Jogi Movie: ಆಕಾಶ್ ಆಡಿಯೋಗೆ 'ಜೋಗಿ' ಮಾಡಲ್ಲ ಎಂದಿದ್ದೇಕೆ ಪ್ರೇಮ್? ಶಿವಣ್ಣ ಮುಂದಿಟ್ಟಿದ್ದ ಕಂಡಿಷನ್ ಏನು?
ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ದಾಖಲೆ ಬರೆದಿದ್ದ ಸಿನಿಮಾ 'ಜೋಗಿ'. ಶಿವಣ್ಣನಿಗೆ 'ಓಂ' ಸಿನಿಮಾ ಬಳಿಕ ಮತ್ತೊಂದು ಮೆಗಾ ಹಿಟ್ ಕೊಟ್ಟ ಸಿನಿಮಾವಿದು. ಅಷ್ಟೇ ಯಾಕೆ ಬ್ಲಾಕ್‌ನಲ್ಲಿ ಟಿಕೆಟ್ ಮಾರೋರಿಗೆ ಭರ್ಜರಿ ಬ್ಯುಸಿನೆಸ್ ಕೊಟ್ಟಿದ್ದು ಪ್ರೇಮ್ ನಿರ್ದೇಶನದ ಇದೇ 'ಜೋಗಿ' ಸಿನಿಮಾ.
'ಜೋಗಿ' ಸಿನಿಮಾ ರಿಲೀಸ್ ಆದಾಗ ಒಂದು ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೆ ಮಾರಾಟ ಆದ ಉದಾಹರಣೆ ಇತ್ತು. ರಜನಿಕಾಂತ್ ಸಿನಿಮಾಗೆ ಹೇಗೆ ಬೇಡಿಕೆ ಇರುತ್ತಿತ್ತೋ ಹಾಗೆ 'ಜೋಗಿ' ಸಿನಿಮಾಗಿತ್ತು. ಆದರೆ, ಈ ಸಿನಿಮಾ ಮೇಕಿಂಗ್ ಹಿಂದೊಂದು ಕಥೆಯಿದೆ. ಆಗತಾನೇ 'ಎಕ್ಸ್‌ಕ್ಯೂಸ್ ಮೀ' ಮ್ಯೂಸಿಕಲ್ ಹಿಟ್ ಕೊಟ್ಟಿದ್ದ ಪ್ರೇಮ್‌ಗೆ ಎಲ್ಲಾ ಭಾಷೆಗಳಿಂದಲೂ ಬೇಡಿಕೆ ಇತ್ತು.

ಇದೇ ವೇಳೆ ಶಿವಣ್ಣ ತಮ್ಮ ಸದಾಶಿವನಗರದ ಆಫೀಸ್‌ಗೆ ಕರೆದು ಸಿನಿಮಾ ಮಾಡುವಂತೆ ಹೇಳಿದ್ದರು. ಹಾಗೇ ಶಿವಣ್ಣನ ಭಾಮೈದ ಮಧು ಬಂಗಾರಪ್ಪ ಒಡೆತನದ ಆಕಾಶ್ ಆಡಿಯೋಗೆ ಸಿನಿಮಾ ಮಾಡುವಂತೆ ಹೇಳಿದ್ದರು. ಆದರೆ, ಜೋಗಿ ಪ್ರೇಮ್ ಸುತಾರಂ ಒಪ್ಪಲಿಲ್ಲ. ಆಕಾಶ್ ಆಡಿಯೋಗೆ ಸಿನಿಮಾ ಮಾಡೋದಿಲ್ಲ ಎಂದು ಹೇಳಿದ್ದರು. ಪ್ರೇಮ್ ಅಂದು ಶಿವಣ್ಣನ ಮುಂದೆ ಹೀಗಂದಿದ್ದು ಯಾಕೆ? ತಿಳಿಯಲು ಮುಂದೆ ಓದಿ..
"ನನಗೊಂದು ಸಿನಿಮಾ ಅಂದ್ರು ಶಿವಣ್ಣ"
ಪ್ರೇಮ್ ನಿರ್ದೇಶನದ 2ನೇ ಸಿನಿಮಾವೇ 'ಎಕ್ಸ್‌ಕ್ಯೂಸ್ ಮೀ' ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಹೀಗಾಗಿ ಪ್ರೇಮ್‌ಗೆ ಬೇಡಿಕೆ ಏನೂ ಕಮ್ಮಿಯಿರಲಿಲ್ಲ. ಆ ವೇಳೆ ಶಿವಣ್ಣ ತಮ್ಮ ಆಫೀಸ್‌ಗೆ ಪ್ರೇಮ್ ಬರಲು ತಿಳಿಸಿದ್ದರು. ಆಗ ಇಬ್ಬರ ನಡುವೆ ನಡೆದ ಘಟನೆಯನ್ನು ವಿವರಿಸಿದ್ದರು. "ಒಮ್ಮೆ ಶಿವಣ್ಣ ನನ್ನನ್ನು ಕರೆದರು. ಸದಾಶಿವನಗರದ ಅವರ ಆಫೀಸ್‌ನಲ್ಲಿ ಕೂತಿದ್ದರು. ಶಿವಣ್ಣ ಕರೀತಿದ್ದಾರೆ ಎಂದು ಹೇಳಿದರು. ಹೋದ ಕೂಡಲೇ ಬಹಳ ಚೆನ್ನಾಗಿ ಮಾಡಿದ್ದೀಯ. ಹೆಂಗೆ ತಗೊಂಡು ಹೋಗಿದ್ದೀಯ. ಸಂಗೀತದಲ್ಲೇ ತೆಗೆದುಕೊಂಡು ಹೋಗಿದ್ದೀಯ ಎಂದರು. ನನಗೊಂದು ಸಿನಿಮಾ ಮಾಡು ಎಂದು ಪಟ್ ಅಂತ ಹೇಳಿಬಿಟ್ಟರು." ಎಂದು ಪ್ರೇಮ್ ಫಿಲ್ಮಿಬೀಟ್ ಸಂದರ್ಶನದಲ್ಲಿ ಹೇಳಿದ್ದರು.

'ಆಕಾಶ್ ಆಡಿಯೋಗೆ ಸಿನಿಮಾ ಮಾಡಲ್ಲ'
ಜೋಗಿ ಪ್ರೇಮ್ ಕರೆದಿದ್ದ ಶಿವಣ್ಣ ಅಂದು ಮಧು ಬಂಗಾರಪ್ಪ ಒಡೆತನದ ಆಕಾಶ್ ಆಡಿಯೋಗೆ ಸಿನಿಮಾ ಮಾಡು ಎಂದಿದ್ದರು. ಆಗ ಪ್ರೇಮ್ ಆಕಾಶ್ ಆಡಿಯೋಗೆ ಸಿನಿಮಾ ಮಾಡೋದಿಲ್ಲ ಎಂದು ಹೇಳಿದ್ದರು. "ಹಿಂಗೆ ಅಂತಿದ್ದಾರಲ್ಲ ಅಂದುಕೊಳ್ಳುತ್ತಿದ್ದಂತೆ, ನನಗೊಂದು ಸಿನಿಮಾ ಮಾಡು. ಆಕಾಶ್ ಆಡಿಯೋದವರಿಗೆ ಮಾಡಿಕೊಡು. ಮಧು ಅವರಿಗೆ ಮಾಡಿಕೊಡು. ನೀನು ಡೈರೆಕ್ಟ್ ಮಾಡಿಕೊಡು ಅಂದರು. ನಾನು ಪಿಚ್ಚರ್ ಮಾಡುತ್ತೇನೆ ಅಣ್ಣ.. ಆದರೆ ಆಕಾಶ್ ಅವರಿಗೆ ಮಾಡೋದಿಲ್ಲ. ಅಶ್ವಿನಿಯವರಿಗೆ ಮಾಡುತ್ತೇನೆ ಎಂದೆ." ಎಂದು ಪ್ರೇಮ್ ಶಿವಣ್ಣನಿಗೆ ಹೇಳಿದ್ದರು.
ಅಶ್ವಿನಿ ಆಡಿಯೋಗೆ 'ಜೋಗಿ' ಮಾಡಿದ್ದೇಕೆ?
"ಅಶ್ವಿನಿಯವರಿಗೆ ಯಾಕೆ ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ದೆ ಅಂದರೆ, ಕರಿಯ ವೇಳೆ ನಾನು ಯಾರು ಅಂತಾನೇ ಗೊತ್ತಿರಲಿಲ್ಲ. ಆಡಿಯೋ ತಗೊಂಡರು. 8 ಲಕ್ಷ ಆಗ ಕೊಟ್ಟರು. ಈ ಕಾಲಕ್ಕೆ 80 ಲಕ್ಷ ಕೋಟಿಗೆ ಸಮ. ಆಗ ಹೊಸಬರು ಅಂದರೆ, 50 ಸಾವಿರ 1 ಲಕ್ಷ ಕೊಡೋರು. ನನಗೆ 8 ಲಕ್ಷ ಕೊಟ್ಟರು. ಅವರ ಸ್ಟುಡಿಯೋದಲ್ಲಿ ಅನ್ನ ತಿಂದಿದ್ದೀನಿ. ಎಕ್ಸ್‌ಕ್ಯೂಸ್ ಮೀಗೆ ಸಪೋರ್ಟ್ ಮಾಡಿದ್ರು." ಅದಕ್ಕೆ ಅಶ್ವಿನಿ ಆಡಿಯೋ ಜೋಗಿ ಮಾಡಿದ್ದಾಗಿ ಪ್ರೇಮ್ ಹೇಳಿದ್ದರು.
'ಜೋಗಿ' ಕಥೆ ಹೊಳೆದಿದ್ದೇಗೆ?
"ಅಶ್ವಿನಿ ಆಡಿಯೋದವರಿಗೆ ಸಿನಿಮಾ ಮಾಡುತ್ತೇನೆ ಎಂದು ಹೇಳಿ ಹೊರಟೆ. ಸದಾಶಿವನಗರದಿಂದ ವಿಜಯನಗರ ಬರುವ ಹೊತ್ತಿಗೆ ಒಂದು ಲೈನ್ ಕಥೆ ಹೊಳೀತು. ಇವರಿಗೆ ಸಿನಿಮಾ ಮಾಡಿದರೆ, ವಿಚಿತ್ರವಾಗಿಯೇ ಏನಾದರೂ ಮಾಡಬೇಕು. ಯಾಕಂದ್ರೆ ಉಪೇಂದ್ರ ಓಂ ಮಾಡಿದ್ದಾರೆ 10 ವರ್ಷ ಆಗಿದೆ. ಈಗ ಯಾವ ಟ್ರೆಂಡ್‌ನಲ್ಲಿ ಮಾಡಬೇಕು. ಅದಕ್ಕೊಂದು ಬೇರೆ ಆಯಾಮಗೊಡಬೇಕು ಅಂದ್ಕೊಂಡೆ. ಅಶ್ವಿನಿಯವರಿಗೆ ಹೇಳಿದೆ. ಜೋಗಿ ಅಂತ ಟೈಟಲ್ ಕೊಟ್ಟೆ." ಎಂದು ಜೋಗಿ ಪ್ರೇಮ್ ಫಿಲ್ಮಿಬೀಟ್ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











