಎನ್ ಮೋಹನ್ ಬಳಿ ಬಂದ ಕ್ಯಾಮರಾಮ್ಯಾನ್ ಟಿ. ಜನಾರ್ಧನ್ ಹೊಸ ಸಿನಿಮಾ ಮಾಡುವುದಕ್ಕೆ ಪ್ರಪೋಸ್ ಮಾಡಿದ್ದರು. ದರ್ಶನ್ ಇಟ್ಕೊಂಡು 'ಮದಕರಿ ನಾಯಕ' ಮಾಡೋಣ ಅಂತ ಹೇಳಿದ್ದರು. ಕೆಸಿಎನ್ ಮೋಹನ್‌ಗೂ ಈ ಐಡಿಯಾ ಇಷ್ಟನೂ ಆಗಿತ್ತು. ಈ ವಿಷಯವನ್ನು ಸ್ವಾರಸ್ಯಕರವಾಗಿ ಟಿ ಜನಾರ್ಧನ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
"ಸರ್ ದರ್ಶನ್ ಅವರಿಗೆ ಬೇಡಿಕೆಯಿದೆ. ಈಗಾಗಲೇ ದರ್ಶನ್ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೀರ. ಹೀಗಾಗಿ ಮದಕರಿ ನಾಯಕ ಸಿನಿಮಾವನ್ನು ದರ್ಶನ್ ಇಟ್ಟುಕೊಂಡು ಮಾಡೋಣ ಸರ್. ತುಂಬಾನೇ ಚೆನ್ನಾಗಿ ಇರುತ್ತೆ ಅಂದೆ. ಆಗ ಬಿ.ಎಲ್ ವೇಣು ಅವರ ಬಳಿ ರೈಟ್ಸ್ ಇತ್ತು. ಸಿದ್ಧಲಿಂಗಣ್ಣ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದು ಹೇಳಿದೆ. ನಿಮಗೆ ಹೇಗಿದ್ದರೂ ವೇಣು ಅವರು ಕ್ಲೋಸ್ ಇದ್ದಾರೆ ಎಂದು ಹೇಳಿದೆ. ತಕ್ಷಣಕ್ಕೆ ವೇಣು ಅವರಿಗೆ ಫೋನ್ ಮಾಡಿದರು. ಅವರೂ ಕೂಡಲೇ ಬಂದರು. ಮಾಡಿ ಸರ್ ಚೆನ್ನಾಗಿದೆ ಅಂತ ಅವರೂ ಹೇಳಿದ್ದರು." ಎಂದು ಆ ದಿನವನ್ನು ಟಿ. ಜನಾರ್ಧನ್ ನೆನಪಿಸಿಕೊಂಡಿದ್ದಾರೆ.
ಮದಕರಿ ನಾಯಕ ಸಿನಿಮಾಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದಕ್ಕಾಗಿ ಲುಕ್ ಟೆಸ್ಟ್ ಕೂಡ ನಡೆದಿತ್ತು. ಆದರೆ, ನಿರ್ದೇಶಕ ಸಿದ್ಧಲಿಂಗಯ್ಯ ಯಾಕೋ ಒಪ್ಪಲಿಲ್ಲ. "ಇಷ್ಟೆಲ್ಲ ಆದ್ಮೇಲೆ ಸೀದಾ ಹೋಗಿ ದರ್ಶನ್ ಅವರಿಗೆ ಅಡ್ವಾನ್ಸ್ ಕೊಟ್ಟರು. ಐದು ಲಕ್ಷ ಅಡ್ವಾನ್ಸ್ ಕೊಟ್ಟರು. ಅವರ ಮ್ಯಾನೇಜರ್ ಆಗಾಗ ಬಂದು ನೋಡೋರು. ಮದಕರಿ ಗೆಟಪ್ ಅನ್ನು ದರ್ಶನ್ ಹಾಕಿದಾಗ ನೀವು ಬಂದು ನೋಡಿ ಅಂತ ಹೇಳಿದ್ದರು. ಸಿದ್ದಲಿಂಗಣ್ಣ ಅವರು ಬಂದು ಇನ್ನೇನು ಫೈನಲ್ ಮಾಡಬೇಕು. ಆಗ ಗೆಟಪ್ ನೋಡಿಯೋ ಏನೋ ಗೊತ್ತಿಲ್ಲ. ಮದಕರಿ ಸಿನಿಮಾ ಮಾಡೋಣ, ದರ್ಶನ್ ಅವರನ್ನು ಇಟ್ಟುಕೊಂಡೇ ಮಾಡೋಣ. ಸ್ವಲ್ಪ ದಿನ ಆದ್ಮೇಲೆ ಮಾಡೋಣ. ಈಗ ಬೇಡ ಅಂತ ಹೇಳಿದರು." ಎಂದು ಜನಾರ್ಧನ್ ಹೇಳಿದ್ದಾರೆ.

ನಿರ್ದೇಶಕ ಸಿದ್ಧಲಿಂಗಯ್ಯ ಅವರು ಹೀಗೆ ಹೇಳುವುದಕ್ಕೂ ಒಂದು ಕಾರಣವಿತ್ತು. ದರ್ಶನ್ ಗೆಟಪ್ ಹಾಕಿದಾಗ ಇನ್ನೂ ಪ್ರಬುದ್ಧನಾಗಬೇಕು ಅಂತ ಅನಿಸಿತ್ತು. 'ಮೆಜೆಸ್ಟಿಕ್' ಸಿನಿಮಾದಲ್ಲಿ ಬಹಳ ಚೆನ್ನಾಗಿ ಮಾಡಿದ್ದಾನೆ. ಇನ್ನೂ ಚಿಕ್ಕ ಹುಡುಗನ ಹಾಗೆ ಕಾಣುತ್ತಿದ್ದಾನೆ. ಇನ್ನೂ ಸ್ವಲ್ಪ ಗಾಂಭೀರ್ಯ ಬರಲಿ ಅನ್ನೋ ಸಲಹೆ ನೀಡಿದ್ದರು. ಆಗ ಐಡಿಯಾ ಸ್ವಲ್ಪ ಅಲ್ಲಿಗೆ ತಣ್ಣಗಾಯ್ತು. ಆ ವೇಳೆ ಪಿ ಎನ್ ಸತ್ಯ ಇಟ್ಟುಕೊಂಡು ಮತ್ತೊಂದು ಸಿನಿಮಾ ಮಾಡೋಣ ಅಂತ ಜನಾರ್ಧನ್ ಅವರು ಕೆಸಿಎನ್ ಮೋಹನ್‌ಗೆ ಸಲಹೆ ನೀಡಿದ್ದರು. ಆದರೆ, ದರ್ಶನ್ ತಲೆಯೊಳಗೆ ಮದಕರಿ ನಾಯಕ ಕೂತು ಬಿಟ್ಟಿತ್ತು.
"ಪಿಎನ್ ಸತ್ಯ ಅಡ್ವಾನ್ಸ್ ತಗೊಂಡು ನಿರ್ಮಾಪಕ ಕೆಸಿಎನ್ ಮೋಹನ್ ಅವರನ್ನು ಕರೆದುಕೊಂಡು ದರ್ಶನ್ ಬಳಿ ಹೋಗಿದ್ದರು. ಆಗ ದರ್ಶನ್ ಅವರು ಫುಲ್ ಬ್ಯುಸಿ. ನೋಡಿ ಮೋಹನ್ ಅವರೇ ನೀವು ಹೇಳಿದ್ದು ಮದಕರಿ ನಾಯಕ. ಈಗಾಗಲೇ ನನ್ನ ತಲೆಯೊಳಗೆ ಮದಕರರಿ ನಾಯಕ ಕೂತುಬಿಟ್ಟಿದ್ದಾನೆ. ದಯವಿಟ್ಟು ನನಗೆ ಆ ಸಿನಿಮಾ ಮಾಡಿ ಈಗಲೇ ಡೇಟ್ ಕೊಡುತ್ತೇನೆ. ಬೇರೆ ಎಲ್ಲಾ ಸಿನಿಮಾಗಳನ್ನು ಕ್ಯಾನ್ಸಲ್ ಮಾಡುತ್ತೇನೆ ಬೇಕಿದ್ದರೆ. ಬೇರೆಯವರಿಗೆ ಬಂದು ಈಗಲೇ ಡೇಟ್ಸ್ ಕೊಡಿ ಅಂದರೆ ಕ್ಯಾನ್ಸಲ್ ಮಾಡೋಕೆ ಆಗಲ್ಲ ಎಂದಿದ್ದರು." ಎಂದು ಅಂದು ದರ್ಶನ್ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











