ಕೈ ತುಂಬಾ ಟಿಪ್ಸ್.. ರಸ್ತೆ ಬದಿ ದೋಸೆ ಹಾಕಿ ಸಂಭ್ರಮಿಸಿದ್ದ ಸೆಂಚುರಿ ಸ್ಟಾರ್; ಶಿವಣ್ಣನ 40 ವರ್ಷದ ಜರ್ನಿ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇದೇ ತಿಂಗಳು (ಜುಲೈ 12) 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಶಿವಣ್ಣ ಚಿತ್ರರಂಗಕ್ಕೆ ಎಂಟ್ರಿ 40 ವರ್ಷಗಳು ಪೂರೈಸಿವೆ. ಹೀಗಾಗಿ ಅವರ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಅದರಲ್ಲೂ ಅನಾರೋಗ್ಯದಿಂದ ಗುಣಮುಖರಾಗಿ ಬಂದ್ಮೇಲಂತೂ ಫ್ಯಾನ್ಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ಶಿವಣ್ಣ ಹುಟ್ಟುಹಬ್ಬ ಹಾಗೂ 40ನೇ ವರ್ಷದ ಸಿನಿಮಾ ಜರ್ನಿಯನ್ನು ಒಟ್ಟೊಟ್ಟಿಗೆ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣನನ್ನು ಹತ್ತಿರದಿಂದ ಕಂಡ ನಿರ್ದೇಶಕ ರಘು ರಾಮ್ ಕೆಲವು ಎಕ್ಸ್‌ಕ್ಲೂಸಿವ್ ಇಂಟ್ರೆಸ್ಟಿಂಗ್ ವಿಷಯಗಳನ್ನು ಫಿಲ್ಮಿಬೀಟ್ ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ. ಅದೇನು ಅಂತ ನೋಡುವುದಾರೇ..

ಒಳ್ಳೆಯದು ಕೆಟ್ಟದ್ದು ಲೆಕ್ಕಾಚಾರಗಳು ಗೊತ್ತಿಲ್ಲ
"ಶಿವಣ್ಣ ಅವರು ಚಿಕ್ಕವರು ಇರುವಾಗ ಚೆನ್ನೈನಲ್ಲಿ ಇದ್ದಾಗ ಅವರ ತಾಯಿ ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದರು. ಅವರದ್ದು ದೊಡ್ಡ ಫ್ಯಾಮಿಲಿ. ದೊಡ್ಡ ಮನೆತನ. ಅವರು ಬಟ್ಟೆ ತೆಗೆದುಕೊಳ್ಳುವುದಕ್ಕೆ ಅಂತ ಹೋದರೆ, ಇಡೀ ಕುಟುಂಬಕ್ಕೆ ತೆಗೆದುಕೊಳ್ಳುತ್ತಿದ್ದರು. ಚೆನ್ನೈನ ಪ್ಯಾರಿಸ್ ಕಾರ್ನರ್‌ಗೆ ಶಿವಣ್ಣನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನೋಡಿದರೆ ಶಿವಣ್ಣ ಇಲ್ಲ. ಎಲ್ಲಾ ಕಡೆಗೆ ಹುಡುಕಿದರೆ, ಒಂದು ಮಗು ಬರೀ ಚಡ್ಡಿ ಹಾಕೊಂಡು ಬಂತಂತೆ. ಇಲ್ಲಿ ಬಟ್ಟೆ ಕೊಡಿಸುತ್ತಾರೆ ಎನ್ನುವ ಕಾರಣಕ್ಕೆ ಅಲ್ಲಿ ಯಾರೋ ಬಡವರ ಮಕ್ಕಳಿಗೆ ತಾನು ಹಾಕೊಂಡಿರೋ ಬಟ್ಟೆ ಕೊಟ್ಟು ಹಾಗೇ ಬಂದಿದ್ದರಂತೆ. ಬಾಲ್ಯದಿಂದಲೇ ಅವರು ತುಂಬಾನೇ ಮುಗ್ಧ. ಒಳ್ಳೆಯದು ಕೆಟ್ಟದ್ದು ಲೆಕ್ಕಾಚಾರಗಳು ಗೊತ್ತಿಲ್ಲ. ಅವರಿಗೆ ಅನಿಸಿದ್ದನ್ನು ಮಾಡಿ ಬಿಡುತ್ತಾರೆ." ಎನ್ನುತ್ತಾರೆ ನಿರ್ದೇಶಕ ರಘು ರಾಮ್.
ಅಣ್ಣಾವ್ರಿಗೂ ಶಿವಣ್ಣನಿಗೂ ಒಂದು ಸಾಮ್ಯತೆಯಿತ್ತು
"ಅವರ ಕುಟುಂಬದಲ್ಲಿ ಅಣ್ಣಾವ್ರಿಗೆ ಹಾಗೂ ಶಿವಣ್ಣನಿಗೆ ಇದ್ದ ಸಾಮ್ಯತೆ ಅಂದರೆ, ಇಬ್ಬರೂ ಬೇಗನೆ ಎದ್ದೇಳುತ್ತಾರೆ. ಅಣ್ಣಾವ್ರು ಎದ್ದು ಯೋಗಾಸನ ಮಾಡುತ್ತಿದ್ದರೆ, ಶಿವಣ್ಣ ಎದ್ದು ರನ್ನಿಂಗ್ ಹೋಗುತ್ತಿದ್ದರು. ಸಿನಿಮಾ ಬಂದಿದ್ದರಿಂದ ಫಿಟ್ ಆಗಿರಬೇಕು ಅಂತಲ್ಲ. ಅವರು ಕ್ರಿಕೆಟರ್ ಕೂಡ ಆಗಿದ್ದರಿಂದ ಪ್ರತಿ ದಿನ ಅವರು ರನ್ನಿಂಗ್ ಮಾಡುತ್ತಿದ್ದರು. ಅವರ ಮನೆಯಲ್ಲಿ ಇಬ್ಬರೂ ಅದಕ್ಕೆ ಬೇಗ ಎದ್ದೇಳುತ್ತಿದ್ದರು. ಸೂರ್ಯ ನಮಗೆ ಬೆಳಕು ಕೊಡುವುದಕ್ಕೆ ಬರುತ್ತಾನೆ. ನಾವು ಹುಟ್ಟುವ ಸಮಯದಲ್ಲಿ ರಗ್ ಹೊದ್ದು ಮಲಗುವುದಕ್ಕಿಂತ ನಾನು ಎದ್ದು ಹಲೋ ಬಾಸ್ ಗುಡ್ ಮಾರ್ನಿಂಗ್ ಅಂತ ಹೇಳಿದರೆ, ಆ ಸೂರ್ಯನಿಗೂ ಒಂದು ಖುಷಿಯಾಗುತ್ತೆ ಎಂದಿದ್ದರು. ಇಂತಹ ಫಿಲಾಸೋಫಿಯನ್ನು ಯಾವಾಗಲೂ ಕ್ಯಾರಿ ಮಾಡುತ್ತಾರೆ." ಎಂದು ರಘು ರಾಮ್ ಹೇಳಿದ್ದಾರೆ.

ಕೈ ತುಂಬಾ ಟಿಪ್ಸ್ ಕೊಡ್ತಾರೆ
"ಹೋಟೆಲ್‌ಗೆ ಹೋದಾಗ ಅವರು ಕೈ ತುಂಬಾ ಕೊಡುವಷ್ಟು ಟಿಪ್ಸ್ ಬೇರೆ ಯಾರೂ ಕೊಡುವುದನ್ನು ನೋಡಿಲ್ಲ. ನಾನೂ ಕೆಲವರೊಂದಿಗೆ ಓಡಾಡಿದ್ದೇನೆ. ಇವರು ಟಿಪ್ಸ್ ಕೊಡುವುದರಿಂದ ಹಿಂದೆ ಮುಂದೆ ನೋಡುವುದಿಲ್ಲ. ಗೀತಮ್ಮ ಅವರ ಪರ್ಸ್‌ಗೆ ಕೈ ಹಾಕಿ, ಲೆಕ್ಕ ಹಾಕದೆ ಕೊಡುತ್ತಿದ್ದರು. ಗೀತಮ್ಮ ಕೂಡ ಇದ್ಯಾವುದನ್ನೂ ನೋಡುವುದಿಲ್ಲ. ಇದನ್ನು ಕಣ್ಣಾರೆ ನೋಡಿದ್ದೇನೆ. ಒಮ್ಮೆ ವೈಟ್ ಫೀಲ್ಡ್‌ಗೆ ಹೋಗುತ್ತಿದ್ವಿ. ಕೆ.ಆರ್ ಪುರ ಬ್ರಿಡ್ಜ್ ಹತ್ತಿರ, ಯಾರೋ ವಯಸ್ಸಾದ ಗಂಡ ಹೆಂಡ್ತಿ ಇದ್ದರು. ಅವರು ಭಿಕ್ಷುಕರ ತರನೂ ಅಲ್ಲ. ಅವರಿಗೆ ಏನು ಕಷ್ಟನೋ ಏನೋ ಗೊತ್ತಿಲ್ಲ. ಇರೋ ಬರೋ ಕಾರಿನ ಹತ್ತಿರ ಕೇಳುತ್ತಿದ್ದರು. ಅದನ್ನು ನೋಡಿ ಶಿವಣ್ಣನ ಮನಸ್ಸು ಕರಗಿತ್ತು. ಕಿಸೆಗೆ ಕೈ ಹಾಕಿ, ಇದ್ದಷ್ಟು ಹಣವನ್ನೆಲ್ಲ ಕೊಟ್ಟಿದ್ದರು. ಸ್ವಲ್ಪ ಮುಂದೆ ಹೋಗಿ ಆ ಹಿರಿಯ ಜೀವಗಳನ್ನು ಕರೆದುಕೊಂಡು ಬಂದೆ. ಆ ಸಿಗ್ನಲ್‌ನಲ್ಲಿ ಶಿವಣ್ಣ ವಯಸ್ಸಾದ ದಂಪತಿಗೆ ದೊಡ್ಡ ಮೊತ್ತವನ್ನೇ ಕೊಟ್ಟಿದ್ದರು. ನಾವು ಲೆಕ್ಕ ಹಾಕಿಲ್ಲ. ಆದರೆ, ದೊಡ್ಡ ಮೊತ್ತವನ್ನೇ ಕೊಟ್ಟಿದ್ದರು." ಎನ್ನುತ್ತಾರೆ.
ಎಲ್ಲರಿಗೂ ಒಂದೇ ರೀತಿಯ ಊಟ
"ಶಿವಣ್ಣನ ಮನೆಗೆ ಯಾರೇ ಹೋಗಲಿ ಸ್ನೇಹಿತರು, ಡ್ರೈರೆಕ್ಟರ್‌ಗಳು, ಡ್ರೈವರ್ಸ್, ಸಹಾಯಕರು ಯಾರಾದರೂ ಮನೆಯಲ್ಲಿ ಇದ್ದೇ ಇರುತ್ತಾರೆ. ಅಣ್ಣಾವ್ರ ಮನೆಯಲ್ಲೂ ಹಾಗೇ ಇರುತ್ತಿದ್ದರಂತೆ. ಅಪ್ಪಾಜಿಯವರದ್ದು ನೋಡಿಲ್ಲ. ಆದರೆ, ಕೇಳಿದ್ದೇವೆ. ಶಿವಣ್ಣ ಅವರದ್ದು ಕಣ್ಣಾರೆ ನೋಡಿದ್ದೇವೆ. ಮನೆಗೆ ಹೋದವರಿಗೆ, ಊಟ ಕೊಡಮ್ಮ ಅಂತ ಹೇಳ್ತಾರೆ. ಮನೆಯಲ್ಲಿ ಕೆಲಸ ಮಾಡುವವರು ಯಾವ ಊಟ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಶಿವಣ್ಣ ಎದ್ದು ಹೋಗಿ ಅಲ್ಲಿ ಅವರಿಗೆ ಏನು ಊಟ ಹಾಕಿದ್ದಾರೆಂದು ಚೆಕ್ ಮಾಡಿಕೊಂಡು ಬರುತ್ತಾರೆ. ನಾವು ಏನು ತಿನ್ನುತ್ತೇವೋ ಅದನ್ನು ಅವರಿಗೂ ಅದನ್ನೇ ಕೊಡಬೇಕು ಅನ್ನೋ ಮನಸ್ಥಿತಿ ಅವರದ್ದು." ಎಂದು ರಘು ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರ್ಯಾಂಡ್ ಕ್ರಿಯೇಟ್ ಮಾಡುವ ಹೀರೋ
"ನಾವು ಡೈರೆಕ್ಟರ್ ಆಗಿದ್ದೀವಿ ಅಂದರೆ, ಅದಕ್ಕೆ ಅವರೇ ಕಾರಣ. ನಮ್ಮಂಥ ಹೆಸರು ಇಲ್ಲದೇ ಇದ್ದವರಿಗೆ ನಮ್ಮ ಕಥೆ ಕೇಳಿ ಸಿನಿಮಾ ಮಾಡುವಂತಹ ಉತ್ತೇಜನ ಕೊಟ್ಟಿದ್ದರು. ಸಿನಿಮಾ ಹಿಟ್ಟೋ ಫ್ಲಾಪೋ ಅವರು ಯಾವಾಗಲೂ ಪಾಲಿಗೆ ಬಂದಿದ್ದು ಪಂಚಾಂಬ್ರುತ ಎಂದು ನಂಬಿದವರು. ಒಮ್ಮೊಮ್ಮೆ ನಮ್ಮಂಥ ಮೇಕರ್‌ಗಳು ಮಾಡೋದು ಅಮೃತನೂ ಆಗುತ್ತೆ. ಪ್ಲಾಪ್ ಸಿನಿಮಾ ಮಾಡಿದಾಗ ವಿಷ ಕೂಡ ಆಗುತ್ತೆ. ಆದರೆ, ಅವರು ಯಾರನ್ನೂ ಅಂಡರ್‌ಎಸ್ಟಿಮೇಟ್ ಮಾಡುವುದಿಲ್ಲ. ಇವರು ಬ್ರ್ಯಾಂಡ್ ಅನ್ನು ಕ್ರಿಯೇಟ್ ಮಾಡುವಂತಹ ಹೀರೋ. ಇಂತಹವರು ತುಂಬಾನೇ ವಿರಳ. ಒಮ್ಮೆ ಕಥೆ ಕೇಳಿ ಶೂಟಿಂಗ್‌ಗೆ ಬಂದರೆ, ಯಾವುದಕ್ಕೂ ತಲೆ ಹಾಕುವುದಿಲ್ಲ." ಎನ್ನುತ್ತಾರೆ.

ಕ್ಯಾಮರಾ ಮುಂದೆ ಮಾತ್ರ ನಟನೆ
"ಶಿವಣ್ಣ ಎಂತಹ ನಟ ಅನ್ನೋದಕ್ಕೆ ಒಂದು ಉದಾಹರಣೆ ಇದೆ. ಭಾಗ್ಯದ ಬಳೆಗಾರ ಎನ್ನುವ ಒಂದು ಸಿನಿಮಾ. ನಾನು ಗುರುದತ್ ಅವರು ಶೂಟಿಂಗ್ ಲೋಕೇಶ್‌ಗೆ ಹೋಗಿದ್ವಿ. ಚೆನ್ನಪಟ್ಟಣದಲ್ಲಿ ನಡೆಯುತ್ತಿತ್ತು. ತುಂಬಾ ಎಮೋಷನಲ್ ಸೀನ್ ಅದು. ಹೀರೋಯಿನ್ ವಿಷ ತೆಗೆದುಕೊಂಡಿರುತ್ತಾರೆ. ಅಂತಹ ಎಪಿಸೋಡ್ ಅದು. ಅಂತಹ ಸೀನ್ ಮಾಡುವಾಗ ಸಾಮಾನ್ಯವಾಗಿ ಆ ಮೂಡ್‌ನಲ್ಲಿಯೇ ಇರಬೇಕು. ಹಾಗೇ ಟ್ರಾವೆಲ್ ಆಗಬೇಕು. ಯಾರೊಂದಿಗೂ ಮಾತಾಡಬಾರದು ಎನ್ನುವಂತಹ ಪದ್ಧತಿಗಳು ಚಿತ್ರರಂಗದಲ್ಲಿ ಇದೆ. ಆದರೆ, ಶಿವಣ್ಣ ನಮ್ಮ ಜೊತೆ ಕೂತು ತಮಾಷೆ ಮಾಡಿಕೊಂಡು ಗುರುದತ್ ಅವರ ಕಾಲೆಳೆದುಕೊಂಡು, ಕಾಮಿಡಿ ಮಾಡಿಕೊಂಡು ಕೂತಿದ್ದರು. ಶಾಟ್ ರೆಡಿ ಎಂದ ಕೂಡಲೇ ಹೋಗಿ ಆ ಭಾವನಾತ್ಮಕ ಸೀನ್‌ನಲ್ಲಿ ಅಷ್ಟೇ ಸೊಗಸಾಗಿ ನಟಿಸಿ, ಕಟ್ ಎನ್ನುತ್ತಿದ್ದಂತೆ ನೀಟ್ ಆಗಿ ಬಂದು ಅದೇ ಕಾಮಿಡಿ ಮಾಡುತ್ತಿದ್ದರು. ಕ್ಯಾಮರಾದಲ್ಲಿ ಮಾತ್ರ ಕ್ಯಾರಿ ಮಾಡುತ್ತಿದ್ದರು. ರಿಯಲ್ ಲೈಫ್‌ನಲ್ಲಿ ಅಲ್ಲ." ಎಂದು ಇಂಟ್ರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ.
ಯಾರನ್ನೂ ತೆಗಳುವುದಿಲ್ಲ
"ಇವನು ಯಾರೋ ಡೈರೆಕ್ಟರ್ ಫ್ಲಾಪ್ ಕೊಟ್ಟಿದ್ದಾನೆ. ಇವನು ಯಾರೋ ಹೊಸಬ ನಾನೇನು ಇವನ ಮಾತು ಕೇಳೋದು ಅನ್ನೋದಿಲ್ಲ. ಇವರು ಯಾರನ್ನೂ ನಿರುತ್ಸಾಹಗೊಳಿಸುವುದಿಲ್ಲ. ಎಲ್ಲವನ್ನೂ ಕೇಳುತ್ತಾರೆ. ಯಾರಲ್ಲಿ ಏನಿರುತ್ತೆ ಅನ್ನೋದು ಗೊತ್ತಿರುವುದಿಲ್ಲಮ್ಮ. ಯಾರೋ ಒಬ್ಬರನ್ನು ಯಾಕೆ ಅನುಮಾನವಾಗಿ ನೋಡಬೇಕು ಅಂತಾರೆ. ಅವರ ಮೆಮೋರಿ ಪವರ್ ಹೇಗಿದೆ ಅಂದರೆ, 20 ವರ್ಷದ ಹಿಂದೆ ಅವರಿಗೆ ಹೋಗಿ ಕಥೆ ಹೇಳಿದರೆ, ಅದನ್ನು ನೆನಪಿಸಿಕೊಂಡು ಹೇಳುತ್ತಾರೆ." ಎನ್ನುತ್ತಾರೆ.
ಸ್ಟಾರ್ ಡೈರೆಕ್ಟರ್ ಆಗಲು ಈ ಸೂಪರ್‌ಸ್ಟಾರ್ ಕಾರಣ
"ಇನ್ನೂ ನಾಲ್ಕು ವರ್ಷದ ಮಗು ಅದು. 40 ವರ್ಷದ ಜರ್ನಿ ಅಲ್ಲವೇ ಅಲ್ಲ. ಇನ್ನೂ ತುಂಬಾ ದೂರ ಹೋಗಬೇಕು. ಇನ್ನೂ ಲಾಂಗ್ ಜರ್ನಿ ಬಾಕಿಯಿದೆ. ಇನ್ನೂ ಬಹಳಷ್ಟು ಜನ ನಿರ್ದೇಶಕರು ಅವರಿಂದ ಆಚೆ ಬರಬೇಕು. ಉಪ್ಪಿ ಸರ್, ಪ್ರೇಮ್ ಸರ್, ಆರ್.ಚಂದ್ರು ಅವರು ಇರಬಹುದು ಎಲ್ಲರಿಗೂ ಒಂದು ಬ್ರ್ಯಾಂಡ್ ತಂದುಕೊಟ್ಟ ನಟ ಇವರು. ಸ್ಟಾರ್ ಡೈರೆಕ್ಟರ್ ಆಗುವುದಕ್ಕೆ ಈ ಸೂಪರ್‌ಸ್ಟಾರ್ ಕಾರಣ." ಅನ್ನೋದು ರಘು ರಾಮ್ ಅಭಿಪ್ರಾಯ.

ರಸ್ತೆ ಬದಿಯ ಗಾಡಿಯಲ್ಲಿ ದೋಸೆ ಹಾಕಿದ್ದರು
"ಶಿವಣ್ಣ ಶ್ರೀಸಾಮಾನ್ಯರಲ್ಲಿ ಶ್ರೀಸಾಮಾನ್ಯರ ಜೀವನವನ್ನು ಇಷ್ಟ ಪಡುತ್ತಾರೆ. ನಾನಂತೂ ಅವರನ್ನು ವಿವಿಪುರಂಗೆ, ಜಯನಗರದಲ್ಲಿ ಒಂದು ದೋಸೆಘರಿ ಕರೆದುಕೊಂಡು ಹೋಗುತ್ತಿದ್ದೆ. ಎಲ್ಲಿಗೆ ಹೋದರೂ ಅವರು ತಿನ್ನುವುದು ಕಡಿಮೆ. ಆದರೂ ನನಗೆ ಬೇಜರಾಗುತ್ತೆ ಅಂತ ಬರೋರು. ಜಯನಗರದಲ್ಲಿಒಂದು ಗಾಡಿಯಿದೆ. ಇವರೇ ಹೋಗಿಲ್ಲಿ ಅಲ್ಲಿ ದೋಸೆ ಹಾಕಿದ್ದಾರೆ. ಅವರಿಗೆ ಇರುವ ಸ್ಟಾರ್‌ಢಮ್‌ಗೆ ಅದು ಬೇಕಾಗಿರಲಿಲ್ಲ ಅಲ್ವಾ? ಈತರ ಯಾವುದೇ ಸ್ಟಾರ್‌ಗಳು ಇರುವುದಿಲ್ಲ." ಎನ್ನುತ್ತಾರೆ.
ಶಿವಣ್ಣನ ಪ್ರತಿಭೆ ಇನ್ನೂ ಇದೆ. ಅದನ್ನು ಬಳಸಿಕೊಳ್ಳುವಂತಹ ನಿರ್ದೇಶಕ ಇನ್ನೂ ಬಂದಿಲ್ಲ. ಕನ್ನಡದ ಡೈರೆಕ್ಟರ್‌ಗಳು ಸಂಪೂರ್ಣವಾಗಿ ಅವರ ಪ್ರತಿಭೆಯನ್ನು ಬಳಸಿಕೊಂಡಿಲ್ಲ. ಇನ್ನೂ ಅವರಲ್ಲಿ ತುಂಬಾನೇ ಪ್ರತಿಭೆಯಿದೆ. ಅದನ್ನು ಬಳಸಿಕೊಳ್ಳುವವರು ಬೇಕು ಎಂದು ರಘುರಾಮ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











