ಬೇಬಿ ಇಂದಿರಾ ಪತಿ ಅಗಲಿಕೆ ಅಸಲಿಗೆ ಕಾರಣವೇನು? ಸುಳ್ಳು ಸುದ್ದಿಗಳ ಬಗ್ಗೆ ನಟಿ ಹೇಳಿದ್ದೇನು?
70 ರಿಂದ 80 ದಶಕದ ಮಕ್ಕಳಿಗೆ ಬೇಬಿ ಇಂದಿರಾ ಬಗ್ಗೆ ವಿಶೇಷವಾಗಿ ಹೇಳುವುದು ಬೇಡ. ಇಂದಿಗೂ ಈ ನಟಿಯನ್ನು ಬೇಬಿ ಇಂದಿರಾ ಅಂತಲೇ ಕರೆಯುತ್ತಾರೆ. ಬೇಬಿ ಇಂದಿರಾ ಬೆಳೆದು ನಾಯಕಿಯಾಗುವ ವಯಸ್ಸಿಗೆ ಸಿನಿಮಾರಂಗದಿಂದ ದೂರವಾಗಿದ್ದರು. ತೆರೆಮರೆಯಲ್ಲಿ ಬದುಕು ನಡೆಸುತ್ತಿದ್ದರು.
ಮದುವೆ ಬಳಿಕ ಬೇಬಿ ಇಂದಿರಾ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದ ಬೇಬಿ ಇಂದಿರಾ ಇದೇ ಮೊದಲ ಬಾರಿಗೆ ಕನ್ನಡದ ನಿರ್ದೇಶಕ ಕಮ್ ನಿರೂಪಕ ರಘು ರಾಮ್ ಅವರ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಸಿನಿಮಾದಿಂದ ದೂರವಿದ್ದ ತಮ್ಮ ಬದುಕನ್ನು ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಬೇಬಿ ಇಂದಿರಾ ಸಂದರ್ಶನಕ್ಕೆ ಸಿಗುವುದಕ್ಕೂ ಮುನ್ನ ಅವರ ಪತಿಯ ಸಾವಿನ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಸುದ್ದಿಗಳನ್ನು ಬಿತ್ತರಿಸಿದ್ದರು. ಅವರ ಪತಿ ಶ್ರೀಧರ್ ನಿಧನಕ್ಕೆ ಅಸಲಿ ಕಾರಣವೇನು? ಅನ್ನುವುದನ್ನು ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಬೇಬಿ ಇಂದಿರಾ ರಿವೀಲ್ ಮಾಡಿದ್ದಾರೆ.
ಬೇಬಿ ಇಂದಿರಾ ಪತಿ ಮಲ್ಟಿಟಾಸ್ಕ್ ಮಾಡುತ್ತಿದ್ದರು. ಇಂದಿರಾ ಅವರಂತೆಯೇ ಪತಿ ಶ್ರೀಧರ್ ಕೂಡ ಬಾಲ್ಯದಲ್ಲಿಯೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ವಿವಾಹದ ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದರೂ, ಕೆಲವು ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಿದ್ದರು. ಸಾಕಷ್ಟು ಡಾಕ್ಯೂಮೆಂಟರಿ ಮಾಡಿದ್ದಾರೆ. ಜೊತೆಗೆ ಬಿಲ್ಡರ್ ಆಗಿದ್ದರು. ವಾಸ್ತು, ಆಧ್ಯಾತ್ಮದ ಬಗ್ಗೆ ಟಿವಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಹೀಗಾಗಿ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದ್ದರು. ಅವರ ದಿಢೀರ್ ಸಾವಿಗೆ ಇದೂ ಒಂದು ಕಾರಣವಿರಬಹುದು ಅನ್ನೋದು ಬೇಬಿ ಇಂದಿರಾ ಅವರ ಅಭಿಪ್ರಾಯ.
ಬೇಬಿ ಇಂದಿರಾ ಪತಿ ಶ್ರೀಧರ್ ಡಿಸೆಂಬರ್ 11, 2013ರಲ್ಲಿ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದರು. ಅದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಅವರಿಗೆ ಹೃದಯ ಸ್ತಂಭನ ಆಗಿತ್ತು. ಅವರಿಗೆ ಸುಮಾರಷ್ಟು ಕಮಿಟ್ಮೆಂಟ್‌ಗಳು ಇತ್ತು. ಅವರಿಗೆ ಕನ್ಸ್‌ಟ್ರಕ್ಷನ್ ಕೆಲಸಗಳು ಇದ್ದವು. ಅವರು ಸಿಕ್ಕಾಪಟ್ಟೆ ಡಾಕ್ಯೂಮೆಂಟರಿ ಹಾಗೂ ಸೀರಿಸ್‌ಗಳನ್ನು ಮಾಡುತ್ತಿದ್ದರು. ಅದೊಂದು ಕಡೆ ನಡೆಯುತ್ತಿತ್ತು. ಇನ್ನೊಂದು ಚೆನ್ನೈನಲ್ಲಿ ಆಶ್ರಮವಿದೆ. ಅದರ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಜೀ ತಮಿಳಿನಲ್ಲಿ ದಿನಲೂ ಆಧ್ಯಾತ್ಮದ ಬಗ್ಗೆ ಮಾತಾಡುತ್ತಿದ್ದರು. ಹೀಗಾಗಿ ಸಿಕ್ಕಾಪಟ್ಟೆ ಬ್ಯುಸಿ ಇದ್ದರು." ಎಂದು ಬೇಬಿ ಇಂದಿರಾ ಹೇಳಿಕೊಂಡಿದ್ದಾರೆ.

ಬೇಬಿ ಇಂದಿರಾ ಪತಿ ಶ್ರೀಧರ್‌ಗೆ ಮಕ್ಕಳು ಅಂದರೆ, ಬಲು ಪ್ರೀತಿ. ಅವರ ಹಾಗೆ ಮಕ್ಕಳನ್ನು ಪ್ರೀತಿ ಮಾಡುವುದು ಕಷ್ಟ ಎನ್ನುತ್ತಾರೆ. "ಅವರ ಹಾಗೆ ಮಕ್ಕಳನ್ನು ನೋಡಿಕೊಳ್ಳುವುದು ಬಹಳ ಕಷ್ಟ. ಮಕ್ಕಳಿಗೆ ಒಬ್ಬ ಅದ್ಭುತ ತಂದೆಯಾಗಿದ್ದರು. ಎಲ್ಲರಿಗೂ ಅವರವರ ತಂದೆ ಹೀರೋನೆ. ಆದರೆ, ನಾನು ನೋಡಿದ ತಂದೆ ಇವರು. ನನ್ನ ತಂದೆಯನ್ನು ನೋಡಿದ್ದೀನಿ. ನನ್ನ ಮಕ್ಕಳಿಗೆ ತಂದೆಯಾಗಿ ಅವರು ರೋಲ್ ಮಾಡಲ್ ಅಂತ ಹೇಳಬಹುದು. ನನ್ನ ಮಕ್ಕಳಿಗೆ ನನ್ನ ಪತಿ ರಿಯಲ್ ಲೈಫ್ ಹೀರೊ." ಎಂದಿದ್ದಾರೆ.
ಹಾಗೇ "ಅವರಿಗೆ ಕೋಪ ಬರುತ್ತಿರಲಿಲ್ಲ. ಕೋಪ ಬಂದರೆ, ಅದು ನನ್ನ ಹತ್ತಿರ ಮಾತ್ರ. ನನ್ನ ಮಕ್ಕಳು ಮಾರ್ಕ್ ಕಾರ್ಡ್ ತಂದು ಕೊಟ್ಟಾಗ, ಅವರಿಗೆ ಮಾರ್ಕ್ಸ್ ಎಷ್ಟು ಅನ್ನೋದನ್ನು ನೋಡುವುದಿಲ್ಲ. ಟೀಚರ್ಸ್ ಏನು ಬರೆದು ಕಳಿಸಿದ್ದಾರೆ ಅನ್ನೋದನ್ನು ನೋಡುವುದಿಲ್ಲ. ಸಹಿ ಮಾಡಿ ಕೊಡುತ್ತಿದ್ದರು. ಮಕ್ಕಳಿಗೆ ಏನು ಮಾರ್ಕ್ ತೆಗೆದರೂ ಚಿಂತೆಯಿಲ್ಲ. ಒಂದು ದಿನ ಉತ್ತಮವಾದದ್ದೇನೋ ಮಾಡುತ್ತೀಯಾ ಎಂದು ಹೇಳುತ್ತಿದ್ದರು." ಎಂದು ಪತಿಯನ್ನು ನೆನಪಿಸಿಕೊಂಡಿದ್ದಾರೆ.
ಪತಿ ಶ್ರೀಧರ್ ಇದ್ದಿದ್ದರೆ, ಮುಂದಿನ ವರ್ಷ ಫೆಬ್ರವರಿ 11ಕ್ಕೆ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ವಿಧಿಗೆ ಆಟವೇ ಬೇರೆಯಾಗಿತ್ತು. " ಬೆಳಗ್ಗೆ ಮನೆಯಲ್ಲಿ ನನ್ನ ಮಡಿಲಿನಲ್ಲಿ.. ನಮ್ಮ ದೊಡ್ಡ ಮಗ ಇದ್ದ ಜೊತೆಯಲ್ಲಿದ್ದ.. ಏನು ಹೇಳುವುದು. ನನ್ನನ್ನು ಸ್ಟ್ರಾಂಗ್ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ಒಳ್ಳೆಯ ಮಕ್ಕಳನ್ನು ಕೊಟ್ಟಿದ್ದಾರೆ. ಮಕ್ಕಳು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ." ಎಂದು ಬೇಬಿ ಇಂದಿರಾ ಹೇಳಿದ್ದಾರೆ.


Click it and Unblock the Notifications











