ನಿಮಗಿದು ಗೊತ್ತೇ? 'ದೇವದಾಸ್' ಸಿನಿಮಾದಲ್ಲಿ ಪಾರು ಪಾತ್ರಕ್ಕೆ ಆಯ್ಕೆಯಾಗಿದ್ದು ಐಶ್ವರ್ಯಾ ರೈ ಅಲ್ಲ ಕರೀನಾ!
ಶಾರುಖ್ ಖಾನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ನಟಿಸಿದ 'ದೇವದಾಸ್' ಸಿನಿಮಾ ಬಾಲಿವುಡ್‌ನಲ್ಲಿ ಅಚ್ಚು ಮೆಚ್ಚಿನ ಸಿನಿಮಾಗಳಲ್ಲಿ ಒಂದು. ಶಾರುಖ್ ಖಾನ್ ಹಾಗೂ ಐಶ್ವರ್ಯಾ ರೈ ಜೋಡಿಯನ್ನು ಪ್ರೇಕ್ಷಕರು ಬಹಳ ಇಷ್ಟ ಪಟ್ಟಿದ್ದರು. 'ದೇವದಾಸ್' ಒಂದು ಕ್ಲಾಸಿಕ್ ಲವ್ ಸ್ಟೋರಿ ಆಗಿತ್ತು. ಪ್ರೀತಿ, ವಿರಹ, ತ್ಯಾಗವನ್ನು ಸಾರಿದ ಈ ಸಿನಿಮಾ ಅಂದಿಗೆ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು.
'ದೇವದಾಸ್' ಸಿನಿಮಾ ಮೇಕಿಂಗ್ ವೇಳೆ ಒಂದು ಇಂಟ್ರೆಸ್ಟಿಂಗ್ ಘಟನೆ ನಡೆದಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದ ತನ್ನ ಸಿನಿಮಾದ ಪಾರು ಪಾತ್ರಕ್ಕೆ ನಟಿಯರ ಹುಡುಕಾಟದಲ್ಲಿ ಇದ್ದರು. ಪಾರು ಪಾತ್ರಕ್ಕೆ ಆಡಿಷನ್ ಕೂಡ ನಡೆಯುತ್ತಿತ್ತು. ಒಂದು ಹಂತದಲ್ಲಿ ಕರೀನಾ ಕಪೂರ್ ಅನ್ನು ಪಾರು ಪಾತ್ರಕ್ಕಾಗಿ ಫೋಟೊಶೂಟ್ ಕೂಡ ನಡೆದಿತ್ತು.

ಆದರೆ, ಕೊನೆಯ ಹಂತದಲ್ಲಿ ಸಂಜಯ್ ಲೀಲಾ ಬನ್ಸಾಲಿ ಮನಸ್ಸು ಬದಲಿಸಿದ್ದರು. ಕರೀನಾ ಕಪೂರ್ ಬದಲಿಗೆ ಐಶ್ವರ್ಯಾ ರೈ ಬಚ್ಚನ್‌ರನ್ನು ಆಯ್ಕೆ ಮಾಡಲಾಯ್ತು. ಇದು ಕರೀನಾ ಕಪೂರ್ ಸಿಟ್ಟಿಗೂ ಕಾರಣವಾಗಿತ್ತು. ಅಲ್ಲಿಂದ ಮುಂದೆ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸಲೇ ಇಲ್ಲ. ಅಷ್ಟಕ್ಕೂ ನಾಯಕಿಯ ಆಯ್ಕೆ ಏನು ನಡೀತು? ಕರೀನಾ ಕಪೂರ್ ಖಾನ್ ರಿಜೆಕ್ಟ್ ಆಗಿದ್ದೇಕೆ? ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದೇಕೆ? ತಿಳಿಯಲು ಮುಂದೆ ಓದಿ.
ಸಂಜಯ್ ಲೀಲಾ ಬನ್ಸಾಲಿ 'ದೇವದಾಸ್' ಸಿನಿಮಾವನ್ನು ರೀ-ಕ್ರಿಯೇಟ್ ಮಾಡುವುದಕ್ಕೆ ಹೊರಟಿದ್ದರು. ಐಕಾನಿಕ್ ದೇವದಾಸ್ ಪಾತ್ರಕ್ಕೆ ಶಾರುಖ್ ಖಾನ್ ಆಯ್ಕೆಯಾಗಿದ್ದರು. ಆದರೆ, ಪಾರು ಪಾತ್ರಕ್ಕೆ ಹುಡುಕಾಟ ನಡೆಯುತ್ತಿತ್ತು. ಆಗ ತಾನೇ ಕರೀನಾ ಕಪೂರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕಪೂರ್ ಕಾಂದಾನ್‌ನ ನಟಿಯಾಗಿದ್ದರಿಂದ ಸಂಜಯ್ ಲೀಲಾ ಬನ್ಸಾಲಿ 'ಪಾರು' ಪಾತ್ರಕ್ಕೆ ಫೋಟೊಶೂಟ್ ಮಾಡಿಸಿದ್ದರು. ಆದರೆ, ನಂತರ ಐಶ್ವರ್ಯಾ ರೈ ಸೂಕ್ತ ಅಂತ ಅನಿಸಿ ಅವರನ್ನೇ ಆಯ್ಕೆ ಮಾಡಲಾಗಿತ್ತು.

ಇದು ಕರೀನಾ ಕಪೂರ್ ಸಿಟ್ಟಿಗೆ ಕಾರಣವಾಗಿತ್ತು. ಇನ್ಮುಂದೆ ಸಿನಿಮಾಗಳು ಇಲ್ಲದೆ ಇದ್ದರೂ ಪರವಾಗಿಲ್ಲ ಸಂಜಯ್ ಲೀಲಾ ಬನ್ಸಾಲಿ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದ್ದರು. ಅಸಲಿಗೆ ಅಂದು ಏನು ನಡೀತು ಅನ್ನೋದನ್ನು ಕರೀನಾ ಕಪೂರ್ ಈ ಹಿಂದೆ ಫಿಲ್ಮ್‌ಫೇರ್ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.
"ನನಗೆ ಅವರೊಂದಿಗೆ ಕೆಲಸ ಮಾಡುವುದಿಲ್ಲ. ಅವರು ನನ್ನೊಂದಿಗೆ ನಡೆದುಕೊಂಡ ರೀತಿ ತಪ್ಪು. ದೇವದಾಸ್‌ಗೆ ಸ್ಕ್ರೀನ್ ಟೆಸ್ಟ್ ಮಾಡಿದ್ದರು. ಮುಂಗಡ ಹಣವನ್ನೂ ನೀಡಿದ್ದರು. ಆಮೇಲೆ ಬೇರೆಯವರನ್ನು ಆಯ್ಕೆ ಮಾಡಿಕೊಂಡರು. ಅದು ತಪ್ಪು. ನನ್ನ ವೃತ್ತಿ ಬದುಕಿನ ಆರಂಭದ ದಿನಗಳಾಗಿದ್ದವು. ಹೀಗಾಗಿ ನನಗೆ ಸಿಕ್ಕಾಪಟ್ಟೆ ಬೇಸರವಾಗಿತ್ತು. ಸಂಜಯ್ ನನಗೆ ನೋವುಂಟು ಮಾಡಿದ್ದರು. ನನಗೆ ಕೆಲಸ ಇಲ್ಲದೆ ಇದ್ದರೂ ಪರವಾಗಿಲ್ಲ. ನಾನು ಎಂದಿಗೂ ನಟಿಸುವುದಿಲ್ಲ."
ಕರೀನಾ ಕಪೂರ್ ಆರೋಪಗಳಿಗೆ ಸಂಜಯ್ ಲೀಲಾ ಬನ್ಸಾಲಿ ಕೂಡ ಸಮಜಾಯಿಷಿ ಕೊಟ್ಟಿದ್ದರು. "ನೀತಾ ಲಲ್ಲಾ ಜೊತೆ ನನ್ನ ಮನೆಗೆ ಬಂದಿದ್ದರು. ನನ್ನೊಂದಿಗೆ ಕೆಲಸ ಮಾಡಬೇಕು ಎಂದಿದ್ದರು. ನಿನ್ನ ಕೆಲಸವನ್ನು ನಾನು ನೋಡಿಲ್ಲ ಎಂದು ಹೇಳಿದೆ. ನನಗೆ ಕರೀನಾ ಸ್ಟ್ರೆಂಥ್ ಏನು ಅನ್ನುವುದನ್ನು ನೋಡಬೇಕಿತ್ತು. ಅದಕ್ಕಾಗಿ ಫೋಟೊಶೂಟ್ ಅನ್ನು ಫಿಕ್ಸ್ ಮಾಡಿದ್ದೆವು. ಆ ವೇಳೆ ಬಬಿತಾಜಿ ಹಾಗೂ ಕರಿಶ್ಮಾ ಕಪೂರ್ ಕೂಡ ಇದ್ದರು. ಅವರಿಗೆ ಈ ಫೋಟೊಶೂಟ್ ಮಾಡಿಸಿದ್ದು ಸಿನಿಮಾಗೆ ಆಯ್ಕೆ ಆದಂತೆ ಅಲ್ಲ ಎಂದು ಹೇಳಿದ್ದೆ. ಅವರೂ ಓಕೆ ಎಂದಿದ್ದರು" ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದರು.


Click it and Unblock the Notifications











